ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಬಿಡುಗಡೆಯಲ್ಲಿ ತಾರತಮ್ಯ

ಚನ್ನರಾಯಪಟ್ಟಣ ಪುರಸಭೆ ವಿಶೇಷ ಸಭೆ: ಕಾಂಗ್ರೆಸ್‌ ಸದಸ್ಯರ ಆರೋಪ
Last Updated 25 ಮಾರ್ಚ್ 2017, 9:39 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ವಾರ್ಡ್‌ಗಳಿಗೆ ಅನುದಾನ ಬಿಡುಗಡೆ ಮಾಡುವ ವಿಚಾರದಲ್ಲಿ ತಾರತಮ್ಯ ಮಾಡಲಾ ಗುತ್ತಿದೆ ಎಂದು ಕಾಂಗ್ರೆಸ್‌ ಪುರಸಭಾ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಶುಕ್ರವಾರ ಪುರ ಸಭಾಧ್ಯಕ್ಷ ಕೆ.ಜೆ.ಸುರೇಶ್‌ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಪಕ್ಷೇತರ ಸದಸ್ಯ ಎಚ್‌.ಎನ್‌.ನವೀನ್‌ ವಿಷಯ ಪ್ರಸ್ತಾಪಿಸಿ, ಕ್ರಿಯಾಯೋಜನೆ ತಯಾರಿ ಸುವಾಗ ಎಲ್ಲ ಸದಸ್ಯರ ಜತೆ ಅಧ್ಯಕ್ಷರು ಚರ್ಚಿಸಬೇಕಿತ್ತು. ಆಗ ಸಲಹೆ ನೀಡಬಹುದಿತ್ತು. ಅದನ್ನು ಬಿಟ್ಟು ಏಕಾಏಕಿ ವಿಶೇಷ ಸಭೆ ಕರೆಯಲಾಗಿದೆ. ಪುರಸಭೆ ಎಂದರೆ ಕೇವಲ ನಾಲ್ಕೈದು ವಾರ್ಡ್‌ಗಳಲ್ಲ ಎಂಬುದನ್ನು ಅಧ್ಯಕ್ಷರು ತಿಳಿದುಕೊಳ್ಳಬೇಕು ಎಂದು ಮೂದಲಿಸಿದರು.

ಇದನ್ನು ಕಾಂಗ್ರೆಸ್‌ ಸದಸ್ಯರಾದ ಸಿ.ಎಸ್‌.ಪ್ರಕಾಶ್‌, ಸರವಣಕುಮಾರ್‌ ಕುಟ್ಟಿ, ಮಂಜುನಾಥ್‌ ಬೆಂಬಲಿಸಿದರು. ಎಲ್ಲ ವಾರ್ಡ್‌ಗಳಿಗೆ ಸಮನಾಗಿ ಅನು ದಾನ ಹಂಚಿಕೆ ಮಾಡಬೇಕು ಎಂದರು.

‘ನಾನು ಪ್ರತಿನಿಧಿಸುವ ವಾರ್ಡ್ ಅಭಿವೃದ್ಧಿಗೆ ಸಮರ್ಪಕ ಅನುದಾನ ಬಿಡುಗಡೆಯಾಗಿಲ್ಲ. ಈ ಬಗ್ಗೆ ಜನತೆ ಕೇಳುವ ಪ್ರಶ್ನೆಗೆ ಏನು ಉತ್ತರ ನೀಡಲಿ’ ಎಂದು ಸದಸ್ಯ ಸರವಣಕುಮಾರ್‌ ಕುಟ್ಟಿ, ವಿಶೇಷ ಸಭೆಯ ನಡಾವಳಿಯನ್ನು ಅಧ್ಯಕ್ಷರಿಗೆ ತೋರಿಸಿದರು. ಕಾಫಿ, ಟೀ ಕುಡಿದು, ತಿಂಡಿ ತಿನ್ನುವುದಕ್ಕೆ ಸಭೆಗೆ ಬರಬೇಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್‌ಎಫ್‌ಸಿ ಅನುದಾನ, 14ನೇ ಹಣಕಾಸು ಯೋಜನೆಯಡಿ ಎಲ್ಲ ವಾರ್ಡ್‌ಗಳಿಗೆ ಕುಡಿಯುವ ನೀರು ಸರಬರಾಜು, ಒಳಚರಂಡಿ, ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕು ಎಂದು ಸದಸ್ಯ ಸಿ.ಎಸ್‌.ಪ್ರಕಾಶ್‌ ಆಗ್ರಹಿಸಿದರು.

ಆಡಳಿತರೂಢ ಜೆಡಿಎಸ್‌ ಸದಸ್ಯ ಅನ್ಸರ್‌ಬೇಗ್‌ ಮಾತನಾಡಿ, ಅನುದಾನ ಹಂಚಿಕೆ ವಿಚಾರದಲ್ಲಿ ಆಡಳಿತ, ಪ್ರತಿಪಕ್ಷ ಸದಸ್ಯರು ಪ್ರತಿನಿಧಿಸುವ ವಾರ್ಡ್‌ಗಳಿಗೆ ತಾರತಮ್ಯ ಮಾಡುವುದು ಬೇಡ. ಎಲ್ಲ ಸದಸ್ಯರು ಒಂದೇ. ಅನುದಾನವನ್ನು ಸಮನಾಗಿ ಹಂಚಿಕೆ ಮಾಡಬೇಕು ಎಂದು ಹೇಳಿದಾಗ, ಕಾಂಗ್ರೆಸ್‌ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.

‘ನಾನು ಪ್ರತಿನಿಧಿಸುವ ವಾರ್ಡ್‌ನಲ್ಲಿ ಕಸ ಸಂಗ್ರಹಿಸುವ ಆಟೊ ಬರುತ್ತಿಲ್ಲ’ ಎಂದು ಸದಸ್ಯ ಮಂಜಣ್ಣ ದೂರಿದರು. ಸಭೆಯ ಆರಂಭದಲ್ಲಿ ಸದಸ್ಯ ಸಿ.ಎಸ್‌.ಪ್ರಕಾಶ್‌ ಕಾರ್ಯಸೂಚಿ ವಿಷಯ ಪ್ರಸ್ತಾಪಿಸಿ, ವಿಶೇಷಸಭೆ ನಡೆಯುವ 3 ದಿನಗಳ ಮುಂಚೆ ಸದಸ್ಯರಿಗೆ ತಿಳಿಸಬೇಕೆಂಬ ನಿಯಮ ಪಾಲಿಸಿಲ್ಲ.

ಮಾರ್ಚ್‌ 22ಕ್ಕೆ ತಿಳಿಸಲಾಗಿದೆ. ಏಕೆ ಅಧಿಕಾರಿಗಳು ಈ ರೀತಿ ಉದಾಸೀನ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಆಪಾದಿಸಿದರು. ಆಗ ಜೆಡಿಎಸ್‌ ಸದಸ್ಯ ಸಿ.ಜೆ.ನಟರಾಜು ಮಾತನಾಡಿ, ಮಾರ್ಚ್‌ 20ಕ್ಕೆ ಸಭೆ ನಡೆಯುವ ಕುರಿತು ನಮಗೆ ತಿಳಿಸಲಾಗಿದೆ. ಸಭೆ ನಡೆಸಲು ಅವಕಾಶ ನೀಡಬೇಕೆ ಹೊರತು ಸಭೆಯ ದಿಕ್ಕು ತಪ್ಪಿಸಬಾರದು ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಪ್ರಕಾಶ್‌, ಸಭೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿಲ್ಲ ಎಂದು ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ನಟರಾಜು ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಸದಸ್ಯರಾದ ಸಿ.ಎನ್‌.ಶಶಿಧರ್‌, ಸಿ.ಕೆ.ಗೋಪಾಲಕೃಷ್ಣ ಸಭೆ ನಡೆಸಲು ಅವಕಾಶ ನೀಡಿ ಅಭಿವೃದ್ಧಿ ಬಗ್ಗೆ ಚರ್ಚಿಸೋಣ ಎಂದು ಹೇಳಿ ಸಮಾಧಾನ ವ್ಯಕ್ತಪಡಿಸಿದರು. ಉಪಾಧ್ಯಕ್ಷೆ ಕಲ್ಪನಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಬಿ.ಪ್ರವೀಣ್‌ಕುಮಾರ್‌, ಮುಖ್ಯಾಧಿಕಾರಿ ಸಿ.ಎಸ್‌.ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT