ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಾದ ಸಾಧ್ಯವಿಲ್ಲದ ಸನ್ನಿವೇಶ

Last Updated 26 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣಗಳನ್ನು ಪ್ರವೇಶಿಸಿದರೆ, ಯುವಕ ಯುವತಿಯರು ಸಾಹಿತ್ಯ, ಕಲೆ, ವಿಜ್ಞಾನ ಮತ್ತಿತರ ವಿಚಾರಗಳ ಬಗ್ಗೆ ಸಂವಾದ ನಡೆಸುತ್ತಾ ಕನ್ನಡ ಭಾಷೆ ಮತ್ತು ವಿಚಾರಗಳನ್ನು ಬೆಳೆಸುತ್ತಿರುವುದನ್ನು ಕಾಣಬಹುದು. ಆದರೆ ರಾಜಕೀಯ ಚರ್ಚೆಗಳ ವಿಚಾರಕ್ಕೆ ಬಂದರೆ ಪರಿಸ್ಥಿತಿ ಬೇರೆಯದೇ ಆಗಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚರ್ಚೆಗಳಲ್ಲಿ ರಾಜಕೀಯದ ಸಣ್ಣ ವಾಸನೆ ಇದ್ದರೂ ಅಲ್ಲಿ ಸಂವಾದ ಇರುವುದಿಲ್ಲ. ಅತ್ಯಂತ ಅಸಹ್ಯಕರ ಬೈಗುಳ, ನಿಂದನೆ, ಕ್ರೂರ ವ್ಯಂಗ್ಯಗಳು ಇರುತ್ತವೆ. ಸಂವಾದಕ್ಕೆ ಇಳಿದಾಕೆ ಹೆಣ್ಣಾಗಿದ್ದರೆ ಆಕೆಗೆ ಬರುವ ಮೊದಲ ಪ್ರತಿಕ್ರಿಯೆಯೇ ‘ಶೀಲಗೆಟ್ಟವಳು’ ಎಂಬ ಅರ್ಥದ ಬಹುರೂಪಗಳಾಗಿರುತ್ತವೆ.

ಇದೇಕೆ ಹೀಗೆ? ಇಲ್ಲಿ ತೊಡಗಿಕೊಳ್ಳುತ್ತಿರುವವರೆಲ್ಲ ವಿದ್ಯಾವಂತರೇ. ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿರುವವರೇ. ಆದರೆ ರಾಜಕೀಯ ಸಂವಾದಕ್ಕೆ ಇಳಿದಾಗ ಮಾತ್ರ ತಮ್ಮ ಇರುವಿಕೆಯ ಎಲ್ಲ ಅರಿವುಗಳನ್ನು ಕೈಬಿಟ್ಟು ಮೃಗದಂತೆ ದಾಳಿ- ಪ್ರತಿದಾಳಿ ನಡೆಸಲು ಮುಂದಾಗುತ್ತಾರೆ. ಇದು ದೇಶದ ಮಾನಸಿಕತೆಯಲ್ಲೇ ಇರುವ  ದೋಷವನ್ನು ಸೂಚಿಸುತ್ತದೆ. ಇಂತಹ ವಾಗ್ದಾಳಿಗಳು ಚಿಂತನಾ ಶೂನ್ಯತೆಯನ್ನು ಎಷ್ಟರಮಟ್ಟಿಗೆ ಹೊಂದಿರುತ್ತವೆ ಎಂದರೆ ಒಬ್ಬನ ವಿಚಾರ ಆಗದಿದ್ದ ಮಾತ್ರಕ್ಕೆ ಆತನನ್ನು ‘ಕಮ್ಯುನಿಸ್ಟ್’ ಎಂದು ಮೂದಲಿಸಲಾಗುತ್ತದೆ. ಆದರೆ ಹಾಗೆ ಮೂದಲಿಸುವವನಿಗೆ ಕಮ್ಯುನಿಸಂ ಎಂದರೆ ಏನು ಎನ್ನುವುದೇ ಗೊತ್ತಿರುವುದಿಲ್ಲ! ಅವನ ಪ್ರಕಾರ ಅದು ಒಂದು ಬೈಗುಳದ ಶಬ್ದ ಮಾತ್ರ. ‘ನೀವು ಎಡಪಂಥೀಯರು’ ಎಂದು ಕಾಂಗ್ರೆಸ್ಸಿಗೂ ಬೈಯ್ಯಲು ಶುರುಮಾಡುತ್ತಾನೆ. ಕಾಂಗ್ರೆಸ್ ಎಡಪಂಥೀಯ ಅಲ್ಲ ಎನ್ನುವುದೇ ಅವನಿಗೆ ಗೊತ್ತಿರುವುದಿಲ್ಲ!

ಎಡಪಂಥೀಯರು, ಕಾಂಗ್ರೆಸ್ಸನ್ನು ಸಾಮಾಜಿಕ ಸಿದ್ಧಾಂತವಾಗಿ ತೆಗೆದುಕೊಂಡವರು, ದಲಿತ ಚಿಂತಕರು, ಲೋಹಿಯಾವಾದಿಗಳು... ಇವರೆಲ್ಲ ವೈಚಾರಿಕ ಪರಂಪರೆಯಲ್ಲಿ ಸಾಕಷ್ಟು ಮುಂದೆ ಸಾಗಿ ಬಂದವರು. ಈ ಪರಂಪರೆಯ ಹಿರಿಯರು ಹೀನಾಯ ಮಟ್ಟಕ್ಕೆ ಇಳಿದು ವಾಗ್ದಾಳಿ ನಡೆಸಲು ಮುಂದಾಗುವುದಿಲ್ಲ. ಹಾಗೆಯೇ ಬಲಪಂಥೀಯರು ಕೂಡ. 1990ರ ದಶಕದಲ್ಲಿ ಎಡಪಂಥೀಯರನ್ನೂ, ಕಾಂಗ್ರೆಸ್ಸಿಗರನ್ನೂ ಪ್ರಶ್ನಿಸುವ ಮೂಲಕ ವೈಚಾರಿಕತೆಯನ್ನು ರೂಪಿಸುತ್ತಾ ಹೋದವರು ಹೀನಾಯವಾದ ಮಟ್ಟಕ್ಕೆ ಇಳಿದು ವಾಗ್ದಾಳಿ ಮಾಡುವುದಿಲ್ಲ. ಅಥವಾ ಪತ್ರಿಕೆಗಳಲ್ಲಿ ಬರೆದು ಅಭ್ಯಾಸ ಇರುವವರು ತೀರಾ ಅವಾಚ್ಯದ ಮಟ್ಟಕ್ಕೆ ಹೋಗುವುದಿಲ್ಲ ಎನ್ನಬಹುದು.

ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಸಾಮಾಜಿಕ ಜಾಲತಾಣಗಳ ಮೂಲಕವೇ ಬರೆಯಲು ಪ್ರಾರಂಭಿಸಿದವರ ಸಮಸ್ಯೆ ಇದು. ಆದರೆ ಈ ಎಲ್ಲ ಯುವಕ, ಯುವತಿಯರು ವೈಯಕ್ತಿಕವಾಗಿ ತುಂಬ ಒಳ್ಳೆಯವರು, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರು, ಶಿಸ್ತಿನಿಂದ ತೆರಿಗೆ ಪಾವತಿಸುವವರೂ ಆಗಿರುತ್ತಾರೆ. ರಾಜಕೀಯ ಚಿಂತನೆಯ ಚರ್ಚೆಗಳಲ್ಲಿ ಮಾತ್ರ ಅವರು ಹೀಗೆ ವರ್ತಿಸುತ್ತಾರೆ.

ಹಿಂದೂ ರಾಜಕೀಯ ಬಲಪಂಥೀಯರಿಗೆ ಇನ್ನೊಬ್ಬರನ್ನು ಮೂದಲಿಸಲು ‘ದೇಶದ್ರೋಹಿ’ ಎನ್ನುವುದು ಹೇಗೆ ಮೋಹಕ ಶಬ್ದವೋ ಎಡಪಂಥೀಯರಿಗೆ ‘ಪುರೋಹಿತಶಾಹಿ’ ಎನ್ನುವುದು ಅಷ್ಟೇ ಮೋಹಕ ಶಬ್ದ. 1990ರ ದಶಕದಲ್ಲಿ ಹಿಂದೂ ರಾಜಕೀಯ ಬಲಪಂಥೀಯರು ಎಡಪಂಥೀಯರನ್ನು ಪ್ರಶ್ನಿಸಲು ಪ್ರಾರಂಭಿಸಿದಾಗ ಎಡಪಂಥೀಯರು ಉತ್ತರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಪರಿಸ್ಥಿತಿ ಈಗಿನ ಮಟ್ಟಕ್ಕೆ ಇಳಿಯುತ್ತಿರಲಿಲ್ಲ. ಆಗ ಅವರನ್ನು (ಅಂದರೆ, ಬಲಪಂಥೀಯರನ್ನು) ಪ್ರಶ್ನಿಸಲಿಕ್ಕೇ ಅನರ್ಹರು ಎಂಬಂತೆ ನಡೆಸಿಕೊಳ್ಳಲಾಯಿತು. ಇನ್ನೂ ಹೆಚ್ಚೆಂದರೆ ‘ಪುರೋಹಿತಶಾಹಿ’ ಎಂದು ಬಾಯಿ ಮುಚ್ಚಿಸಲಾಯಿತು. ಈಗ ಅವರ ಕಡೆ ಇರುವ ಅವರ ಮುಂದಿನ ತಲೆಮಾರಿನವರು ‘ದೇಶದ್ರೋಹಿ’ ಎಂಬ ಪದ ಬಳಸಿ ಎಡಪಂಥೀಯರ ಬಾಯಿ ಮುಚ್ಚಿಸಲು ಹೊರಟಿದ್ದಾರೆ. ಆದರೆ ಪುರೋಹಿತಶಾಹಿ ಎಂದರೆ ಏನು ಎಂಬುದು 1990ರ ದಶಕದಲ್ಲಿ ಗೊತ್ತಿತ್ತು. ಈಗ ಹಾಗಲ್ಲ. ಒಬ್ಬ ಕಟ್ಟರ್ ಇಸ್ಲಾಮಿಕ್‌ವಾದಿ ಯುವಕ ಅವನಿಗಾಗದವರಿಗೆ ಕೆಟ್ಟದಾಗಿ ಬೈಯ್ಯಬೇಕು ಎನಿಸಿದಾಗ ‘ಪುರೋಹಿತಶಾಹಿ’ ಎಂದುಬಿಡುತ್ತಾನೆ! ಅವನ ತಲೆಯಲ್ಲಿರುವುದು ಹಿಂದೂ ಬ್ರಾಹ್ಮಣರು ಮಾತ್ರ ಪುರೋಹಿತಶಾಹಿ ಅಂತ! ಸ್ವತಃ ತಾನೇ ಪುರೋಹಿತಶಾಹಿ ಎನ್ನುವುದು ಅವನ ತಲೆಗೇ ಬಂದಿರುವುದಿಲ್ಲ!
ಸಂವಾದವೇ ಸಾಧ್ಯವಿಲ್ಲ ಎಂಬ ಈ ಸ್ಥಿತಿ ನಿರ್ಮಾಣವಾಗಿರುವುದು ಎರಡೂ ತಂಡಗಳಲ್ಲಿರುವ ಹಿರಿಯ ತಲೆಮಾರಿನವರು ವಿಚಾರವನ್ನು ಸಂವಾದ ಸಾಧ್ಯವಿಲ್ಲದ ಸ್ಥಿತಿಗೆ ಕೊಂಡೊಯ್ದಿರುವುದರಿಂದ. ಆದರೆ ಸಂವಾದದ ಪ್ರಯತ್ನವನ್ನೇ ಸ್ಥಗಿತಗೊಳಿಸಿ ಏನು ಸಾಧಿಸಲು ಸಾಧ್ಯ? ರಾಜಕೀಯ ಬಲಪಂಥೀಯರೇ ಇಲ್ಲದ ದೇಶವನ್ನು ರೂಪಿಸಲು ಎಡಪಂಥೀಯರಿಗೂ ಸಾಧ್ಯವಿಲ್ಲ. ‘ಪಾಕಿಸ್ತಾನಕ್ಕೆ ಟಿಕೆಟ್ ಕೊಡಬಹುದೆ’ ಹೊರತು ಎಡಪಂಥೀಯರನ್ನೆಲ್ಲ ಪಾಕಿಸ್ತಾನದ ಪೌರರನ್ನಾಗಿ ಮಾಡಲು ಬಲಪಂಥೀಯರಿಗೂ ಸಾಧ್ಯವಿಲ್ಲ.

ಇಂದಿನ ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ಸಿಕ್ಕಿದ್ದಕ್ಕೆಲ್ಲ ಪುರೋಹಿತಶಾಹಿ ಎಂಬ ಪದ ಬಳಸಿ ಕ್ರಮೇಣ ಆ ಪದವೇ ಗಾಂಭೀರ್ಯ ಕಳೆದುಕೊಂಡು, ಮೂದಲಿಕೆಯ ಕಟ್ಟೆಯನ್ನು ಒಡೆದು ರಾಜಕೀಯ ಬಲಪಂಥ ಹೇಗೆ ಬೆಳೆಯಿತೊ, ಅದೇ ರೀತಿ ಸಿಕ್ಕಿದ್ದಕ್ಕೆಲ್ಲ ‘ದೇಶದ್ರೋಹ’ ಎನ್ನುತ್ತಾ ಹೋದರೆ ಆ ಪದವೂ ಅದರ ಗಾಂಭೀರ್ಯ ಕಳೆದುಕೊಂಡು ಪದದ ಕಟ್ಟೆಯನ್ನು ಒಡೆದು ಮುಂದೆ ಸಾಗುವ ಇನ್ನೊಂದು ಶಕ್ತಿ ರೂಪುಗೊಳ್ಳಲಿದೆ. ಅದು ಪರಿಸ್ಥಿತಿಯನ್ನು ಇನ್ನಷ್ಟು ಹಿಂಸಾತ್ಮಕ ನೆಲೆಗೆ ತಲುಪಿಸಲಿದೆ. ಎರಡೂ ಪಂಥಗಳಿಗೆ ಇರುವುದು ಒಂದೇ ದೇಶ. ಸಮಾಜವನ್ನು ಒಂದು ಮಿತಿಗಿಂತ ಜಾಸ್ತಿ ಒಡೆದು, ಎಂತಹ ಮಹಾನ್ ರಾಜಕೀಯ ಶಕ್ತಿಯನ್ನು ಅಧಿಕಾರಕ್ಕೆ ತಂದರೂ ಸಮಾಜದಲ್ಲಿ ನೆಮ್ಮದಿ ಉಳಿಯುವುದಿಲ್ಲ ಎಂಬುದು ಇತ್ತಂಡಗಳಿಗೂ ಅರ್ಥವಾಗಬೇಕು. ಇತ್ತಂಡದವರೂ ಬದುಕುವುದು ಸಮಾಜದಲ್ಲೇ ಹೊರತು ರಾಜಕೀಯದಲ್ಲಲ್ಲ. ಇಬ್ಬರಿಗೂ ಇರುವುದು ಒಂದೇ ದೇಶವಾದ್ದರಿಂದ ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಹಾಗೇ ಉಳಿಸಿಕೊಂಡೂ, ಒಂದು ಸಾಮಾನ್ಯ ನಂಬಿಕೆಯ ನೆಲೆಯಲ್ಲಿ ಪರಸ್ಪರ ಸಂವಾದಕ್ಕೆ ತೊಡಗಬೇಕು.

ಸಂವಾದದ ಪ್ರಯತ್ನದ ಹೊರತಾಗಿ ಬೇರೆ ದಾರಿ ಇಲ್ಲ ಎಂಬ ಅರಿವು ಎಲ್ಲರಲ್ಲೂ ಮೂಡಬೇಕು. ಒಂದು ವೇಳೆ ಎರಡೂ ಪಂಥಗಳ ಹಿರಿಯರು ತಾವು ಹಾಕಿಕೊಟ್ಟ ಕೆಟ್ಟ ಪರಂಪರೆಯಲ್ಲೆ ಯುವಕ ಯುವತಿಯರು ಮುಂದೆ ಸಾಗಬೇಕೆಂದು ಹಟ ಹಿಡಿದು ಕುಳಿತರೆ ಆಗ, ‘ತಾತಾ, ನಿನ್ನ ಪಾದದ ದೂಳಿ ಹಣೆಯ ಮೇಲಿರಲಿ, ಕಣ್ಣಿಗೆ ಮಾತ್ರ ಸೋಕದಿರಲಿ’ ಎಂದು ಯುವ ಜನಾಂಗ ಪರಸ್ಪರ ಸಂವಾದದ ಹೊಸ ವೇದಿಕೆಯನ್ನು ರೂಪಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.

ಗಾಂಧಿಯನ್ನು ಎಡಪಂಥೀಯರೂ, ರಾಜಕೀಯ ಬಲಪಂಥೀಯರೂ ಟೀಕಿಸಿದರು. ಆದರೆ ಅಂಬೇಡ್ಕರ್ ಒಬ್ಬರನ್ನು ಹೊರತುಪಡಿಸಿದರೆ  ಗಾಂಧಿಯನ್ನು ಟೀಕಿಸಿದ ಯಾರೂ ದೇಶಕ್ಕೆ ನೆಮ್ಮದಿ ತರುವ ಕೆಲಸ ಮಾಡಲಿಲ್ಲ. ಎಲ್ಲ ಟೀಕೆಗಳ ನಡುವೆಯೂ ದೇಶಕ್ಕೆ ಸ್ವಲ್ಪ ನೆಮ್ಮದಿ ತರುವ ಕೆಲಸವನ್ನು ಮಾಡಿದ್ದು ಮಹಾತ್ಮ ಗಾಂಧಿ ಅವರೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT