ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಧಿಸದ ನೈಜ ಸಮಸ್ಯೆ

Last Updated 26 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಆರ್ಥಿಕ ವರ್ಷ ಕೊನೆಗೊಳ್ಳಲು ಬರುತ್ತಿದ್ದಂತೆ ಎಲ್ಲೆಡೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳ ಭರಾಟೆ ಕಂಡು ಬರುತ್ತಿದೆ. ಬಿಡುಗಡೆ ಆದ ಅನುದಾನವನ್ನು ವಿನಿಯೋಗಿಸುವ  ಧಾವಂತ ಈಗ ಸಾಹಿತ್ಯ ಸಮ್ಮೇಳನಗಳನ್ನೂ  ಆವರಿಸಿದೆ. ಹಾಗೆಯೇ ಸಮ್ಮೇಳನಗಳಲ್ಲಿ  ಕನ್ನಡ ಉದ್ಧಾರ ಕುರಿತು ಭಾಷಣಗಳು ಮೊಳಗುತ್ತಿವೆ.  ಸ್ಥಳೀಯ ರಾಜಕೀಯ ನಾಯಕರು, ಮಠಾಧೀಶರು ರಾರಾಜಿಸುವ ಇಂಥ ಜಾತ್ರಾ ಸ್ವರೂಪದ ಸಮ್ಮೇಳನಗಳಿಂದ  ಕನ್ನಡ ಸಾಹಿತ್ಯಕ್ಕಾಗಲಿ, ಕನ್ನಡಕ್ಕಾಗಲಿ ಒಂದಿಷ್ಟೂ ಪ್ರಯೋಜನವಾಗದು. ಆದರೆ ಒಂದಿಷ್ಟು ಕೋಟಿ ಸಾರ್ವಜನಿಕ ಹಣದ ವ್ಯಯ ಅಂತೂ ಆಗುತ್ತದೆ.
ಬರಗಾಲ, ಬವಣೆಗಳು ಈ ಸಮ್ಮೇಳನಗಳನ್ನು ತಾಕುವುದಿಲ್ಲ. ಈ ರೀತಿ ಅತಿ ಅನ್ನಿಸುವಷ್ಟು ಜಿಲ್ಲಾ ಮತ್ತು ತಾಲ್ಲೂಕು  ಮಟ್ಟದ ನಿರರ್ಥಕ ಸಾಹಿತ್ಯ ಸಮ್ಮೇಳನಗಳ ಬದಲು ಪ್ರತಿವರ್ಷ ಜಿಲ್ಲೆಯಲ್ಲಿ ಎಲ್ಲಾದರೂ ಒಂದು ಕಡೆ ಒಂದು ಸಮ್ಮೇಳನವನ್ನು ಹೆಚ್ಚು ಅರ್ಥಪೂರ್ಣವಾಗಿ ಆಯೋಜಿಸುವುದು ಸೂಕ್ತವಾಗಬಹುದು.

ಒಂದು ಕಡೆ ಕನ್ನಡ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವ ಮಕ್ಕಳ ಸಂಖ್ಯೆ, ಮುಚ್ಚಲು ಕಾದಿರುವ ಕನ್ನಡ ಶಾಲೆಗಳು, ಕನ್ನಡ ಪುಸ್ತಕಗಳ ಮಾರಾಟಕ್ಕಾಗಿ ಒದ್ದಾಡುತ್ತಿರುವ ಪ್ರಕಾಶನ ಸಂಸ್ಥೆಗಳು, ಸಾಹಿತ್ಯದ ಓದು ಕುರಿತು ಆಸಕ್ತಿ ತಾಳದ ಯುವ ಪೀಳಿಗೆ, ಇಂಗ್ಲಿಷ್‌ ಮಾಧ್ಯಮದ ಕಡೆ ಸರ್ಕಾರ ಮತ್ತು ಸಾರ್ವಜನಿಕರ ಒಲವು.  ಈ ಎಲ್ಲ ಕಾರಣಗಳಿಂದ ಬರುವ ವರ್ಷಗಳಲ್ಲಿ ಕನ್ನಡದ ಅಸ್ತಿತ್ವ ಕುರಿತು ಆತಂಕ ಉಂಟಾಗುತ್ತಿದ್ದರೆ, ಮತ್ತೊಂದು ಕಡೆ ಎಡೆಬಿಡದ ಸಾಹಿತ್ಯ ಸಮಾರಂಭಗಳು.

ಕನ್ನಡ, ಶಾಲೆಗಳಲ್ಲೇ ಉಳಿಯದಿದ್ದರೆ ಇನ್ನೆಲ್ಲಿ ಉಳಿದೀತು! ಈಗ ಎಚ್ಚರ ವಹಿಸದಿದ್ದರೆ ಕ್ರಮೇಣ ಅದು ಆಡು ಭಾಷೆಯ ಹಂತ ತಲುಪಬಹುದಷ್ಟೆ. ಕನ್ನಡದ ಮೂಲ ಸಮಸ್ಯೆಗಳ ಕುರಿತು ಸರ್ಕಾರವಾಗಲಿ, ಸಾಹಿತಿಗಳಾಗಲಿ, ಸಾಹಿತ್ಯ ಸಮ್ಮೇಳನಗಳಾಗಲಿ ಗಂಭೀರವಾಗಿ ಚಿಂತಿಸುತ್ತಿಲ್ಲ. ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳು ಯಾವುದೇ ಫಲ ನೀಡುತ್ತಿಲ್ಲ. ಸಾಹಿತ್ಯಕ ಜಾತ್ರೆಗಳಲ್ಲಿ, ಸಭೆಸಮ್ಮೇಳನಗಳಲ್ಲಿ ನಾವು ಕಳೆದು ಹೋಗುತ್ತಿದ್ದೇವೆ. ಕನ್ನಡದ ನೈಜ ನೋವು ನಮ್ಮನ್ನು ಬಾಧಿಸುತ್ತಿಲ್ಲ ಎಂಬುದೇ ವಿಷಾದನೀಯ ಅಂಶ.
-ವೆಂಕಟೇಶ ಮಾಚಕನೂರ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT