ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಆಯುಕ್ತರ ಮೇಲೆ ಹಲ್ಲೆಗೆ ಯತ್ನ

30ನೇ ವಾರ್ಡ್‌ ಸದಸ್ಯ ಚಾಂದ್‌ಪಾಷಾ ದುಂಡಾವರ್ತಿ
Last Updated 25 ಮಾರ್ಚ್ 2017, 5:43 IST
ಅಕ್ಷರ ಗಾತ್ರ

ಕೋಲಾರ: ನೀರಿನ ಸಮಸ್ಯೆ ವಿಷಯವಾಗಿ ನಗರದ 30ನೇ ವಾರ್ಡ್‌ ಸದಸ್ಯ ಚಾಂದ್‌ಪಾಷಾ ಅವರು ನಗರಸಭೆ ಆಯುಕ್ತ ಎಸ್‌.ಎ.ರಾಮ್‌ಪ್ರಕಾಶ್‌ ಅವರ ಮೇಲೆ ನಗರಸಭೆ ಕಚೇರಿಯಲ್ಲೇ ಗುರುವಾರ ಹಲ್ಲೆಗೆ ಯತ್ನಿಸಿ ದುಂಡಾವರ್ತಿ ಪ್ರದರ್ಶಿಸಿದ್ದಾರೆ.

ಇಡೀ ಘಟನಾವಳಿಯ ದೃಶ್ಯ ಆಯುಕ್ತರ ಕೊಠಡಿಯಲ್ಲಿನ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಮಾರು 17 ನಿಮಿಷದ ಈ ದೃಶ್ಯಾವಳಿಯ ತುಣುಕು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ರಾಮ್‌ಪ್ರಕಾಶ್‌ ನಗರಸಭೆ ಕಚೇರಿಯಲ್ಲಿನ ತಮ್ಮ ಕೊಠಡಿಯಲ್ಲಿ ಗುರುವಾರ (ಮಾರ್ಚ್‌ 23) ಸಂಜೆ ಕಾರ್ಯ ನಿರ್ವಹಿಸುತ್ತಿದ್ದಾಗ ಅಲ್ಲಿಗೆ ಬಂದ ಚಾಂದ್‌ಪಾಷಾ  ನೀರಿನ ಸಮಸ್ಯೆಯನ್ನು ಪ್ರಸ್ತಾಪಿಸಿ, ತಮ್ಮ ವಾರ್ಡ್‌ ವ್ಯಾಪ್ತಿಯ ಬಡಾವಣೆಗಳಿಗೆ ಭೇಟಿ ಕೊಟ್ಟು ಸಮಸ್ಯೆ ಬಗ್ಗೆ ಪರಿಶೀಲನೆ ಮಾಡುವಂತೆ ಕೇಳಿದ್ದಾರೆ.

ಈ ಸಂದರ್ಭದಲ್ಲಿ ಕಡತಗಳನ್ನು ನೋಡುತ್ತಿದ್ದ ರಾಮ್‌ಪ್ರಕಾಶ್‌, ನೀರಿನ ಸಮಸ್ಯೆ ಬಗ್ಗೆ ಎಂಜಿನಿಯರ್‌ಗೆ ಮಾಹಿತಿ ನೀಡಿದ್ದೇನೆ. ಎಂಜಿನಿಯರ್‌ ವಾರ್ಡ್‌ಗೆ ಭೇಟಿ ಕೊಟ್ಟು ಪರಿಶೀಲನೆ ಮಾಡುತ್ತಾರೆ ಎಂದು ಹೇಳಿದ್ದಾರೆ. ನಂತರ ಚಾಂದ್‌ಪಾಷಾ, ‘ವಾರ್ಡ್‌ ವ್ಯಾಪ್ತಿಯ ಫುಲ್‌ಷಾ ಮೊಹಲ್ಲಾ ಮತ್ತು ಶಿವಗಿರಿ ಮಠದ ರಸ್ತೆಯ ಅಕ್ಕಪಕ್ಕ ಮೂರ್‌್ನಾಲ್ಕು ತಿಂಗಳಿಂದ ನೀರಿನ ಸಮಸ್ಯೆ ಇದೆ.

ಈ ಭಾಗದ ಕೊಳವೆ ಬಾವಿಯಲ್ಲಿ 10 ದಿನಗಳ ಹಿಂದೆ ನೀರು ಬತ್ತಿದೆ. ಇಡೀ ವಾರ್ಡ್‌ಗೆ ದಿನಕ್ಕೆ ನಾಲ್ಕು ಟ್ಯಾಂಕರ್‌ ಮಾತ್ರ ನೀರು ಕೊಡುತ್ತಿದ್ದು, ಸಮಸ್ಯೆ ಗಂಭೀರವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನೀರಿನ ಸಮಸ್ಯೆ ಬಗ್ಗೆ ನಗರಸಭೆ ಅಧ್ಯಕ್ಷರಿಗೆ ಐದಾರು ಬಾರಿ ದೂರು ಕೊಟ್ಟಿದ್ದೇನೆ. ಜತೆಗೆ ನಿಮಗೂ ದೂರು ಕೊಟ್ಟಿದ್ದೇನೆ. ಆದರೆ, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡಿಲ್ಲ. ನೀರಿನ ಸಮಸ್ಯೆಯಿಂದ ಆಕ್ರೋಶಗೊಂಡಿರುವ ಜನ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದಾರೆ.

ಅವರಿಗೆ ಏನು ಉತ್ತರ ಹೇಳಲಿ. ಮೊದಲು ಕುರ್ಚಿ ಬಿಟ್ಟು ವಾರ್ಡ್‌ಗೆ ಬನ್ನಿ’ ಎಂದು ತಾಕೀತು ಮಾಡಿದ್ದಾರೆ. ಇದರಿಂದ ಕೋಪಗೊಂಡ ರಾಮ್‌ಪ್ರಕಾಶ್‌, ‘ನನಗೆ ನೊರೆಂಟು ಕೆಲಸವಿದೆ. ಕೊಠಡಿಯಿಂದ ಹೊರಗೆ ಹೋಗಿ’ ಎಂದು ದಬಾಯಿಸಿದ್ದಾರೆ.

ಪರಸ್ಪರ ನಿಂದನೆ: ಬಳಿಕ ಇಬ್ಬರ ಮಧ್ಯೆ ವಾಗ್ವಾದ ನಡೆದು, ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಚಾಂದ್‌ಪಾಷಾ ಕೊಠಡಿಯಲ್ಲಿದ್ದ ಕುರ್ಚಿಯನ್ನು ಮೇಲೆತ್ತಿ ರಾಮ್‌ಪ್ರಕಾಶ್‌ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ.

ಈ ವಿಷಯ ತಿಳಿದು ಆಯುಕ್ತರ ಕೊಠಡಿಗೆ ಬಂದ ನಗರಸಭಾ ಸದಸ್ಯ ಪ್ರಸಾದ್‌ಬಾಬು, ಚಾಂದ್‌ಪಾಷಾ ಅವರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ನಗರಸಭಾ ಸದಸ್ಯರಾದ ನಾರಾಯಣಮ್ಮ, ಸೋಮಶೇಖರ್‌, ಮಂಜುನಾಥ್‌, ಷಂಷೀರ್‌ ಈ ಗಲಾಟೆ ನಡೆದಾಗ ಆಯುಕ್ತರ ಕೊಠಡಿಯಲ್ಲಿದ್ದರು.

ದೂರು ದಾಖಲಿಸಿ
ಚಾಂದ್‌ಪಾಷಾ ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವಂತೆ ನಗರಸಭೆ ಆಯುಕ್ತರಿಗೆ ಸೂಚಿಸಿದ್ದೇನೆ. ಜತೆಗೆ ಪ್ರಕರಣದ ಬಗ್ಗೆ ವಿವರಣೆ ಕೊಡುವಂತೆ ಹೇಳಿದ್ದೇನೆ. ಕಚೇರಿಯ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿರುವ ಅವರು ಶನಿವಾರ (ಮಾರ್ಚ್‌ 25) ವಿವರಣೆ ಕೊಡುವುದಾಗಿ ತಿಳಿಸಿದ್ದಾರೆ.
–ಡಾ.ಕೆ.ವಿ.ತ್ರಿಲೋಕಚಂದ್ರ, ಜಿಲ್ಲಾಧಿಕಾರಿ

*
ಸುಳ್ಳು ಮಾಹಿತಿ ಕೊಟ್ಟು ವಂಚನೆ
ಚಾಂದ್‌ಪಾಷಾ ಅವರು 30ನೇ ವಾರ್ಡ್‌ಗೆ ನೀರು ಪೂರೈಸುವ ಟ್ಯಾಂಕರ್‌ ಮಾಲೀಕರ ಜತೆ ಶಾಮೀಲಾಗಿ ನಗರಸಭೆಗೆ ಸುಳ್ಳು ಮಾಹಿತಿ ಕೊಟ್ಟು ವಂಚನೆ ಮಾಡುತ್ತಿದ್ದರು. ಅಲ್ಲದೇ, ನಗರಸಭೆಯಲ್ಲಿನ ಟ್ಯಾಂಕರ್‌ ನೀರು ಸರಬರಾಜಿನ ದಾಖಲೆ ಪುಸ್ತಕವನ್ನು ತಿದ್ದಿ ಸುಳ್ಳು ವಿವರ ದಾಖಲಿಸಿದ್ದಾರೆ. ಈ ಸಂಗತಿ ಗೊತ್ತಾಗಿ ಅವರ ವಾರ್ಡ್‌ಗೆ ಟ್ಯಾಂಕರ್ ನೀರಿನ ಪ್ರಮಾಣವನ್ನು ಕಡಿಮೆ ಮಾಡಿದ್ದೆ. ಈ ಕಾರಣಕ್ಕೆ ಅವರು ನನ್ನ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು.
–ಎಸ್‌.ಎ.ರಾಮ್‌ಪ್ರಕಾಶ್‌, ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT