ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮದು ಎರಡು ದಶಕಗಳ ಕಿಚ್ಚು

Last Updated 25 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಇದು ಇಂದು–ನಿನ್ನೆಯ ಕಿಚ್ಚಲ್ಲ. ಸುಮಾರು ಎರಡು ದಶಕಗಳಿಂದ ಅಂಗನವಾಡಿ ಅಮ್ಮಂದಿರ ಮನದಲ್ಲಿ  ಕುದ್ದು ಈಗ ಹೊರಗೆದ್ದ ಜ್ವಾಲೆ. ಹಸಿವು, ಬಡತನ, ಶ್ರಮದ ಬದುಕನ್ನೇ ಜೀಕುತ್ತಾ ಬಂದ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದರೆ ಹೇಗಿರುತ್ತದೆ ಎನ್ನುವುದನ್ನು ಇದೀಗ ಸಾಬೀತು ಮಾಡಿದ್ದಾರೆ. ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆಸಿದ ಧರಣಿಯನ್ನು ಮುಖ್ಯಮಂತ್ರಿ ಅವರ ಭರವಸೆ ನಂತರ ಕಾರ್ಯಕರ್ತೆಯರು ತಾತ್ಕಾಲಿಕವಾಗಿ ಅಂತ್ಯಗೊಳಿಸಿದ್ದಾರೆ. ಹೋರಾಟದ ಹಿನ್ನೆಲೆ, ಉದ್ದೇಶ ಹಾಗೂ ಸ್ವರೂಪ ಕುರಿತು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ (ಸಿಐಟಿಯು) ಅಧ್ಯಕ್ಷೆ ಎಸ್‌. ವರಲಕ್ಷ್ಮಿ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಇರುವ ಅಡೆತಡೆಗಳೇನು?
‘ಅಂಗನವಾಡಿ ನೌಕರರನ್ನು ಕಾಯಂಗೊಳಿಸಬೇಕು ಎಂದು 1996ರಲ್ಲಿ ಕೆಎಟಿ (ಕರ್ನಾಟಕ ಆಡಳಿತ ನ್ಯಾಯಮಂಡಳಿ) ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಅಂದಿನ ಮುಖ್ಯಮಂತ್ರಿ ಜೆ.ಎಚ್‌.ಪಟೇಲರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಆದರೆ, 2006–07ರಲ್ಲಿ ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಆಗುವುದಿಲ್ಲ ಎಂದು ಕೋರ್ಟ್‌ ಹೇಳಿತು. ಇದಕ್ಕೆ ಕೆಲಸದ ಅವಧಿ, ವಿದ್ಯಾರ್ಹತೆ, ನೇಮಕಾತಿಯಲ್ಲಿ ಮೀಸಲಾತಿ ಕ್ರಮ ಪಾಲಿಸಿಲ್ಲ ಎನ್ನುವ ಕಾರಣಗಳನ್ನು ನೀಡಿತು. ಆನಂತರ ಸಂಘಟನೆ ಮುತುವರ್ಜಿ ವಹಿಸಿ ಯೋಜನೆಯ ಪ್ರಾಮುಖ್ಯತೆ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕೆಲಸದ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದರಿಂದ ಇಂದು ಆಯ್ಕೆಯ ನಿಯಮಾವಳಿಗಳು ರೂಪುಗೊಂಡಿವೆ. ಕೇಂದ್ರ ಮತ್ತು ರಾಜ್ಯಗಳಲ್ಲಿ  ನಡೆದ ಸತತ ಹೋರಾಟದಿಂದಾಗಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕ್ರಮವಾಗಿ ₹ 300 ಮತ್ತು ₹ 150 ಇದ್ದ ಗೌರವಧನ ಈಗ  ₹ 6,000 ಮತ್ತು ₹ 3,000ಕ್ಕೆ ಏರಿದೆ.

* ಮುಖ್ಯಮಂತ್ರಿ ಭರವಸೆ ಮೇಲೆ ವಿಶ್ವಾಸವಿದೆಯೇ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತುತ ಬಜೆಟ್‌ನಲ್ಲಿ ₹ 1,000 ಸೇರಿದಂತೆ ತಮ್ಮ ಅವಧಿಯಲ್ಲಿ ಗೌರವಧನವನ್ನು ಒಟ್ಟು ₹ 2,500ರಷ್ಟು ಹೆಚ್ಚಿಸಿದ್ದಾರೆ. ಜೇಷ್ಠತೆ ಆಧಾರದಲ್ಲಿ ಸಂಬಳ ನಿಗದಿ ಒಳಗೊಂಡಂತೆ ಒಟ್ಟು 22 ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ. ಧರಣಿ ಆರಂಭಿಸಿದ ದಿನ ಸಚಿವೆ ಉಮಾಶ್ರೀ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಬಂದು ಹಂತ ಹಂತವಾಗಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಅವರೂ ಇದೇ ಮಾತು ಹೇಳಿದ್ದರು. ಆದರೆ, ನಮಗೆ ಭರವಸೆ ಬೇಡ, ಈಗಲೇ ಪರಿಹಾರ ಸೂಚಿಸಬೇಕು ಎಂದು ಪಟ್ಟು ಹಿಡಿದಿದ್ದರಿಂದ ಹೋರಾಟ ತೀವ್ರ ಸ್ವರೂಪ ಪಡೆಯಿತು. ನಮ್ಮ ಹೋರಾಟ  ಸಂಚಲನ ಮೂಡಿಸಿದೆ. ಮಾಧ್ಯಮದವರು, ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗಳು ನಮ್ಮ  ಬೆಂಬಲಕ್ಕೆ ನಿಂತಿರುವುದರಿಂದ ನಮ್ಮ ಬೇಡಿಕೆಗಳಿಗೆ ಸಿದ್ದರಾಮಯ್ಯ ಕಿವಿಗೊಡುತ್ತಾರೆ ಎನ್ನುವ ವಿಶ್ವಾಸವಿದೆ.

* ಎರಡು ದಶಕಗಳ ಈ ಹೋರಾಟಕ್ಕೆ ಕೇಂದ್ರದ ಪ್ರತಿಕ್ರಿಯೆ ಹೇಗಿದೆ?
ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ಕೇಂದ್ರ ಸರ್ಕಾರ 1975ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌) ಆರಂಭಿಸಿತು. ಇದರಡಿ ಪ್ರಸ್ತುತ ರಾಜ್ಯದಾದ್ಯಂತ 1.25 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು 65,911 ಕೇಂದ್ರಗಳಲ್ಲಿ ದುಡಿಯುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ಯೋಜನೆಗೆ ನೀಡುತ್ತಿದ್ದ ಅನುದಾನವನ್ನೇ ಕಡಿತಗೊಳಿಸಿದೆ. 2014–15ರಲ್ಲಿ ₹ 18,391 ಕೋಟಿ ಬಿಡುಗಡೆ ಮಾಡಿತ್ತು. 2015–16ರಲ್ಲಿ ನೀಡಿದ ಹಣ ₹ 8,754 ಕೋಟಿ. ಒಂದೇ ವರ್ಷದಲ್ಲಿ ₹ 9,637 ಕೋಟಿ ಅನುದಾನ  ಕಡಿತಗೊಳಿಸಲಾಗಿದೆ. ಇದರಿಂದ ಪೌಷ್ಟಿಕಾಂಶ, ಆರೋಗ್ಯ ಮತ್ತು ಸಾಕ್ಷರತೆ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ಮಕ್ಕಳು ಮತ್ತು ಮಹಿಳೆಯರ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ.

2013ರ ಮೇ ತಿಂಗಳಲ್ಲಿ 45ನೇ ಭಾರತೀಯ ಕಾರ್ಮಿಕ ಸಮ್ಮೇಳನವು, ವಿವಿಧ ಯೋಜನೆಗಳ ಕಾರ್ಮಿಕರನ್ನು ‘ಕಾರ್ಮಿಕ’ರೆಂದು ಹೆಸರಿಸಬೇಕು, ಎಲ್ಲರಿಗೂ ಕನಿಷ್ಠ ವೇತನ ನೀಡಬೇಕು, ಸಾಮಾಜಿಕ ಭದ್ರತೆಯ ಸೌಲಭ್ಯಗಳನ್ನು ಕೊಡಬೇಕು, ಯೋಜನೆಗಳ ಖಾಸಗೀಕರಣ ಮಾಡಬಾರದು ಎಂದು ಕೇಂದ್ರಕ್ಕೆ ಶಿಫಾರಸು ಮಾಡಿತು.  ಹಿಂದಿನ ಯುಪಿಎ ಸರ್ಕಾರವಾಗಲೀ, ಈಗಿನ ಬಿಜೆಪಿ ಸರ್ಕಾರವಾಗಲೀ ಶಿಫಾರಸುಗಳನ್ನು ಕಾರ್ಯಗತಗೊಳಿಸಲು ಯಾವುದೇ ಉತ್ಸಾಹ ತೋರಲಿಲ್ಲ. ಐಸಿಡಿಎಸ್‌ ಯೋಜನೆಯನ್ನು ಖಾಸಗಿಯವರಿಗೆ ವಹಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಹಾಗೇನಾದರೂ ಆದರೆ ಅಂಗನವಾಡಿ ಕಾರ್ಯಕರ್ತೆಯರು  ಸಂಕಷ್ಟಕ್ಕೆ ಸಿಕ್ಕಿಕೊಳ್ಳಲಿದ್ದಾರೆ.

* ಕೇಂದ್ರ– ರಾಜ್ಯದ ನಡುವಿನ ತಿಕ್ಕಾಟವು ಯೋಜನೆ ಮೇಲೆ ಯಾವ ಪರಿಣಾಮ ಬೀರಿದೆ?
ಕೇಂದ್ರ ಸರ್ಕಾರ ಅನುದಾನ ಕಡಿತಗೊಳಿಸಿದಾಗ ರಾಜ್ಯ ಸರ್ಕಾರ ಅದನ್ನು ಪ್ರಶ್ನಿಸಲಿಲ್ಲ. ತಕ್ಷಣ ಪ್ರತಿಭಟನೆ ದಾಖಲಿಸಿದ್ದರೆ ಕೇಂದ್ರದ ನಿರ್ಧಾರ ಬದಲಾಗುವ ಸಾಧ್ಯತೆಯಿತ್ತು.  ಬೇರೆ ಪಕ್ಷಗಳ ಬಣ್ಣವೂ ಬಯಲಾಗುತ್ತಿತ್ತು.  ಯೋಜನೆ ಆರಂಭಿಸಿದ್ದು ಕೇಂದ್ರವಾದರೂ, ರಾಜ್ಯ ಸರ್ಕಾರದ ಜವಾಬ್ದಾರಿಯೂ ಉಂಟು. ಕೇಂದ್ರ ಅನುದಾನ ಕಡಿತ ಮಾಡಿರುವುದರಿಂದ ರಾಜ್ಯಕ್ಕೆ ಹೊರೆಯಾಗಲಿದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಮಕ್ಕಳ ಲಾಲನೆ ಪಾಲನೆ ಜತೆ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಹೆಗಲು ಕೊಡುತ್ತಿದ್ದಾರೆ. ಇದನ್ನು ಯಾರೂ ಮರೆಯಬಾರದು. 

*  ಅಂಗನವಾಡಿ ಕಾರ್ಯಕರ್ತೆಯರ ಸ್ಥಿತಿಗತಿ ಹೇಗಿದೆ?
ಅಂಗನವಾಡಿ ಕಾರ್ಯಕರ್ತೆಯರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರು. ಬಹುತೇಕರು ಒಂಟಿ ಮಹಿಳೆಯರು. ವರದಕ್ಷಿಣೆ ನೀಡಲು ಸಾಧ್ಯವಾಗದೆ ಅವಿವಾಹಿತರಾಗಿಯೇ ಉಳಿದವರು. ದುಡಿಮೆಯೇ ಜೀವನಕ್ಕೆ ಆಧಾರ. ಕನಿಷ್ಠ ವೇತನವನ್ನೂ ಕೊಡದಿದ್ದರೆ ಜೀವನ ನಡೆಯುವುದಾದರೂ ಹೇಗೆ?

* ಸದ್ಯ ಕಾರ್ಯಕರ್ತೆಯರಿಗಿರುವ ಸವಲತ್ತುಗಳೇನು?
ಗೌರವಧನದ ಜತೆ ಮರಣ ಪರಿಹಾರ ನಿಧಿ ₹ 50 ಸಾವಿರ ಮತ್ತು ಸೇವಾ ಅವಧಿಯಲ್ಲಿ ₹ 50 ಸಾವಿರದವರೆಗಿನ ವೈದ್ಯಕೀಯ ವೆಚ್ಚ ನೀಡಲಾಗುತ್ತಿದೆ. ವಾರದಲ್ಲಿ ಒಂದು ದಿನ ರಜೆ, 15 ದಿನಗಳ ಬೇಸಿಗೆ ರಜೆ, 14 ದಿನಗಳ ಗಳಿಕೆ ರಜೆ ನೀಡಲಾಗಿದೆ. ತಲಾ 25 ಕೇಂದ್ರಗಳಿಗೆ ಒಬ್ಬರು ಮೇಲ್ವಿಚಾರಕರಿದ್ದಾರೆ. ಈ ಹುದ್ದೆ ನೇಮಕಾತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಶೇಕಡ 50 ಮೀಸಲಾತಿಯನ್ನು ನೀಡಲಾಗಿದೆ. ಎನ್‌ಪಿಎಸ್‌ ಲೈಟ್‌ (ನಿವೃತ್ತಿ ಯೋಜನೆ) ಇದ್ದರೂ ಬಹಳಷ್ಟು ಜನರಿಗೆ ಅನ್ವಯವಾಗುತ್ತಿಲ್ಲ. ಈ ಯೋಜನೆಯನ್ನು ಅಟಲ್‌ ನಿವೃತ್ತಿ ಯೋಜನೆ ಅಡಿ ಸೇರಿಸುವ ಮೂಲಕ ದ್ರೋಹ ಎಸಗಲಾಗಿದೆ.

* ಕಾರ್ಯಕರ್ತೆಯರ ಮೇಲೆ ಅವರದಲ್ಲದ ಜವಾಬ್ದಾರಿಗಳನ್ನೂ ಹೇರಲಾಗಿದೆಯೇ?
ಕೆಲಸದ ಅವಧಿ ನಾಲ್ಕೂವರೆ ಗಂಟೆಯಿಂದ ಆರೂವರೆ ಗಂಟೆಗೆ ಹೆಚ್ಚಳವಾಗಿದೆ. ಮಕ್ಕಳನ್ನು ಮನೆಯಿಂದ ಕರೆತರಬೇಕು. ವಾರಕ್ಕೆ ಮೂರು ಬಾರಿ ಹಾಲು ನೀಡಬೇಕು, ಮೂರು ಸಲ ತಿಂಡಿ ಮಾಡಿ ಬಡಿಸಬೇಕು. ಕೆಲವು  ಅಂಗನವಾಡಿ ಕೇಂದ್ರಗಳಲ್ಲಿ ನೀರೂ ಇಲ್ಲ. ಅದನ್ನೂ ನಾವೇ ಹೊರಗಿನಿಂದ ತರಬೇಕು. ಶೌಚಾಲಯ ಸ್ವಚ್ಛಗೊಳಿಸಬೇಕು. ರಿಜಿಸ್ಟರ್‌ಗಳನ್ನು ಬರೆಯಬೇಕು. ಅಪೌಷ್ಟಿಕತೆ ಇರುವ ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸಬೇಕು. ಗಂಭೀರ ಪ್ರಕರಣಗಳ ಬಗ್ಗೆ ಫೋನ್‌ ಮತ್ತು ಲಿಖಿತವಾಗಿ ಮೇಲಿನ ಅಧಿಕಾರಿಗಳಿಗೆ ಮಾಹಿತಿ ಕೊಡಬೇಕು. ಮಕ್ಕಳ ಜನನ ಮತ್ತು ಮರಣ ವಿವರ ದಾಖಲಿಸಬೇಕು.

ಗ್ರಾಮಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಅಷ್ಟೇ ಅಲ್ಲ, 20 ಲಕ್ಷ ಮಹಿಳೆಯರು ಇರುವ 1.40 ಲಕ್ಷ ಸ್ತ್ರೀಶಕ್ತಿ ಗುಂಪುಗಳ ವರದಿಗಳನ್ನೂ ಕಾರ್ಯಕರ್ತೆಯರು ಕೊಡಬೇಕು.  ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸಂಬಂಧಿಸಿದ ಕೆಲಸಗಳನ್ನೂ ಆಗಾಗ್ಗೆ ನಮಗೇ ವಹಿಸಲಾಗುತ್ತಿದೆ. ಇಲಾಖೇತರ ಕೆಲಸಗಳಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಜನಗಣತಿ, ಆರೋಗ್ಯ ಇಲಾಖೆ, ಚುನಾವಣಾ ಕೆಲಸಗಳು ವಿಪರೀತವಾಗಿವೆ. ಈ ಕೆಲಸಗಳನ್ನು ಅಂಗನವಾಡಿ ನೌಕರರಿಂದ ಮಾಡಿಸಬಾರದೆಂಬ ಇಲಾಖಾ ನಿರ್ದೇಶನವನ್ನು ಅಧಿಕಾರಿಗಳೇ ಜಾರಿ ಮಾಡದಿರುವುದು ವಿಷಾದನೀಯ. ಇಷ್ಟು ದುಡಿದರೂ ದಬ್ಬಾಳಿಕೆ ಮಾತ್ರ ತಪ್ಪಿಲ್ಲ.

* ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಕಾರ್ಯಕರ್ತೆಯರ ಪಾತ್ರವೇನು?
ಮೂವತ್ತು ಸಾವಿರಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳು ಕನಿಷ್ಠ ಮೂಲ ಸೌಕರ್ಯಗಳನ್ನು ಹೊಂದಿಲ್ಲ. ಕೇಂದ್ರಗಳಿಗೆ ಸರಬರಾಜಾಗುವ ಪೂರಕ ಪೌಷ್ಟಿಕ ಆಹಾರ, ಕುರ್ಚಿ, ಮೇಜು, ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿಡುವ ಪಾತ್ರೆ– ಸಾಮಗ್ರಿಗಳು, ವಿದ್ಯುತ್‌, ನೀರು, ಆಟದ ಮೈದಾನ, ಮಕ್ಕಳು ಮಲಗುವ ಜಮಖಾನ, ಬೋರ್ಡ್‌ಗಳು, ಮಾರ್ಕರ್‌ಗಳು ಸಂಪೂರ್ಣವಾಗಿ ಗುಣಾತ್ಮಕವಾಗಿಲ್ಲ. ಈ ಎಲ್ಲ ಕೊರತೆಗಳ ನಡುವೆಯೂ ಕಾರ್ಯಕರ್ತೆಯರು ಎಲ್ಲ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿ ಯೋಜನೆಗಳನ್ನು ಹಾಕಿಕೊಂಡು ದುಡಿಯುತ್ತಿದ್ದಾರೆ.

* ಕಾರ್ಯಕರ್ತೆಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳಿವೆ. ಅದು ನಿಜವೇ?
ಕಾರ್ಯಕರ್ತೆಯರ ಮೇಲೆ ದೈಹಿಕ ಹಲ್ಲೆ ಮತ್ತು ಲೈಂಗಿಕ ಕಿರುಕುಳಗಳು ಸಾಕಷ್ಟು ನಡೆಯುತ್ತಿವೆ. ಆದರೆ, ಬೆಳಕಿಗೆ ಬರುತ್ತಿಲ್ಲ. ಬೀದರ್‌ನಲ್ಲಿ  ಅಂಗನವಾಡಿ ಕಾರ್ಯಕರ್ತೆಯೊಬ್ಬರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಯಿತು. ಬಾಲ್ಯ ವಿವಾಹದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಗ್ರಾಮದ ಕಾಪು ಪಂಚಾಯಿತಿ ₹ 1 ಲಕ್ಷ ದಂಡ ವಿಧಿಸಿದ ಘಟನೆ ಕೆ.ಆರ್‌. ನಗರದಲ್ಲಿ ನಡೆಯಿತು. ಮಕ್ಕಳ ನಡುವೆ ತಾರತಮ್ಯ ಮಾಡಲಾಯಿತೆಂದು ಕಾರ್ಯಕರ್ತೆಯ ಸೀರೆ ಬಿಚ್ಚಿ ಹೊಡೆದ ಉದಾಹರಣೆಯಿದೆ. ಮಾಹಿತಿ ಹಕ್ಕು ಕಾಯ್ದೆಯನ್ನು ಅಸಹಾಯಕ ಅಂಗನವಾಡಿ ಕಾರ್ಯಕರ್ತೆಯರ ವಿರುದ್ಧ ಪ್ರಯೋಗಿಸಲಾಗುತ್ತಿದೆ. ನಮ್ಮನ್ನು ಈ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬ ಬೇಡಿಕೆಯೂ ಇದೆ.

* ಮಕ್ಕಳ ಪಾಲಿನ ಆಹಾರ ಕದಿಯುತ್ತಾರೆ ಎಂಬ ಆರೋಪ ಕಾರ್ಯಕರ್ತೆಯರ ಮೇಲಿದೆ?
ಕೆಲವು ಕಾರ್ಯಕರ್ತೆಯರು ತಪ್ಪು ಮಾಡಿರಬಹುದು. ಅದಕ್ಕೆ ಇಡೀ ಸಮುದಾಯವನ್ನು ದೂರುವುದು ಸರಿಯಲ್ಲ. ಪೂರಕ ಪೌಷ್ಟಿಕ ಆಹಾರ ಪೂರೈಕೆ ಸಾವಿರಾರು ಕೋಟಿ  ರೂಪಾಯಿಯ ವ್ಯವಹಾರ. ಮೇಲ್ಮಟ್ಟದಲ್ಲೇ  ಸೋರಿಕೆ ಆಗುತ್ತಿದೆ. ನೌಕರರು ಭ್ರಷ್ಟರಾಗಿದ್ದರೆ ಇಷ್ಟೊತ್ತಿಗೆ ಈ ಯೋಜನೆಯೇ ವಿಫಲವಾಗುತ್ತಿತ್ತು.  ಕಲಬುರ್ಗಿಯಲ್ಲಿ 2016ರ ಡಿಸೆಂಬರ್‌ನಲ್ಲಿ ಲಾರಿಗಳಲ್ಲಿ ಸಾಗಿಸುತ್ತಿದ್ದ ಹಾಲಿನ ಪುಡಿ ಪೊಟ್ಟಣ್ಣಗಳನ್ನು ವಶಪಡಿಸಿಕೊಳ್ಳಲಾಯಿತು. ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಜರುಗಿಸಲಿಲ್ಲ. ಇದಕ್ಕೆ  ಅಂಗನವಾಡಿ ಕಾರ್ಯಕರ್ತರು ಹೇಗೆ ಹೊಣೆಯಾಗುತ್ತಾರೆ? ಉತ್ತರ ಕರ್ನಾಟಕದ ಭಾಗದಲ್ಲಿ ಮಕ್ಕಳಿಗೆ ಆಹಾರ ಸರಿಯಾಗಿ ವಿತರಿಸುತ್ತಿಲ್ಲ ಎಂದು ಆರೋಪಿಸುತ್ತಾರೆ. ಈ ಬಗ್ಗೆ ಪರಿಶೀಲನೆ ನಡೆಸೋಣ, ನಾವೂ ಜತೆಗೆ ಬರುತ್ತೇವೆ,  ಕಾರ್ಯಕರ್ತೆಯರಿಗೆ ತಿಳಿವಳಿಕೆ ಹೇಳೋಣ ಎಂದರೆ ಯಾರೂ ಕಿವಿ ಮೇಲೆ ಹಾಕಿಕೊಳ್ಳುವುದಿಲ್ಲ.

* ನೆರೆಯ ರಾಜ್ಯಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸ್ಥಿತಿಗತಿ ಹೇಗಿದೆ?
ಪಕ್ಕದ ತಮಿಳುನಾಡು, ಪುದುಚೇರಿ, ಕೇರಳ, ಗೋವಾಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ₹ 10 ಸಾವಿರದಿಂದ 14 ಸಾವಿರದವರೆಗೆ ಗೌರವಧನ ಸಿಗುತ್ತಿದೆ. ತೆಲಂಗಾಣ ಮುಖ್ಯಮಂತ್ರಿ ಗೌರವಧನವನ್ನು ₹ 10,500ಕ್ಕೆ ಏರಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರನ್ನು ಅಂಗನವಾಡಿ ಶಿಕ್ಷಕಿಯರು ಎಂದು ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಮ್ಮ ಸರ್ಕಾರವೂ ಇದನ್ನು ಅನುಸರಿಸಬೇಕು.

* ಮುಂದಿನ ಹೋರಾಟದ ರೂಪುರೇಷೆಗಳೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿಗೆ ಬೆಲೆ ಕೊಟ್ಟು ಮುಷ್ಕರ ಹಿಂದಕ್ಕೆ ಪಡೆದಿದ್ದೇವೆ. ಏಪ್ರಿಲ್‌ 10ರ ಸಭೆಯಲ್ಲಿ ನಮ್ಮ ಬೇಡಿಕೆಗಳು ಈಡೇರದಿದ್ದರೆ ಅವರ ಮನೆ ಮುಂದೆ ಹೋಗಿ ಕೂರುತ್ತೇವೆ. ರಾಜ್ಯ ಸರ್ಕಾರ ನಮ್ಮ ಹೋರಾಟ ಹತ್ತಿಕ್ಕಲು ಕುತಂತ್ರಗಳನ್ನು ಮಾಡಿತು. ನಮ್ಮ ಕಾರ್ಯಕರ್ತೆಯರು ಬೆಂಗಳೂರಿಗೆ ಬರದಂತೆ ವಾಹನಗಳನ್ನು ತಡೆಯಲಾಯಿತು. ರೈಲುಗಳಲ್ಲಿ ಟಿಕೆಟ್‌ ನಿರಾಕರಿಸಲಾಯಿತು. ಸಾಕಷ್ಟು ಗೊಂದಲ  ಸೃಷ್ಟಿಸಲಾಯಿತು. ಯಾವುದಕ್ಕೂ ಬಗ್ಗದೆ ನಾವು ಹೋರಾಟ ನಡೆಸಿದ್ದೇವೆ. ನಮ್ಮ ಹೋರಾಟಕ್ಕೆ ಗೆಲುವು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT