ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಬಿಡುಗಡೆ ವಿರೋಧಿಸಿ ಪ್ರತಿಭಟನೆ

Last Updated 25 ಮಾರ್ಚ್ 2017, 8:16 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಕಾವೇರಿ ನೀರಿನ ವಿಚಾರದಲ್ಲಿ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಬಾಹುಬಲಿ –2 ಚಿತ್ರವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಸತ್ಯರಾಜ್ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಿದ ಕರವೇ ಕಾರ್ಯಕರ್ತರು ನಗರದ ಯಾವುದೇ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡಬಾರದೆಂದು ಎಲ್ಲ ಚಿತ್ರಮಂದಿರಗಳ ಮಾಲೀಕರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ರಾಜಘಟ್ಟ ರವಿ, ತಾಲ್ಲೂಕು ಅಧ್ಯಕ್ಷ  ಪು. ಮಹೇಶ್ ಮಾತನಾಡಿ, ಬಾಹುಬಲಿ ಚಿತ್ರದ ಪ್ರಮುಖ ಪಾತ್ರಧಾರಿ ಕಟ್ಟಪ್ಪ ಪಾತ್ರ ನಿರ್ವಹಿಸುತ್ತಿರುವ ಸತ್ಯರಾಜ್, ಇತ್ತೀಚೆಗೆ ಕಾವೇರಿ ನೀರಿಗಾಗಿ ನಡೆದ ಹೋರಾಟದ ಸಂದರ್ಭದಲ್ಲಿ ಕರ್ನಾಟಕದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಕನ್ನಡಿಗರ ಭಾವನೆಗಳನ್ನು ಕೆರಳಿಸಿದ್ದಾರೆ.

ರಾಜ್ಯದ ಚಿತ್ರಮಂದಿರಗಳಲ್ಲಿ ಅವರ  ಚಿತ್ರ ಪ್ರದರ್ಶಿಸುವ ಯೋಗ್ಯತೆಯನ್ನು ಉಳಿಸಿಕೊಂಡಿಲ್ಲ. ಕನ್ನಡಿಗರು ಅದನ್ನು ನೋಡಲು ಇಚ್ಛಿಸುವುದಿಲ್ಲ. ಯಾವುದೇ ಕಾರಣಕ್ಕೂ ಬಾಹುಬಲಿ–2 ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ಕೊಡಬಾರದು ಎಂದು ಕರವೇ ಹೋರಾಟ ನಡೆಸುತ್ತಿದೆ ಎಂದರು.

ಈ ಸಿನಿಮಾವನ್ನು ಯಾವುದೇ ಕಾರಣಕ್ಕೂ ಇಲ್ಲಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ. ಈ ಬಗ್ಗೆ ಚಿತ್ರಮಂದಿರದ ಮಾಲೀಕರಿಗೂ ಮನವಿ ಸಲ್ಲಿಸಲಾಗಿದ್ದು, ಒಂದು ವೇಳೆ ಬಿಡುಗಡೆ ಮಾಡಿದ್ದೇ ಆದರೆ ಮುಂದೆ ಆಗುವ ಅನಾಹುತಗಳಿಗೆ ಚಿತ್ರಮಂದಿರದ ಮಾಲೀಕರೇ ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.

ಕರವೇ ತಾಲ್ಲೂಕು ಕಾರ್ಯಾಧ್ಯಕ್ಷ  ಹಮಾಮ್ ಪ್ರಕಾಶ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ  ಶ್ರೀನಗರಬಶೀರ್, ತಾಲ್ಲೂಕು ಖಜಾಂಚಿ  ವಿಜಯಕುಮಾರ್, ನಗರ ಅಧ್ಯಕ್ಷ  ಎಸ್.ಕೆ.ಸತೀಶ್, ಕಾರ್ಯದರ್ಶಿ  ಜೋಗಳ್ಳಿಅಮ್ಮು, ನಗರ ಪ್ರಧಾನ ಕಾರ್ಯದರ್ಶಿ  ಸುಬ್ರಮಣಿ, ಆನಂದ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT