ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಅವರು ಹೊರಗಿನವರಲ್ಲ!

Last Updated 26 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬರೋಬ್ಬರಿ ಇಪ್ಪತ್ತೆರಡು ದಿನಗಳ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ಬೌಲರ್ ಇಶಾಂತ್ ಶರ್ಮಾ ಮತ್ತು ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ನಡುವಣ ನಡೆದಿದ್ದ ಕಪಿಚೇಷ್ಟೆಯನ್ನು ನೆನಪಿಸಿಕೊಳ್ಳಿ.

ಅಂದು ಪಂದ್ಯ ನೋಡಿದವರೆಲ್ಲರೂ ನಕ್ಕು ನಲಿಯುವಂತೆ ಮಾಡಿದ್ದ ಆ ನಾಟಕೀಯ ಘಟನೆ ಅವರಿಬ್ಬರ ನಡುವಿನ ಜಿದ್ದಾಜಿದ್ದಿಯ ಪರಿಣಾಮವೂ ಆಗಿತ್ತು. ಅಂದು ಬದ್ಧ ಎದುರಾಳಿಗಳಂತೆ ವರ್ತಿಸಿದ್ದ ಇವರಿಬ್ಬರೂ ಆಟಗಾರರು ಇನ್ನು ಒಂದು ವಾರ ಕಳೆದರೆ ಒಂದೇ ಡ್ರೆಸ್ಸಿಂಗ್ ಕೋಣೆ ಹಂಚಿಕೊಳ್ಳಲಿದ್ದಾರೆ.

ಏಪ್ರಿಲ್ ಐದರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಇಶಾಂತ್ ಅವರು ಸ್ಮಿತ್ ನಾಯಕತ್ವದ ಪುಣೆ ಸೂಪರ್‌ಜೈಂಟ್ಸ್‌ ತಂಡದಲ್ಲಿ ಆಡಲಿದ್ದಾರೆ. ಇಶಾಂತ್ ಅಷ್ಟೇ ಏಕೆ ಆಸ್ಟ್ರೇಲಿಯಾ ತಂಡಕ್ಕೆ ದುಃಸ್ವಪ್ನವಾಗಿ ಕಾಡಿದ್ದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಕೂಡ ಅದೇ ತಂಡದಲ್ಲಿ ಆಡಲಿದ್ದಾರೆ. ಅವರು ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಎದುರು ಕೇರಂ ಬಾಲ್ ಪ್ರಯೋಗಿಸಲೂ ಸಿದ್ಧರಾಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಬಗ್ಗೆ ಹಲವು ರೀತಿಯ ಟೀಕೆಗಳು, ಆರೋಪಗಳು, ಆಕ್ಷೇಪಣೆಗಳು ಇರಬಹುದು. ಆದರೆ, ವಿಶ್ವದ ಶ್ರೇಷ್ಠ ಮತ್ತು ಉದಯೋನ್ಮುಖ ಕ್ರಿಕೆಟಿಗರನ್ನು ಒಂದೆಡೆ ಸೇರಿಸುವ ವೈಶಿಷ್ಟ್ಯ ಈ ಟೂರ್ನಿಯದ್ದು. ಅದು ಗಡಿ, ಭಾಷೆ, ಧರ್ಮಗಳನ್ನು ಮೀರಿದ ವಿವಿಧತೆಯಲ್ಲಿ ಏಕತೆಯ ಭಾವ ಮೂಡಿಸುವಂತದ್ದು.

ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ ಬದ್ಧ ವೈರಿಗಳಂತೆ ಹಣಾಹಣಿ ನಡೆಸಿದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಆಟಗಾರರು ಡ್ರೆಸ್ಸಿಂಗ್ ಕೋಣೆ ಹಂಚಿಕೊಳ್ಳಲಿದ್ದಾರೆ.

ಪುಣೆ ಸೂಪರ್‌ ಜೈಂಟ್ಸ್‌ ತಡದಲ್ಲಿ ಸ್ಮಿತ್, ಪೀಟರ್ ಹ್ಯಾಂಡ್ಸ್‌ಕಂಬ್ ಜೊತೆಗೆ ಅಶ್ವಿನ್, ಇಶಾಂತ್, ಅಜಿಂಕ್ಯ ರಹಾನೆ ಇದ್ದರೆ,   ಸನ್‌ರೈಸರ್ಸ್‌ ಹೈದರಾಬಾದ್ ತಂಡದಲ್ಲಿ ಡೇವಿಡ್‌ ವಾರ್ನರ್‌ ಜತೆ ಭುವನೇಶ್ವರ್ ಕುಮಾರ್ ಇದ್ದಾರೆ. 

ಆಸ್ಟ್ರೇಲಿಯಾ ದೇಶವಷ್ಟೇ ಅಲ್ಲ, ಪಾಕಿಸ್ತಾನ ತಂಡವೊಂದನ್ನು ಹೊರತುಪಡಿಸಿ ಉಳಿದೆಲ್ಲ ದೇಶಗಳ ಆಟಗಾರರೂ ಐಪಿಎಲ್ ಛಾವಣಿಯಡಿ ಒಂದಾಗಿ ಸೇರಲಿದ್ದಾರೆ.  ಇಂತಹ ವಿಶಿಷ್ಟ ಸೊಬಗಿನೊಂದಿಗೆ ಐಪಿಎಲ್ ಹತ್ತನೇ ವರ್ಷಕ್ಕೆ ಕಾಲಿಡುತ್ತಿದೆ.

ಮಾರುಕಟ್ಟೆ ಕೂಲಿಗೆ ಒಲಿದ ಅದೃಷ್ಟ
ಐಪಿಎಲ್ ಟೂರ್ನಿಯು ಆರಂಭವಾದಾಗಿನಿಂದ ಹಲವು ಉದಯೋನ್ಮುಖ ಆಟಗಾರರಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಟ್ಟಿದೆ. ಅಲ್ಲದೇ ಕೈತುಂಬ ಹಣ ಗಳಿಸುವ ಅವಕಾಶವನ್ನೂ ಮಾಡಿಕೊಟ್ಟಿದೆ. ಕೆಳಮಧ್ಯಮ ಕುಟುಂಬದ ಪ್ರತಿಭೆಗಳಲ್ಲಿ ಕಂಗಳಲ್ಲಿ ಬಣ್ಣದ ಕನಸು ತುಂಬಿದೆ. ತವರಿನ ಹುಡುಗರಷ್ಟೇ ಅಲ್ಲ ವಿದೇಶದ ಆಟಗಾರರೂ ಇದರ ಫಲಾನುಭವಿಗಳಾಗಿದ್ದಾರೆ.

ಅದಕ್ಕೆ ಸೂಕ್ತ ಉದಾಹರಣೆ ಈ ವರ್ಷದ ಹರಾಜಿನಲ್ಲಿ 12 ಕೋಟಿ ರೂಪಾಯಿಗೆ ಆರ್‌ಸಿಬಿ ತಂಡದ ಪಾಲಾದ ಇಂಗ್ಲೆಂಡ್‌ ಆಟಗಾರ ಟೈಮಲ್ ಮಿಲ್ಸ್. ಕೇವಲ ಒಂದು ಅಂತರರಾಷ್ಟ್ರೀಯ ಪಂದ್ಯವಾಡಿ ಬೆನ್ನುನೋವಿನಿಂದ ಆಟದಿಂದ ದೂರ ಉಳಿದಿದ್ದರು.

‘ನಾನು ಆ ದಿನ ದುಬೈ ಹೋಟೆಲ್‌ನಲ್ಲಿ ಇದ್ದೆ. ಲಂಡನ್‌ನಿಂದ ನನ್ನ ಸ್ನೇಹಿತ ಈ ವಿಷಯ ತಿಳಿಸಿ ಟಿವಿ ನೋಡುವಂತೆ ಹೇಳಿದ. ನಂಬಲು ಸಾಧ್ಯವೇ ಆಗಲಿಲ್ಲ. ಗಾಯದಿಂದಾಗಿ ನನ್ನ ಕ್ರಿಕೆಟ್‌ ಜೀವನವೇ ಮುಗಿಯಿತು ಎಂಬ ಹಂತದಲ್ಲಿ ದೊಡ್ಡ ಮೊತ್ತದ ಹಣ ಲಭಿಸಿದೆ.

ಬಾಲ್ಯದಲ್ಲಿ ಮಾರುಕಟ್ಟೆಯಲ್ಲಿ ಕಠಿಣ ಕೆಲಸ ಮಾಡಿ ಕುಟುಂಬದ ಖರ್ಚು ನಿಭಾಯಿಸಿದ್ದೆ. ಇದೀಗ ನನ್ನ ಅಮ್ಮ ಮತ್ತು ತಂಗಿಗೊಂದು ಪುಟ್ಟ ಮನೆ ಕಟ್ಟಿಸಿಕೊಡುವ ಕನಸಿಗೆ ಬಲ ಬಂದಿದೆ’ ಎಂದು ಮಿಲ್ಸ್‌ ಅವರು ‘ಡೇಲಿ ಮೇಲ್’ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.   

ಆಟಗಾರರನ್ನು ಆರ್ಥಿಕವಾಗಿಯಷ್ಟೇ ಅಲ್ಲ. ಭಾರತದೊಂದಿಗೆ ಭಾವನಾತ್ಮಕ ಮತ್ತು ಆತ್ಮೀಯ ನಂಟು ಹೊಂದುವ ಅವಕಾಶವನ್ನೂ ವಿದೇಶಿ ಆಟಗಾರರಿಗೆ ಈ ಟೂರ್ನಿಯು ನೀಡುತ್ತಿದೆ.


ಅಭಿಮಾನಿಗಳ ಪ್ರೀತಿ
ಆರ್‌ಸಿಬಿ ತಂಡದ ತವರೂರು ಬೆಂಗಳೂರಿನ ಕ್ರಿಕೆಟ್‌ಪ್ರೇಮಿಗಳು ವಿರಾಟ್ ಕೊಹ್ಲಿಯನ್ನು ಆರಾಧಿಸುತ್ತಾರೆ. ಅಷ್ಟೇ ಪ್ರಮಾಣದಲ್ಲಿ ದಕ್ಷಿಣ ಆಫ್ರಿಕಾದ ಎ.ಬಿ. ಡಿವಿಲಿಯರ್ಸ್ ಮತ್ತು ವೆಸ್ಟ್‌ ಇಂಡೀಸ್‌ನ ಕ್ರಿಸ್ ಗೇಲ್ ಅವರನ್ನೂ ಪ್ರೀತಿಸುತ್ತಾರೆ. ಸ್ಥಳೀಯ ಹುಡುಗ ಕೆ.ಎಲ್. ರಾಹುಲ್‌ಗೆ ತೋರಿಸಿದಷ್ಟೇ ಗೌರವಾದರಗಳನ್ನು ಆಸ್ಟ್ರೇಲಿಯಾದ ಶೇನ್ ವಾಟ್ಸನ್‌, ಮಿಷೆಲ್ ಸ್ಟಾರ್ಕ್ ಅವರಿಗೂ ನೀಡುತ್ತಾರೆ.

ವೆಸ್ಟ್‌ ಇಂಡೀಸ್ ಕ್ರಿಕೆಟ್ ಸಂಸ್ಥೆಯಿಂದ ಅನಾದರಕ್ಕೊಳಗಾದ ಡ್ವೇನ್ ಬ್ರಾವೊ. ಆ್ಯಂಡ್ರೆ ರಸೆಲ್, ಡರೆನ್ ಸಮಿ ಅವರಿಗೆ ಆಡುವ ಅವಕಾಶ ಸಿಕ್ಕಿರುವುದು ಇಲ್ಲಿಯೇ. ಅಂತರರಾಷ್ಟ್ರೀಯಮಟ್ಟದಲ್ಲಿ ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶ ಲಭಿಸದ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಮುಸ್ತಫಿಜರ್ ರೆಹಮಾನ್ ಅವರಿಗೂ ವೇದಿಕೆ ಲಭಿಸಿದೆ.

ಯುಎಇ ತಂಡದಿಂದ ಇನ್ನೂ ಒಂದೂ ಅಂತರರಾಷ್ಟ್ರೀಯ ಏಕದಿನ ಪಂದ್ಯ ಆಡದ ಚಿರಾಗ್ ಸೂರಿಗೂ ಈ ಬಾರಿ ಅವಕಾಶ ಲಭಿಸಿದೆ. ಆಸ್ಟ್ರೇಲಿಯಾದ ಆ್ಯಡಮ್ ಜಂಪಾ, ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್, ನೇಥನ್ ಲಾಯನ್ ಅವರಿಗೆ ಸ್ಪಿನ್ ಬೌಲಿಂಗ್‌ ಕರಗತ ಮಾಡಿಕೊಳ್ಳಲೂ ಐಪಿಎಲ್‌ ಕಾರಣವಾಗಿತ್ತು.

ಸ್ಪಿನ್ ಬೌಲಿಂಗ್ ಎದುರಿಸಲು ಎ.ಬಿ. ಡಿವಿಲಿಯರ್ಸ್‌, ಡೇವಿಡ್ ವಾರ್ನರ್, ಸ್ಮಿತ್, ಕೇನ್ ವಿಲಿಯಮ್ಸನ್‌, ಗ್ಲೆನ್ ಮ್ಯಾಕ್ಸ್‌ವೆಲ್‌ ಅವರ ಆತ್ಮವಿಶ್ವಾಸ ಹೆಚ್ಚಿಸಿದ್ದೂ ಇದೇ ಟೂರ್ನಿ. ಒಟ್ಟಿನಲ್ಲಿ ಸಮುದ್ರಾದಚೆಗೆ ಸ್ನೇಹವನ್ನು ವಿಸ್ತರಿಸುವ ವೇದಿಕೆಯಾಗಿಯೂ ರಂಗುರಂಗಿನ ಟೂರ್ನಿ ಗಮನ ಸೆಳೆಯುತ್ತದೆ. ಹೊರಗಣವರನ್ನೂ ನಮ್ಮವರನ್ನಾಗಿ  ಮಾಡಿಕೊಳ್ಳುವ ಸೊಬಗು ಇಲ್ಲಿದೆ.

ಆಫ್ಘನ್ನರಿಗೂ ಅವಕಾಶ
ಬಂದೂಕು, ಬಾಂಬುಗಳ ದಾಳಿ, ಬೆಂಕಿ, ಬೂದಿಯಿಂದ ಹೊರಬಂದು ಮುಖ್ಯವಾಹಿನಿಗೆ ಸೇರುವತ್ತ ಚಿತ್ತ ನೆಟ್ಟಿರುವ ಆಫ್ಘಾನಿಸ್ತಾನದ ಪುನರುತ್ಥಾನಕ್ಕೆ ಕ್ರಿಕೆಟ್‌ ಕೂಡ ನೆರವಿನ ಧಾರೆ ಎರೆಯುತ್ತಿದೆ. ಆಟದ ಮೂಲಕ ಸೌಹಾರ್ದವನ್ನೂ ಬಿತ್ತರಿಸುವ ಕೆಲಸ ಮಾಡುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಲ್ಲಿಯ ಪ್ರತಿಭೆಗಳಿಗೆ ಮಿನುಗುವ ಅವಕಾಶವನ್ನು ಕ್ರಿಕೆಟ್‌ ನೀಡಿದೆ. ಇದೀಗ ಐಪಿಎಲ್ ಕೂಡ ತನ್ನ ಸ್ನೇಹಹಸ್ತ ಚಾಚಿದೆ.

ಇದೇ ಮೊದಲ ಬಾರಿಗೆ ಆಫ್ಘಾನಿಸ್ತಾನದ ರಶೀದ್ ಖಾನ್ ಅರ್ಮಾನ್, ಮೊಹಮ್ಮದ್ ನಬಿ ಅವರು ಅವಕಾಶ ಗಿಟ್ಟಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು ರಶೀದ್‌ ಅವರಿಗೆ ₹ 4 ಕೋಟಿ ಮತ್ತು ನಬಿಗೆ ₹ 30 ಲಕ್ಷ ನೀಡಿದೆ.  ಪ್ರತಿಷ್ಠಿತ ಲೀಗ್ ಟೂರ್ನಿಯಲ್ಲಿ ತಮ್ಮ ಪ್ರತಿಭೆ ತೋರಿಸುವ ಅವಕಾಶ ಪಡೆದಿರುವ ಅವರ ಸಾಧನೆಯು ಆ ದೇಶದ ಕ್ರಿಕೆಟ್‌ನ ಬೆಳವಣಿಗೆ ಮತ್ತು ಪ್ರತಿಭಾವಂತರಿಗೆ ಪ್ರೇರಣೆಯಾಗಲಿದೆ.

*

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT