ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್‌ ಪರೀಕ್ಷೆಗೆ ಸಿದ್ಧತೆ ಹೀಗಿರಲಿ

Last Updated 26 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಪದವಿಪೂರ್ವ ಹಂತದಲ್ಲಿ ಪಿಸಿಎಂಬಿ ವಿಷಯಯನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳಲ್ಲಿ ಬಹು ಮಂದಿ ವೈದ್ಯಕೀಯ ಅಥವಾ ದಂತವೈದ್ಯಕೀಯ ಕೋರ್ಸ್‌ಗೆ ಸೇರುವ ಕನಸನ್ನು ಹೊಂದಿರುತ್ತಾರೆ. ಎರಡನೇ ವರ್ಷದ ಪಬ್ಲಿಕ್ ಪರೀಕ್ಷೆ ಮುಗಿದ ನಂತರ ಇದಕ್ಕಾಗಿ ಈಗ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯೊಂದನ್ನು ಅವರು ಎದುರಿಸಬೇಕು.

ಕಳೆದ ವರ್ಷದಿಂದ ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ಒಂದೇ ಪ್ರವೇಶ ಪರೀಕ್ಷೆಯನ್ನು ಇದಕ್ಕಾಗಿ ನಡೆಸಲಾಗುತ್ತಿದೆ. ಇದಕ್ಕೆ ‘ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎನ್‌ಟ್ರೆನ್ಸ್ ಟೆಸ್ಟ್ - ಎನ್ಇಇಟಿ (‘ನೀಟ್’)’ ಎಂದು ಕರೆಯಲಾಗುತ್ತದೆ. ಈ ವರ್ಷದ ನೀಟ್ ಪರೀಕ್ಷೆ ಮೇ ಏಳನೆಯ ತಾರೀಖಿನಂದು ನಿಶ್ಚಯವಾಗಿದೆ.

ನಿಮ್ಮಲ್ಲಿ ಬಹಳಷ್ಟು ಮಂದಿ ಕಳೆದ ಎರಡು ವರ್ಷದಿಂದಲೇ ಈ ಪರೀಕ್ಷೆಗೆ ತಯಾರಿ ನಡೆಸಿರುವ ಸಾಧ್ಯತೆ ಇದೆ. ಅದೇನೇ ಇರಲಿ, ಪದವಿಪೂರ್ವ ಎರಡನೇ ವರ್ಷದ ಪಬ್ಲಿಕ್ ಪರೀಕ್ಷೆ ಮುಗಿಯುವ ಹಂತಕ್ಕೆ ಬಂದಿದೆ. ನೀಟ್ ಪರೀಕ್ಷೆಯ ಅಂತಿಮ ತಯಾರಿಗೆ ಸುಮಾರು ನಲವತ್ತು ದಿನಗಳಿವೆ. ಈ ಅವಧಿಯನ್ನು ಪ್ರವೇಶ ಪರೀಕ್ಷೆಯ ಸಿದ್ಧತೆಗೆ ಪರಿಣಾಮಕಾರಿಯಾಗಿ ಹೇಗೆ ಬಳಸಿಕೊಳ್ಳಬಹುದೆಂಬ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳನ್ನು ನೀಡುವುದೇ ಈ ಲೇಖನದ ಉದ್ದೇಶ.

ಪರೀಕ್ಷೆಯ ರೂಪುರೇಷೆ
ಮೂರು ಗಂಟೆಯ ಅವಧಿಯ ಈ ಪ್ರವೇಶಪರೀಕ್ಷೆಯಲ್ಲಿ ವಿದ್ಯಾರ್ಥಿಯು ಒಟ್ಟು 180 ಪ್ರಶ್ನೆಗಳಿಗೆ ಉತ್ತರಿಸಬೇಕು. ಎಲ್ಲ ಪ್ರಶ್ನೆಗಳೂ ಬಹು ಆಯ್ಕೆಯ (ಮಲ್ಟಿಪಲ್ ಚಾಯ್ಸ್ - ಎಂಸಿಕ್ಯು) ಪ್ರಶ್ನೆಗಳೇ ಆಗಿರುತ್ತವೆ. ಆದರೆ, ಪ್ರಶ್ನೆಗಳಲ್ಲಿ ಬಹಳಷ್ಟು ವೈವಿಧ್ಯ ಇರುತ್ತದೆ. ಅಲ್ಲದೆ, ನಿಮ್ಮ ಆಲೋಚನಾ ಶಕ್ತಿಯನ್ನು ಒರೆಗೆ ಹಚ್ಚುವಂಥ ಪ್ರಶ್ನೆಗಳೂ ಇರುತ್ತವೆ.

ಸರಾಸರಿ, ಪ್ರತಿ ಪ್ರಶ್ನೆಗೆ ಉತ್ತರಿಸಲು ಒಂದು ನಿಮಿಷದಷ್ಟು ಮಾತ್ರ ಸಮಯ ಸಿಗುತ್ತದೆ. 180 ಪ್ರಶ್ನೆಗಳಲ್ಲಿ ಭೌತವಿಜ್ಞಾನ  ಹಾಗೂ ರಸಾಯನವಿಜ್ಞಾನಗಳಲ್ಲಿ ತಲಾ 45 ಪ್ರಶ್ನೆಗಳಿರುತ್ತವೆ.  ಜೀವವಿಜ್ಞಾನದಿಂದ 90 ಪ್ರಶ್ನೆಗಳಿರುತ್ತವೆ.

ಈ ಪ್ರವೇಶ ಪರೀಕ್ಷೆ ವೈದ್ಯಕೀಯ ಕೋರ್ಸ್‌ಗಳಿಗೆ ಸಂಬಂಧಿಸಿದ್ದಾದ್ದರಿಂದ ಜೀವವಿಜ್ಞಾನಕ್ಕೆ ಇಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಇದರಲ್ಲಿ ಸಾಮಾನ್ಯವಾಗಿ, ಸಸ್ಯವಿಜ್ಞಾನಕ್ಕೆ ಸಂಬಂಧಿಸಿದ 45 ಪ್ರಶ್ನೆಗಳೂ ಪ್ರಾಣಿವಿಜ್ಞಾನಕ್ಕೆ ಸಂಬಂಧಿಸಿದ 45 ಪ್ರಶ್ನೆಗಳೂ ಇರುತ್ತವೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಭೌತವಿಜ್ಞಾನ, ರಸಾಯನವಿಜ್ಞಾನ ಹಾಗೂ ಜೀವವಿಜ್ಞಾನ ಈ ಮೂರೂ ವಿಷಯಗಳಲ್ಲಿ ಈ ಪ್ರಶ್ನೆಗಳು ಸಿಬಿಎಸ್ಇ 11ನೇ ಹಾಗೂ 12ನೇ ತರಗತಿಯ ಪಠ್ಯಕ್ರಮವನ್ನು ಆಧರಿಸಿರುತ್ತವೆ.

11ನೇ ತರಗತಿ (ಪ್ರಥಮ ಪಿಯು) ಹಾಗೂ 12ನೇ ತರಗತಿ (ದ್ವಿತೀಯ ಪಿಯು)ಯ ಪಠ್ಯವಿಷಯಗಳಿಗೆ ಸಮಾನವಾದ ಒತ್ತು ನೀಡಲಾಗುತ್ತದೆ. ಅಂದರೆ, ಭೌತವಿಜ್ಞಾನ, ರಸಾಯನವಿಜ್ಞಾನಗಳ 90 ಪ್ರಶ್ನೆಗಳಲ್ಲಿ, ಪ್ರಥಮ ಹಾಗೂ ದ್ವಿತೀಯ ಪಿಯು ಪಠ್ಯವಿಷಯಗಳ ತಲಾ 45 ಪ್ರಶ್ನೆಗಳಿರುವ ಸಾಧ್ಯತೆ ಇದೆ. ಜೀವವಿಜ್ಞಾನದ 90 ಪ್ರಶ್ನೆಗಳಲ್ಲಿಯೂ ಇದೇ ರೀತಿ, ಪ್ರಥಮ ಹಾಗೂ ದ್ವಿತೀಯ ಪಿಯು ಪಠ್ಯವಿಷಯಗಳ ತಲಾ 45 ಪಶ್ನೆಗಳು ಇರಬಹುದು.

ಪ್ರತಿ ಪ್ರಶ್ನೆಗೆ 4 ಅಂಕಗಳನ್ನು ನಿಗದಿಪಡಿಸಲಾಗಿದೆ. ಅಂದರೆ, ಒಟ್ಟು 270 ಅಂಕಗಳು. ನಿಮ್ಮ ಪ್ರತಿಯೊಂದು ಸರಿ ಉತ್ತರಕ್ಕೆ 4 ಅಂಕಗಳು ದೊರಕುತ್ತವೆ. ಪ್ರತಿ ತಪ್ಪು ಉತ್ತರಕ್ಕೆ 1 ಅಂಕ ಕಳೆಯಲಾಗುತ್ತದೆ. ಇದಕ್ಕೆ ಋಣಾತ್ಮಕ ಮೌಲ್ಯಮಾಪನ (ನೆಗೆಟಿವ್ ಇವಾಲ್ಯುಯೇಷನ್) ಎಂದು ಹೆಸರು. ಹೀಗಾಗಿ, ಪ್ರಶ್ನೆಯೊಂದಕ್ಕೆ ಉತ್ತರ ತಪ್ಪಾಗಿ ಗುರುತಿಸಿದ್ದರೆ, ಅದರ 4 ಅಂಕಗಳ ಜೊತೆಗೆ ಒಂದು ಅಂಕ ಹೆಚ್ಚಿಗೆ ಕಳೆದುಕೊಳ್ಳಬೇಕಾಗುತ್ತದೆ.

ಈ ಪರೀಕ್ಷೆಯಲ್ಲಿ ನೀವು ಗಳಿಸುವ ಪ್ರತಿಯೊಂದು ಅಂಕವೂ ಬಹಳ ಅಮೂಲ್ಯವಾದುದು. ಅದು ಮೇಲ್ಮಟ್ಟದ ರ್‍್ಯಾಂಕ್ ಗಳಿಸುವುದಕ್ಕೆ ನೆರವಾಗುತ್ತದೆ. ಹೀಗಾಗಿ, ನೀವು ವಿಶೇಷವಾಗಿ ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ತಪ್ಪು ಮಾಡಿ ದಂಡ ತೆರುವುದಕ್ಕಿಂತ, ತಪ್ಪು ಮಾಡದೇ ಇರುವುದು ಒಳ್ಳೆಯದಲ್ಲವೆ?

ನಿಮ್ಮ ತಯಾರಿ ಹೇಗಿರಬೇಕು?
ದ್ವಿತೀಯ ಪಿಯು ಪಬ್ಲಿಕ್ ಪರೀಕ್ಷೆಯ ಹಿನ್ನೆಲೆಯಲ್ಲಿ ನಿಮ್ಮ ಮೆದುಳಿಗೆ ಮತ್ತು ದೇಹಕ್ಕೆ ಸಾಕಷ್ಟು ದಣಿವಾಗಿದೆ. ಪರೀಕ್ಷೆ ಮುಗಿದ ದಿನ ಕಡ್ಡಾಯವಾಗಿ ವಿಶ್ರಾಂತಿ ತೆಗೆದುಕೊಳ್ಳಿ. ಮಾರನೆಯ ದಿನ ಬೆಳಿಗ್ಗೆ ಪ್ರವೇಶ ಪರೀಕ್ಷೆಯ ತಯಾರಿಗೆ ಬೇಕಾದ ಸಿದ್ಧತೆಗಳನ್ನು ಪ್ರಾರಂಭಿಸಿ.

ಮೊದಲಿಗೆ, ಭೌತವಿಜ್ಞಾನ , ರಸಾಯನವಿಜ್ಞಾನ  ಹಾಗೂ ಜೀವವಿಜ್ಞಾನ, ಈ ಮೂರೂ ವಿಷಯಗಳಿಗೆ ಸಂಬಂಧಿಸಿದ ಪ್ರಥಮ ಹಾಗೂ ದ್ವಿತೀಯ ಪಿಯು ಪಠ್ಯಪುಸ್ತಕಗಳು, ನೋಟ್ಸ್‌ಗಳು, ಪ್ರವೇಶಪರೀಕ್ಷೆ ತಯಾರಿಗಾಗಿಯೇ ಕೊಂಡುಕೊಂಡಿರುವ ಪುಸ್ತಕಗಳು, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು, ಇವನ್ನೆಲ್ಲ ಒಪ್ಪವಾಗಿ ಜೋಡಿಸಿಟ್ಟುಕೊಳ್ಳಿ.

ಮೂರೂ ವಿಷಯಗಳಲ್ಲಿ ಚೆನ್ನಾಗಿ ಅರ್ಥವಾಗಿರುವ ಹಾಗೂ ನೆನಪಿನಲ್ಲಿರುವ ಅಧ್ಯಾಯಗಳ ಅಥವಾ ಭಾಗಗಳ ಪಟ್ಟಿ ಮಾಡಿಕೊಳ್ಳಿ. ಯಾವ ವಿಷಯಗಳಲ್ಲಿ, ಯಾವ ಅಧ್ಯಾಯಗಳಲ್ಲಿ ನಿಮ್ಮ ಅರ್ಥೈಸಿಕೊಳ್ಳುವ ಸಾಮರ್ಥ್ಯ ಉತ್ತಮವಾಗಿತ್ತು, ಯಾವುದರಲ್ಲಿ ಕಡಿಮೆಯಾಗಿತ್ತು ಎಂಬುದರ ವಿಶ್ಲೇಷಣೆಯೊಂದನ್ನು ಮಾಡಿಕೊಳ್ಳಿ.

ಯಾವ ವಿಷಯದ ಯಾವ ಅಧ್ಯಾಯಗಳಿಗೆ ಹೆಚ್ಚಿನ ಒತ್ತು ಕೊಡಬೇಕೆಂಬುನ್ನು ನಿರ್ಧರಿಸಲು ಇದು ನೆರವಾಗುತ್ತದೆ.  ಇದಕ್ಕೆ ಅನುಗುಣವಾಗಿ ನಿಮಗೆ ಈಗ ಅಧ್ಯಯನಕ್ಕೆ ಸಿಗುವ 40 ದಿನಗಳಿಗೆ ಒಂದು ವೇಳಾಪಟ್ಟಿ ತಯಾರಿಸಿಕೊಳ್ಳಿ. ಪ್ರತಿ ದಿನ ಕನಿಷ್ಠ 10 ಗಂಟೆಗಳ ಕಾಲ ತಯಾರಿಗೆ ಮೀಸಲಿಡಿ. ಪ್ರತಿ ಒಂದು ಅಥವಾ ಎರಡು ಘಂಟೆಗಳ ಅಧ್ಯಯನದ ನಂತರ ಒಂದು ಸಣ್ಣ ವಿರಾಮ ಇರಲಿ.

ಈಗಷ್ಟೇ ನೀವು ದ್ವಿತೀಯ ಪಿಯು ಪರೀಕ್ಷೆ ಬರೆದಿರುವುದರಿಂದ ಮೇಲಿನ ಮೂರೂ ವಿಷಯಗಳಲ್ಲಿ, ಪಠ್ಯವಸ್ತುವಿನಲ್ಲಿ ಬಹಳಷ್ಟು ವಿಷಯಗಳು ಇನ್ನೂ ನಿಮ್ಮ ನೆನಪಿನಲ್ಲಿರುವ ಸಾಧ್ಯತೆ ಹೆಚ್ಚು. ಹೀಗಾಗಿ, ಈಗ ನಿಮ್ಮ ತಯಾರಿಯನ್ನು ಸಂಬಂಧಿಸಿದ ವಿಷಯಗಳಲ್ಲಿ ಪ್ರಥಮ ಪಿಯು ಪಠ್ಯವಸ್ತುವಿನಿಂದ ಪ್ರಾರಂಭಿಸುವುದು ಹೆಚ್ಚು ಸಮಂಜಸ.

ಕನಿಷ್ಠ ಮೊದಲ ಮೂರು ವಾರಗಳನ್ನು ಪ್ರಥಮ ಪಿಯು ಪಠ್ಯವಿಷಯಗಳ ಪುನರ್ಮನನಕ್ಕೆ ಮೀಸಲಿಡುವುದು ಒಳ್ಳೆಯದು. ಉಳಿದೆರಡು ವಾರಗಳನ್ನು ದ್ವಿತೀಯ ಪಿಯು ಪಠ್ಯವಿಷಯಗಳಿಗೆ ಬಳಸಿಕೊಳ್ಳಿ. ಅಂತಿಮವಾಗಿ, ಪ್ರವೇಶಪರೀಕ್ಷೆಯ ಮುಂಚಿನ ಒಂದೆರಡು ದಿನಗಳನ್ನು ಮಾದರಿ ಪ್ರಶ್ನಪತ್ರಿಕೆಗಳನ್ನು ಉತ್ತರಿಸಲು ಬಳಸಿಕೊಳ್ಳಿ.

ಪ್ರತಿನಿತ್ಯದ ನಿಮ್ಮ ಅಧ್ಯಯನದ ಅವಧಿಯಲ್ಲಿ ಮೂರು ಭಾಗಗಳನ್ನು ಮಾಡಿಕೊಳ್ಳುವುದು ಅವಶ್ಯಕ. ಮೊದಲ ಭಾಗವನ್ನು ನೀವು ಅಂದಿಗೆ ಆಯ್ಕೆ ಮಾಡಿಕೊಂಡಿರುವ ವಿಷಯದ ಅಧ್ಯಾಯಗಳ ಪುನರ್ಮನನಕ್ಕೆ ಮೀಸಲಿಡಿ. ಒಂದೊಂದಾಗಿ, ಅಧ್ಯಾಯಗಳನ್ನು ಪುನರ್ಮನನ ಮಾಡುತ್ತಾ ಬನ್ನಿ. ಎರಡನೆ ಅವಧಿಯಲ್ಲಿ ಅಧ್ಯಯನ ಮಾಡಿದ ಪಠ್ಯವಸ್ತುವಿನ ಸಾರಾಂಶವನ್ನು ನೆನಪಿಸಿಕೊಳ್ಳುತ್ತಾ ಬರೆಯಿರಿ.

ಪ್ರತಿ ವಿಷಯದ ಪ್ರಮುಖ ಅಂಶಗಳನ್ನು ನಕಾಶಾ ನಿರೂಪಣೆಯಲ್ಲಿ ಸಂಗ್ರಹಿಸಿ. ಇದನ್ನು ಮೈಂಡ್ ಮ್ಯಾಪ್ಪಿಂಗ್ ಅಥವಾ ಕಾನ್ಸೆಪ್ಟ್ ಮ್ಯಾಪ್ಪಿಂಗ್ ವಿಧಾನ ಎಂದು ಕರೆಯಲಾಗುತ್ತದೆ. ಇದು ನಿಮ್ಮ ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ. ಯಾವುದೇ ಒಂದು ಪದವನ್ನು ನೋಡಿದ ಕೂಡಲೇ ಸಂಬಂಧಿಸಿದ ಮಾಹಿತಿಯೆಲ್ಲ ನೆನಪಿಗೆ ಬರುತ್ತದೆ.

ಮೂರನೆಯ ಅವಧಿಯನ್ನು ಅಂದಿನ ಅಧ್ಯಯನ ವಿಷಯಕ್ಕೆ ಸಂಬಂಧಿಸಿದ ಬಹು ಆಯ್ಕೆ ಪ್ರಶ್ನೆಗಳನ್ನು ಉತ್ತರಿಸುವುದಕ್ಕೆ ಮೀಸಲಿಡಿ. ಹೀಗೆ ಮಾಡುವುದರಿಂದ ಕ್ರಮೇಣ ನಿಮ್ಮ ವಿಶ್ಲೇಷಣಶಕ್ತಿ ಸುಧಾರಿಸುತ್ತಾ ಹೋಗುತ್ತದೆ. ನಿಮ್ಮಲ್ಲಿ ಆತ್ಮವಿಶ್ವಾಸ ವೃದ್ಧಿಯಗುತ್ತದೆ.

ಪ್ರತಿ ವಾರದಲ್ಲಿ ಭೌತವಿಜ್ಞಾನ , ರಸಾಯನವಿಜ್ಞಾನ  ಹಾಗೂ ಜೀವವಿಜ್ಞಾನದ ಅಧ್ಯಯನಕ್ಕೆ ತಲಾ ಎರಡು ದಿನಗಳನ್ನು ಮೀಸಲಿಡಿ. ಭೌತವಿಜ್ಞಾನದಲ್ಲಿ ವಿಷಯಾಧಾರಿತ ಸಮಸ್ಯೆಗಳನ್ನು ಬಿಡಿಸುವುದರ ಕಡೆ ಹೆಚ್ಚು ಗಮನಕೊಡಿ. ರಸಾಯನವಿಜ್ಞಾನದಲ್ಲಿ ಸಮೀಕರಣಗಳಿಗೆ ಗಮನಕೊಡಿ. ಜೀವವಿಜ್ಞಾನದಲ್ಲಿ ಚಿತ್ರಗಳನ್ನು ನಿರ್ಲಕ್ಷಿಸಬೇಡಿ. ವಾರಾಂತ್ಯದಲ್ಲಿ ಮಾದರಿ ಪ್ರಶ್ನಪತ್ರಿಕೆಗಳನ್ನು ಉತ್ತರಿಸುವ ಪ್ರಯತ್ನ ಮಾಡಿ.

ಪ್ರತಿ ವಿಷಯದಲ್ಲೂ 180 ಪ್ರಶ್ನೆಗಳಿರುವ ಮಾದರಿ ಪ್ರಶ್ನಪತ್ರಿಕೆಗಳನ್ನು ಸಂಗ್ರಹಿಸಿ. ಕನಿಷ್ಠ ವಾರಕ್ಕೊಂದರಂತೆ ಇಂಥ ಪ್ರಶ್ನಪತ್ರಿಕೆಗಳಿಗೆ ಮೂರು ಗಂಟೆಗಳ ನಿರ್ದಿಷ್ಟ ಅವಧಿಯಲ್ಲಿ ಉತ್ತರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ. ಅಂತಿಮ ಪ್ರವೇಶಪರೀಕ್ಷೆಯಲ್ಲಿ ಸಂಪೂರ್ಣ ಆತ್ಮವಿಶ್ವಾಸದಿಂದ ಸಮಯ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಇಂಥ ಅಭ್ಯಾಸ ನಿಮಗೆ ನೆರವಾಗುತ್ತದೆ. ನೀವು ಎಷ್ಟು ಮಾದರಿ ಪ್ರಶ್ನಪತ್ರಿಕೆಗಳನ್ನು ಉತ್ತರಿಸುತ್ತೀರೋ ಅಷ್ಟೂ ನಿಮಗೆ ಒಳ್ಳೆಯದು.

ಹಿಂದಿನ ವರ್ಷಗಳ ಪ್ರಶ್ನಪತ್ರಿಕೆಗಳನ್ನು ಪರಾಮರ್ಷಿಸಿ
ಇಂಥ ಯಾವುದೇ ಪ್ರವೇಶಪರೀಕ್ಷೆಯ ತಯಾರಿಯ ಒಂದು ಪ್ರಮುಖ ಭಾಗವೆಂದರೆ, ಈ ಹಿಂದಿನ ವರ್ಷಗಳ ಪ್ರಶ್ನಪತ್ರಿಕೆಗಳನ್ನು ಉತ್ತರಿಸುವುದು. ಹಲವು ಮೂಲಗಳಿಂದ ನೀವು ಈ ಪ್ರಶ್ನಪತ್ರಿಕೆಗಳನ್ನು ಸಂಗ್ರಹಿಸಬಹುದು. ಹೀಗೆ ಸಂಗ್ರಹಿಸಿದ ಹಿಂದಿನ ವರ್ಷಗಳ ಪ್ರಶ್ನಪತ್ರಿಕೆಗಳನ್ನು ಉತ್ತರಿಸುವುರಿಂದ ವಿಷಯಗಳ ಮೇಲಿನ ನಿಮ್ಮ ಹಿಡಿತವನ್ನು ನೀವೇ ಪರೀಕ್ಷಿಸಿಕೊಂಡಂತೆ ಆಗುತ್ತದೆ.

ಅಲ್ಲದೆ, ಯಾವ ವಿಷಯದ ಪುನರ್ಮನನಕ್ಕೆ ಹೆಚ್ಚು ಒತ್ತು ಕೊಡಬೇಕೆಂಬುದನ್ನು ನಿರ್ಧರಿಸಲು ಸುಲಭವಾಗುತ್ತದೆ. ಜೊತೆಗೆ, ಪ್ರಶ್ನೆಗಳಲ್ಲಿರುವ ವೈವಿಧ್ಯದ ಪರಿಚಯವನ್ನು ಮಾಡಿಕೊಳ್ಳಲು ನೆರವಾಗುತ್ತದೆ. ಒಂದೊಂದೂ ಪ್ರಶ್ನಪತ್ರಿಕೆಯನ್ನು ಉತ್ತರಿಸಿದ ಮೇಲೆ ನಿಮ್ಮ ಉತ್ತರಗಳನ್ನು ಕೊಟ್ಟಿರುವ ಉತ್ತರಗಳ ಜೊತೆಗೆ ತಾಳೆ ಮಾಡಿ ನೀವೇ ಸ್ವಯಂ ಮೌಲ್ಯಮಾಪನ್ನು ಮಾಡಿಕೊಳ್ಳಬಹುದು. ಈ ಅಭ್ಯಾಸವೂ ಸಹ ನಿಮ್ಮ ಆತ್ಮವಿಶ್ವಾಸವನ್ನು ಮೇಲೆತ್ತಲು ನೆರವಾಗುತ್ತದೆ.

ವ್ಯವಸ್ಥಿತ, ಕ್ರಮಬದ್ಧ ಅಧ್ಯಯನವೇ ಯಶಸ್ಸಿಗೆ ದಾರಿ
ನಿಮ್ಮ ತಯಾರಿಯ ಕೊನೆಯ ವಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾದರಿ ಪ್ರಶ್ನೆ ಪತ್ರಿಕೆಗಳನ್ನುಉತ್ತರಿಸುವ ಪ್ರಯತ್ನ ಮಾಡಿ. ನೀವು ತಯಾರಿಸಿಟ್ಟುಕೊಂಡಿರುವ ಕಾನ್ಸೆಪ್ಟ್ ಮ್ಯಾಪ್‌ಗಳನ್ನು ಪರಾಮರ್ಷಿಸಿ. ಅಗತ್ಯವಿದ್ದಲ್ಲಿ ಮತ್ತೊಮ್ಮೆ ಪುನರ್ಮನನ ಮಾಡಿಕೊಳ್ಳಿ. ಈ ಮುಂದಿನ ಐದಾರು ವಾರಗಳಲ್ಲಿ ನೀವು ಯೋಜನಾಬದ್ಧವಾಗಿ ತಯಾರಿ ನಡೆಸಿದಲ್ಲಿ ಯಾವ ಆತಂಕವೂ ಇಲ್ಲದೆ, ಈ ಪ್ರವೇಶಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯ.

ಪ್ರವೇಶಪರೀಕ್ಷೆಯ ಹಿಂದಿನ ದಿನ ಪರೀಕ್ಷೆಯ ಪ್ರವೇಶಪತ್ರ (ಅಡ್ಮಿಟ್ ಕಾರ್ಡ್) ಸೇರಿದಂತೆ, ಅವಶ್ಯವಿರುವ ಎಲ್ಲ ವಸ್ತುಗಳನ್ನು ಸಿದ್ಧಪಡಿಸಿ ಇಟ್ಟುಕೊಂಡ ಮೇಲೆ ಕನಿಷ್ಠ 8 ಗಂಟೆ ನಿದ್ರೆ ಮಾಡಿ. ಇಲ್ಲವಾದಲ್ಲಿ, ಪರೀಕ್ಷಾ ಕೊಠಡಿಯಲ್ಲಿ ನೀವು ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.

ನಿಮ್ಮ ಪರೀಕ್ಷಾಕೇಂದ್ರಕ್ಕೆ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಹೋಗಿ ತಲುಪಿ. ಪ್ರವೇಶ ಪತ್ರದಲ್ಲಿರುವ ಎಲ್ಲ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ. ಪ್ರಶಾಂತವಾದ ಮನಸ್ಸಿನಿಂದ ಉತ್ತರಿಸಲು ಪ್ರಾರಂಭಿಸಿ. ಸುಲಭವೆನಿಸಿದ ಪ್ರಶ್ನೆಗಳನ್ನು ಮೊದಲು ಆಯ್ಕೆ ಮಾಡಿಕೊಳ್ಳಿ. ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ ತಪ್ಪು ಉತ್ತರವನ್ನು ನಮೂದಿಸುವ ಬದಲಿಗೆ, ಉತ್ತರಿಸದೇ ಬಿಡುವುದು ಉತ್ತಮ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮಗೆ ಶುಭವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT