ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ವಿಸ್ತರಣೆ: ಕಳಸದಲ್ಲಿ ಜನರ ಪಡಿಪಾಟಲು

ಏಕಕಾಲಕ್ಕೆ ಎರಡು ರಸ್ತೆಗಳ ವಿಸ್ತರಣೆ ಕಾಮಗಾರಿಯಿಂದ ಸಮಸ್ಯೆ
Last Updated 27 ಮಾರ್ಚ್ 2017, 6:06 IST
ಅಕ್ಷರ ಗಾತ್ರ
ಕಳಸ: ರಸ್ತೆಯ ಎರಡೂ ಬದಿ 5 ಅಡಿ ಆಳದ ಚರಂಡಿಗಳು, ಆ ಚರಂಡಿಗಳಿಗೆ ಹೊಂದಿಕೊಂಡಂತೆಯೇ ಸ್ಥಳೀಯರ ಒಡೆದ ಮನೆಗಳ ಅವಶೇಷಗಳು, ಚರಂಡಿ ದಾಟಿ ತಮ್ಮ ಮನೆ –ಅಂಗಡಿಗೆ ತಲುಪಲು ಒಂದೆರಡು ಅಡಿ ಅಗಲದ ಮರದ ಹಲಗೆಯ ಮೇಲೆ ಸ್ಥಳೀಯರ ಸರ್ಕಸ್‌, ಚರಂಡಿಯ ಒಳಗೆಲ್ಲ ಒಡೆದ ನೀರಿನ ಪೈಪ್‌ಗಳು ಮತ್ತು ಕಿತ್ತು ಬಂದ ದೂರವಾಣಿ ಕೇಬಲ್‌ಗಳು, ಮುಖ್ಯ ರಸ್ತೆಯಲ್ಲಿ ಪದೇ ಪದೇ ಟ್ರಾಫಿಕ್‌ ಜಾಮ್‌. 
 
ಇದು ಕಳಸ ಪಟ್ಟಣದ ಮುಖ್ಯ ರಸ್ತೆ ಮತ್ತು ಮಹಾವೀರ ರಸ್ತೆಯಲ್ಲಿ ಕಂಡು ಬರುತ್ತಿರುವ ಸಾಮಾನ್ಯ ದೃಶ್ಯ. ಪಟ್ಟಣದ ಮುಖ್ಯ ರಸ್ತೆ ಮತ್ತು ಮಹಾವೀರ ರಸ್ತೆಯಲ್ಲಿ ನಡೆಯುತ್ತಿರುವ ಬಾಕ್ಸ್‌ ಚರಂಡಿ ನಿರ್ಮಾಣ ಮತ್ತು ರಸ್ತೆ ವಿಸ್ತರಣೆಯಿಂದ ಜನರಿಗೆ ಆಗುತ್ತಿರುವ ಅನನುಕೂಲದ ಚಿತ್ರಣ ಇಲ್ಲಿದೆ.
 
ಮಹಾವೀರ ರಸ್ತೆಗೆ ₹1ಕೋಟಿ ಮಂಜೂರಾಗಿ ತಿಂಗಳೇ ಕಳೆದಿದ್ದು,  ಮುಖ್ಯ ರಸ್ತೆ ಮತ್ತು ಹೊರನಾಡು ರಸ್ತೆಯ ವಿಸ್ತರಣೆ ಕೆಲಸ ನಡೆದಿರುವ ವೇಳೆಯಲ್ಲೇ ಮಹಾವೀರ ರಸ್ತೆಯಲ್ಲೂ ಕಾಮಗಾರಿ ಆರಂಭವಾಗಿದೆ. ಎರಡೂ ರಸ್ತೆಯಲ್ಲಿ ಒಟ್ಟಿಗೆ ಕೆಲಸ ನಡೆಯುತ್ತಿರುವುದರಿಂದ ವಾಹನಗಳು ಯಾವ ರಸ್ತೆಯನ್ನೂ ಸಲೀಸಾಗಿ ಬಳಸದಂತಾಗಿದೆ.
 
‘ಮಹಾವೀರ ರಸ್ತೆಯ ಕೆಲಸವನ್ನು ಜನವರಿ– ಫೆಬ್ರುವರಿ ತಿಂಗಳಲ್ಲಿ ಮುಗಿಸಿ ಆನಂತರ ಮುಖ್ಯ ರಸ್ತೆ ಒಡೆದಿದ್ದರೆ ಇಷ್ಟು ತೊಂದರೆ ಆಗುತ್ತಿರಲಿಲ್ಲ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭರತ್‌ರಾಜ್‌ ಹೇಳುತ್ತಾರೆ.
 
ಮುಖ್ಯರಸ್ತೆಯಲ್ಲಿನ ಏಕಮುಖ ಸಂಚಾರ ನಿರ್ಬಂಧ ಸಡಿಲಿಸಿರುವು ದರಿಂದ ಮುಖ್ಯ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಕಾಮಗಾರಿಯ ಕಾರಣಕ್ಕೆ ಕಿರಿದಾದ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ನಿವಾರಿಸಲು ಪೊಲೀಸ್‌ ಸಿಬ್ಬಂದಿ ಸದಾ ಕಾಲ ರಸ್ತೆಯಲ್ಲೇ ಬೆವರು ಹರಿಸುವಂತಾಗಿದೆ.
 
ಒಡೆದಿರುವ ನೀರಿನ ಪೈಪ್‌ ದುರಸ್ತಿ ಮಾಡಲು ಗ್ರಾಮ ಪಂಚಾಯಿತಿಯ ನೀರ ಗಂಟಿಗಳಿಗೆ ಸತತ ಕೆಲಸ ತ್ರಾಸ ತಂದಿದೆ. ದೂರವಾಣಿ ಆಪ್ಟಿಕಲ್‌ ಫೈಬರ್‌ ಕೇಬಲ್‌ ಗಳನ್ನು ಚರಂಡಿಯ ಒಳಗೇ ಕುಳಿತು ಜೋಡಿಸುವ ಕೆಲಸವಂತೂ ದೂರ ಸಂಪರ್ಕ ಇಲಾಖೆಗೆ ಸವಾಲೇ ಆಗಿದೆ. ಆ ಸಿಬ್ಬಂದಿಯ ತಾಳ್ಮೆ ಪರೀಕ್ಷೆಯೇ ನಡೆಯುತ್ತಿದೆ.
 
ನೀರಿನ ಪೈಪ್‌ಗಳು ಒಡೆದು ಕುಡಿ ಯುವ ನೀರೂ ಇಲ್ಲದೆ ಸ್ಥಳೀಯರು ಬಳಲುತ್ತಿದ್ದಾರೆ. ‘ರಸ್ತೆ ವಿಸ್ತರಣೆಗೆ ಹೋಲಿಸಿದರೆ ಈ ಸಮಸ್ಯೆ ತಾತ್ಕಾಲಿಕ. ಪೈಪ್‌ಲೈನ್‌ ದುರಸ್ತಿ ಮಾಡಿ ನೀರು ಒದ ಗಿಸಲು ಶ್ರಮಪಡಲಾಗುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್‌ ಹೇಳುತ್ತಾರೆ.
 
ಇನ್ನು ಒಡೆದಿರುವ ಮನೆಗಳ ದುರಸ್ತಿಗೆ ಸ್ಥಳೀಯರು ಅತ್ಯಂತ ಬವಣೆ ಪಡುತ್ತಿದ್ದಾರೆ. ಮರಳಿನ ಕೊರತೆ ದೊಡ್ಡ ತೊಡಕಾಗಿದ್ದು, ಜೊತೆಗೆ ಗಾರೆ ಕೆಲಸ ದವರ ಲಭ್ಯತೆಯೂ ಇಲ್ಲವಾಗಿದೆ. ಕೆಲವರಿಗೆ ತಾವು ಅನೇಕ ವರ್ಷಗಳಿಂದ ಕೂತು ಹರಟೆ ಹೊಡೆಯುತ್ತಿದ್ದ ಕಟ್ಟೆ, ಮೆಟ್ಟಿಲು ಮಣ್ಣುಪಾಲಾದ ಬಗ್ಗೆ ಬೇಸರದ ಭಾವ ಮೂಡುತ್ತಿದೆ.
 
‘ಏಕಕಾಲಕ್ಕೆ 500ಕ್ಕೂ ಹೆಚ್ಚು ಮನೆಗಳು– ಅಂಗಡಿಗಳ ದುರಸ್ತಿ ಮಾಡುವುದೆಂದರೆ ತಮಾಷೆಯ ಸಂಗತಿ ಯಲ್ಲ. ಗಾರೆ ಕೆಲಸದವರಿಗೆ ಈಗ ವಿಪರೀತ ಬೇಡಿಕೆ ಬಂದಿದೆ’ ಎಂದು ಮನೆ ದುರಸ್ತಿಗೆ ಕಾರ್ಮಿಕರು ಸಿಗದೆ ಬೇಸ ತ್ತಿರುವ ಸ್ಥಳೀಯರೊಬ್ಬರು ಹೇಳುತ್ತಾರೆ. ಪ್ರತಿದಿನ ಮಧ್ನಾಹ್ನ ಮಳೆ ಮೋಡ ಆದಾಗ ಒಡೆದ ಮನೆಯ ಮಾಲೀಕರು ‘ಸದ್ಯಕ್ಕೆ ಮಳೆ ಬರದೇ ಇರಲಿ’ ಎಂದು ದೇವರಲ್ಲಿ ಪ್ರಾರ್ಥಿಸು ವಂತಾಗಿದೆ.
 
ಅತ್ಯಂತ ವೇಗವಾಗಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಸ್ಥಳೀಯರು ತೃಪ್ತಿ ಹೊಂದಿದ್ದಾರೆ. ಮುಖ್ಯ ರಸ್ತೆ ಮತ್ತು ಮಹಾವೀರ ರಸ್ತೆ ವಿಸ್ತರ ಣೆಯ ನಂತರ ಸ್ಥಳೀಯರು ಅತ್ಯಂತ ಅನು ಕೂಲದ ನಿರೀಕ್ಷೆಯಲ್ಲಿದ್ದಾರೆ. ಅಲ್ಲಿಯ ವರೆಗೂ ಈ ಪಡಿಪಾಟಲನ್ನು ಅನುಭವಿ ಸದೆ ಬೇರೆ ವಿಧಿ ಇಲ್ಲ ಎಂದು ಜನರು ಹೇಳುತ್ತಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT