ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆಹರಿದೀತೆ ಗಣಿ ಬಾಧಿತರ ಸಮಸ್ಯೆ

ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಗಣಿಗಾರಿಕೆ; ಪರಿಸರ ಪುನಶ್ಚೇತನಕ್ಕೆ: ಶೇ 10ರಷ್ಟು ಹಣ ನೀಡುವುದು ಕಡ್ಡಾಯ
Last Updated 25 ಮಾರ್ಚ್ 2017, 5:37 IST
ಅಕ್ಷರ ಗಾತ್ರ

ತುಮಕೂರು: ಗಣಿಗಾರಿಕೆ ನಡೆಸಲು ಗುತ್ತಿಗೆ ಪಡೆದಿರುವ ಪ್ರತಿ ಕಂಪೆನಿಯು ಅದಿರು ಮಾರಾಟದಿಂದ ಬಂದ ಹಣದಲ್ಲಿ ಶೇ 10ರಷ್ಟು ಹಣವನ್ನು ಪರಿಸರ ಪುನಶ್ಚೇತನಕ್ಕೆ ಆರಂಭಿಸಲಾದ ನಿಗಮಕ್ಕೆ ನೀಡಬೇಕೆಂಬ ಆದೇಶದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು  ಜಿಲ್ಲೆಯ ಗಣಿ ಬಾಧಿತ ಪ್ರದೇಶಗಳ ಜನರಲ್ಲಿ  ಹೊಸ ನಿರೀಕ್ಷೆ ಮೂಡಿಸಿದೆ.

ಜಿಲ್ಲೆಯ ಗಣಿ ಭಾದಿತ ಪ್ರದೇಶಗಳ ಪುನಶ್ಚೇತನ ಮತ್ತು ಪುನರ್ ವಸತಿಗೆ ಮೀಸಲಿಟ್ಟಿರುವ ಹಣ ಬೇರೆ ಉದ್ದೇಶಕ್ಕೆ ಬಳಸಲು ರಾಜ್ಯ ಸರ್ಕಾರ ಮುಂದಾಗಿತ್ತು.  ಹೀಗಾಗಿ ಈ ತೀರ್ಪು ಮಹತ್ವ ಪಡೆದುಕೊಂಡಿದೆ.

ಜಿಲ್ಲೆಯಲ್ಲಿ ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ಗುಬ್ಬಿ ತಾಲ್ಲೂಕಿನಲ್ಲಿ ಅದಿರು ಗಣಿಗಾರಿಕೆ ನಡೆದಿದೆ. ಈ ಪ್ರದೇಶಗಳ ಪುನರ್ ವಸತಿ ಹಾಗೂ ಪುನಶ್ಚೇತನಕ್ಕಾಗಿ ₹ 3000 ಕೋಟಿ ಹಣ ಬರಬಹುದು ಎಂದು ಅಂದಾಜಿಸಲಾಗಿದೆ.  10 ವರ್ಷ ಕಾಲ ಈ ಹಣವು ಹಂತ– ಹಂತಗಳಲ್ಲಿ ಬರಲಿದೆ.

ಗಣಿಗಾರಿಕೆ ಕಂಪೆನಿಗಳಿಂದ ಸಂಗ್ರಹವಾದ ಹಣವನ್ನು ತುಮಕೂರು– ದಾವಣಗೆರೆ ರೈಲು ಮಾರ್ಗ, ಆಸ್ಪತ್ರೆಗೆ ಬಳಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿತ್ತು. ಇದಕ್ಕೆ ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು.

ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮಕ್ಕೆ ಹಣವನ್ನು ಕೊಡಬೇಕೆಂಬ ಕೋರ್ಟ್‌ ತೀರ್ಪು ರೈಲು ಮಾರ್ಗಕ್ಕೆ ಹಣ ನೀಡುವುದಕ್ಕೆ ತಡೆಯಾಗಲಿದೆ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ.

‘ಜಿಲ್ಲೆಯಲ್ಲಿ ಕಂಪೆನಿಗಳು ಎಷ್ಟು ವಹಿವಾಟು ನಡೆಸುತ್ತವೆಯೋ ಅದರಲ್ಲಿ ಶೇ 10 ರಷ್ಟು ಹಣವನ್ನು ಕೊಡಬೇಕಾಗುತ್ತದೆ. ಈಗಾಗಲೇ ₹ 3800 ಕೋಟಿ ಹಣ ಸಂಗ್ರಹ ಮಾಡಲಾಗಿದೆ. ಇದರಲ್ಲಿ ಜಿಲ್ಲೆಗೆ ಸಾವಿರ ಕೋಟಿ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

ಪರಿಸರ ಪುನಶ್ಚೇತನಕ್ಕಾಗಿ ವಿಶೇಷ ವಾಹಕ ಸಂಸ್ಥೆಯನ್ನು ಸಹ ಸ್ಥಾಪಿಸಲಾಗಿದೆ. ಇನ್ನಾದರೂ ಪರಿಸರ ಪುನಶ್ಚೇತನ ಕೆಲಸ ಆರಂಭಿಸಬೇಕು’ ಎಂದು ಸಿಜ್ಞಾ ಯುವ ಸಂವಾದ ಕೇಂದ್ರದ ಜ್ಞಾನ ಸಿಂಧು ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದೇ ಕಾರಣಕ್ಕೂ ಈ ಹಣವನ್ನು ರೈಲು ಮಾರ್ಗ ನಿರ್ಮಾಣಕ್ಕೆ ನೀಡಬಾರದು. ಪರಿಸರ ಎಲ್ಲಿ ಹಾಳಾಗಿದೆಯೋ ಆ ಪ್ರದೇಶದಲ್ಲಿ ಅರಣ್ಯವನ್ನು ಮರು ನಿರ್ಮಿಸಬೇಕು. ಜೀವ ವೈವಿಧ್ಯ ಹೆಚ್ಚಿಸಲು ಬಳಸಬೇಕು’ ಎಂದು ಒತ್ತಾಯಿಸಿದರು.

‘ಈ ಹಣದಲ್ಲಿ ಮೊದಲ ಆದ್ಯತೆ ಪರಿಸರವೇ ಆಗಿರಬೇಕು. ಕಟ್ಟಡ ಕಟ್ಟುವ, ರೈಲು ಹಳಿ ಮಾಡುವ ರಾಜಕಾರಣಿಗಳ ಅಭಿವೃದ್ಧಿಯ ಮಾನದಂಡಗಳ ಹಿಂದಿನ ಉದ್ದೇಶಗಳನ್ನು ನಾವು ಸೂಕ್ಷ್ಮವಾಗಿ ನೋಡಬೇಕಾಗಿದೆ’ ಎಂದರು.

‘ಗಣಿ ಬಾಧಿತ ಪ್ರದೇಶಗಳ ಹೊರಗೆ ಬೇರೆ ಯೋಜನೆಗಳಿಗೆ ಹಣವನ್ನು ವಿನಿಯೋಗಿಸಲು ಈ ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿದ್ದೇವೆ. ಸರ್ಕಾರ ಈಗಲಾದರೂ ಜಿಲ್ಲೆಯ ಮೂರು ತಾಲ್ಲೂಕುಗಳ ಸಮಗ್ರ ಪರಿಸರ ಅಭಿವೃದ್ಧಿಗೆ ಸಂಪೂರ್ಣ ಗಮನ ನೀಡಬೇಕು’ ಎಂದು ಹೇಳಿದರು.

‘ಚಿಕ್ಕನಾಯಕನಹಳ್ಳಿಯ ಮದಲಿಂಗನ ಕಣಿವೆಯನ್ನು ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸಲು ಅವಕಾಶವಿದೆ. ವಜ್ರ ತೀರ್ಥರಾಮೇಶ್ವರ ಬೆಟ್ಟವನ್ನು ಚಿಟ್ಟೆಗಳ ಉದ್ಯಾನವಾಗಿ ರೂಪಿಸಬೇಕಾಗಿದೆ. ಇಂಥ ಅವಕಾಶ ಇದ್ದಾಗಲೂ ರೈಲು ಮಾರ್ಗಕ್ಕೆ ಏಕೆ ಹಣ ಕೊಡಬೇಕು’ ಎಂದು ಪರಿಸರ ತಜ್ಞರೊಬ್ಬರು ಪ್ರಶ್ನಿಸಿದರು.

‘ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವ ಸರ್ಕಾರದ ನಿರ್ಧಾರಕ್ಕೆ ಗಣಿಬಾಧಿತ ಪ್ರದೇಶಗಳ ಶಾಸಕರು ಸಹ ತುಟಿ ಬಿಚ್ಚಿಲ್ಲ. ಈ ಮೌನದ ಬಗ್ಗೆ ಅವರು ಜನರಿಗೆ ಉತ್ತರ ಹೇಳಬೇಕು’ ಎಂದು ಒತ್ತಾಯಿಸಿದರು.

ಸಿಇಸಿ ಏನು ಹೇಳಿತ್ತು?
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಗಣಿಗಾರಿಕೆ ನಡೆಯುವ ಸುತ್ತಮುತ್ತಲ ಗ್ರಾಮಗಳ ಕೃಷಿಯ ಮೇಲೆ,  ಜನ ಜೀವನದ ಮೇಲೆ ದುಷ್ಪರಿಣಾಮ ಬೀರಿದೆ ಎಂಬುದನ್ನು ಸಿಇಸಿ (ಕೇಂದ್ರ ಉನ್ನತಾಧಿಕಾರ ಸಮಿತಿ) ವರದಿಯಲ್ಲಿ ಹೇಳಲಾಗಿದೆ. 

ಕೃಷಿಯಲ್ಲಿ ಶೇ 75ರಷ್ಟು ಇಳುವರಿ ಕಡಿಮೆಯಾಗಿದೆ. ಐರನ್‌ ಆಕ್ಸೈಡ್‌ ಪ್ರಮಾಣ ಹೆಚ್ಚಳದಿಂದ ಮಣ್ಣಿನ ಫಲವತ್ತತೆ ಹಾಗೂ ಅಂತರ್ಜಲ ಕುಸಿದಿದೆ. ತೋಟಗಾರಿಕೆ  ಬೆಳೆಗಳಲ್ಲಿ ಶೇ 60ರಿಂದ 70ರಷ್ಟು ಇಳುವರಿ ಕುಸಿತ ಕಂಡಿದೆ ಎಂದು ತಿಳಿಸಿದೆ.

ಗಣಿ ದೂಳಿನಿಂದಾಗಿ ಶಾಲೆಗಳಲ್ಲಿ ದೂಳು ತುಂಬಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಸಮರ್ಪಕ ಅನುಷ್ಠಾನ ಸಾಧ್ಯವಾಗಿಲ್ಲ. ದೂಳಿನ ಕಾರಣ ಮಕ್ಕಳ ಗೈರು ಹಾಜರಿ ಹೆಚ್ಚಿದೆ ಎಂಬ ಬಗ್ಗೆಯೂ ಶಿಕ್ಷಣ ಇಲಾಖೆ ವರದಿ ನೀಡಿತ್ತು.

ಚಿಕನಾಯಕನಹಳ್ಳಿಯಲ್ಲಿ ಹೆಚ್ಚು ಹಾನಿ
ಕೇಂದ್ರ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಜಯಕೃಷ್ಣನ್‌ ನೇತೃತ್ವದ ಸಮಿತಿಯು ಜಿಲ್ಲೆಯಲ್ಲಿ 2011ರ ಆಗಸ್ಟ್ ತಿಂಗಳಲ್ಲಿ ಜಿಲ್ಲೆಯ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ವರದಿಯನ್ನು ನೀಡಿತ್ತು.

ಜಿಲ್ಲೆಯಲ್ಲಿ 55 ಗಣಿ ಕಂಪೆನಿಗಳಿಗೆ 2678 ಹೆಕ್ಟೇರ್‌ ಪ್ರದೇಶದಲ್ಲಿ ಅದಿರು ತೆಗೆಯಲು ಅನುಮತಿ ನೀಡಲಾಗಿತ್ತು. ಇದರಲ್ಲಿ 24 ಕಂಪೆನಿಗಳು
1203 ಹೆಕ್ಟೇರ್‌ನಲ್ಲಿ  ಗಣಿಗಾರಿಕೆ ನಡೆಸಿದ್ದವು. ಅಕ್ರಮವಾಗಿ 257 ಎಕರೆ ಅರಣ್ಯ ಪ್ರದೇಶದಲ್ಲಿ ಅದಿರು ಹೊರ ತೆಗೆದಿದ್ದವು ಎಂದು ವರದಿಯಲ್ಲಿ
ತಿಳಿಸಲಾಗಿದೆ.

2001–02ರಲ್ಲಿ 2.03 ಲಕ್ಷ ಟನ್ ಅದಿರು ಹೊರ ತೆಗೆದಿದ್ದ ಕಂಪೆನಿಗಳು 2008–09ರ ಒಂದೇ ವರ್ಷದಲ್ಲಿ 25.30 ಲಕ್ಷ  ಟನ್ ಹೊರ ತೆಗೆದಿದ್ದವು. ಅದಿರು ತೆಗೆಯಲು ಅಕ್ರಮ ನಡೆಸಲಾಗಿದೆ ಎಂದು ಹೇಳಿದೆ. 17 ಅದಿರು ಕಂಪೆನಿಗಳು ಕಾನೂನು ಬಾಹಿರವಾಗಿ ಅದಿರು ಹೊರ ತೆಗೆದಿರುವುದು ಜಂಟಿ ಸರ್ವೇಯಲ್ಲಿ ಸಹ ಬಹಿರಂಗಗೊಂಡಿತ್ತು.

ಲೀಜ್‌ ಉಲ್ಲಂಘಿಸಿ 130 ಎಕರೆ  ಅಧಿಕ ಪ್ರದೇಶದಲ್ಲಿ ಗಣಿಗಾರಿಕೆ  ನಡೆಸಿದ್ದವು. ಇದಕ್ಕಾಗಿ ಸರ್ಕಾರಕ್ಕೆ ₹ 206 ಕೋಟಿ ದಂಡ ಪಾವತಿಸಿದ್ದವು. ಕಾನೂನು ಬಾಹಿರವಾಗಿ ಅದಿರು ತೆಗೆದುದ್ದಕ್ಕಾಗಿ 18 ಕಂಪೆನಿಗಳ ಲೀಸ್  ರದ್ದುಪಡಿಸಲಾಗಿತ್ತು.

ಗಣಿಗಾರಿಕೆಯಿಂದಾಗಿ ಮೂರು ತಾಲ್ಲೂಕುಗಳಲ್ಲಿ ಕೃಷಿ ಮಾತ್ರವಲ್ಲ ನೈಸರ್ಗಿಕ ಹಳ್ಳ ಕೊಳ್ಳಗಳ ಜಾಲ ಹಾಳಾಗಿದೆ. ಅಂತರ್ಜಲ ಕುಸಿದಿತ್ತು. ತಾಲ್ಲೂಕಿನ ಜೀವ ವೈವಿಧ್ಯದ ಮೇಲೂ ಪರಿಣಾಮ ಬೀರಿದೆ. ಅತಿ ಹೆಚ್ಚು ಹಾನಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಆಗಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT