ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಕೂಟ ಫೈನಾನ್ಸ್ ವಿರುದ್ಧ ಪ್ರತಿಭಟನೆ

ಸಾಲ ವಸೂಲಿಗೆ ಕಿರುಕುಳ: ಮಹಿಳೆಯರ ಆರೋಪ; ಸಾಲಮನ್ನಾ ಮಾಡಲು ಸರ್ಕಾರಕ್ಕೆ ಆಗ್ರಹ
Last Updated 25 ಮಾರ್ಚ್ 2017, 9:34 IST
ಅಕ್ಷರ ಗಾತ್ರ

ಹಾಸನ: ಸಾಲ ಮರುಪಾವತಿಗೆ ಖಾಸಗಿ ಮೈಕ್ರೊ ಫೈನಾನ್ಸ್‌ಗಳು ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಬಿಜೆಪಿ ಗ್ರಾಮಾಂತರ ಮಂಡಲದ ನೇತೃತ್ವದಲ್ಲಿ ನೂರಾರು ಮಹಿಳೆಯರು ಗ್ರಾಮೀಣ ಕೂಟ ಫೈನಾನ್ಸ್‌ ಸಂಸ್ಥೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲೆಯಾದ್ಯಾಂತ ಗ್ರಾಮೀಣ ಕೂಟ, ಎಸ್‌ಕೆಎಸ್‌ ಸೇರಿದಂತೆ ಹಲವು ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ವಸೂಲು ಮಾಡಲು ಅನುಸರಿಸುತ್ತಿರುವ ಕ್ರಮ ಖಂಡಿಸಿ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಇಷ್ಟಾದರೂ ಜಿಲ್ಲಾಧಿಕಾರಿ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಮಹಿಳೆಯರು, ಕೃಷಿ ಕಾರ್ಮಿಕರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದೆ. ಮಳೆ ಇಲ್ಲದೆ ಕೃಷಿ ಚಟುವಟಿಕೆಗಳು ನಡೆದಿಲ್ಲ. ಇದರಿಂದ ರೈತರು, ಕೂಲಿ ಕಾರ್ಮಿಕರು ಹಾಗೂ ಮಹಿಳೆಯರ ಬದುಕು ಮೂರಾಬಟ್ಟೆಯಾಗಿದೆ.

ಆರ್ಥಿಕ ಆದಾಯದ ಮೂಲವಿಲ್ಲದೆ ಪರದಾಡುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಸಾಲ ಮರುಪಾವತಿಸುವಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

3ರಿಂದ 4 ಪಟ್ಟು ಕಡಿಮೆ ಬಡ್ಡಿಗೆ ಸಾಲ ನೀಡುತ್ತಾರೆ. ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿಗೆ ಖಾಸಗಿ ಗೂಂಡಾಗಳನ್ನು ನೇಮಿಸಿ ಶೋಷಣೆ ಮಾಡುತ್ತಿವೆ. ಮಳೆ, ಬೆಳೆ ಉತ್ತಮವಾಗಿದ್ದ ಸಮಯದಲ್ಲಿ ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಸಾಲ ಮರು ಪಾವತಿಸಿದ್ದೇವೆ. ಜಿಲ್ಲೆಯಲ್ಲಿ ಭೀಕರ ಬರವಿರುವುದರಿಂದ ಸಾಲ ಮರು ಪಾವತಿ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಕೂಡಲೇ ಜಿಲ್ಲಾಧಿಕಾರಿ ವಿ.ಚೈತ್ರಾ ಅವರು ಹಣಕಾಸು ಸಂಸ್ಥೆ ಪ್ರತಿನಿಧಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು. ಗ್ರಾಮೀಣ ಜನತೆ ಅನುಭವಿಸುತ್ತಿರುವ ಸಂಕಷ್ಟವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು, ಸಾಲಮನ್ನಾ ಮಾಡುವಂತೆ ಒತ್ತಡ ಹೇರಬೇಕು.

ಒಂದು ವೇಳೆ ಈ ಮನವಿಗೆ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಪ್ರವೀಣ್‌, ಶಿವಣ್ಣ, ಲಲಿತಮ್ಮ, ಸವಿತಾ, ವಿಮಲಾ, ಜ್ಯೋತಿ ಜಗದೀಶ್‌, ಸುದೀರ್‌, ಸುರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT