ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವತಂತ್ರ ನ್ಯಾಯಾಂಗದ ಪ್ರಬಲ ಪ್ರತಿಪಾದಕ

Last Updated 25 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡೇ ಹುಟ್ಟಿದವರು’ ಅನಿಲ್ ದಿವಾನ್. ಮುಂಬೈನ ಪ್ರಖ್ಯಾತ ವಕೀಲರ ಕುಟುಂಬದ ಪರಂಪರೆ ಅವರದು. ಕಾವೇರಿ ಜಲವಿವಾದದ ಜೊತೆ ಅವರ ಸಂಬಂಧ ಐತಿಹಾಸಿಕ. ಅವರ ತಾತ ಸರ್ ಚಿಮನ್ ಲಾಲ್ ಸೆಟಲ್ವಾಡ್ (ಹೆತ್ತಮ್ಮನ ತಂದೆ) ಕೂಡ ಕಾವೇರಿ ವಿವಾದದಲ್ಲಿ ಕರ್ನಾಟಕದ (ಅಂದಿನ ಮೈಸೂರು ಪ್ರಾಂತ) ಪರ ವಾದಿಸಿದ್ದುಂಟು. 1929ರಲ್ಲಿ ನ್ಯಾಯಮೂರ್ತಿ ಪೇಜ್ ನೇತೃತ್ವದ ನ್ಯಾಯಪಂಚಾಯಿತಿ (ಆರ್ಬಿಟ್ರೇಷನ್) ಮುಂದೆ ಸೆಟಲ್ವಾಡ್ ಕರ್ನಾಟಕವನ್ನು ಪ್ರತಿನಿಧಿಸಿದ್ದರು. 1992ರಿಂದ ಮೊನ್ನೆ ಮೊನ್ನೆ ತಮ್ಮ ಸಾವಿನ ತನಕ ದಿವಾನ್ ಕರ್ನಾಟಕದ ಪರ ಹಿರಿಯ ವಕೀಲರ ತಂಡದ ಮುಖ್ಯ ತಲೆಯಾಳುಗಳ ಪೈಕಿ ಒಬ್ಬರು. ಕೃಷ್ಣಾ ಜಲವಿವಾದದಲ್ಲೂ ಅವರು ರಾಜ್ಯದ ಕೈ ಹಿಡಿದಿದ್ದರು.

ಕಾವೇರಿ ವಿವಾದದಲ್ಲಿ ವಿಚಾರಣೆಯ ಮೌಖಿಕ ವಾದ ಮಂಡನೆ ಮತ್ತು ತಮಿಳುನಾಡಿನ ಪರ ಸಾಕ್ಷ್ಯಗಳ ಪಾಟೀಸವಾಲಿನ ಬಹುತೇಕ ಭಾರ ಹೊತ್ತಿದ್ದವರು ದಿವಾನ್. ತಮಿಳುನಾಡಿನ ಕಾವೇರಿ ಮುಖಜ ಭೂಮಿಯಲ್ಲಿ ಸುಮಾರು 20 ಸಾವಿರ ದಶಲಕ್ಷ ಘನ ಅಡಿಗಳಷ್ಟು (ಟಿ.ಎಂ.ಸಿ.ಎಫ್ಟಿ) ದೊಡ್ಡ ಪ್ರಮಾಣದ ಅಂತರ್ಜಲವಿದೆ ಎಂಬ ಅಂಶ ಪ್ರಸ್ತುತವೆಂದು ಕಾವೇರಿ ಜಲವಿವಾದ ನ್ಯಾಯಮಂಡಳಿ ಒಪ್ಪುವಂತೆ ವಾದಿಸಿದ್ದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ‘ಐತೀರ್ಪಿನಲ್ಲಿ ಈ ನೀರನ್ನು ತಮಿಳುನಾಡಿನ ಪಾಲಿಗೆ ಲೆಕ್ಕ ಹಿಡಿಯಲಿಲ್ಲ ನ್ಯಾಯಮಂಡಳಿ. ಆದರೆ ಮೇಲ್ಮನವಿಗಳ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟಿಗೆ ಈ ವಿಷಯವನ್ನು ಮನವರಿಕೆ ಮಾಡಿಕೊಂಡು ಗೆಲ್ಲುವ ವಿಶ್ವಾಸ ಅವರಿಗಿತ್ತು’ ಎನ್ನುತ್ತಾರೆ ಅವರನ್ನು ಸಮೀಪದಿಂದ ಬಲ್ಲ ಕರ್ನಾಟಕ ಮೂಲದ ಅನುಭವಿ ನ್ಯಾಯವಾದಿ ಮೋಹನ್ ಕಾತರಕಿ.

ಕಾವೇರಿ ನೀರನ್ನು ಕಬಳಿಸುವ ತಮಿಳುನಾಡಿನ ಕುರುವೈ (ವರ್ಷಕ್ಕೆರಡು ಭತ್ತದ ಫಸಲು) ಬೆಳೆ ಪ್ರದೇಶವನ್ನು 5.8 ಲಕ್ಷ ಎಕರೆಗಳಿಂದ 1.80 ಲಕ್ಷ ಎಕರೆಗಳಿಗೆ ತಗ್ಗಿಸುವಂತೆ ಯಶಸ್ವಿ ವಾದ ಮಂಡಿಸಿದ ಕೀರ್ತಿ ಅವರದು. ಕಾವೇರಿ ಜಲಾನಯನದಲ್ಲಿ ಬೀಳುವ ಈಶಾನ್ಯ ಮತ್ತು ನೈಋತ್ಯ ಮಳೆಯ ಮಾರುತಗಳು, ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಭತ್ತದ ಕೃಷಿ ವಿಧಾನಗಳ ಕುರಿತು ಆಳ ಅಧ್ಯಯನ ನಡೆಸಿದ್ದರು. ಕುರುವೈ ಕೃಷಿಯು 1924ರ ಕಾವೇರಿ ಒಪ್ಪಂದ ಮತ್ತು ಕಾವೇರಿ ಮುಖಜ ಭೂಮಿಯಲ್ಲಿ ಬೀಳುವ ಮಳೆಯ ನಮೂನೆಗೆ ವ್ಯತಿರಿಕ್ತವಾದ ನಡೆ ಎಂದು ನ್ಯಾಯಮಂಡಳಿಗೆ ಮನವರಿಕೆ ಮಾಡಿಕೊಟ್ಟರು.

ಸುಪ್ರೀಂ ಕೋರ್ಟಿನಲ್ಲಿ ಇದೇ ವಿಷಯ ಕುರಿತು ಇನ್ನಷ್ಟು ವಿವರ ವಾದ ಮಂಡಿಸಿ ತಮಿಳುನಾಡಿನ ಕುರುವೈ ಕೃಷಿಯನ್ನು ಸಂಪೂರ್ಣವಾಗಿ ರದ್ದು ಮಾಡಿಸುವ ಆತ್ಮವಿಶ್ವಾಸ ಹೊಂದಿದ್ದರು. ತಮ್ಮ ಈ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದರೆ ಕಾವೇರಿ ನದಿಯಲ್ಲಿ ಹೆಚ್ಚುಕಡಿಮೆ 40 ಸಾವಿರ ದಶಲಕ್ಷ ಘನ ಅಡಿಗಳಷ್ಟು (ಟಿ.ಎಂ.ಸಿ.ಎಫ್ಟಿ) ನೀರಿನ ಉಳಿತಾಯ ಸಾಧ್ಯವಾಗುತ್ತಿತ್ತು. ಕಾವೇರಿ ಕಣಿವೆಯ ಪಾಲಿಗೆ 2012-13 ಅತ್ಯಂತ ಕೆಟ್ಟ ವರ್ಷಗಳಲ್ಲೊಂದು. ನೀರು ಬಿಡುಗಡೆ ಸಾಧ್ಯವಿಲ್ಲವೆಂದು ದಿವಾನ್ ಕರ್ನಾಟಕದ ಪರ ಗಟ್ಟಿವಾದ ಮಂಡಿಸಿದರು. ನೀರು ಬಿಡುಗಡೆ ಮಾಡಬೇಕೆಂಬ ತಮ್ಮ ಆದೇಶವನ್ನು ಉಲ್ಲಂಘಿಸಿ ಪಾದಯಾತ್ರೆ ಕೈಗೊಂಡಿದ್ದಾರೆಂದು ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಾಲಯ ನಿಂದನೆ ಮೊಕದ್ದಮೆ ದಾಖಲಿಸಿಕೊಂಡಿತ್ತು. ದಿನವಿಡೀ ಸಮರ್ಥ ವಾದ ಮಂಡಿಸಿ ಮುಖ್ಯಮಂತ್ರಿಯ ಮೇಲಿನ ತೂಗುಕತ್ತಿಯನ್ನು ನಿವಾರಿಸಿದ್ದರು ದಿವಾನ್.

ದೆಹಲಿಯಲ್ಲಿ ನ್ಯಾಯಮಂಡಳಿಗಳು ಮತ್ತು ಕೋರ್ಟ್‌ಗಳಲ್ಲಿ ಕಾವೇರಿ, ಕೃಷ್ಣಾ ಜಲವಿವಾದಗಳ ಕಲಾಪಗಳನ್ನು ವರದಿ ಮಾಡಿರುವ ಕರ್ನಾಟಕ ಮೂಲದ ಪತ್ರಕರ್ತರು ದಿವಾನ್ ಅವರಲ್ಲಿ ಬಹುವಾಗಿ ಇಷ್ಟಪಟ್ಟಿದ್ದ ಗುಣವೊಂದಿತ್ತು. ಕೋರ್ಟ್ ರೂಮ್‌ಗಳಲ್ಲಿ ಪತ್ರಕರ್ತರು ಅತ್ಯಂತ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕಿತ್ತು ಅಥವಾ ನಿಂತುಕೊಳ್ಳಬೇಕಿತ್ತು. ಈಗಲೂ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ. ಹಿಂದಿನ ಸಾಲಿಗೂ ನಿಚ್ಚಳವಾಗಿ ಕೇಳುವಂತೆ ಮೊಳಗುತ್ತಿದ್ದ ದನಿಗಳು ಎರಡು. ಒಂದು ನಾರಿಮನ್ ಅವರದಾದರೆ ಇನ್ನೊಂದು ದಿವಾನ್ ಅವರದು.

ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದ ಅವರು ತಮ್ಮ ಶುಲ್ಕವನ್ನು ನಗದು ರೂಪದಲ್ಲಿ ಪಡೆಯುತ್ತಿರಲಿಲ್ಲ. ಆದಾಯ ತೆರಿಗೆಯ ಪಾವತಿಯಲ್ಲಿ ಅತೀವ ಸತ್ಯಸಂಧರು. ಇಂದಿರಾ ಗಾಂಧಿ ಆಳ್ವಿಕೆಯ ದಿನಗಳಲ್ಲಿ ತೆರಿಗೆ ದರಗಳು ಶೇ 90ರ ಪ್ರಮಾಣ ಮುಟ್ಟಿದಾಗಲೂ ಚಕಾರ ಎತ್ತದೆ ತೆರಿಗೆ ಸಂದಾಯ ಮಾಡಿದ್ದರು.

ದೇಶದ ಮೊದಲ ಸಾಲಿನ ನ್ಯಾಯಶಾಸ್ತ್ರಜ್ಞರಲ್ಲಿ ಒಬ್ಬರು ಎಂದು ಗುರುತಿಸಿಕೊಂಡವರು, ಸಂವಿಧಾನ ಪರಿಣತರು. ಫಾಲಿ ನಾರಿಮನ್ ಅವರಂತೆಯೇ ಸ್ವತಂತ್ರ ನ್ಯಾಯಾಂಗದ ಪ್ರಬಲ ಪ್ರತಿಪಾದಕರು. ಭಾರತದಂತಹ ಬಹುತ್ವಗಳ ದೇಶವನ್ನು ಒಟ್ಟಿಗೆ ಹಿಡಿದಿರಿಸುವುದು ನ್ಯಾಯಾಂಗ. ಈ ಕಾರಣಕ್ಕಾಗಿಯೇ ಅದನ್ನು ಕಾರ್ಯಾಂಗದಿಂದ ಪ್ರತ್ಯೇಕಿಸಿ ಸ್ವತಂತ್ರವಾಗಿಡುವುದು ಬಹುಮುಖ್ಯ ಎಂಬುದು ಅವರ ಅಚಲ ನಂಬಿಕೆಯಾಗಿತ್ತು. ಸ್ವತಂತ್ರವಾಗಿರುವಂತೆ ನ್ಯಾಯಾಂಗ ಜವಾಬುದೇಹಿಯೂ ಆಗಿರಬೇಕೆಂಬುದು ಅವರ ನಿಲುವಾಗಿತ್ತು. ನ್ಯಾಯಮೂರ್ತಿಗಳ ನೇಮಕದಲ್ಲಿ ಕಾರ್ಯಾಂಗ ಮೂಗು ತೂರಿಸುವ ಸಂಬಂಧದ ಸಂವಿಧಾನ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿ ನೀಡಿದ ಮೈಲಿಗಲ್ಲು ಸ್ವರೂಪದ ತೀರ್ಪಿನ ಹಿಂದಿದ್ದುದು ನಾರಿಮನ್- ದಿವಾನ್ ಜೋಡಿಯ ಸಮರ್ಥ ವಾದ ಮಂಡನೆ.

ಹಲವು ಸ್ವಯಂಸೇವಾ ಸಂಸ್ಥೆಗಳೊಂದಿಗೆ ಒಡನಾಟ ಇರಿಸಿಕೊಂಡಿದ್ದ ಅವರು ಸಾರ್ವಜನಿಕ ಹಿತಾಸಕ್ತಿಯ ಹಲವು ಮೊಕದ್ದಮೆಗಳಲ್ಲಿ ಚಿಕ್ಕಾಸೂ ಪಡೆಯದೆ ಜನಪರ ವಾದ ಮಂಡಿಸಿದರು. ಮಾನವ ಹಕ್ಕುಗಳ ಅದರಲ್ಲೂ ವಿಶೇಷವಾಗಿ ತೃತೀಯ ಲಿಂಗಿಗಳ ಹಕ್ಕುಗಳಿಗಾಗಿ ಗಟ್ಟಿ ದನಿ ಎತ್ತಿದವರು. ಪಿ.ಯು.ಸಿ.ಎಲ್., ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್‌ಗಳ ಸ್ಥಾಪಕ ಸದಸ್ಯರಾಗಿದ್ದರು. ನ್ಯಾಯಾಂಗ ಜವಾಬುದೇಹಿ ಸಮಿತಿಯಲ್ಲೂ ಅವರಿದ್ದರು.

90ರ ದಶಕದ ರಾಜಕಾರಣದಲ್ಲಿ ಸಂಚಲನ ಎಬ್ಬಿಸಿದ್ದ ಜೈನ್ ಹವಾಲ ಸೇರಿದಂತೆ ಹಲವು ಮಹತ್ವದ ಮೊಕದ್ದಮೆಗಳಲ್ಲಿ ‘ನ್ಯಾಯಾಲಯದ ಮಿತ್ರ’ನ ಪಾತ್ರ ವಹಿಸಿದ್ದರೆಂಬ ಸಂಗತಿ ಅವರ ಸಚ್ಚಾರಿತ್ರ್ಯಕ್ಕೆ, ನ್ಯಾಯಪಕ್ಷಪಾತಿ ಗುಣಕ್ಕೆ ಹಿಡಿದ ಕನ್ನಡಿ. ವಿದೇಶಗಳಲ್ಲಿ ಅವಿತಿರಿಸಿರುವ ಭಾರತದ ಕಪ್ಪುಹಣವನ್ನು ವಾಪಸು ತರಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಲು ರಾಮ್ ಜೇಠ್ಮಲಾನಿ ಜೊತೆ ಇವರೂ ಅರ್ಜಿದಾರರಾಗಿದ್ದರು.

ದಿವಾನ್‌ ಅವರ ತಂದೆಯ ತಂದೆ ಜೀವನ್ ಲಾಲ್ ದಿವಾನ್ 1930ರ ದಂಡಿಯಾತ್ರೆಯಲ್ಲಿ ಗಾಂಧಿ ಹಿಂದೆ ಹೆಜ್ಜೆ ಹಾಕಿದವರು. ತಾಯಿ ಶಾರದಾ ದಿವಾನ್ ಮುಂಬೈನ  ವಿಶ್ವವಿದ್ಯಾಲಯವೊಂದರ ಮೊದಲ ಮಹಿಳಾ ಉಪಕುಲಪತಿಯಾಗಿದ್ದವರು. ತಾಯಿಯ ಸೋದರ ಎಂ.ಸಿ.ಸೆಟಲ್ವಾಡ್ ದೇಶದ ಮೊದಲ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಚಿಕ್ಕಪ್ಪ ಬಿಪನ್ ಚಂದ್ರ ದಿವಾನ್, ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಿದ್ದರು. ಇಂತಹ ಕುಟುಂಬ ಪರಂಪರೆ ಕುರಿತು ಅನಿಲ್ ಒಮ್ಮೆಯೂ ಜಂಬ ಕೊಚ್ಚಲಿಲ್ಲ ಎಂದು ಸ್ಮರಿಸುತ್ತಾರೆ ಅವರ ಸಹಪಾಠಿಯಾಗಿದ್ದ ಮತ್ತೊಬ್ಬ ನ್ಯಾಯಶಾಸ್ತ್ರಜ್ಞ ಮುರಳೀಧರ ಭಂಡಾರೆ.

86ರ ಇಳಿವಯಸ್ಸಿನಲ್ಲಿ ಇತ್ತೀಚಿನ ದಿನಗಳವರೆಗೆ ಅತ್ಯಂತ ಸಕ್ರಿಯರಾಗಿದ್ದವರನ್ನು ಕಡೆಗೂ ಕೊಂಡೊಯ್ದದ್ದು ಆಸ್ತಮಾ ಕಾಯಿಲೆ. ಅವರ ಸಾವು ದೇಶದ ಮಾನವ ಹಕ್ಕು ಚಳವಳಿಗೆ ಆಗಿರುವ ಹಿನ್ನಡೆಯೇ ಹೌದು. ಹಾಗೆಯೇ ಕರ್ನಾಟಕದ ಪರ ಜಲವಿವಾದ ಕಾನೂನು ಸಮರಕ್ಕೂ ದೊಡ್ಡ ನಷ್ಟ.
ದಿವಾನ್ ಅವರು ಬರೆದ On the Front Foot ಸ್ವತಂತ್ರ ಭಾರತದ ನ್ಯಾಯಾಂಗದ ಕಾರ್ಯವೈಖರಿ ಕುರಿತ ಉತ್ತಮ ವ್ಯಾಖ್ಯಾನದ ಇಂಗ್ಲಿಷ್ ಕೃತಿ. On the Front Foot ಎಂಬುದು ಕ್ರಿಕೆಟ್ ಆಟದಲ್ಲಿ ಮುಂದಡಿ ಇಟ್ಟು ಬ್ಯಾಟ್ ಮಾಡುವ ತಂತ್ರದ ಒಂದು ಭಂಗಿ. ದಿವಾನ್ ತಮ್ಮ ನಿಜ ಬದುಕಿನಲ್ಲೂ ಮುಂದಡಿ ಇಟ್ಟು ಬ್ಯಾಟ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT