ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಮೂಲದ ವ್ಯಕ್ತಿ ಮೇಲೆ ಹಲ್ಲೆ

Last Updated 26 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌/ಕೊಟ್ಟಾಯಂ: ಆಸ್ಟ್ರೇಲಿಯಾದ ಹೋಬರ್ಟ್‌ನಲ್ಲಿ  ಯುವಕರ ಗುಂಪೊಂದು ಕೇರಳ ಮೂಲದ ವ್ಯಕ್ತಿಯನ್ನು ‘ಕಪ್ಪುವರ್ಣೀಯ ಭಾರತೀಯ’ ಎಂದು ಜನಾಂಗೀಯವಾಗಿ ನಿಂದಿಸಿ ಹಲ್ಲೆ ನಡೆಸಿದೆ.

33ರ ಹರೆಯದ ಲಿ ಮ್ಯಾಕ್ಸ್‌ ಜೋಯ್‌ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಪುದುಪಳ್ಳಿಯ ಅವರು ಕಳೆದ ಎಂಟು ವರ್ಷಗಳಿಂದ ಆಸ್ಟ್ರೇಲಿಯಾದ ಹೋಬರ್ಟ್‌ನಲ್ಲಿ ನೆಲೆಸಿದ್ದಾರೆ.

ನರ್ಸಿಂಗ್‌ ವಿದ್ಯಾರ್ಥಿಯಾಗಿರುವ ಜೋಯ್‌, ಟ್ಯಾಕ್ಸಿ ಚಾಲಕರಾಗಿ ಅರೆಕಾಲಿಕ ಉದ್ಯೋಗವನ್ನೂ ಮಾಡುತ್ತಿದ್ದಾರೆ. 

‘ಕಾಫಿ ಕುಡಿಯಲು ರೆಸ್ಟೋರೆಂಟ್‌ಗೆ ತೆರಳಿದಾಗ ಯುವತಿ ಸೇರಿದಂತೆ ಐವರು ನನ್ನನ್ನು ನಿಂದಿಸಿದ್ದಾರೆ. ಆರಂಭದಲ್ಲಿ ಅವರು ರೆಸ್ಟೋರೆಂಟ್‌ನ ಸಿಬ್ಬಂದಿ ಜತೆ ಜಗಳವಾಡುತ್ತಿದ್ದರು. ಆದರೆ ನಾನು ಒಳಗೆ ಪ್ರವೇಶಿಸುತ್ತಿದ್ದಂತೆಯೇ ಅವರ ಗಮನ ನನ್ನತ್ತ ತಿರುಗಿದೆ. ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದಾರೆ’ ಎಂದು ಜೋಯ್‌ ಘಟನೆಯನ್ನು ವಿವರಿಸಿದ್ದಾರೆ.

ರೆಸ್ಟೋರೆಂಟ್‌ನಲ್ಲಿದ್ದ ಇತರರು ಪೊಲೀಸರಿಗೆ ಕರೆ ಮಾಡಿದ್ದನ್ನು ಅರಿತ ಆ ಯುವಕರು ಸ್ಥಳದಿಂದ ತೆರಳಿದರು. ಅಲ್ಪ ಸಮಯದ ಬಳಿಕ ವಾಪಸ್‌ ಬಂದು ನನ್ನ ಮೇಲೆ ಹಲ್ಲೆ ನಡೆಸಿದರು ಎಂದಿದ್ದಾರೆ. ಗಾಯಗೊಂಡ ಜೋಯ್‌  ಹೋಬರ್ಟ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

‘ಭಾರತ ಮಧ್ಯಪ್ರವೇಶಿಸಲಿ’

‘ಆಸ್ಟ್ರೇಲಿಯಾದಲ್ಲಿ ಭಾರತೀಯರನ್ನು ಗುರಿಯಾಗಿಸಿ ನಡೆಯುವ ದಾಳಿಗಳು ಹೆಚ್ಚಿವೆ. ಹಲವು ಟ್ಯಾಕ್ಸಿ ಚಾಲಕರು ಜನಾಂಗೀಯ ನಿಂದನೆಗೆ ಗುರಿಯಾಗುತ್ತಿದ್ದಾರೆ. ಆದರೆ ಪೊಲೀಸರಿಗೆ ದೂರು ನೀಡಲು ಹಿಂಜರಿಯುತ್ತಿದ್ದಾರೆ’ ಎಂದು ಜೋಯ್‌ ಆಸ್ಟ್ರೇಲಿಯಾದ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಧ್ಯಪ್ರವೇಶಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಖಂಡನೆ: ಕೊಟ್ಟಾಯಂ ಸಂಸದ ಜೋಸ್‌ ಕೆ ಮಾಣಿ ಅವರು ಘಟನೆಯನ್ನು ಖಂಡಿಸಿದ್ದು, ಈ ವಿಷಯವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT