ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಸುಧಾರಣೆ ವರದಿ ಅನುಷ್ಠಾನ ವಿಳಂಬ

ಉನ್ನತ ಶಿಕ್ಷಣದಲ್ಲಿ ಹೊಸ ಆವಿಷ್ಕಾರಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ
Last Updated 25 ಮಾರ್ಚ್ 2017, 5:35 IST
ಅಕ್ಷರ ಗಾತ್ರ

ಕೋಲಾರ: ‘ಉನ್ನತ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ಸಲ್ಲಿಸಿರುವ ವರದಿಯನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ’ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಚಿದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನ ಕಲಾ ವೇದಿಕೆಯು ಶುಕ್ರವಾರ ಹಮ್ಮಿಕೊಂಡಿದ್ದ ಉನ್ನತ ಶಿಕ್ಷಣದಲ್ಲಿ ಹೊಸ ಆವಿಷ್ಕಾರಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶಕ್ಕಾಗಿ ಸರ್ಕಾರ ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು’ ಎಂದರು.

‘ಬಿ.ಎ, ಬಿ.ಎಸ್ಸಿ, ಬಿ.ಕಾಂ ಪದವಿ ತರಗತಿಯು ಈಗ ಮೂರು ವರ್ಷದ ಕೋರ್ಸ್ ಆಗಿದೆ. ಇದರ ಬದಲಿಗೆ ಎರಡು ವರ್ಷವನ್ನು ತರಗತಿಗೆ ಮತ್ತು ಒಂದು ವರ್ಷವನ್ನು ಕೋರ್ಸ್‌ಗೆ ಸಂಬಂಧಿಸಿದ ಕೌಶಲಕ್ಕೆ ಮೀಸಲಿಡುವಂತೆ ಶಿಫಾರಸು ಮಾಡಲಾಗಿದೆ. 

ವಿದೇಶದಲ್ಲಿ ಪದವಿ ಕೋರ್ಸ್‌ ನಾಲ್ಕು ವರ್ಷದ ಅವಧಿಯಾಗಿದೆ. ಆದರೆ, ನಮ್ಮಲ್ಲಿ ಮೂರು ವರ್ಷದ ಕೋರ್ಸ್‌ ಆಗಿದೆ. ಹೀಗಾಗಿ ನಮ್ಮಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉದ್ಯೋಗಾವಕಾಶ ಕಡಿಮೆ. ಆದ ಕಾರಣ ಪದವಿ ಕೋರ್ಸ್‌ಗಳ ಅವಧಿಯನ್ನು ನಾಲ್ಕು ವರ್ಷಕ್ಕೆ ಹೆಚ್ಚಿಸುವಂತೆ ವರದಿಯಲ್ಲಿ ಹೇಳಲಾಗಿದೆ’ ಎಂದರು.

‘ನಾಲ್ಕು ವರ್ಷದ ಪದವಿ ಶಿಕ್ಷಣದಲ್ಲಿ ವಿದ್ಯಾರ್ಥಿ ಮೊದಲ ಎರಡು ಸೆಮಿಸ್ಟರ್ ಓದಿ ಕಲಿಕೆ ನಿಲ್ಲಿಸಿದರೆ ಆತನಿಗೆ ಡಿಪ್ಲೊಮಾ, ಎರಡನೇ ವರ್ಷಕ್ಕೆ ಅಡ್ವಾನ್ಸ್ಡ್‌ ಡಿಪ್ಲೊಮಾ, ಮೂರನೇ ವರ್ಷಕ್ಕೆ ಪದವಿ ಹಾಗೂ ನಾಲ್ಕನೇ ವರ್ಷಕ್ಕೆ ಹಾನರ್ಸ್ ಎಂದು ಅಂಕಪಟ್ಟಿ ನೀಡುವಂತೆ ಶಿಫಾರಸು ಮಾಡಲಾಗಿದೆ. ಪ್ರತಿ ವಿದ್ಯಾರ್ಥಿ ಕ್ರೀಡೆ, ಎನ್‌ಸಿಸಿ, ಎನ್‍ಎಸ್‍ಎಸ್, ಯೋಗ ಚಟುವಟಿಕೆಗಳ ಪೈಕಿ ಒಂದರಲ್ಲಿ ತೊಡಗಿಸಿಕೊಳ್ಳುವುದು ಕಡ್ಡಾಯ’ ಎಂದು ಹೇಳಿದರು.

ಇದು ಸಕಾಲ: ‘2011ರ ಜನಗಣತಿ ಪ್ರಕಾರ ದೇಶದಲ್ಲಿ ಶೇ 17ರಷ್ಟು ಪದವೀಧರರು ಅಂದರೆ 4.45 ಕೋಟಿ ನಿರುದ್ಯೋಗಿಗಳಾಗಿದ್ದರು. ಇದರ ಜತೆಗೆ 4.50 ಕೋಟಿ ಕೌಶಲಯುಕ್ತ ಕಾರ್ಮಿಕರ ಕೊರತೆ ಇತ್ತು ಎಂಬುದು ವಿರೋಧಾಭಾಸದ ಸಂಗತಿ.

ಈ ಹಿಂದೆ ಜ್ಞಾನಕ್ಕೆ ಆದ್ಯತೆ ಇತ್ತು. ಇಂದು ಜ್ಞಾನದ ಜತೆಗೆ ಕೌಶಲದ ಅಗತ್ಯ ಹೆಚ್ಚಿದೆ. ವಿವಿಧ ಕ್ಷೇತ್ರಗಳಲ್ಲಿ  ಕೌಶಲ ಕೊರತೆಯಿಂದ ವಿದ್ಯಾವಂತರಿಗೆ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ ಶಿಕ್ಷಣ ವ್ಯವಸ್ಥೆಯನ್ನು ಪರಾಮರ್ಶಿಸಲು ಇದು ಸಕಾಲ’ ಎಂದರು

ಪ್ರಾಂಶುಪಾಲ ಜಯರಾಮರೆಡ್ಡಿ, ಕಲಾ ವೇದಿಕೆ ಅಧ್ಯಕ್ಷ ಪ್ರೊ.ರಾಜೇಂದ್ರ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಕಾರ್ಯಕ್ರಮದ ಸಂಘಟಕ ಪ್ರೊ.ಜಿ.ಆರ್.ಅಶ್ವತ್ಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT