ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾವಯವ ಕೃಷಿಯಿಂದ ರೈತರಿಗೆ ಲಾಭ’

‘ಸಿಟಿ ಕಾಂಪೋಸ್ಟ್ ಬಳಕೆಯ ಮಹತ್ವ’ ಹಾಗೂ ಉಚಿತ ವಿತರಣೆ
Last Updated 25 ಮಾರ್ಚ್ 2017, 8:20 IST
ಅಕ್ಷರ ಗಾತ್ರ

ವಿಜಯಪುರ: ರೈತರು ರಾಸಾಯನಿಕ ರಸಗೊಬ್ಬರಗಳನ್ನು ಬಿಟ್ಟು ಸಾವಯವ ಕೃಷಿಗೆ ಬದಲಾಗುವುದರಿಂದ ಭೂಮಿಯ ಫಲವತ್ತತೆ ಕಾಪಾಡುವುದರ ಜೊತೆಗೆ ಉತ್ತಮ ಇಳುವರಿಯ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿ ಮೈತ್ರಿ ಹೇಳಿದರು.

ಪಟ್ಟಣದ ಚನ್ನಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ‘ಜೈ ಕಿಸಾನ್’ ಸಂಸ್ಥೆಯಿಂದ ಆಯೋಜಿಸಲಾಗಿದ್ದ  ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ತಯಾರಿಸಿರುವ ‘ಸಿಟಿ ಕಾಂಪೋಸ್ಟ್ ಬಳಕೆಯ ಮಹತ್ವ’ ಹಾಗೂ ಉಚಿತ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರು ಉತ್ತಮ ಇಳುವರಿ ಹಾಗೂ ತ್ವರಿತಗತಿಯಲ್ಲಿ ಬೆಳೆಗಳನ್ನು ಬೆಳೆಯಲು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಇದರಿಂದ ಭೂಮಿಯಲ್ಲಿನ ಜೀವಸತ್ವಗಳು ನಾಶವಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಇದರಿಂದ ರೈತರು ನಿರೀಕ್ಷಿಸಿದಷ್ಟರ ಪ್ರಮಾಣದಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ.

ಬಹಳಷ್ಟು ರೈತರು ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದರ ಕಡೆಗೆ ಗಮನ ಹರಿಸುತ್ತಿಲ್ಲ. ಕೃಷಿ ಇಲಾಖೆಯಿಂದ ರೈತರಿಗೆ ಮಣ್ಣಿನ ಪರೀಕ್ಷೆಯ ಕಾರ್ಡುಗಳನ್ನು ವಿತರಿಸಿ, 25 ಎಕರೆಗೊಂದು ಕಡೆಯಲ್ಲಿ ಮಣ್ಣಿನ ಮಾದರಿಗಳನ್ನು ಸಂಗ್ರಹಣೆ ಮಾಡುವ ಕಾರ್ಯವನ್ನು ಶೇ 80 ರಷ್ಟು ಮುಕ್ತಾಯಗೊಳಿಸಲಾಗಿದೆ ಎಂದರು.

ಕೃಷಿ ಇಲಾಖೆಯ ಕೆಸಿಡಿಸಿ ಯೋಜನೆಯಡಿಯಲ್ಲಿ ಸಿಟಿ ಕಾಂಪೋಸ್ಟ್ ಗೊಬ್ಬರ ವಿತರಣೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಭೂಮಿಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳನ್ನು ಒದಗಿಸುವಂತಹ ಶಕ್ತಿಯುಳ್ಳ ಸಿಟಿ ಕಾಂಪೋಸ್ಟ್ ಗೊಬ್ಬರದ ಉಪಯೋಗ ಮಾಡಿಕೊಳ್ಳುವ ಕಡೆಗೆ ಚಿಂತನೆ ನಡೆಸಬೇಕು ಎಂದರು.

ಜೈ ಕಿಸಾನ್ ಮಂಗಳ ಭೂಮಿತ್ರ ಸಂಸ್ಥೆಯ ನಿರ್ವಾಹಕ ರುದ್ರಪ್ಪ ಮಲ್ಲನೂರ್ ಮಾತನಾಡಿ, ಬೆಂಗಳೂರಿನಂಥ ಮಹಾನಗರಗಳಲ್ಲಿ ದಿನನಿತ್ಯ ಉತ್ಪಾದನೆಯಾಗುತ್ತಿರುವ ತ್ಯಾಜ್ಯವನ್ನು ಸಂಸ್ಕರಿಸಿದ ನಂತರ ತಯಾರಿಸುವ ಸಿಟಿ ಕಾಂಪೋಸ್ಟ್ ಗೊಬ್ಬರ ರೈತರ ಭೂಮಿಗಳನ್ನು ಫಲವತ್ತಾಗಿ ಮಾಡುತ್ತದೆ. ಕಸ ವಿಲೇವಾರಿಯಂಥ ಗಂಭೀರ ಸಮಸ್ಯೆಗಳನ್ನು ರೈತರ ಸಹಕಾರದಿಂದ ನಿವಾರಿಸಬಹುದು. 

ಕಡ್ಡಾಯವಾಗಿ ಮಣ್ಣು, ನೀರು, ಎಲೆಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ರೈತರು ಹನಿ ನೀರಾವರಿ ಪದ್ಧತಿಯಿಂದ ನೀಡುವಂತಹ ಬೇಸಾಯ ಗಿಡಗಳಿಗೆ ತಲುಪುವುದಿಲ್ಲ. ಆದ್ದರಿಂದ ಸಾವಯವ ಗೊಬ್ಬರವಾಗಿರುವ ಸಿಟಿ ಕಾಂಪೋಸ್ಟ್ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರೈತ ಮುಖಂಡ ಮುನಿಬೈರಪ್ಪ ಮಾತನಾಡಿ, ರಾಸಾಯನಿಕ ಗೊಬ್ಬರ ಉಪಯೋಗ ಮಾಡಿಕೊಂಡು ಲಕ್ಷಾಂತರ ರೂಪಾಯಿಗಳ ಬಂಡವಾಳ ಹೂಡಿ ಬೆಳೆದ ಬೆಳಗಳು ನಷ್ಟವಾಗಿ ಭೂಮಿಯ ಫಲವತ್ತೆತೆಯನ್ನು ಕಳೆದುಕೊಂಡು ಪರದಾಡುವಂತಾಗಿದೆ. ಬಹಳಷ್ಟು ಮಂದಿ ರೈತರು ಬ್ಯಾಂಕುಗಳಿಂದ ಸಾಲ ಪಡೆಯುವ ಉದ್ದೇಶಕ್ಕಾಗಿ ಮಣ್ಣು, ನೀರಿನ ಪರೀಕ್ಷೆಯನ್ನು ತರಾತುರಿಯಲ್ಲಿ ಮಾಡಿಸುತ್ತಿದ್ದಾರೆ.

ಇದರಿಂದ ಭೂಮಿಯಲ್ಲಿನ ಜೀವಸತ್ವಗಳ ಪ್ರಮಾಣವನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ರೈತರು ಸಾವಯವ ಕೃಷಿಗೆ ಹೆಚ್ಚಿನ ಪ್ರಮಾಣದಲ್ಲಿ ಆದ್ಯತೆ ನೀಡಬೇಕು ಎಂದರು.

ಭಾಗವಹಿಸಿದ್ದ ಎಲ್ಲಾ ರೈತರಿಗೂ ಸಿಟಿ ಕಾಂಪೋಸ್ಟ್ ಗೊಬ್ಬರದ ಮೂಟೆಗಳನ್ನು ಉಚಿತವಾಗಿ ವಿತರಿಸಲಾಯಿತು. ಕೃಷಿ ಇಲಾಖೆಯ ನಟರಾಜ್, ಮಧುಸೂದನ್, ಬಸವರಾಜ್, ನಾಗರಾಜ್, ವಿನಯ್ ಕುಮಾರ್, ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT