ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವು, ನೀರಿಗೆ ಹೈನುಗಾರರ ಅಲೆದಾಟ

ನಾವೇನು ತಪ್ಪು ಮಾಡಿದ್ದೇವೆ?: ಪಶು ಸಂಗೋಪನಾ ಇಲಾಖೆಗೆ ಜಾನುವಾರು ಮಾಲೀಕರ ಪ್ರಶ್ನೆ
Last Updated 27 ಮಾರ್ಚ್ 2017, 4:21 IST
ಅಕ್ಷರ ಗಾತ್ರ
ದಾವಣಗೆರೆ: ‘ಹಳ್ಳಿಗಳಲ್ಲಿ ಬೇಡ ಬೇಡ ಎಂದ್ರೂ ಮೇವು ತಂದು ಸುರೀತಾರೆ. ಆದರೆ, ನಗರದ ಮಧ್ಯಭಾಗದಲ್ಲಿರುವ ನಮ್ಮ ಹಸುಗಳಿಗೆ ಒಂದು ಹಿಡಿ ಮೇವು ಕೂಡ ಸಿಗ್ತಿಲ್ಲ. ಈ ಒಣ ಬೇಸಿಗೆಯಲ್ಲಿ ಮನುಷ್ಯರಿಗೇ ತೊಂದರೆಯಾಗ್ತಿರುವಾಗ ನಾವು ಕಟ್ಟಿ ಹಾಕಿರುವ ಹಸು, ಕರುಗಳನ್ನು ಏನು ಮಾಡ್ಬೇಕು...’
 
ಇದು ನಿಟುವಳ್ಳಿಯ ಯಶೋದಮ್ಮ ಅವರ ಪ್ರಶ್ನೆ. ಇಲ್ಲಿನ ದುರ್ಗಾಂಬಿಕಾ ದೇವಸ್ಥಾನ ಸಮೀಪದ ಕುಂಬಾರ ಓಣಿಯ ಶೆಡ್‌ ಒಂದರದಲ್ಲಿ ಹಲವು ವರ್ಷಗಳಿಂದ ಮೂರು ಹಸು ಹಾಗೂ ಎರಡು ಎಮ್ಮೆಗಳನ್ನು ಸಾಕುತ್ತಿರುವ ಅವರು ನಗರದಲ್ಲಿ ಹೈನುಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ತೆರೆದಿಟ್ಟರು. 
 
‘ಮಳೆಗಾಲದಲ್ಲಾದರೆ ನಗರದ ಸುತ್ತಮುತ್ತ ಹಸಿರು ಚಿಗುರಿ ಮೇವು ಸಿಗುತ್ತದೆ. ಆದರೆ, ಈ ಬಾರಿಯ ಬರಗಾಲದಲ್ಲಿ ಎಲ್ಲಿ ನೋಡಿದರೂ ಒಣಗಿದ ಮರ ಗಿಡಗಳೇ ಕಾಣಿಸುತ್ತಿವೆ. ಅಂಥದ್ದರಲ್ಲಿ ಹಸಿ ಹುಲ್ಲು ಎಲ್ಲಿ ಸಿಗುತ್ತದೆ? ಒಣ ಹುಲ್ಲನ್ನಾದರೂ ಜಾನುವಾರಿಗೆ ಹಾಕೋಣ ಅಂದರೆ, ಅದೂ ನಗರದಲ್ಲಿ ಸಿಗುತ್ತಿಲ್ಲ.

ಸಮೀಪದ ಹಳ್ಳಿಗಳಿಗೆ ಹೋಗಿ ಇಲ್ಲಿಗೆ ತರುವಷ್ಟರಲ್ಲಿ ವೆಚ್ಚ ಒಂದಕ್ಕೆರಡಾಗಿರುತ್ತದೆ. ಹಾಲು ಮಾರಿ ಗಳಿಸಿದ ಅಲ್ಪಸ್ವಲ್ಪ ಆದಾಯವೂ ಅದಕ್ಕೇ ಖರ್ಚಾದರೆ ಜೀವನ ಹೇಗೆ ಸಾಗಿಸುವುದು’ ಎಂದು ಅವರು ಚಿಂತೆ ವ್ಯಕ್ತಪಡಿಸಿದರು.
 
ನಗರದಲ್ಲೂ ಮೇವು ಸಿಗಲಿ: ‘ಹಳ್ಳಿಗಳಲ್ಲಿರುವ ಜಾನುವಾರಿಗೆ ಬೇಸಿಗೆ ಕಾಲದಲ್ಲಿ ಸರ್ಕಾರವೇ ಮೇವು ಒದಗಿಸುತ್ತಿದೆ. ನಗರದಲ್ಲಿರುವ ಹೈನುಗಾರರು ಏನು ತಪ್ಪು ಮಾಡಿದ್ದಾರೆ? ಇಲ್ಲಿಯೂ ಮೇವು ಸಿಗುವಂತೆ ವ್ಯವಸ್ಥೆ ಮಾಡಿಕೊಡಬೇಕು’ ಎಂಬುದು ಅವರ ಒತ್ತಾಯ. 
 
ಈ ಬೇಡಿಕೆಗೆ ದನಿಗೂಡಿಸಿದವರು ಅವರ ಪಕ್ಕದ ಮನೆಯ ಬಸಮ್ಮ. ಮನೆಯ ಸಮೀಪವೇ ಸಣ್ಣ ಶೆಡ್ ಮಾಡಿಕೊಂಡು ಮೂರು ಹಸುಗಳನ್ನು ಅವರು ಸಲಹುತ್ತಿದ್ದಾರೆ. 
 
ನೀರಿಗೂ ಸಮಸ್ಯೆ: ‘ಈ ಬಾರಿ ಬೇಸಿಗೆ ಭಾರೀ ಕಠಿಣ ಇದೆ ಸಾರ್’ ಎನ್ನುತ್ತಾ ಮಾತು ಆರಂಭಿಸಿದ ಅವರು, ‘ನಾವಾದರೂ ಹೊಟ್ಟೆಬಟ್ಟೆಗೆ ಕಡಿಮೆ ಮಾಡಿ ಇರಬಹುದು. ಆದರೆ, ಜಾನುವಾರನ್ನು ಕಟ್ಟಿಹಾಕಿರುವ ಕಾರಣ ಅವುಗಳಿಗೆ ಹೊತ್ತೊತ್ತಿಗೆ ಮೇವು, ನೀರು ಕೊಡಲೇಬೇಕು.

ಇಡೀ ನಗರದಲ್ಲೇ ನೀರಿಗೆ ತೊಂದರೆಯಿದೆ. ಮನುಷ್ಯರಿಗೇ ಸರಿಯಾಗಿ ನೀರು ಸಿಗ್ತಿಲ್ಲ. ಹೀಗಿರುವಾಗ ಹಸುಗಳಿಗೆ ಹೊಂದಿಸುವುದು ದೊಡ್ಡ ಸವಾಲಾಗಿದೆ. ಇಲ್ಲಿರುವ ಒಂದು ಬೋರ್‌ವೆಲ್‌ನಿಂದ ನಾಲ್ಕೈದು ಕೊಡಗಳಷ್ಟು ಮಾತ್ರ ನೀರು ಸಿಗುತ್ತಿದೆ. ಆದರೆ, ಅದು ನಮ್ಮ ಜೀವನಾಧಾರವಾಗಿರುವ ಹಸುಗಳಿಗೆ ಇಡೀ ದಿನಕ್ಕೆ ಸಾಕಾಗುತ್ತಿಲ್ಲ. ಜಾನುವಾರಿನ ಸಲುವಾಗಿ ಪಾಲಿಕೆಯಿಂದಲೇ ನೀರಿನ ವ್ಯವಸ್ಥೆ ಮಾಡಿಸಿಕೊಟ್ಟರೆ ಒಂದಷ್ಟು ಪುಣ್ಯ ಬರುತ್ತಿತ್ತು’ ಎಂದರು.
 
ಇದೇವೇಳೆ ಯಶೋದಮ್ಮ ಮಾತನಾಡಿ ತಾವು ಪಡುತ್ತಿರುವ ಪಡಿಪಾಟಲು ವಿವರಿಸಿದರು. ‘ಕೊಳವೆಬಾವಿಯ ನೀರು ಖಾಲಿಯಾದರೆ ಟ್ಯಾಂಕರ್‌ ತರಿಸಬೇಕಾಗುತ್ತದೆ. ಸುತ್ತಮುತ್ತ ಕಟ್ಟಡ ಕಟ್ಟಿಸುತ್ತಿರುವ ನಿವೇಶನಗಳನ್ನು ಹುಡುಕಿಕೊಂಡು ಹೋಗಿ ಕಾಡಿ–ಬೇಡಿ ಒಂದೆರಡು ಕೊಡ ನೀರು ತಂದು ಜಾನುವಾರಿಗೆ ಕೊಡುತ್ತೇವೆ.

ಆದರೆ, ಇದು ತಾತ್ಕಾಲಿಕ ಪರಿಹಾರವಷ್ಟೇ. ಈಗಿನ ವಾತಾವರಣ ನೋಡಿದರೆ, ಮಳೆ ಹುಯ್ಯಲು ಇನ್ನೂ ಅದೆಷ್ಟು ದಿನಗಳು ಬೇಕೋ ಗೊತ್ತಿಲ್ಲ. ಮಳೆಗಾಗಿ ಕಾಯುವುದೊಂದೇ ನಮಗಿರುವ ದಾರಿ ಎನಿಸುತ್ತಿದೆ’ ಎನ್ನುತ್ತಾ ಕರುವಿಗೆ ಒಂದು ಹಿಡಿ ಒಣ ಮೇವು ನೀಡಿ ತಲೆ ನೇವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT