ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗರಾಜಪುರದಿಂದ ಬನಶಂಕರಿಗೆ...

ನಾ ಕಂಡ ಬೆಂಗಳೂರು
Last Updated 27 ಮಾರ್ಚ್ 2017, 10:24 IST
ಅಕ್ಷರ ಗಾತ್ರ

ಬೆಂಗಳೂರು ಉತ್ತರಕ್ಕಿರುವ ಲಿಂಗರಾಜಪುರ ನನ್ನೂರು. ನಮ್ಮ ಪೂರ್ವಜರು ಇದ್ದದ್ದೂ ಅಲ್ಲಿಯೇ. ಆಗ, ನಗರದ ಪಕ್ಕದ ಹಳ್ಳಿಯಿದಾಗಿತ್ತು.  ನಮ್ಮೂರಿಗೂ ನಗರಕ್ಕೂ ವ್ಯತ್ಯಾಸವೆಂದರೆ ಎರಡೂ ಪ್ರದೇಶಗಳ ಮಧ್ಯೆ ರೈಲ್ವೆ ಟ್ರ್ಯಾಕ್‌ (ಈಗಿನ ಬಾಣಸವಾಡಿ ರೈಲ್ವೆ ನಿಲ್ದಾಣ). ಟ್ರ್ಯಾಕಿನ ಆಚೆ ದಂಡು ಪ್ರದೇಶ. ಬಾಲ್ಯದಲ್ಲೇ ಎರಡು ಥರದ ಜೀವನ ಅನುಭವವಾಯಿತು.

ನಮ್ಮದು ಹೆಸರಿಗೆ ದೊಡ್ಡ ಮನೆತನ. ಆದರೆ ಹಣದಲ್ಲಿ ಅಷ್ಟಕ್ಕಷ್ಟೇ. ನಾನು ಮೂರು ತಿಂಗಳ ಮಗುವಾಗಿದ್ದಾಗ ಅಪ್ಪ ತೀರಿಕೊಂಡರು. ಅಮ್ಮನ ಮೇಲೆ ಸಂಸಾರದ ಜವಾಬ್ದಾರಿ ಬಿತ್ತು. ಅಂಥ ಕಷ್ಟಕಾಲದಲ್ಲೂ ಅಮ್ಮ ನನ್ನನ್ನು ಫ್ರೇಜರ್‌ಟೌನ್‌ನ ಹೋಲಿ ಏಂಜಲ್ಸ್‌ ಸ್ಕೂಲ್‌ಗೆ ಸೇರಿಸಿದರು.

ಸ್ಕೂಲ್‌ನಲ್ಲಿದ್ದಾಗ ನಗರ ವಾತಾವರಣ ನೋಡುತ್ತಿದ್ದೆ. ಲಿಂಗರಾಜಪುರ ಸಂಪೂರ್ಣ ಹಳ್ಳಿಯ ವಾತಾವರಣ. ಸ್ನೇಹಿತರೆಲ್ಲಾ ಕಣದಲ್ಲಿ ಆಟವಾಡುತ್ತಿದ್ದೆವು. ಸ್ವಚ್ಛವಾದ ಹಳ್ಳಿಯದು. ಕೆರೆ, ಗದ್ದೆ, ದ್ರಾಕ್ಷಿ ತೋಟಗಳಿದ್ದವು. ಅಮ್ಮ ಹಾಗೂ ಮಾವನ ಜೊತೆ ತೋಟಕ್ಕೆ ಹೋಗುತ್ತಿದ್ದೆ. ವ್ಯವಸಾಯಕ್ಕೆ ನೆರವಾಗುತ್ತಿದ್ದೆ. ಶನಿವಾರ, ಭಾನುವಾರ ಬಂದರೆ ಮಾವನೊಂದಿಗೆ ಮಾರುಕಟ್ಟೆಗೆ ಹೋಗುತ್ತಿದ್ದೆ.

ಕ್ರಮೇಣ ಲಿಂಗರಾಜಪುರವೂ ಅಭಿವೃದ್ಧಿ  ಹೊಂದುತ್ತಾ ಬಂತು. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಇದ್ದಾಗ ಮಿಲ್ಲರ್‌ ಟ್ಯಾಂಕ್‌ ಪ್ರದೇಶದಲ್ಲಿದ್ದ ಜನರನ್ನು ಇಲ್ಲಿಗೆ ಸ್ಥಳಾಂತರಿಸಿದರು. 

ಅಂದು ಫ್ರೇಜರ್‌ಟೌನ್‌, ಕಾಕ್ಸ್‌ಟೌನ್‌ನ  ರಸ್ತೆಗಳು ಅಗಲವಾಗಿದ್ದವು, ದೊಡ್ಡ ದೊಡ್ಡ  ಮರಗಳಿದ್ದವು. ಬೆಳಿಗ್ಗೆ ಸೈಕಲ್‌ನಲ್ಲಿ ಶಾಲೆಗೆ ಹೋಗುತ್ತಿದ್ದೆ.  ಬೆಳಿಗ್ಗೆ 8 ಗಂಟೆಯಾದರೂ ಇಬ್ಬನಿ ಇರುತ್ತಿತ್ತು. ಅಷ್ಟು ಸೊಗಸಾದ ವಾತಾವರಣ. ಈಗಲೂ ಆ ದೃಶ್ಯಗಳೆಲ್ಲಾ ನನ್ನ ಕಣ್ಣಿಗೆ ಕಟ್ಟಿದಂತಿವೆ. 

ಇವತ್ತು ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ನಲ್ಲೂ ಅಂದಿನ ವಾತಾವರಣ ಸಿಗುವುದಿಲ್ಲ. ಈಗ ಲಿಂಗರಾಜಪುರ ನೋಡಿದರೆ ಹಿಂದೆ ಹಳ್ಳಿಯಾಗಿತ್ತು ಎಂಬುದು ಗೊತ್ತೇ ಆಗುವುದಿಲ್ಲ. ನಾವು ವಾಸವಾಗಿದ್ದ ಮಾವನವರ ಮನೆ ಹಾಗೇ ಇದೆ. ಜಮೀನುಗಳೆಲ್ಲ ಕಾಂಕ್ರೀಟ್‌ ಕಾಡುಗಳಾಗಿವೆ.


ರಂಗದ ನಂಟು
ಪಿಯುಸಿ ಮಾಡಲು ಎಸ್‌ಜೆಆರ್‌ಸಿ ಕಾಲೇಜಿಗೆ ಸೇರಿಕೊಂಡೆ. ನಂತರ ಬಿ.ಎಸ್ಸಿ ಆಯ್ಕೆ ಮಾಡಿಕೊಂಡೆ. ಅಂತಿಮ ವರ್ಷ ಪೂರ್ಣಗೊಳಿಸಲು ಆಗಲಿಲ್ಲ. ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದರಿಂದ ಕೆಲಸ ಮಾಡುವ ಅನಿವಾರ್ಯತೆ ಬಂತು. ಅದೇ ಸಮಯಕ್ಕೆ ಎಚ್‌ಎಂಟಿ ಕೈಗಡಿಯಾರ ಕಾರ್ಖಾನೆಯಲ್ಲಿ ನೇಮಕಾತಿ ನಡೆಯುತ್ತಿತ್ತು. ಆಗ ಹೆಸರುವಾಸಿಯಾಗಿದ್ದ ಕಂಪೆನಿ ಅದು. ಈಗ ಇನ್ಫೊಸಿಸ್‌, ವಿಪ್ರೊ  ಇದ್ದ ಹಾಗೆ. ಅಲ್ಲಿ ಕೆಲಸಕ್ಕೆ ಸೇರಿಕೊಂಡೆ.

ಒಂದು ವರ್ಷ ತರಬೇತಿ ಇತ್ತು. ಕಾರ್ಖಾನೆಯ ಲಲಿತ ಕಲಾ ಸಂಘದವರು ರಾಜ್ಯೋತ್ಸವ ಸಂದರ್ಭದಲ್ಲಿ ನಾಟಕ ಸ್ಪರ್ಧೆ ಆಯೋಜಿಸುತ್ತಿದ್ದರು. ನಮ್ಮ ವಿಭಾಗದಿಂದಲೂ ಆಯ್ಕೆ ನಡೆಯುತ್ತಿತ್ತು. ಗೋವಿಂದರಾಜ್‌ ಎಂಬುವವರು ನಾಟಕ ನಿರ್ದೇಶನ ಮಾಡುತ್ತಿದ್ದರು.

ನನ್ನ ಬಳಿಯೂ ಬಂದು ‘ಅಭಿನಯಿಸುತ್ತೀರಾ’ ಎಂದು ಕೇಳಿಕೊಂಡರು. ಅಯ್ಯಯ್ಯೋ ಬೇಡ ಸಾರ್‌, ಪಾತ್ರ ಮಾಡಲು ಬರಲ್ಲ ಎಂದು ಹೇಳಿದೆ. ಅದಕ್ಕೆ ಅವರು, ‘ಇಲ್ಲ. ಮಾಡಿ, ಆ ಪಾತ್ರಕ್ಕೆ ನೀವು ಹೊಂದಿಕೆ ಆಗುತ್ತೀರಾ’ ಅಂದರು. ಅಲ್ಲದೇ ‘ಕೆಲಸದಲ್ಲಿ ರಜೆ ಸಿಗುತ್ತೆ, ಕೆಲಸದ ಸಮಯದಲ್ಲಿ ಪ್ರಾಕ್ಟೀಸ್‌ ಮಾಡಬಹುದು’ ಎಂದರು.  ಆ ಕಾರಣಗಳಿಂದಲೂ ಒಪ್ಪಿಕೊಳ್ಳಬೇಕಾಯಿತು. 

‘ಜೋಕುಮಾರ ಸ್ವಾಮಿ’ ನಾಟಕ ಮಾಡಿದೆವು.ಅದರಲ್ಲಿ ‘ಗುರಿ’ ಎಂಬ ಪಾತ್ರ ಮಾಡಿದೆ, ಅದೃಷ್ಟವೋ ಏನೋ ನಾನು ಅಭಿನಯಿಸಿದ ನಾಟಕಕ್ಕೆ ಅದೇ ವರ್ಷ ‘ಉತ್ತಮ ನಾಟಕ’, ನನಗೆ ಉತ್ತಮ ನಟ ಪ್ರಶಸ್ತಿ ಬಂತು. ಜನ ಇಷ್ಟಪಟ್ಟರು. ‘ಅಭಿನಯ ಚೆನ್ನಾಗಿದೆ, ನಾಟಕಗಳಲ್ಲಿ ಅಭಿನಯಿಸುವುದನ್ನು ಬಿಡಬೇಡಿ’ ಎಂದು ಸಲಹೆ ನೀಡಿದರು. ಅಂದಿನಿಂದ ನಾಟಕಗಳನ್ನು ಮಾಡಿದೆ.  ಅಲ್ಲದೇ ನಿರ್ದೇಶನವನ್ನೂ ಮಾಡುತ್ತಿದ್ದೆ. 

ಕೆಲ ಸ್ನೇಹಿತರು ‘ರವೀಂದ್ರ ಕಲಾಕ್ಷೇತ್ರದಲ್ಲಿ ಹವ್ಯಾಸಿ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ನೀವ್ಯಾಕೆ ಅಲ್ಲಿ ನಟಿಸಬಾರದು’ ಎಂದು ಹೇಳಿದರು.  ಬಿಇಎಲ್‌ನಲ್ಲಿದ್ದ  ಸ್ನೇಹಿತರೊಬ್ಬರು ನಿರ್ದೇಶಕ ಆರ್‌.ನಾಗೇಶ್‌ ಅವರನ್ನು ಪರಿಚಯ ಮಾಡಿಕೊಟ್ಟರು. ಅವರ ‘ಥ್ರಿ ಪೆನ್ನಿ ಒಪೇರಾ’  ನಾಟಕದಲ್ಲಿ ಸಣ್ಣ ಆದರೆ ಮುಖ್ಯವಾದ ಪಾತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟರು. ಅಲ್ಲಿಂದ ಹವ್ಯಾಸಿ ರಂಗಭೂಮಿ ಪಯಣ ಆರಂಭವಾಯಿತು.

ಅಲ್ಲಿ ಜಯಶ್ರೀ, ಶಂಕರನಾಗ್‌, ಅನಂತನಾಗ್‌, ನರಸಿಂಹನ್‌ ಪರಿಚಯವಾದರು. ಕೆಲಸ ಮಾಡುತ್ತಲೇ ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯನಾದೆ. ಕಲಾಕ್ಷೇತ್ರದಲ್ಲಿ ಕಳೆದ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. ನಾಟಕಗಳು ಇಲ್ಲದಿದ್ದರೂ ಸ್ನೇಹಿತರೆಲ್ಲಾ ಸೇರುತ್ತಿದ್ದೆವು.

ಎಲ್ಲರೂ ಹಣ ಕೂಡಿಸಿ ಟೀ ಆರ್ಡರ್‌ ಮಾಡುತ್ತಿದ್ದೆವು. ಸಿಗರೇಟ್‌ ಸೇದುತ್ತಿದ್ದೆವು. ಕಲಾಕ್ಷೇತ್ರ ನನ್ನ ಜೀವನದಲ್ಲಿ ಬದಲಾವಣೆ ತಂದ ಜಾಗ.  ಬಹಳಷ್ಟು ಕಲಿತೆ, ಬೇರೊಂದು ಪ್ರಪಂಚ ಕಂಡ ಸ್ಥಳ.  ಏನೇ ನಿರ್ಧಾರ ಕೈಗೊಳ್ಳುವುದಿದ್ದರೂ ಕಲಾಕ್ಷೇತ್ರವೇ ಕೇಂದ್ರವಾಗುತ್ತಿತ್ತು.

ದೇವಸ್ಥಾನ ಹುಡುಕಲು ಕಷ್ಟವಾಯಿತು
ಶಂಕರ್‌ನಾಗ್‌ ನಿರ್ಮಾಣ ಮಾಡಿದ ‘ಕೂಗು’ ಚಿತ್ರದ ಮುಹೂರ್ತ  ನಡೆದದ್ದು, ಬನಶಂಕರಿಯ ಗುಡ್ಡದ ಮೇಲಿನ ದೇವಗಿರಿ ದೇವಸ್ಥಾನದಲ್ಲಿ.  ಸಿನಿಮಾ ಮುಹೂರ್ತಕ್ಕೆ ಬರಲು ಶಂಕರನಾಗ್‌ ಹೇಳಿದರು.  ಲಿಂಗರಾಜಪುರದಿಂದ ಹೊರಟೆ. ಯಾರನ್ನು ಕೇಳಿದರೂ ‘ದೇವಗಿರಿ  ದೇವಸ್ಥಾನ’ ಗೊತ್ತಿಲ್ಲ ಎನ್ನುತ್ತಿದ್ದರು.

ಹುಡುಕಿ, ಹುಡುಕಿ ಅವರಿವರನ್ನು ಕೇಳಿಕೊಂಡು ಬರುವಷ್ಟರಲ್ಲಿ ಬೆಳಿಗ್ಗೆ 11 ಗಂಟೆ ಆಗಿತ್ತು. ದೇವಗಿರಿ ಬೆಟ್ಟದ ಮೇಲೆ ನನ್ನ ಮೊದಲ ಸಂಭಾವನೆ ಪಡೆದೆ. ಶಂಕರನಾಗ್‌ ಅವರು ಒಂದು ಸಾವಿರ ರೂಪಾಯಿ ಚೆಕ್‌ ಕೊಟ್ಟರು. ಹಾಗಾಗಿ ಆ ಸ್ಥಳ ಮರೆಯಲು ಸಾಧ್ಯವಿಲ್ಲ. ‘ತ್ರಿಶೂಲ’ ನನ್ನ ಮೊದಲನೇ ಸಿನಿಮಾ. ಆದರೆ  ಆ ಎರಡೂ ಚಿತ್ರಗಳು ತೆರೆ ಕಾಣಲೇ ಇಲ್ಲ.

ಸಿನಿಪಯಣ ಆರಂಭ
ನಾಟಕ ಮಾಡುತ್ತಿರುವಾಗ ಸಂಕೇತ್‌ ಕಾಶಿನಾಥ್‌, ಅವಿನಾಶ್‌, ಜಗದೀಶ್‌ ಮಲೆನಾಡು, ರಮೇಶ್‌ ಭಟ್‌ ಎಲ್ಲರೂ ಸ್ನೇಹಿತರಾದೆವು. ನರಸಿಂಹನ್‌ ಅವರಿಗೆ ಸಿನಿಮಾ ನಿರ್ದೇಶನ ಮಾಡಲು ಅವಕಾಶ ಸಿಕ್ಕಿತ್ತು.  ಈ ಚಿತ್ರಕ್ಕೆ ರಂಗಭೂಮಿ ಹಿನ್ನೆಲೆಯ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದರು. ನರಸಿಂಹನ್‌ ಅವರು ಎಲ್ಲರನ್ನೂ ಕರೆದಿದ್ದರು, ಆದರೆ ನನ್ನನ್ನು ಮಾತ್ರ ಕರೆದಿರಲಿಲ್ಲ.

ನಾನೂ ಅಂಜಿಕೆಯಿಂದ ಹೋಗಿರಲಿಲ್ಲ. ಸತ್ಯಸುಂದರಂ ಮತ್ತು ಅವಿನಾಶ್‌ ಅವರು ಆಡಿಷನ್‌ಗೆ ನನ್ನನ್ನು ಬಲವಂತವಾಗಿ ಕರೆದುಕೊಂಡು ಹೋದರು.  ಅದೇನೋ ಗೊತ್ತಿಲ್ಲ! ನಿರ್ಮಾಪಕರಿಗೆ ಇಷ್ಟವಾಗಿ, ಮುಖ್ಯ ಖಳನಟನ ಪಾತ್ರಕ್ಕೆ ಆಯ್ಕೆ ಮಾಡಿದರು. ಅವಿನಾಶ್‌ ಹೀರೊ. ಆ ಚಿತ್ರ ಮಾಡುತ್ತಿರುವಾಗಲೇ, ಯುವ ಖಳನಟನೊಬ್ಬ ಚೆನ್ನಾಗಿ ಅಭಿನಯಿಸುತ್ತಾನೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು.

ಆ ಚಿತ್ರ ಬಿಡುಗಡೆ ಆಗಲಿಲ್ಲ. ಆ ಸಮಯದಲ್ಲಿ ಚರಣ್‌ರಾಜ್‌ ಅವರು ಕನ್ನಡದಲ್ಲಿ ಒಳ್ಳೆ ಹೆಸರು ಮಾಡಿದ್ದರು, ಬೇಡಿಕೆಯ ಖಳನಟರಾಗಿದ್ದರು. ಆ ವೇಳೆ ಅವರು ತೆಲುಗು ಚಿತ್ರರಂಗದತ್ತ ಮುಖ ಮಾಡಿದರು. ಆಗ ನನಗೆ ಅವಕಾಶಗಳು ಬರತೊಡಗಿದವು. ಕನ್ನಡ ಚಿತ್ರರಂಗಕ್ಕೆ ಯುವ ಖಳನಟರು ಬೇಕಾಗಿತ್ತು.

ಸಿನಿಮಾದಲ್ಲಿ ಬ್ಯುಸಿ ಆದ ಮೇಲೆ ರವೀಂದ್ರ ಕಲಾಕ್ಷೇತ್ರದ ನಂಟು ಕಡಿಮೆ ಆಯಿತು. ಲಿಂಗರಾಜಪುರ ಬಿಟ್ಟು ಬನಶಂಕರಿಗೆ ಬಂದು, ಬಾಡಿಗೆ ಮನೆಯಲ್ಲಿದ್ದೆ. ಈಗಲೂ ಲಿಂಗರಾಜಪುರದಲ್ಲಿ ಕಳೆದ ದಿನಗಳು ಕಣ್ಣ ಮುಂದೆ ಬರುತ್ತವೆ. ಅಂದಿನ ಸ್ನೇಹಿತರು ಈಗಲೂ ಫೋನ್‌ ಮಾಡುತ್ತಾರೆ. ಒಮ್ಮೊಮ್ಮೆ ಅಲ್ಲಿಗೂ ಹೋಗಿ ಬರುತ್ತೇನೆ.

ಹೇಮಾಮಾಲಿನಿ ನೋಡಲು ಹೋದೆವು
ಕಾಲೇಜಿನಲ್ಲಿದ್ದಾಗ   ಸಿನಿಮಾ ಹುಚ್ಚು ಹೆಚ್ಚಿತ್ತು. ರಾಮನಗರದಲ್ಲಿ ಶೋಲೆ ಚಿತ್ರೀಕರಣ ನಡೆಯುತ್ತಿತ್ತು. ಅಮಿತಾಭ್‌ ಬಚ್ಚನ್‌, ಜಯಾಭಾದುರಿ, ಹೇಮಾಮಾಲಿನಿ, ಧರ್ಮೇಂದ್ರ ಎಲ್ಲರೂ ಅಶೋಕ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಆಗ ಬೆಂಗಳೂರಿನಲ್ಲಿದ್ದ ಪಂಚತಾರಾ ಹೋಟೆಲ್‌ ಅಂದ್ರೆ ಅದೊಂದೆ. ಅಶೋಕ ಹೋಟೆಲ್‌ನಿಂದ ರಾಮನಗರಕ್ಕೆ ಹೋಗಬೇಕು ಅಂದ್ರೆ ಆನಂದರಾವ್‌ ಸಿಗ್ನಲ್‌ಗೆ ಬರಬೇಕಿತ್ತು.

ಸಿಗ್ನಲ್‌ನಲ್ಲಿ ಕಾಯುವ ಕೆಲಸ ನಮ್ಮದಾಗಿತ್ತು. ಕಾರು ಅಲ್ಲಿಗೆ ಬಂದೊಡನೇ ಎಲ್ಲರೂ ಮುತ್ತಿಕೊಳ್ಳುತ್ತಿದ್ದರು. ಒಮ್ಮೆ ಸ್ನೇಹಿತರೆಲ್ಲ ಕಾಲೇಜಿಗೆ ಚಕ್ಕರ್‌ ಹಾಕಿ ಬಸ್‌ನಲ್ಲಿ ರಾಮನಗರಕ್ಕೆ ಚಿತ್ರೀಕರಣ ನೋಡಲು ಹೊರಟೆವು. ಚಿತ್ರೀಕರಣದ ಸಮಯದಲ್ಲಿ ಹೇಮಾಮಾಲಿನಿ  ಅವರನ್ನು ನೋಡಲು ಜನ ಮುಗಿಬಿದ್ದರು, ಆಗ ಪೊಲೀಸರು ಲಾಠಿ ಚಾರ್ಜ್‌ ಮಾಡಿದರು. ಆ ಕ್ಷಣಗಳನ್ನು ನೆನಪಿಸಿಕೊಂಡರೆ ನಗು ಬರುತ್ತದೆ.

‘ಗೆಟ್‌ ಔಟ್‌ ಎನಿಸಿಕೊಂಡಿದ್ದೆ’
ಪಿಯುಸಿಯಲ್ಲಿದ್ದಾಗ ಕಾಲೇಜು ವಾರ್ಷಿಕೋತ್ಸವ ದಿನಕ್ಕೆ ಡ್ರಾಮಾ ಆಡಿಷನ್‌ ನಡೆಯುತ್ತಿತ್ತು. ಆಯ್ಕೆ ಮಾಡಲು ನಮ್ಮ ಸೀನಿಯರ್‌ ನಾಗಾಭರಣ ಮತ್ತು ಗುರುಗಳಾದ ನಾಗರಾಜರಾವ್‌ ಇದ್ದರು. ನಾನು ಹೋದೆ. ನಾಟಕದ ಸಂಭಾಷಣೆ ಕೊಟ್ಟರು. ಕೆಟ್ಟದಾಗಿ ಓದಿದೆ, ‘ಗೆಟ್‌ ಔಟ್‌’ ಅಂದ್ರು.  ಸಪ್ಪೆ ಮೋರೆ ಹಾಕಿಕೊಂಡು ಹೊರಬಂದೆ.

175ಕ್ಕೂ ಹೆಚ್ಚು ಚಿತ್ರಗಳು
ದೇವರಾಜ್‌ ಅವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.  175ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಸಾಂಗ್ಲಿಯಾನ, ಉತ್ಕರ್ಷ, ಎಸ್‌.ಪಿ. ಭಾರ್ಗವಿ, ವೀರಪ್ಪನ್‌, ಗೋಲಿಬಾರ್‌, ಲಾಕಪ್‌ಡೆತ್‌   ಜನಪ್ರಿಯತೆ ತಂದುಕೊಟ್ಟ ಕೆಲ ಚಿತ್ರಗಳು. 

ಕನ್ನಡದಲ್ಲಿ 189 ಚಿತ್ರಗಳು
ದೇವರಾಜ್‌ ಅವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.  189 ಚಿತ್ರಗಳಲ್ಲಿ ನಟಿಸಿದ್ದು, ಸಾಂಗ್ಲಿಯಾನ, ಉತ್ಕರ್ಷ, ಎಸ್‌.ಪಿ. ಭಾರ್ಗವಿ, ವೀರಪ್ಪನ್‌, ಗೋಲಿಬಾರ್‌, ಲಾಕಪ್‌ಡೆತ್‌   ಜನಪ್ರಿಯತೆ ತಂದುಕೊಟ್ಟ ಕೆಲ ಚಿತ್ರಗಳು.

ಅಂದಿನ ಬನಶಂಕರಿ
ನಟಿ ಚಂದ್ರಲೇಖಾ ಅವರನ್ನು 1986ರಲ್ಲಿ ಪ್ರೇಮವಿವಾಹವಾದೆ. ಪ್ರಜ್ವಲ್‌ ಹುಟ್ಟಿದ ಮೇಲೆ, 1989ರಲ್ಲಿ ಬನಶಂಕರಿಗೆ ಬಂದೆವು. ದೇವೇಗೌಡ ಪೆಟ್ರೋಲ್ ಬಂಕ್‌ ಸ್ಥಳದಲ್ಲಿ ನನ್ನ ಹೆಂಡತಿಗೆ ಕಾರ್‌ ಡ್ರೈವಿಂಗ್‌ ಹೇಳಿಕೊಟ್ಟಿದ್ದೆ. ಅದು ಅಷ್ಟು ಪ್ರಶಾಂತವಾದ ಸ್ಥಳವಾಗಿತ್ತು. ಬಹಳಷ್ಟು ಖಾಲಿ ನಿವೇಶನಗಳಿದ್ದವು. 27 ವರ್ಷ ಇಲ್ಲಿ ಕಳೆದಿದ್ದೇನೆ. ಆಗ ಸಣ್ಣಸಣ್ಣ ಹೋಟೆಲ್‌ಗಳಿದ್ದವು.

ಒಂದು ಹಾಪ್‌ಕಾಮ್ಸ್‌ ಮಳಿಗೆಯಿತ್ತು. ಹೆಂಡತಿ, ಮಕ್ಕಳೊಂದಿಗೆ ಹೊರಗೆ ಊಟಕ್ಕೆ ಹೋಗೋಣವೆಂದರೂ ಒಂದು ರೆಸ್ಟೊರೆಂಟ್‌ ಇರಲಿಲ್ಲ. ಎಂ.ಜಿ.ರಸ್ತೆ ಕಡೆ ಹೋಗಬೇಕಿತ್ತು. ಸಮೀಪದ ವಿ.ವಿ ಪುರಂ ಫುಡ್‌ ಸ್ಟ್ರೀಟ್‌ಗೆ ಹೋಗುತ್ತಿದ್ದೆವು. ಬನಶಂಕರಿ ಕಾಂಪ್ಲೆಕ್ಸ್‌ನಲ್ಲಿ ಬಹಳಷ್ಟು ಸಿನಿಮಾಗಳ ಚಿತ್ರೀಕರಣವಾಗುತ್ತಿತ್ತು.

ದೇವರಾಜ್‌  ವೈಯಕ್ತಿಕ ವಿವರ
ಹುಟ್ಟಿದ ದಿನಾಕ: ಸೆಪ್ಟೆಂಬರ್‌ 24, 1953
ಪತ್ನಿ: ನಟಿ ಚಂದ್ರಲೇಖಾ
ಮಕ್ಕಳು: ಪ್ರಜ್ವಲ್‌, ಪ್ರಣಾಮ್‌
ಹವ್ಯಾಸ– ಪುಸ್ತಕ ಓದುವುದು, ಬೈಕ್‌ ರೈಡಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT