ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಕ್ಷೇತ್ರದ ಪ್ರಗತಿ ಕುಂಠಿತ: ಬೇಸರ

ಕುಂಭಾಭಿಷೇಕ ಮಹೋತ್ಸವ ಉದ್ಘಾಟನೆ– ತಮಿಳುನಾಡಿಗೆ ನೀರು: ದೇವೇಗೌಡ ಅಸಮಾಧಾನ
Last Updated 25 ಮಾರ್ಚ್ 2017, 9:37 IST
ಅಕ್ಷರ ಗಾತ್ರ

ಹಾಸನ: ಸಂಪ್ರದಾಯ ಹಾಗೂ ಪುರಾತನ ನಂಬಿಕೆಯೇ ಮೂಲ ದೇವರು ಎಂದು  ಸಂಸದ ಎಚ್.ಡಿ. ದೇವೇಗೌಡರು ಅಭಿಪ್ರಾಯಪಟ್ಟರು.

ತಾಲ್ಲೂಕಿನ ದೊಡ್ಡಮಂಡಿಗನ ಹಳ್ಳಿಯಲ್ಲಿ ಲೋಕ ಕಲ್ಯಾಣಾರ್ಥ ಗುಹೆ ಕಲ್ಲಮ್ಮ, ಚಿಕ್ಕಮ್ಮ ದೇವಾಲಯ ಹಾಗೂ ಪ್ಲೇಗಿನಮ್ಮನವರ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಿಕ್ಕಮ್ಮ ದೇವಿ ಪ್ರತಿಷ್ಠಾಪನೆ, ಗೋಪುರದ ಕಳಶ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ದೇವರಿಗೆ ಹಲವು ನಾಮಗಳಿದ್ದರೂ ದೈವ ಒಂದೆ. ದುಷ್ಟರ ಸಂಹಾರಕ್ಕೆ ದೈವತ್ವದ ವಿವಿಧ ರೂಪಗಳಲ್ಲಿ ಅವತರಿಸಿದ್ದಾನೆ. ವೇದ, ಉಪನಿಷತ್‌ ಅಧ್ಯಯನ ಮಾಡಿಲ್ಲ. ಆದರೂ, ದೇವರನ್ನು ನಂಬುತ್ತೇವೆ. ನಂಬಿಕೆ ಭಕ್ತಿಯ ಸಂಕೇತ ಎಂದು ನುಡಿದರು.

ಸುಮಾರು 50 ವರ್ಷಗಳು ರಾಜಕೀಯ ಮಾಡಿದ್ದೇನೆ. ಸುದೀರ್ಘ ರಾಜಕಾರಣಕ್ಕೆ ಜಿಲ್ಲೆಯ ಜನತೆ ಶಕ್ತಿ ತುಂಬಿದ್ದಾರೆ. ಉಸಿರು ಇರುವವರೆಗೂ ಜನಪರ ಸೇವೆ ಮಾಡುತ್ತೇನೆ. ಜಿಲ್ಲೆಯಲ್ಲಿ ಶಿಕ್ಷಣ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಹಿನ್ನಡೆ ಆಗಿರುವುದು ನೋವುಂಟು ಮಾಡಿದೆ.

ಕುಡಿಯಲು ನೀರಿಲ್ಲದೆ ರೈತರು ಪರಿತಪಿಸುತ್ತಿದ್ದಾರೆ. ಜಲಾಶಯಗಳ ಒಡಲು ಬರಿದಾಗಿವೆ. ಇಂತಹ ಸ್ಥಿತಿಯಲ್ಲೂ ಸುಪ್ರೀಂ ಕೋರ್ಟ್‌ ತಮಿಳುನಾಡಿಗೆ 2 ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಆದೇಶ ನೀಡಿದೆ ಎಂದು ಆತಂಕ ವ್ಯಕ್ತಪಡಿಸಿದರು. ಗುಹೆಕಲ್ಲಮ್ಮ , ಚಿಕ್ಕಮ್ಮ ಹಾಗೂ ಪ್ಲೇಗಿನಮ್ಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. 

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮಿಜಿ, ಶಾಸಕ ಎಚ್.ಎಸ್.ಪ್ರಕಾಶ್, ಪಕ್ಷದ ಮುಖಂಡ ಕೆ.ಎಂ.ರಾಜೇಗೌಡ, ನಗರಭೆ ಅಧ್ಯಕ್ಷ ಡಾ.ಎಚ್.ಎಸ್. ಅನಿಲ್‌ಕುಮಾರ್‌, ಕಂದಲಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಪಿ. ಸ್ವರೂಪ್, ನಗರಸಭೆ ಮಾಜಿ ಉಪಾಧ್ಯಕ್ಷ ಚಂದ್ರೇಗೌಡ, ಕೃಷ್ಣಕುಮಾರ್, ನಿಂಗರಾಜು ಇದ್ದರು.

ಯೋಗಿ ಹೇಗೆ ವಿವಾದ ಬಗೆಹರಿಸುತ್ತಾರೆ?
ಹಾಸನ:
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿ ಆಗಿರುವುದಕ್ಕೆ ಸಂಸದ ಎಚ್.ಡಿ. ದೇವೇಗೌಡ ಅವರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು. 

ಖಾಸಗಿ ಕಾರ್ಯ ಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಮಾತನಾಡಿದ ಅವರು, ಯೋಗಿ ಅವರು ಹೋರಾಟದ ಹಾದಿಯಲ್ಲಿ ಬಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಬಾಬರಿ ಮಸೀದಿ ವಿವಾದ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳಿವೆ. ಇವೆಲ್ಲ ಅತ್ಯಂತ ಸೂಕ್ಷ್ಮ ಹಾಗೂ ವಿವಾದಿತ ವಿಷಯಗಳು. ಅಂತಿಮವಾಗಿ ಈ ಎಲ್ಲ ವಿವಾದಗಳನ್ನು ಅವರು ಹೇಗೆ ಬಗೆಹರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದರು. 

ನನ್ನ ರಾಜಕೀಯ ಹೋರಾಟ ಇನ್ನೂ ಮುಗಿದಿಲ್ಲ. 2018ರ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲೂ ಹೋರಾಟ ಮುಂದುವರಿಸುವೆ ಎಂದರು.
ದಶಕಗಳ ಕನಸಾದ ಯಶವಂತಪುರ– ಹಾಸನ ಮಾರ್ಗದಲ್ಲಿ ಮಾರ್ಚ್‌ 26ರಿಂದ ರೈಲು ಸಂಚಾರ ಆರಂಭವಾಗಲಿದೆ.

ಆರಂಭದಲ್ಲಿ ಒಟ್ಟು 3 ರೈಲುಗಳು ಸಂಚರಿಸಲಿದ್ದು, ಇವುಗಳ ಪೈಕಿ ಒಂದಕ್ಕೆ ಗೊಮ್ಮಟೇಶ್ವರ, ಮತ್ತೊಂದಕ್ಕೆ ಹೇಮಾವತಿ ಹಾಗೂ ಇನ್ನೊಂದಕ್ಕೆ ಕಾಲಭೈರವೇಶ್ವರ ಎಂದು ಹೆಸರಿಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

*
ಜಿಲ್ಲೆಯಲ್ಲಿ ಶಿಕ್ಷಣ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿಯಾಗಬೇಕು ಎಂಬ ಕನಸು ಇನ್ನೂ ಈಡೇರಿಲ್ಲ.
-ಎಚ್‌.ಡಿ.ದೇವೇಗೌಡ,
ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT