ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯರಲ್ಲಿ ಬೆಳಕು ಮೂಡಲು ಶಿಕ್ಷಣ ಅಗತ್ಯ

ವಕೀಲ ಯಾಕೂಬ್ ಷರೀಫ್ ಅಭಿಪ್ರಾಯ
Last Updated 25 ಮಾರ್ಚ್ 2017, 5:33 IST
ಅಕ್ಷರ ಗಾತ್ರ

ಕೋಲಾರ: ‘ಶಿಕ್ಷಣವು ಮನುಷ್ಯನಲ್ಲಿ ಬೆಳಕು ಮೂಡಿಸುತ್ತದೆ. ಶಿಕ್ಷಣ ಇಲ್ಲದಿದ್ದರೆ ಮನುಷ್ಯ ಮಾನವನಾಗಲಾರ’ ಎಂದು ವಕೀಲ ಯಾಕೂಬ್ ಷರೀಫ್ ಅಭಿಪ್ರಾಯಪಟ್ಟರು.

ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಹಾಗೂ ವಿಶ್ವ ಮಾನವ ವಿದ್ಯಾರ್ಥಿ ಯುವ ವೇದಿಕೆ ಸಹಯೋಗದಲ್ಲಿ ನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲರೂ ಶಿಕ್ಷಣ ಪಡೆಯುತ್ತಾರೆ. ಆದರೆ, ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಬಹುದಾದ ಸಣ್ಣ ಸಮಸ್ಯೆಗಳನ್ನು ನ್ಯಾಯಾಲಯದವರೆಗೆ ತರುತ್ತಿದ್ದಾರೆ. ಇದು ದುರಂತ. ಶೀಲ ಇರುವ ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯ.

ಭಾರತೀಯರು ವಿಶ್ವಕ್ಕೆ ಮಾದರಿಯಾಗಬೇಕು. ಎಲ್ಲಾ ವಿಚಾರಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಭೌತಿಕ ಜೀವನದಲ್ಲಿ ಬೇಕುಗಳಿಗೆ ಅಂತ್ಯವಿಲ್ಲ. ಹೀಗಾಗಿ ಸಾರ್ಥಕ ಜೀವನದೆಡೆಗೆ ಹೆಜ್ಜೆ ಹಾಕಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು’ ಎಂದು ಹೇಳಿದರು.

‘ವಕೀಲ ವೃತ್ತಿ ಶ್ರೇಷ್ಠವಾದುದು. ವಕೀಲರು ಜೀವನಪರ್ಯಂತ ವಿದ್ಯಾರ್ಥಿಯಂತೆ ಓದುತ್ತಲೇ ಇರಬೇಕು. ಓದದೆ ಈ ವೃತ್ತ ಮಾಡುವುದು ಅಸಾಧ್ಯ. ಅನ್ಯಾಯಕ್ಕೆ ಒಳಗಾದ ಬಡವರಿಗೆ ನ್ಯಾಯ ಕೊಡಿಸುವ ಬದ್ಧತೆ ವಕೀಲರಿಗೆ ಇರಬೇಕು’ ಎಂದು  ಹೇಳಿದರು.

ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ‘ಸಮಾಜದಲ್ಲಿ ಮೌಲ್ಯಗಳು ಕುಸಿದು ಭ್ರಷ್ಟಾಚಾರ ಹೆಚ್ಚುತ್ತಿದೆ. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲವಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಸೇವಾ ಗುಣಗಿಂತ ಹಣ ಸಂಪಾದನೆಯೇ ಮುಖ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲೆ ಎಂ.ಅನಿತಾ, ಸಹಾಯಕ ಪ್ರಾಧ್ಯಾಪಕಿ ಎನ್.ಕಾವ್ಯಶ್ರೀ, ಎಬಿವಿಪಿ ವಿಭಾಗ ಸಹ ಸಂಚಾಲಕ ಸುನಿಲ್‌ಕುಮಾರ್‌, ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ನರೇಂದ್ರಬಾಬು, ಜಿಲ್ಲಾ ಘಟಕದ ಅಧ್ಯಕ್ಷ ನವೀನ್‌ಕುಮಾರ್, ವಿಶ್ವ ಮಾನವ ವಿದ್ಯಾರ್ಥಿ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಕಾಂತ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT