ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಸ್ಥೆ ಬದಲಾದರೆ, ಕ್ರೀಡೆಯೂ ಬೆಳೆಯುತ್ತೆ...

Last Updated 26 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನಾನು ಹುಟ್ಟಿದ್ದು, ಬೆಳೆದಿದ್ದು, ಓದಿದ್ದೆಲ್ಲಾ ತಮಿಳುನಾಡಿನ ಚೆನ್ನೈನಲ್ಲಿ. ಚಿಕ್ಕಂದಿನಿಂದಲೇ ಛಾಯಾಗ್ರಹಣ ಅಂದರೆ ನನಗೆ ಬಲು ಪ್ರೀತಿ. ಆಗಲೇ ಸಿನಿಮಾ ರಂಗದಲ್ಲಿ ಎತ್ತರದ ಸಾಧನೆ ಮಾಡುವ ಕನಸು ಚಿಗುರಿತ್ತು.

ಚೆನ್ನೈನ ಪ್ರತಿಷ್ಠಿತ ಲೊಯೊಲಾ ಕಾಲೇಜಿನಲ್ಲಿ ವಿಷ್ಯುವಲ್‌ ಕಮ್ಯುನಿಕೇಷನ್‌ ವಿಷಯದಲ್ಲಿ ಪದವಿ ಪಡೆದ ಬಳಿಕ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೇಲ್ಸ್‌ಗೆ ಸೇರಿದೆ.

ಅಲ್ಲಿ ಡಿಪ್ಲೊಮಾ ಇನ್‌ ಕಮ್ಯುನಿಕೇಷನ್‌ ಆ್ಯಂಡ್‌ ಮ್ಯಾನೆಜ್‌ಮೆಂಟ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಆನಂತರ  ಖ್ಯಾತ ಚಲನಚಿತ್ರ ಛಾಯಾಗ್ರಹಕ ಮತ್ತು ನಿರ್ದೇಶಕ ಪಿ.ಸಿ. ಶ್ರೀರಾಮ್‌ ಅವರ ಸಹಾಯಕಿಯಾಗಿಯೂ ಕೆಲ ಕಾಲ ಕೆಲಸ ಮಾಡಿದೆ. ಸಿನಿಮಾ ರಂಗಕ್ಕೆ ಕಾಲಿಟ್ಟರೆ ಮಗಳು ಎಲ್ಲಿ  ದಾರಿ ತಪ್ಪಿಬಿಡುತ್ತಾಳೊ  ಎಂಬ ಆತಂಕದಿಂದ ಅಪ್ಪ, ಅಮ್ಮ ನನ್ನ ನಿರ್ಧಾರವನ್ನು ವಿರೋಧಿಸಿದರು. ಹೀಗಾಗಿ ಸಿನಿಮಾ ಪಯಣದ ಕನಸು ಕಮರಿತು.

ಮುಂದೇನು ಮಾಡುವುದು ಎಂಬ ಸಂದಿಗ್ಧತೆಯಲ್ಲಿದ್ದಾಗ ಸ್ನೂಕರ್‌ ಲೋಕದ ಹಾದಿ ತೋರಿದವರು ಕ್ರಿಕೆಟಿಗ ಮತ್ತು ಆತ್ಮೀಯ ಸ್ನೇಹಿತ ಹೇಮಂಗ್‌ ಬದಾನಿ. ಅವರ ಸಲಹೆಯಂತೆ 2001ರಲ್ಲಿ ಸ್ನೂಕರ್‌ ಲೋಕಕ್ಕೆ ಅಡಿ ಇಟ್ಟೆ. ಆರಂಭದಲ್ಲಿ ಈ ಪಯಣ ಮುಳ್ಳಿನ ಮೇಲಿನ ನಡಿಗೆಯಾಗಿತ್ತು. ಮಹಿಳೆಯರು ಕ್ರೀಡಾ ರಂಗದಲ್ಲಿ ಎದುರಿಸುತ್ತಿರುವ ಸವಾಲುಗಳು ಎಂತಹದ್ದು ಎಂಬುದರ ಅರಿವು ನನಗಾಗಿದ್ದು ಆಗಲೇ.

ಆಗ ಸ್ನೂಕರ್‌ ಅಷ್ಟೇನು ಜನಪ್ರಿಯತೆ ಹೊಂದಿರಲಿಲ್ಲ. ಇದರಲ್ಲಿ ಎತ್ತರದ ಸಾಧನೆ ಮಾಡಿದವರಿಗೆ ಸರ್ಕಾರದಿಂದ ಸಿಗುತ್ತಿದ್ದ ಮನ್ನಣೆಯೂ ಅಷ್ಟಕಷ್ಟೆ. ಸರ್ಕಾರಿ ಉದ್ಯೋಗವಂತೂ ದೂರದ ಮಾತಾಗಿತ್ತು. ಹೀಗಿದ್ದರೂ ಇದರಲ್ಲೇ ಮುಂದುವರಿಯಬೇಕೆಂದು ದೃಢವಾಗಿ ನಿಶ್ಚಯಿಸಿದೆ. ಇದಕ್ಕೆ ಮನೆಯವರೂ ಬೆಂಬಲವಾಗಿ ನಿಂತರು. ಹೀಗಾಗಿ ನಾನು ಹಿಡಿದಿರುವ ಮಾರ್ಗ ಸರಿಯಾಗಿದೆ ಎಂಬ ಭಾವನೆ ಮೂಡಿತು. ಆ ನಂತರದ ಎರಡು ವರ್ಷ ಏಳುಬೀಳಿನ ಹಾದಿ ಸವೆಸಿದೆ.

ಹೀಗಿದ್ದರೂ ಎದೆಗುಂದಲಿಲ್ಲ. ಕಠಿಣ ಪರಿಶ್ರಮ ಪಟ್ಟರೆ ಒಂದಲ್ಲ ಒಂದು ದಿನ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬ ಅದಮ್ಯ ವಿಶ್ವಾಸವಿತ್ತು. 2003ರಲ್ಲಿ ಅದು ನಿಜವೂ ಆಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ‘ಚಿನ್ನದ’ ಸಾಧನೆ ಮಾಡಿದೆ. ಅದು ನನ್ನ ಕ್ರೀಡಾ ಬದುಕಿಗೆ ಹೊಸ ತಿರುವು ನೀಡಿತು.

ಆ ನಂತರ ಈ ಕ್ರೀಡೆಯನ್ನು ಇನ್ನೂ ಗಂಭೀರವಾಗಿ ಪರಿಗಣಿಸಿ ಇನ್ನಷ್ಟು ನೈಪುಣ್ಯ ಸಾಧಿಸಿದೆ. ಹೀಗಾಗಿ 2005ರಲ್ಲಿ ಮೂರು ಚಿನ್ನದ ಪದಕ ಕೊರಳಿಗೇರಿದವು. ರಾಷ್ಟ್ರೀಯ ಸ್ನೂಕರ್‌ ಚಾಂಪಿಯನ್‌ಷಿಪ್‌,9 ಬಾಲ್‌ ಪೂಲ್‌ ಚಾಂಪಿಯನ್‌ಷಿಪ್‌ ಮತ್ತು 8 ಬಾಲ್‌ ಪೂಲ್‌ ಚಾಂಪಿಯನ್‌ಷಿಪ್‌ಗಳಲ್ಲಿ ಮೊದಲ ಸ್ಥಾನ ಗಳಿಸಿ ಈ ಕ್ರೀಡೆಯಲ್ಲಿ ಛಾಪು ಒತ್ತಿದೆ.

ಆ ನಂತರ ಮುಟ್ಟಿದ್ದೆಲ್ಲಾ ಚಿನ್ನವಾಗತೊಡಗಿತು. ಸ್ನೂಕರ್‌ನಲ್ಲಿ ಒಂಬತ್ತು ಬಾರಿ ರಾಷ್ಟ್ರೀಯ ಚಾಂಪಿಯನ್‌ ಆದೆ. ಮೂರು ಬಾರಿ ರನ್ನರ್ ಅಪ್ ಸ್ಥಾನ ಗಳಿಸಿದೆ.

2007ರಲ್ಲಿ ನಡೆದ ಐಬಿಎಸ್‌ಎಫ್‌  ಮಹಿಳಾ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತ್ತು. ಆ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತರೂ, ಸಾಕಷ್ಟು ವಿಷಯಗಳನ್ನು ಕಲಿಯಲು ಅದು ವೇದಿಕೆಯಾಯಿತು.

ಕರ್ನಾಟಕದ ನಂಟು..
2011ರಲ್ಲಿ ಎಂ.ಸಿ. ತಿಲಕ್‌ರಾಜ್ ಅವರೊಂದಿಗೆ ವಿವಾಹವಾಯಿತು. ಹೀಗಾಗಿ ಚೆನ್ನೈನಿಂದ ಬೆಂಗಳೂರಿಗೆ ಬಂದೆ. ಮದುವೆ, ಸಾಧನೆಗೆ ಅಡ್ಡಿಯಾಗಬಹುದೇನೊ ಎಂಬ ಸಣ್ಣ ಆತಂಕ ಇತ್ತು. ಆದರೆ ಪತಿ ಹಾಗೂ ಅತ್ತೆ, ಮಾವ ಪ್ರತಿ ಹಂತದಲ್ಲೂ ಬೆನ್ನೆಲುಬಾಗಿ ನಿಂತರು. ಅವರ  ಪ್ರೋತ್ಸಾಹ ನನ್ನ ಸಾಧನೆಯ ಹಸಿವನ್ನು ಹೆಚ್ಚಿಸಿತು. ಮದುವೆಯ ನಂತರ ಅದೃಷ್ಟವೂ ಬದಲಾಯಿತು.

2012ರಲ್ಲಿ ಬಲ್ಗೇರಿಯಾದಲ್ಲಿ ನಡೆದಿದ್ದ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ನನ್ನಿಂದ ಕಂಚಿನ ಸಾಧನೆ ಮೂಡಿ ಬಂತು. ಮರು ವರ್ಷ ಐರ್ಲೆಂಡ್‌ನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿ ಹೊಸ ಭಾಷ್ಯ ಬರೆದಿದ್ದು ಇನ್ನೂ ನೆನಪಿನ ಪುಟದಲ್ಲಿ ಹಸಿರಾಗಿದೆ.

ನಿದ್ದೆ ಬಾರದ ಆ ರಾತ್ರಿ...
ಇವುಗಳೆಲ್ಲದರ ನಡುವೆ ಹೋದ ವಾರ ಕಾಡಿದ ನಿರಾಸೆಯ ಬಗ್ಗೆ ಹೇಳಲೇಬೇಕು. ಸಿಂಗಪುರದಲ್ಲಿ ನಡೆದಿದ್ದ ಡಬ್ಲ್ಯುಎಲ್‌ಬಿಎಸ್‌ಎ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲುವ ಸುವರ್ಣಾವಕಾಶವನ್ನು ಹಾಳು ಮಾಡಿಕೊಂಡೆ. ನಾನು ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿ 22 ವರ್ಷಗಳಿಂದ ಭಾರತಕ್ಕೆ ಕಾಡುತ್ತಿದ್ದ ಕೊರಗೊಂದನ್ನು ದೂರ ಮಾಡಿದ್ದೆ.

ಈ ಅವಕಾಶದಲ್ಲಿ ದೇಶಕ್ಕೆ ಚಿನ್ನ ಗೆದ್ದುಕೊಡಬೇಕೆಂಬುದು ನನ್ನ ಮಹಾದಾಸೆಯಾಗಿತ್ತು. ಆದರೆ ನಿರ್ಣಾಯಕ ಹಂತದಲ್ಲಿ ಮಾಡಿದ ತಪ್ಪಿನಿಂದಾಗಿ ಸ್ಮರಣೀಯ ಸಾಧನೆಯ ಕನಸೊಂದು ನುಚ್ಚು ನೂರಾಯಿತು. ಆ ದಿನ ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ. ಚಿನ್ನ ಜಯಿಸಲು ಆಗಲಿಲ್ಲವಲ್ಲ ಎಂದು ಇರುಳೆಲ್ಲಾ ಪರಿತಪಿಸಿದೆ. ಈಗಲೂ ಆ ದಿನ ವನ್ನು ನೆನಪಿಸಿಕೊಂಡರೆ ಕಣ್ಣಾಲಿಗಳು ತುಂಬಿ ಬರುತ್ತವೆ.

ಸ್ನೂಕರ್‌ ಎಲ್ಲರ ಕ್ರೀಡೆ...
ಸಾಕಷ್ಟು ಮಂದಿ ನನ್ನನ್ನು ಭೇಟಿಯಾಗುತ್ತಾರೆ. ಆಗೆಲ್ಲಾ ಮಾತು ಕ್ರೀಡೆಯತ್ತ ಹೊರಳಿದಾಗ ಅವರಿಂದ ಎದುರಾಗುವುದು ಒಂದೇ ಪ್ರಶ್ನೆ. ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌  ಶ್ರೀಮಂತರ ಆಟವಲ್ಲವೇ ಎಂಬುದು. ಇಂದಿಗೂ  ಈ ಭಾವನೆ ಬದಲಾಗಿಲ್ಲ. ಬಹುತೇಕ ಸಿನಿಮಾಗಳಲ್ಲಿ ಈ ಕ್ರೀಡೆಯನ್ನು ಧನಿಕರ ಆಟ ಎಂಬಂತೆ ಬಿಂಬಿಸಲಾಗಿದೆ. ಆಟ ಆಡುವವರು ಮದ್ಯಪಾನ ಮತ್ತು ಧೂಮಪಾನ ಮಾಡುವ ದೃಶ್ಯಗಳನ್ನೂ ಕೆಲ ಸಿನಿಮಾಗಳಲ್ಲಿ ನಾನೂ ನೋಡಿದ್ದೇನೆ.

ಅಂತಹ ಚಲನಚಿತ್ರಗಳನ್ನು ನೋಡಿ ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಕಲಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣದಿಂದಾಗಿಯೇ ಈ ಕ್ರೀಡೆಯಲ್ಲಿ ಹೆಚ್ಚು ಹೊಸ ಮುಖಗಳು ಗೋಚರಿಸುತ್ತಿಲ್ಲ.  ಆದರೆ ವಾಸ್ತವ ಸ್ಥಿತಿ ಹಾಗಿಲ್ಲ.  ಪೋಷಕರು ಪೂರ್ವಗ್ರಹ ಪೀಡಿತರಾಗದೆ ಮಕ್ಕಳಿಗೆ ಸ್ನೂಕರ್‌ ಕಲಿಸಲು ಮುಂದೆ ಬರಬೇಕು.

ಈ ಸಂಬಂಧ ಶಾಲಾ ಹಂತದಲ್ಲಿಯೇ ಅರಿವು ಮೂಡಿಸುವ ಮತ್ತು ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸುವ ಕೆಲಸವನ್ನು  ಸರ್ಕಾರ, ಫೆಡರೇಷನ್‌ ಮತ್ತು ರಾಜ್ಯ ಸಂಸ್ಥೆಗಳು  ಮಾಡಬೇಕು ಎಂಬುದು ನನ್ನ ಮನವಿ.

ಭಾರತದಲ್ಲಿ ಪರಿಸ್ಥಿತಿ ಬದಲಾಗಿದೆ
ಭಾರತ, ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಕ್ರೀಡೆಗಳ ತವರೂರು ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. 19ನೇ ಶತಮಾನದಲ್ಲಿ ಬ್ರಿಟಿಷರು ಈ ಆಟವನ್ನು ಪರಿಚಯಿಸಿದ್ದರು. ಹೀಗಿದ್ದರೂ ನಮ್ಮ ದೇಶದಲ್ಲಿ ಈ ಕ್ರೀಡೆ ನಿಧಾನವಾಗಿ ಉಸಿರಾಡುತ್ತಿದೆ. ಇದಕ್ಕೆ ಕಾರಣಗಳೂ ಸಾಕಷ್ಟಿವೆ.ಅವುಗಳನ್ನೆಲ್ಲಾ ಇಲ್ಲಿ ಉಲ್ಲೇಖಿಸುವುದು ಬೇಡ. ಒಂದು ದಶಕದಿಂದ ಈಚೆಗೆ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ ಎಂಬುದಂತೂ ನಿಜ.

ಈಗ ಈ ಕ್ರೀಡೆಯ ಬೆಳವಣಿಗೆಗೆ ಪೂರಕ ವಾತಾವರಣವೂ ನಿರ್ಮಾಣವಾಗಿದೆ. ನಮ್ಮವರೂ ಇಂಗ್ಲೆಂಡ್‌, ಸಿಂಗಪುರ, ಹಾಂಕಾಂಗ್‌, ಥಾಯ್ಲೆಂಡ್‌ ದೇಶಗಳ ಆಟಗಾರರಿಗೆ ಸಾಟಿಯಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಆಡುವ ಯಾವ ದೇಶದ ಆಟಗಾರನೂ ಮಾಡದ ಸಾಧನೆಯನ್ನು ಕರ್ನಾಟಕದ ಪಂಕಜ್‌ ಅಡ್ವಾಣಿ ಮಾಡಿದ್ದಾರೆ. ನಮ್ಮ ಜೊತೆಯೇ ಬೆಳೆದ ಹುಡುಗ 16 ಬಾರಿ ವಿಶ್ವ ಚಾಂಪಿಯನ್‌ ಆಗಿರುವುದು ನಾವೆಲ್ಲಾ ಹೆಮ್ಮೆ ಪಡಬೇಕಾದ ವಿಷಯ.

ಅಭಿವೃದ್ಧಿಯ ವಿಚಾರಕ್ಕೆ ಬರುವುದಾದರೆ ಭಾರತದ ಮಟ್ಟಿಗೆ ಕರ್ನಾಟಕ ಈ ಕ್ರೀಡೆಯ ಶಕ್ತಿಕೇಂದ್ರವಾಗಿ ಬೆಳೆದಿದೆ. ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌  ಬೆಳವಣಿಗೆಗಾಗಿ ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆ (ಕೆಎಸ್‌ಬಿಎ) ಸಾಕಷ್ಟು ಶ್ರಮಿಸುತ್ತಿದೆ.  ಹೀಗಾಗಿಯೇ ವಿಶ್ವ ಚಾಂಪಿಯನ್‌ಷಿಪ್‌ನಂತಹ ಮಹತ್ವದ ಕೂಟಕ್ಕೆ ಬೆಂಗಳೂರು ಹಲವಾರು ಬಾರಿ ಆತಿಥ್ಯ ವಹಿಸಿದೆ.

ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಕೇರಳದಿಂದಲೂ ಹೊಸಪ್ರತಿಭೆಗಳು ಪ್ರವರ್ಧಮಾನಕ್ಕೆ ಬರುತ್ತಿರುವುದು ಖುಷಿಯ ವಿಷಯ. ಈ ಕ್ರೀಡೆ ಕೆಲವೇ ರಾಜ್ಯಗಳಿಗೆ ಸೀಮಿತವಾಗಬಾರದು. ಇದರ ಕಂಪನ್ನು ದೇಶದ ಎಲ್ಲಾ ಭಾಗಗಳಿಗೂ ಪಸರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಸಹಭಾಗಿತ್ವವೂ ಅತ್ಯಗತ್ಯ ಎಂಬುದು ನನ್ನ ಅನಿಸಿಕೆ.

ಸಾಧಕರನ್ನು ಗುರುತಿಸಬೇಕು..
ನಾನು, ಪಂಕಜ್‌ ಅಡ್ವಾಣಿ, ಉಮಾದೇವಿ ನಾಗರಾಜ್‌, ಚಿತ್ರಾ ಮಗಿಮೈರಾಜ್‌ ಹೀಗೆ ಹಲವು ಮಂದಿ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದೇವೆ. ಆದರೂ ಅತ್ಯುನ್ನತ ಕ್ರೀಡಾ ಪ್ರಶಸ್ತಿಗಳಿಗೆ ನಮ್ಮನ್ನು ಪರಿಗಣಿಸುತ್ತಿಲ್ಲ. ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಪಂಕಜ್‌ ಅಡ್ವಾಣಿ ಅರ್ಹರು. ಅವರಿಗೆ ಈ ಪುರಸ್ಕಾರ ಇನ್ನೂ ಸಿಕ್ಕಿಲ್ಲ. 2013ರಿಂದ ಸತತವಾಗಿ ನನ್ನ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗುತ್ತಿದೆ. ಆದರೆ ಏನೂ ಪ್ರಯೋಜನವಾಗಿಲ್ಲ. ಇದಕ್ಕಾಗಿ ನಾನು ಸರ್ಕಾರವನ್ನು ದೂಷಿಸುತ್ತಿಲ್ಲ.

ಸರ್ಕಾರದಿಂದ ನೇಮಕವಾಗಿರುವ ಆಯ್ಕೆ ಸಮಿತಿ, ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಆಟಗಾರರ ಬಗ್ಗೆ ನಿರ್ಲಕ್ಷ ಧೋರಣೆ ತಾಳುತ್ತಿದೆ. ಪ್ರತಿ ಬಾರಿಯೂ ನಮಗೆ ಅನ್ಯಾಯವಾಗುತ್ತಿದೆ. ಈ  ಗೌರವಕ್ಕೆ ನಾವು ಅರ್ಹರಲ್ಲವೆ. ಇದಕ್ಕಾಗಿ ಇನ್ಯಾವ ಸಾಧನೆ ಮಾಡಬೇಕು.ಇನ್ನೆಷ್ಟು ಪ್ರಶಸ್ತಿಗಳನ್ನು ಜಯಿಸಬೇಕು.

ಆಯ್ಕೆ ಸಮಿತಿಯ ಈ ಧೋರಣೆ ನಮ್ಮಂತಹ ಅನೇಕ ಸಾಧಕರ ಆತ್ಮ ವಿಶ್ವಾಸವನ್ನು ಕುಗ್ಗಿಸುತ್ತಿದೆ. ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸದಿದ್ದರೆ,  ಕ್ರೀಡೆಯಲ್ಲಿ ಮುಂದುವರಿಯಲು ಯಾರು ಬಯಸುತ್ತಾರೆ. ಕ್ರೀಡೆ ಬೆಳೆಯುವುದಾದರೂ ಹೇಗೆ ಎಂಬುದು ನನ್ನ ಪ್ರಶ್ನೆ.

ಮರೆಯಲಾಗದ ‘ಚಿನ್ನ’ದ ನೆನಪು
2013ರಲ್ಲಿ ಐರ್ಲೆಂಡ್‌ನ ಕಾರ್ಲೊದಲ್ಲಿ ನಡೆದಿದ್ದ ಐಬಿಎಸ್‌ಎಫ್‌ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ನ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದು ಜೀವನದಲ್ಲಿ ಎಂದಿಗೂ ಮರೆಯಲಾಗದ ಕ್ಷಣ. ಆ ಚಾಂಪಿಯನ್‌ಷಿಪ್‌ನ ತಂಡದ ವಿಭಾಗದಲ್ಲಿ ನಾನು ಮತ್ತು ಮಹಾರಾಷ್ಟ್ರದ ಅರಂತಾ ಸ್ಯಾಂಚೆಸ್‌ ಜೊತೆಯಾಗಿ ಆಡಿ ಮೊದಲ ಬಾರಿಗೆ ದೇಶಕ್ಕೆ ಚಿನ್ನ ಗೆದ್ದುಕೊಟ್ಟಿದ್ದೆವು. ಫೈನಲ್‌ನಲ್ಲಿ ನಾವು 3-2 ಫ್ರೇಮ್‌ಗಳಿಂದ ಹಾಂಕಾಂಗ್‌ನ ಆಟಗಾರ್ತಿಯರನ್ನು ಮಣಿಸಿದ್ದೆವು.
(ಲೇಖಕಿ, 2016ನೇ ಸಾಲಿನ ಏಕಲವ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಅಂತರರಾಷ್ಟ್ರೀಯ ಸ್ನೂಕರ್‌ ಪಟು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT