ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟಿನ ಬಣ್ಣವೂ ಭಾವದ ಬಂಧವೂ

Last Updated 25 ಮಾರ್ಚ್ 2017, 19:30 IST
ಅಕ್ಷರ ಗಾತ್ರ

-ಮೇಘನಾ ಶಿರೀಶ್‌ ಅಯ್ಯರ್‌

*

ನೋವು ಹಾಗೂ ಆನಂದ ಎರಡೂ ಒಮ್ಮೆಗೇ ಅನುಭವಕ್ಕೆ ಬರುವ ಅಪೂರ್ವ ಸಂದರ್ಭ ‘ಹೆರಿಗೆ’. ಕೂಸು ಹುಟ್ಟುವ ಸಂಭ್ರಮ ಎಲ್ಲರದಾದರೆ, ಆ ಪ್ರಕ್ರಿಯೆಯಲ್ಲಿ ಹೆಣ್ಣು ಅನುಭವಿಸುವ ನೋವು ಅನುಭವಿಸಿದವರಿಗಷ್ಟೇ ಗೊತ್ತು. ಆದರೆ, ಹೆರಿಗೆಯ ನಂತರದಲ್ಲಿ ಕೂಸು ತರುವ ಸಡಗರ ಎಂಥ ನೋವನ್ನೂ ಮರೆಸುವ ಮಾಂತ್ರಿಕ ಶಕ್ತಿಯನ್ನು ಹೊಂದಿದೆ. ಇಂಥ ಮಾಂತ್ರಿಕ ಕ್ಷಣಗಳನ್ನು ಓರ್ವ ಛಾಯಾಗ್ರಾಹಕಿಯಾಗಿ ಕ್ಯಾಮೆರಾದಲ್ಲಿ ಸೆರೆಹಿಡಿಯಬೇಕು ಎನ್ನುವುದು ನನ್ನ ಬಹುದಿನಗಳ ಆಸೆಯಾಗಿತ್ತು. ಆದರೆ, ಅಂಥದೊಂದು ಅವಕಾಶ ದೊರೆತ ಕ್ಷಣ ನಾನು, ತಾಯೊಬ್ಬಳ ಪ್ರಸವದ ಬೇನೆಯನ್ನು ನೋಡಲಾಗದೆ ಹೊರಬಂದು ಅತ್ತುಬಿಟ್ಟಿದ್ದೆ.

ನನ್ನ ಛಾಯಾಚಿತ್ರ ಸರಣಿಯ ಬಗ್ಗೆ ಹೇಳಿಕೊಳ್ಳುವ ಮೊದಲು ನಾನು ನಡೆದುಬಂದ ದಾರಿಯ ಬಗ್ಗೆ ಸಂಕ್ಷಿಪ್ತವಾಗಿ ಹೇಳಬೇಕು. ಬಾಲ್ಯದಿಂದಲೂ ನನಗೆ ಕಲಾವಿದೆಯಾಗಬೇಕು ಎಂದು ಆಸೆಯಿತ್ತು. ಈ ಆಸೆಗೆ ನನ್ನ ಶೈಕ್ಷಣಿಕ ಜೀವನದಲ್ಲಿ ನೀರೆರೆದವರು ಬೆಂಗಳೂರಿನ ‘ಮೌಂಟ್‌ ಕಾರ್ಮೆಲ್‌ ಕಾನ್ವೆಂಟ್‌’ ಮತ್ತು ‘ಕ್ರೈಸ್ಟ್‌ ಕಾಲೇಜ್’ನ ಬೋಧಕರು. ಶಾಲಾ–ಕಾಲೇಜುಗಳಲ್ಲಿ ನಡೆಯುತ್ತಿದ್ದ ಕಲಾ ಉತ್ಸವಗಳಲ್ಲಿ ನಾನು ತಪ್ಪದೇ ಭಾಗವಹಿಸುತ್ತಿದ್ದೆ. ಈ ಸಮಯದಲ್ಲಿ ನಾನು ಎಲ್ಲ ರೀತಿಯ ಕಲಾಪ್ರಕಾರಗಳಿಗೂ ತೆರೆದುಕೊಳ್ಳಲು ಸಾಧ್ಯವಾಯಿತು. ಪಿಯುಸಿ ನಂತರ ಚಿತ್ರಕಲಾ ಪರಿಷತ್‌ನಲ್ಲಿ ‘ಬಿವಿಎ’ (ಬ್ಯಾಚುಲರ್‌ ಆಫ್‌ ವಿಷುವಲ್‌ ಆರ್ಟ್‌) ಪದವಿಗೆ ಸೇರಿಕೊಂಡೆ. ಫೋಟೊಗ್ರಫಿಯಲ್ಲಿ ಆಸಕ್ತಿ ಹುಟ್ಟಿಕೊಂಡಿದ್ದೂ ಆಗಲೇ.

(ತನ್ನದೇ ಜೀವದ ಭಾಗವಾಗಿ ಜನ್ಮತಳೆದ ಶಿಶುದರ್ಶನದ ಧನ್ಯಕ್ಷಣ)

ಆರಂಭದಲ್ಲಿ ‘ವೈಲ್ಡ್‌ಲೈಫ್‌ ಫೋಟೊಗ್ರಫಿ’ ಬಗ್ಗೆ ವಿಶೇಷ ಒಲವಿತ್ತು. ಅಮೋಘವರ್ಷ ಅವರು ಆಯೋಜಿಸಿದ್ದ ಕೆಲವು ಛಾಯಾಚಿತ್ರ ಕಾರ್ಯಾಗಾರಗಳಲ್ಲಿಯೂ ಭಾಗವಹಿಸಿದೆ. ‘ಬಿವಿಎ’ ಅಂತಿಮ ವರ್ಷದಲ್ಲಿದ್ದಾಗ ಸ್ವತಃ ನಾನೇ ಮದುವೆ ಛಾಯಾಗ್ರಹಣ, ಒಳಾಂಗಣ–ಹೊರಾಂಗಣಗಳ ಫೋಟೊಗ್ರಫಿ ಮಾಡಲು ಆರಂಭಿಸಿದೆ. ಅಂದಿನಿಂದ ಇಂದಿನವರೆಗೂ ಫೋಟೊಗ್ರಫಿ ನನಗೆ ಕಥೆ ಹೇಳುವ ಮಾಧ್ಯಮವಾಗಿಯೇ ಯಾವಾಗಲೂ ಕಂಡಿದೆ.

ಇಲ್ಲಿರುವ ಚಿತ್ರಗಳು ‘ಹುಟ್ಟು’ ಸರಣಿಗೆ ಸೇರಿದವು. ಜನನಕ್ಕೆ ಸಂಬಂಧಿಸಿದಂತೆ ಒಂದು ಚಿತ್ರಸರಣಿ ಮಾಡಬೇಕು ಎಂಬ ಆಸೆ ನನಗೆ ಹಲವು ವರ್ಷಗಳಿಂದ ಇತ್ತು. ನಾನು ಅದುವರೆಗೆ ಹೆರಿಗೆ ಪ್ರಕ್ರಿಯೆಯನ್ನು ನೋಡಿರಲಿಲ್ಲ. ಅದರ ಬಗ್ಗೆ ತುಂಬಾ ಕುತೂಹಲ ಇತ್ತು.

ಈ ವಿಷಯವನ್ನಿಟ್ಟುಕೊಂಡು ಯಾರಾದರೂ ಇದುವರೆಗೆ ಚಿತ್ರಸರಣಿ ಮಾಡಿದ್ದಾರೆಯೇ ಎಂದು ಹುಡುಕಿದಾಗ ಹಲವು ಕೃತಕ ಚಿತ್ರಗಳು ಸಿಕ್ಕವು. ಆದರೆ ಪ್ರಸವದ ಜೊತೆಗಿನ ನೋವು ಮತ್ತು ಆನಂದವನ್ನು ಪೂರ್ತಿಯಾಗಿ ಸೆರೆಹಿಡಿದ ಯಾವ ಚಿತ್ರವೂ ನನಗೆ ದೊರೆಯಲಿಲ್ಲ.

ಹೆರಿಗೆ ನೋವು ಆರಂಭವಾದ ಗಳಿಗೆಯಿಂದ ಪ್ರಸವದವರೆಗಿನ ಎಲ್ಲ ಹಂತಗಳನ್ನೂ ಕ್ಯಾಮೆರಾದಲ್ಲಿ ದಾಖಲಿಸಲು ನಿರ್ಧರಿಸಿದೆ. ಇದಕ್ಕೆ ಕಾನೂನುಬದ್ಧ ಅವಕಾಶವೂ ದೊರಕಿತು. ಈ ಚಿತ್ರಸರಣಿಯಲ್ಲಿ ನನಗಿದ್ದ ಒಂದೇ ಒಂದು ನಿಬಂಧನೆ ಎಂದರೆ, ಪ್ರಸವದ ಸಂದರ್ಭದಲ್ಲಿ ವೈದ್ಯರ ಕಾರ್ಯವನ್ನು ಸೆರೆಹಿಡಿಯುವಂತಿರಲಿಲ್ಲ. ಇದರಿಂದ ಒಂದು ಬಗೆಯಲ್ಲಿ ಅನುಕೂಲವೇ ಆಯಿತು. ಈ ಚಿತ್ರಸರಣಿ ತಾಂತ್ರಿಕ ಪ್ರಕ್ರಿಯೆಗಳ ಆಚೆಗೆ, ಪ್ರಸವ ವೇದನೆ ಮತ್ತು ಹುಟ್ಟನ್ನೇ ಕೇಂದ್ರೀಕರಿಸಿ ರೂಪುಗೊಳ್ಳಲು ಸಾಧ್ಯವಾಯಿತು.

(ಭೂಮಿಗೆ ಬಂದ ಕಂದನಿಗೆ ತಾಯ ಎದೆಯ ಅಮೃತಪಾನ)

ಈ ಚಿತ್ರಸರಣಿಗೆ ಅನುಮತಿ ಸಿಕ್ಕಿದ್ದು ಸ್ಪೇನ್‌ನ ಮ್ಯಾಡ್ರಿಡ್‌ ನಗರದಲ್ಲಿ. ವಿಮೆಗೆ ಸಂಬಂಧಿಸಿದ ಪ್ರಕ್ರಿಯೆಗಳು, ಹಾಸ್ಪಿಟಲ್‌ ರಿವಾಜುಗಳನ್ನು ಮುಗಿಸಲು ಆರು ತಿಂಗಳು ಹಿಡಿಯಿತು. ಅದಾದ ನಂತರ ಛಾಯಾಚಿತ್ರ ತೆಗೆಯಲು ನನಗೆ ಉಳಿದಿದ್ದ ಅವಧಿ ಬರೀ ಒಂದು ವಾರ! ಇದೆಲ್ಲ ಆದ ಮೇಲೂ ನನ್ನ ಫೋಟೊಶೂಟ್‌ಗೆ ಒಳಗಾಗುವ ದಂಪತಿ ಒಪ್ಪಿಕೊಳ್ಳುವುದು ತುಂಬ ಮುಖ್ಯವಾಗಿತ್ತು. ನನ್ನ ಅದೃಷ್ಟ ಚೆನ್ನಾಗಿತ್ತು. ಒಂದು ವಾರದ ಅವಧಿಯಲ್ಲಿ ಮೂರು ‘ಹುಟ್ಟು’ಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ನನಗೆ ಕಾನೂನಿನ ಪ್ರಕಾರ ಅನುಮತಿ ಸಿಕ್ಕಿತು. ಪ್ರಸವದ ಗಳಿಗೆಗಾಗಿ ನಾನು 48 ಗಂಟೆ ಆಸ್ಪತ್ರೆಯಲ್ಲಿ ಕಾಯಬೇಕಾಯಿತು. ಈ ಅವಧಿಯಲ್ಲಿ ಶುಶ್ರೂಷಕಿಯರ ಸಹಾಯದಿಂದ ಎರಡು ‘ಹುಟ್ಟು’ಗಳನ್ನು ಸೆರೆಹಿಡಿದೆ.

ಆರಂಭದಲ್ಲಿ ಎಲ್ಲ ಚಿತ್ರಗಳನ್ನು ವರ್ಣ ಪ್ರಕಾರದಲ್ಲಿಯೇ ಸೆರೆಹಿಡಿಯಲು ನಿರ್ಧರಿಸಿದ್ದೆ. ಆದರೆ ಈ ವಿಷಯ ತುಂಬ ಸೂಕ್ಷ್ಮವಾದದ್ದು. ಯಾವ ಮುಚ್ಚುಮರೆಯೂ ಇಲ್ಲದೇ ಹುಟ್ಟನ್ನು ತೋರಿಸುವ ಈ ಚಿತ್ರಸರಣಿ ಕಪ್ಪು–ಬಿಳುಪು ಆಗಿದ್ದರೆ ಹೆಚ್ಚು ಸೂಕ್ಷ್ಮ ಎಂದು ಅನಿಸಿತು. ಹಾಗಾಗಿ ಕಪ್ಪು–ಬಿಳುಪು ಪ್ರಕಾರವನ್ನೇ ಪ್ರಜ್ಞಾಪೂರ್ವಕವಾಗಿ ಆಯ್ದುಕೊಂಡೆ.

ಈ ಚಿತ್ರಸರಣಿ ನನ್ನ ಮನಸ್ಥಿತಿ, ಬದುಕನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸಿದೆ. ಈ ಚಿತ್ರಸರಣಿಯಲ್ಲಿನ ತಾಯಂದಿರು ಪ್ರಸವದ ಸಮಯದಲ್ಲಿ ಯಾವುದೇ ನೋವು ನಿವಾರಕ ಮಾತ್ರೆ ಸೇವಿಸಿರಲಿಲ್ಲ. ಆ ಕ್ಷಣ ಅವರು ಅನುಭವಿಸುವ ನೋವು, ತಲ್ಲಣಗಳನ್ನು ನೇರವಾಗಿ ನೋಡುವುದು ನಿಜಕ್ಕೂ ಮೈನಡುಗಿಸುತ್ತದೆ. ಆದರೆ ಅವರ ಆ ಅಗಾಧ ಸಂಕಟ ಮಗುವಿನ ಹುಟ್ಟಿನೊಂದಿಗೆ ಆನಂದವಾಗಿ ಬದಲಾಗುತ್ತಿತ್ತು. ಆ ಸಾರ್ಥಕ ಕ್ಷಣಗಳನ್ನು ನೋಡುವುದು ಅದ್ಭುತ ಅನುಭವ.

(ಹೆರಿಗೆಯ ದಣಿವಿಗೆ ಇನಿಯನ ಮುತ್ತಿನ ಸಾಂತ್ವನ)

ಮೊದಲ ಸಲ ಪ್ರಸವವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವಾಗ ನಾನು ಆ ವೇದನೆಯನ್ನು ನೋಡಲಾಗದೆ ಹೊರಬಂದು ಅತ್ತುಬಿಟ್ಟಿದ್ದೆ ಎಂದೆನಷ್ಟೇ; ಅದು ನಾನೆಂದಿಗೂ ಕಲ್ಪಿಸಿಕೊಳ್ಳಲಾಗದಂಥ ಸಂದರ್ಭ. ಪ್ರತಿ ಪಾಲಕರೂ ಹಾದುಬರುವ ಈ ಅತ್ಯಂತ ಭಾವನಾತ್ಮಕ ಸಂದರ್ಭವನ್ನು ಅಕ್ಷರಗಳಲ್ಲಿ ವರ್ಣಿಸುವುದು ಅಸಾಧ್ಯ. ಇಂಥದ್ದೊಂದು ಅನುಭವವನ್ನು ಕಣ್ಣಾರೆ ನೋಡುವ ಅವಕಾಶ ಸಿಕ್ಕಿದ್ದು ನನ್ನಲ್ಲಿ ಕೃತಜ್ಞತಾಭಾವ ಮೂಡಿಸಿದೆ.

**

ಮೇಘನಾ ಶಿರೀಶ್‌ ಅಯ್ಯರ್‌

ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಫೋಟೊಗ್ರಫಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಮೇಘನಾ ಶಿರೀಶ್‌ ಅವರಿಗೆ ಛಾಯಾಗ್ರಹಣ ಎನ್ನುವುದು ಬದುಕಿನ ಕಥೆಗಳನ್ನು ಬಿಂಬಿಸುವ ಮಾಧ್ಯಮ. ಸವೆದ ದಾರಿಯನ್ನು ಬಿಟ್ಟು ಭಿನ್ನ ಮಾರ್ಗದ ಮೂಲಕ ಅನುಭವಗಳನ್ನು ಕಟ್ಟಿಕೊಡುವ ಹಂಬಲ ಅವರ ಎಲ್ಲ ಛಾಯಾಚಿತ್ರಗಳಲ್ಲಿಯೂ ಎದ್ದು ಕಾಣುವ ಅಂಶ. ಛಾಯಾಗ್ರಹಣ ಅವರಿಗೆ ವೃತ್ತಿಯಷ್ಟೇ ಅಲ್ಲ, ಅದು ಅಂತರಂಗದ ಅಭಿವ್ಯಕ್ತಿಯ ಸಾಧನವೂ ಹೌದು.

‘ಹ್ಯಾಪಿ ಕ್ಯಾಮೆರಾ ಕ್ಲಬ್‌’ ಮೂಲಕ ಬೆಂಗಳೂರಿನಾದ್ಯಂತ ಛಾಯಾಗ್ರಹಣ ಕಾರ್ಯಾಗಾರಗಳನ್ನು, ತರಬೇತಿ ತರಗತಿಗಳನ್ನು ಅವರು ನಡೆಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಸರಣಿ ಪೂರೈಸಿದ್ದಾರೆ. ಅವರ ಛಾಯಾಚಿತ್ರಗಳು ಹಲವಾರು ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೇಘನಾ ಅವರ ಛಾಯಾಚಿತ್ರಗಳನ್ನು meghnashirish.comನಲ್ಲಿ ನೋಡಬಹುದು.

(ಛಾಯಾಗ್ರಹಣದ ಹಿಂದಿನ ತಾತ್ವ್ತಿಕತೆಯನ್ನು ಚರ್ಚಿಸುವ ‘ಪಿಸುಗುಡುವ ಚಿತ್ರಪಟ’ ಮಾಲಿಕೆ ಈ ಬರಹದೊಂದಿಗೆ ಕೊನೆಗೊಳ್ಳುತ್ತಿದೆ. -ಸಂ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT