ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಶಕದ ರೈಲು ಕನಸು ನನಸು

4 ಬೆಳಿಗ್ಗೆ, ಸಂಜೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ 4 ಮಹಾಮಸ್ತಕಾಭೀಷೇಕಕ್ಕೆ ಸಜ್ಜು 4ರೈಲಿಗೆ ಭವ್ಯ ಸ್ವಾಗತ ನೀಡಿದ ಜನತೆ
Last Updated 27 ಮಾರ್ಚ್ 2017, 6:53 IST
ಅಕ್ಷರ ಗಾತ್ರ
ಶ್ರವಣಬೆಳಗೊಳ:  ದಶಕಗಳ ಬೇಡಿಕೆಯಾಗಿದ್ದ ಯಶವಂತಪುರ–ಹಾಸನ ಮಾರ್ಗದಲ್ಲಿನ ರೈಲು ಸಂಚಾರ ಕೊನೆಗೂ ಈಡೇರಿತು.
 
ಯಶವಂತಪುರ ರೈಲು ನಿಲ್ದಾಣದಲ್ಲಿ ಭಾನುವಾರ ಕೇಂದ್ರ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರು ಇಂಟರ್‌ಸಿಟಿ ರೈಲಿಗೆ ಹಸಿರು ನಿಶಾನೆ ತೋರಿದರು. ಎರಡು ಸ್ಥಳಗಳ ನಡುವಿನ ಪ್ರಯಾಣದ ಅವಧಿ 2 ಗಂಟೆ 45 ನಿಮಿಷ. ರೈಲು ಬೆಳಿಗ್ಗೆ ಹಾಸನದಿಂದ ಯಶವಂತಪುರಕ್ಕೆ ಮತ್ತು ಸಂಜೆ ಯಶವಂತಪುರದಿಂದ ಹಾಸನಕ್ಕೆ ಸಂಚರಿಸಲಿದೆ.
 
ಯಶವಂತಪುರದಿಂದ ಹೊರಟ ರೈಲು ಚಿಕ್ಕಬಾಣವಾರ, ನೆಲಮಂಗಲ, ಕುಣಿಗಲ್‌, ಯಡಿಯೂರು, ಬಿ.ಜಿ.ನಗರ, ಹಿರೀಸಾವೆ, ಶ್ರವಣಬೆಳಗೊಳ, ಚನ್ನರಾಯಪಟ್ಟಣ ಮೂಲಕ ಹಾಸನ ತಲುಪಿತು. ಪ್ರತಿ ನಿಲ್ದಾಣದಲ್ಲೂ ಸಾರ್ವಜನಿಕರು ರೈಲಿಗೆ ಭವ್ಯ ಸ್ವಾಗತ ಕೋರಿದರು.
 
ಹೀಗಾಗಿ ಮಧ್ಯಾಹ್ನ 2.30ಕ್ಕೆ ಹಾಸನ ಬರಬೇಕಿದ್ದ ರೈಲು ಸಂಜೆ 5 ಗಂಟೆಗೆ ಬಂತು. ಶ್ರವಣಬೆಳಗೊಳದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಯಿತು. ನೆರದಿದ್ದವರಿಗೆ ಸಿಹಿ ಮತ್ತು ಹಣ್ಣು ವಿತರಿಸಿ ಸಂಭ್ರಮ ಪಟ್ಟರು. 
 
ಪ್ರಯಾಣಿಕರೊಂದಿಗೆ ಯಶವಂತಪುರದಿಂದ ಸಚಿವ ಎ.ಮಂಜು, ಶಾಸಕರಾದ ಎಚ್‌.ಡಿ.ರೇವಣ್ಣ, ಬಾಲಕೃಷ್ಣ ಸಹ ಪ್ರಯಾಣಿಸಿದರು. ಶ್ರವಣಬೆಳಗೊಳ ಮತ್ತು ಹಾಸನ ರೈಲು ನಿಲ್ದಾಣದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ಪಕ್ಷದ ಪರ ಜಯ ಘೋಷಣೆ ಮೊಳಗಿಸಿದರು. ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ, ಬಾಲಕೃಷ್ಣ ಅವರ ಭಾವಚಿತ್ರಗಳನ್ನು ಪ್ರದರ್ಶಸಿದರು.
 
ರೈಲು ಓಡಾಟದಿಂದ ಮುಂದಿನ ವರ್ಷ ಶ್ರವಣಬೆಳಗೊಳದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕಕ್ಕೆ ಅನುಕೂಲವಾಗಲಿದೆ.  ಉತ್ತರ ಭಾರತ ಸೇರಿದಂತೆ ಹೊರ ರಾಜ್ಯದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವರು ಎಂದರು. 
 
ಸಚಿವ ಎ.ಮಂಜು ಮಾತನಾಡಿ, ಯೋಜನೆ ಅನುಷ್ಠಾನಕ್ಕೆ ಎಚ್‌.ಡಿ.ದೇವೇಗೌಡ, ಮನಮೋಹನ್‌ಸಿಂಗ್‌, ನರೇಂದ್ರ ಮೋದಿ ಅವರು ಅನುದಾನ ನೀಡಿದ್ದಾರೆ. ಇದು ಜನರಿಗೆ ಯುಗಾದಿ ಕೊಡುಗೆ. ಕೇವಲ ₹ 40, 50 ವೆಚ್ಚದಲ್ಲಿ ಬೆಂಗಳೂರಿಗೆ ಬಡವರು ಕೂಲಿ ಕೆಲಸಕ್ಕೆ ಹೋಗಿ ಬರಬಹುದು.

ಮುಂದಿನ ದಿನಗಳಲ್ಲಿ ಪ್ಯಾಸೇಂಜರ್‌ ರೈಲು ಓಡಾಟ ಆರಂಭಗೊಳ್ಳಲಿದೆ. ಈ ಸಂಬಂಧ ರೈಲ್ವೆ ಸಚಿವರ ಜತೆ ಚರ್ಚೆ ನಡೆಸಲಾಗಿದೆ. ಮಂಗಳೂರಿಗೂ ರೈಲು ವಿಸ್ತರಣೆ ಮಾಡಲಾಗುವುದು ಎಂದರು. ₹ 300 ಕೋಟಿಯೊಂದಿಗೆ ಆರಂಭಗೊಂಡ ಯೋಜನೆ ₹ 1200 ಕೋಟಿಗೆ ಮುಕ್ತಾಯಗೊಂಡಿದೆ. ರೈಲು ಓಡಾಟದಿಂದ ಕೈಗಾರಿಕಾ ಕ್ಷೇತ್ರವೂ ಅಭಿವೃದ್ಧಿ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
1996ರಲ್ಲಿ ಯೋಜನೆ ಆರಂಭ
ಎಚ್‌.ಡಿ.ದೇವೇಗೌಡ ಪ್ರಧಾನಿ ಆಗಿದ್ದಾಗ 1996–97ರಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಬಳಿಕ  ಹಣ ಬಿಡುಗಡೆಯ ಕೊರತೆಯಾಗಿ ಕಾಮಗಾರಿ ಕುಂಟುತ್ತಾ ಸಾಗಿತ್ತು.

ನಂತರ ರಾಜ್ಯ ಸರ್ಕಾರ ಶೇಕಡಾ 50ರಷ್ಟು ನಿರ್ಮಾಣ ವೆಚ್ಚವನ್ನು ಭರಿಸಲು ಮುಂದಾಗಿದ್ದರಿಂದ ರೈಲು ಮಾರ್ಗ ನಿರ್ಮಾಣ ವೇಗ ಪಡೆದುಕೊಂಡಿತು. ಈಗ 20 ವರ್ಷಗಳ ಬಳಿಕ ದೇವೇಗೌಡರ ಕನಸಿನ ನೂತನ ರೈಲು ಮಾರ್ಗ ಉದ್ಘಾಟನೆಗೊಂಡಿದೆ.
 
ಕೆಲವು ನಿಮಿಷ ನಿಂತ ರೈಲು
ಹಿರೀಸಾವೆ: ಜನರ ಒತ್ತಾಯಕ್ಕೆ ಮಣಿದ ರೈಲ್ವೆ ಇಲಾಖೆಯ ಅಧಿಕಾರಿಗಳು ಹಿರೀಸಾವೆಯಲ್ಲಿ ಕೆಲವು ನಿಮಿಷ  ಯಶವಂತಪುರ –ಹಾಸನ ಇಂಟರ್ ಸಿಟಿ ರೈಲು ನಿಲ್ಲಿಸಿದರು.
ಇಂಟರ್ ಸಿಟಿ ರೈಲು ನಿಲುಗಡೆಗೆ ಒತ್ತಾಯಿಸಿ ಸ್ಥಳೀಯ ಜನರು ಮಧ್ಯಾಹ್ನ ರೈಲು ಬಂದಾಗ ಮಧ್ಯಾಹ್ನ ರೈಲು ಬರುತ್ತದೆ ಎಂದು ವಿಷಯ ತಿಳಿದ ಸಾವಿರಾರು ಜನರು ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು.
 
 ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ರೈಲು ನಿಲ್ಲಿಸುವಂತೆ ಮನವಿ ಸಲ್ಲಿಸಿದ್ದರು.  ಗ್ರಾಮಸ್ಥರು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ರೈಲಿಗೆ ಸ್ವಾಗತ ಕೋರಿ, ಪುಷ್ಪಮಾಲೆ ಹಾಕಿದರು. ನಂತರ ಶ್ರವಣಬೆಳಗೊಳಕ್ಕೆ ಸಂಚರಿಸಿತು.
 
ಪ್ರತಿ ನಿತ್ಯ ಇಂಟರ್ ಸಿಟಿಯನ್ನು ಹಿರೀಸಾವೆಯಲ್ಲಿ ನಿಲ್ಲಿಸುವಂತೆ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ನಾಗರಿಕರ ಪರವಾಗಿ ರೈತ, ಸಂಘ, ದಲಿತ ಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಮನವಿಗಳನ್ನು  ಸಲ್ಲಿಸಿದರು.ಹಿರೀಸಾವೆ ಪಿಎಸ್ಐ ಜಗದೀಶ್ ಮತ್ತು ರೈಲ್ವೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.
 
 ಜನರ ಸಂತಸ
ಚನ್ನರಾಯಪಟ್ಟಣ:  ಯಶವಂತಪುರ –ಹಾಸನದ ನಡುವೆ ಸಂಚರಿಸುವ ರೈಲು ಭಾನುವಾರ ಪಟ್ಟಣದ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ನೆರೆದಿದ್ದ ಸಾವಿರಾರು ಜನರು ಸಂತಸ ವ್ಯಕ್ತಪಡಿಸಿದರು.
 
ಬೆಳಿಗ್ಗೆಯಿಂದಲೇ ಕುತೂಹಲದಿಂದ ರೈಲು ನಿಲ್ದಾಣದಕ್ಕೆ ಬಂದ ಜನತೆ ಎಷ್ಟು ಗಂಟೆಗೆ ರೈಲು ಆಗಮಿಸುತ್ತದೆ ಎಂದು ವಿಚಾರಿಸುತ್ತಿದ್ದ ದೃಶ್ಯ ಕಂಡು ಬಂತು.

ಭೂಮಿಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ರೈಲು ನಿಲ್ದಾಣದಲ್ಲಿ ತಳಿರು, ತೋರಣ ಕಟ್ಟಿ ಅಲಂಕರಿಸಿದರು. ಮಧ್ಯಾಹ್ನ 3.50ಕ್ಕೆ ಶ್ರವಣಬೆಳಗೊಳದ ಮೂಲಕ ಚನ್ನರಾಯಪಟ್ಟಣದ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ನಿಲ್ದಾಣದಲ್ಲಿ ಸೇರಿದ್ದ  ಜನರು ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು. 
 
ರೈಲುಸಾಗುವ ಮಾರ್ಗದಲ್ಲಿ ಅಲ್ಲಲ್ಲಿ ಜನತೆ ಸೇತುವೆ ಮೇಲೆ, ಹೊಲ,ಗದ್ದೆ, ತೋಟದಲ್ಲಿ ನಿಂತು ಪ್ರಯಾಣಿಕರತ್ತ ಕೈಬೀಸಿದರು. ಅದಕ್ಕೆ ಪ್ರತಿಯಾಗಿ ಪ್ರಯಾಣಿಕರು ಸಹ ಜನರತ್ತ ಕೈಬೀಸಿದರು. 
 
ಸೂಪರ್‌ಫಾಸ್ಟ್‌ ಇಂಟರ್‌ ಸಿಟಿ ರೈಲು ಸೇವೆ ಆರಂಭಿಸಿರುವುದು ಖುಷಿ ತಂದಿದೆ. ಆದರೆ 33 ಕಿಮೀ ದೂರ ಕ್ರಮಿಸಲು ₹ 45 ಟಿಕೆಟ್‌ ದರ ನಿಗದಿಪಡಿಸಿರುವುದು ದುಬಾರಿಯಾಯಿತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. 
 
ಚನ್ನರಾಯಪಟ್ಟಣ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಬೇಕು. ಶೌಚಾಲಯ ಸವಲತ್ತು ಒದಗಿಸಬೇಕು. ಬಿ.ಎಂ. ರಸ್ತೆಯಿಂದ ರೈಲ್ವೆ ನಿಲ್ದಾಣದತ್ತ ಸಾಗುವ ರಾಮೇಶ್ವರ ಬಡಾವಣೆಯ ಪ್ರವೇಶದ್ವಾರದಲ್ಲಿ  ಸ್ವಾಗತ ಕಮಾನ್‌ ಅಳವಡಿಸಬೇಕು ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬಂತು. 
 
ಯಶವಂತಪುರ–ಹಾಸನ ರೈಲು ಓಡಾಟದಿಂದ ಮಹಾಮಸ್ತಕಾಭಿಷೇಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಭೇಟಿ ನೀಡಲು ಅನುಕೂಲವಾಗುತ್ತದೆ.
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಜೈನಮಠ
 
ಸೂಪರ್‌ ಫಾಸ್ಟ್‌ ಇಂಟರ್‌ಸಿಟಿ ರೈಲ್ವೆ ಸೇವೆ ಆರಂಭಿಸಿರು ವುದರಿಂದ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಯಡಿಯೂರು, ಆದಿಚುಂಚನ ಗಿರಿ, ಶ್ರವಣಬೆಳಗೊಳಕ್ಕೆ ಬರುವ ಯಾತ್ರಾರ್ಥಿಗಳಿಗೆ ಪ್ರಯೋಜನವಾಗಿದೆ. 2018ರಲ್ಲಿ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾ ಭಿಷೇಕ ಮಹೋತ್ಸವಕ್ಕೆ ಬರುವ ಪ್ರವಾಸಿಗರಿಗೆ ಪ್ರಯೋಜನ ವಾಗಲಿದೆ.
ಎಸ್‌.ಎನ್‌. ಅಶೋಕ ಕುಮಾರ್‌, ಶ್ರವಣಬೆಳಗೊಳ

ರೈಲ್ವೆ ಸೇವೆಯಿಂದಾಗಿ ಅರಸೀಕೆರೆಯಲ್ಲಿ ವಾಣಿಜ್ಯ ಚಟುವಟಿಕೆಗೆ ಅನುಕೂಲ ವಾಯಿತು. ಅದೇರೀತಿ ಇನ್ನೂ ಮುಂದೆ ಚನ್ನರಾಯ ಪಟ್ಟಣದಲ್ಲಿಯೂ ವಾಣಿಜ್ಯ ಚಟುವಟಿಕೆಗೆ ಉಪಯುಕ್ತವಾಗಲಿದೆ
ಕೆ.ಎಸ್‌. ವಸಂತಕುಮಾರ್‌, ವರ್ತಕ, ಚನ್ನರಾಯಪಟ್ಟಣ

ಕೈಗೆಟುಕುವ ದರದಲ್ಲಿ ಬಡವರು, ರೈತಾಪಿ ವರ್ಗದವರು ರೈಲಿನಲ್ಲಿ ಸಂಚರಿಸಲು ಪ್ರಯೋಜನವಾಗಿದೆ. ರೈತರು ಬೆಳೆದ ಬೆಳೆಯನ್ನು ಬೆಂಗಳೂರಿಗೆ ಕೊಂಡೊಯ್ದು ಮಾರಾಟ ಮಾಡಲು ಅನುಕೂಲವಾಗಿದೆ.
ಮಂಜೇಗೌಡ, ರೈತ ಸಂಘದ ಮುಖಂಡ

ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.  ಹೊರರಾಜ್ಯಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವತ್ತ  ರೈಲ್ವೆ ಇಲಾಖೆ, ಜನಪ್ರತಿನಿಧಿಗಳು ಗಮನಹರಿಸಬೇಕು.
ರಘು, ಅರ್ಚಕಸಂಘದ ರಾಜ್ಯ ನಿರ್ದೇಶಕ, ಚಿಕ್ಕಬಿಳ್ತಿ ಗ್ರಾಮ

21 ವರ್ಷಗಳ ರೈಲಿನ ಕನಸು ನನಸಾಗಿರುವುದು ಸಂತೋಷ ತಂದಿದೆ. ಬೆಂಗಳೂರು ಮತ್ತು ಹಾಸನ ನಡುವೆ ಈ ರೈಲಿನ ಸಂಚಾರದ ಸಮಯ ಮತ್ತು ಟಿಕೆಟ್‌ ದರ ಕಡಿಮೆಯಾಗಿದ್ದು, ಸಾಮಾನ್ಯ ಜನತೆಗೆ ಇದರಿಂದ ತುಂಬಾ ಅನುಕೂಲವಾಗಿದೆ
  ಕೆ.ಜಿ. ಭದ್ರಪ್ರಸಾದ್‌ , ಹಾಸನ
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT