ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿಪ್ರಿಯರ ಅನ್ನ ದಾಸೋಹ

ಚಂದ್ರವಳ್ಳಿಯ ಅರಣ್ಯ ಪ್ರದೇಶದ ಜೀವಿಗಳಿಗೆ ಆಹಾರ, ನೀರು ಪೂರೈಕೆ
Last Updated 27 ಮಾರ್ಚ್ 2017, 4:46 IST
ಅಕ್ಷರ ಗಾತ್ರ
ಚಿತ್ರದುರ್ಗ: ‘ಇನ್ನೇನು ಅವು ಬಂದುಬಿಡ್ತಾವೆ. ನಡಿ, ನಡಿ.. ಹೋಗೋಣ. ಬೇಗ ಗಾಡಿ ಚಾಲು ಮಾಡು...’ಅನ್ನ, ಹಾಲು ತುಂಬಿದ ಬಕೆಟ್ ಹಿಡ್ಕೊಂಡು ಬಂದ ಚಂದ್ರವಳ್ಳಿಯ ಕಾವಲುಗಾರ ಆನಂದಪ್ಪ ಬೈಕ್  ಏರಿ ಕುಳಿತರು. ಮೆಕ್ಯಾನಿಕ್ ಈಶಣ್ಣ ಬೈಕ್  ಚಾಲೂ ಮಾಡಿದರು. 
 
ಬೈಕ್‌ನಲ್ಲಿ ಹೊರಟಿದ್ದವರನ್ನು ನಿಲ್ಲಿಸಿ, ‘ಈ ಊಟ ತಗೊಂಡು ಎಲ್ಲಿಗೆ ಹೊರಟ್ರಿ’ – ಅಂತ ಕೇಳಿದೆ. ‘ಧವಳ್ಳಪ್ಪನ ಗುಡ್ಡದ ಕೆಳಗೆ ಕೆರೆ ಹಾಸು ಬಂಡೆ ಇದೆಯಲ್ಲಾ  ಅಲ್ಲಿ ಪ್ರಾಣಿ, ಪಕ್ಷಿಗಳು  ಬರ್ತಾವೆ. ಅವುಗಳಿಗೆ ಊಟ ಹಾಕೋಕ್ಕೆ ಹೋಗ್ತಿದ್ದೀವಿ’ ಎಂದರು  ಆನಂದಪ್ಪ. 
 
‘ಮಳೆಯಿಲ್ಲ. ಕಾಡಲ್ಲಿ ಆಹಾರ ಇಲ್ಲ. ಪ್ರಾಣಿಗಳಿಗೆಲ್ಲಿ ಊಟ ಸಿಗಬೇಕು. ಅದಕ್ಕೆ ನಾವೇ ಒಂದು ಐದಾರು ಮಂದಿ ಸೇರಿ, ಬ್ರೆಡ್ಡು, ಅನ್ನ, ಹಾಲು ಹಾಕ್ತಿದ್ದೀವಿ. ನವಿಲು, ಪಕ್ಷಿಗಳು ಬರ್ತಾವೆ. ತಿಂದು ಕೊಂಡು ಹೋಗ್ತಾವೆ’ ಎನ್ನುತ್ತಾ ಆನಂದಪ್ಪನ ಮಾತಿಗೆ ದನಿಗೂಡಿಸಿದರು ಮೆಕ್ಯಾನಿಕ್ ಈಶಣ್ಣ.
 
ಆನಂದಪ್ಪ, ಈಶಣ್ಣ ನಂತಹ ನಾಲ್ಕಾರು ಮಂದಿ ಚಂದ್ರವಳ್ಳಿ ಅರಣ್ಯ ವ್ಯಾಪ್ತಿಯ ಪ್ರಾಣಿಗಳಿಗೆ ‘ಅನ್ನ ದಾಸೋಹ ಮಾಡುತ್ತಾರೆ. ‘ಹೇಗೆ ಆಹಾರ ಹಾಕ್ತೀರಿ’ ಅಂತ ಕೇಳಿದರೆ, ‘ಆ ಬಂಡೆ ಹಾಸಿನ ಮೇಲೆ ಎಲ್ಲ ಆಹಾರ ಇಟ್ಟು, ಒಂದ್ಸಾರಿ ಶಿಳ್ಳೆ  ಹಾಕಿದರೆ ಸಾಕು. ನವಿಲು, ಅಳಿಲು, ಕಾಡು ಕೋಳಿ ಎಲ್ಲ ಬರುತ್ತವೆ. ಹೊಸಬರಿದ್ದರೆ  ಸ್ವಲ್ಪ ಕಷ್ಟ. ಇಲ್ಲ ಅಂದ್ರೆ ಸುಲಭವಾಗಿ ಬಂದು ಆಹಾರ ತಿನ್ನುತ್ತವೆ ಎನ್ನುತ್ತಾರೆ ಆನಂದಪ್ಪ.
 
 ಪ್ರಾಣಿಗಳಿಗೆ ಈ ಅನ್ನ ದಾಸೋಹ ಕಾರ್ಯಕ್ರಮ ನಾಲ್ಕೈದು ತಿಂಗಳ ಹಿಂದೆ ವಾರಕ್ಕೊಮ್ಮೆ ಮಾತ್ರ ನಡೆಯುತ್ತಿತ್ತು. ಈಗ ಕಾಡಿನಲ್ಲಿ ಆಹಾರದ ಪ್ರಮಾಣ ಕಡಿಮೆಯಾಗಿದೆ. ಕುಡಿಯುವ ನೀರಿಗೂ ತತ್ವಾರ ಉಂಟಾಗಿರುವುದನ್ನು ಗಮನಿಸಿ  ನಿತ್ಯ  ಮುಂದುವರಿಸಿದ್ದಾರೆ.
 
ಕಾವಲುಗಾರ ಆನಂದಪ್ಪನ ‘ಪ್ರಾಣಿ ಪ್ರೀತಿ’:
‘ಎರಡು ಕರಡಿಗಳು ಸತ್ತು ಹೋದವು. ಆಗ  ಊಟ ಸೇರಲಿಲ್ಲ. ಜಾಂಬು ಅಂತ ಕರೆದರೆ ಸಾಕು, ಊಟಕ್ಕಾಗಿ ಬರುತ್ತಿದ್ದವು. ಈಗ ಒಂಬತ್ತರಲ್ಲಿ ಏಳೇ ಉಳಿದಿ ರೋದು.. ಈಗ ಅವು ಊಟಕ್ಕೆ ಬರೋದೆ ಬಿಟ್ಟಿದ್ದಾವೆ... ಯಾವ ಪ್ರಾಣಿಗಳೂ ಇಲ್ಲ’

10 ವರ್ಷಗಳಿಂದ ಚಂದ್ರವಳ್ಳಿಯಲ್ಲಿ ಕಾವಲು ಗಾರನಾಗಿರುವ ಆನಂದಪ್ಪ ಬಹಳ ಬೇಸರದಿಂದಲೇ ಮಾತನಾಡಿದರು. ಅವರಿಗೆ ಪ್ರಾಣಿಗಳೆಂದರೆ ಪ್ರೀತಿ. ಚಂದ್ರವಳ್ಳಿ ಅರಣ್ಯದಲ್ಲಿ ವಾಸಿಸುವ ಒಂಬತ್ತು ಕರಡಿಗಳಿಗೆ ರಾತ್ರಿ ವೇಳೆ ಅನ್ನ, ಬೆಲ್ಲ ಕಲಸಿ, ಉಂಡೆ ಮಾಡಿ ಕೊಡುತ್ತಿದ್ದರು.

ಕೆರೆ ಎದುರಿನ ಕಟ್ಟೆ ಮೇಲೆ ಕುಳಿತು, ಅನ್ನ–ಬೆಲ್ಲ ಉಂಡೆ ಮಾಡಿ, ಜಾಂಬು ಅಂತ ಕೂಗಿದರೆ ಸಾಕು. ತಂಡ ತಂಡವಾಗಿ ಬಂದು ಉಂಡೆ ತಿನ್ನುತ್ತಿದ್ದವಂತೆ. ಕಾರ್ತೀಕದಲ್ಲಿ ಬಂಡೆಯ ಕೆಳಗೆ ನೀರು ಕುಡಿಯಲು ಹೋಗಿ ಒಂದು ಕರಡಿ ಜಾರಿ ಬಿದ್ದು ಸತ್ತು ಹೋಯ್ತಂತೆ. ಮತ್ತೊಂದು ಕರಡಿ ಒರೆಕಲ್ಲು  ಸಮೀಪ ಸತ್ತು ಹೋಗಿದೆ.

‘ಸತ್ತೋದ ಕರಡಿ ಶವಾನ ಎಂಟು ಮಂದಿ ಹೊತ್ಕೊಂಡು ಬಂದು, ವಾಯು ವಿಹಾರಿಗಳ ಸಹಕಾರ ದೊಂದಿಗೆ  ನರ್ಸರಿ ಮೇಲ್ಭಾಗದಲ್ಲಿ ದಫನ್ ಮಾಡಲಾಯಿತು. ಅದಕ್ಕೆ ಸಮಾಧಿ ಮಾಡವ್ರೆ. ಅದರ ಮೇಲೆ ಜಾಂಬು, ಜಾಂಬವಂತ ಅಂತ ಹೆಸರು  ಬರದವ್ರೆ.

ಇನ್ನೊಂದು ಕರಡಿ ಸತ್ತಿದ್ದು ಗೊತ್ತಾಗಲಿಲ್ಲ. ಹುಳ ಆಗಿದ್ದವು. ಅಲ್ಲೇ, ಮಣ್ಣಾಗ್ಬಿಡ್ತು. ಇಲಾಖೆ ಯವರಿಗೆ ಫೋನ್ ಮಾಡಿ ದರೂ ಬರಲೇ ಇಲ್ಲ’ ಎಂದು ಬೇಸರ  ವ್ಯಕ್ತಪಡಿಸುತ್ತಾರೆ ಅನಂದಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT