ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಯನದಲ್ಲಿ ಕೌಶಲ ಕಲಿಕೆ ಅಗತ್ಯ

‘ಉನ್ನತ ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಉದ್ಯೋಗಶೀಲತೆ’ ಕುರಿತ ವಿಚಾರ ಸಂಕಿರಣ
Last Updated 27 ಮಾರ್ಚ್ 2017, 7:10 IST
ಅಕ್ಷರ ಗಾತ್ರ
ತುಮಕೂರು: ‘ಜಾಗತಿಕ ಮಟ್ಟದಲ್ಲಿ ವ್ಯವಹರಿಸಲು ಇಂಗ್ಲಿಷ್ ಜತೆಗೆ ಸಂವಹನ ಕಲೆಯೂ ಅತ್ಯಗತ್ಯ’ ಎಂದು ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಡಾ.ಅಬ್ದುಲ್‌ ಅಜೀಜ್‌ ಹೇಳಿದರು.
 
ನಗರದ ಸಿದ್ದಗಂಗಾ ಬಾಲಕರ ಕಾಲೇಜಿನಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಒಕ್ಕೂಟ (ಟುಕ್ಟಾ) ಭಾನುವಾರ ಆಯೋಜಿಸಿದ್ದ ‘ಉನ್ನತ ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಉದ್ಯೋಗಶೀಲತೆ’ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು.
 
‘ಸ್ನಾತಕೋತ್ತರ ಪದವೀಧರರು ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆ, ಡಾಕ್ಟರೇಟ್‌ ಪಡೆದವರು ಡಿ–ದರ್ಜೆ ಕೆಲಸಕ್ಕೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ವಿಷಾದಿಸಿದರು.
‘ಅಧ್ಯಾಪಕರು ವಿಷಯ ಬೋಧನೆಯಲ್ಲಿ ನವನವೀನ ಅಂಶಗಳನ್ನು ಸೇರಿಸಿ, ಪಾಠ ಮಾಡಬೇಕು. ಅಲ್ಲದೇ ಸಾಮಾಜಿಕ ಮೌಲ್ಯ ವೃದ್ಧಿಸಲು ಒತ್ತು ಕೊಡಬೇಕು’ ಎಂದು ಸಲಹೆ ನೀಡಿದರು.
 
‘ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಸರ್ಕಾರಿ ವಲಯದಲ್ಲಿ ಈ ಪ್ರಮಾಣ ಕ್ರಮೇಣ ಕ್ಷೀಣಿಸುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಓದಿನ ಜತೆಗೆ ಕೌಶಲಗಳನ್ನು ಕಲಿಸಬೇಕಾದ ಜವಾಬ್ದಾರಿ ಶಿಕ್ಷಕರು, ಪೋಷಕರ ಮೇಲಿದೆ’ ಎಂದರು.
 
ಕಾಲೇಜು ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಎಚ್‌.ಕುಸುಮಾ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಕೌಶಲ ಅವಶ್ಯಕ. ಓದಿಗೆ ಅನುಗುಣವಾದ ಉದ್ಯೋಗ ಸಿಗುವಂತೆ ವಿದ್ಯಾರ್ಥಿಗಳನ್ನು ಬೆಳೆಸಬೇಕು. ಅಧ್ಯಾಪಕರು ಕೌಶಲಭರಿತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು’ ಎಂದು ಸಲಹೆ ನೀಡಿದರು.
 
‘ತುಮಕೂರು ವಿಶ್ವವಿದ್ಯಾನಿಲಯದಡಿ 89 ಕಾಲೇಜುಗಳು, 1000 ಅಧ್ಯಾಪಕರು ಬರುತ್ತಾರೆ. ಆದರೆ, ವಿಚಾರ ಸಂಕಿರಣಕ್ಕೆ ಬೆರಳೆಣಿಗೆ ಮಂದಿ ಬಂದಿರುವುದು ನೋವಿನ ವಿಚಾರ’ ಎಂದು ಬೇಸರ ವ್ಯಕ್ತಪಡಿಸಿದರು.
 
ತುಮಕೂರು ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ‘ದೇಶದಲ್ಲಿ ಖಾಸಗಿ, ಡೀಮ್ಡ್‌ ಸೇರಿ 799 ವಿಶ್ವವಿದ್ಯಾನಿಲಯಗಳಿವೆ. ಕಾಲೇಜುಗಳು, ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಆದರೂ ಸ್ನಾತಕೋತ್ತರ ಪದವಿ ಪ್ರಮಾಣ ಶೇ 21 ರಷ್ಟಿರುವುದು ವಿಪರ್ಯಾಸ’ ಎಂದರು.
 
‘ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಮಾಹಿತಿ ಸಂವಹನ ತಂತ್ರಜ್ಞಾನವೇ(ಐಸಿಟಿ) ಪರ್ಯಾಯ ಮಾರ್ಗ. ತಂತ್ರಜ್ಞಾನ ಆಧರಿತ ಶಿಕ್ಷಣದಲ್ಲಿ 35 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ದೇಶದ ವಿಶ್ವವಿದ್ಯಾನಿಲಯಗಳಲ್ಲಿ ಶೇ 86 ರಷ್ಟು ಸಾಂಪ್ರದಾಯಿಕ ಶಿಕ್ಷಣ ದೊರೆಯುತ್ತಿದೆ. ಉಳಿದ ಶೇ 14ರಷ್ಟು ಮೂರು ಸ್ತರದ ಶಿಕ್ಷಣ ಲಭಿಸುತ್ತಿದೆ’ ಎಂದು ಹೇಳಿದರು.
 
‘ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ 5000 ಸಾವಿರ ವಿದ್ಯಾರ್ಥಿಗಳಲ್ಲಿ ಶೇ 97 ಮಂದಿ ಸರ್ಕಾರದ ಸವಲತ್ತು ಪಡೆಯುತ್ತಿದ್ದಾರೆ’ ಎಂದರು.
 ಎಫ್‌ಯುಸಿಟಿಎಕೆ ಅಧ್ಯಕ್ಷ ಡಾ. ಎನ್‌.ಬಿ.ಸಂಗಾಪುರ್‌, ಟುಕ್ಟಾ ಅಧ್ಯಕ್ಷ ಡಾ.ತಿಪ್ಪೇಸ್ವಾಮಿ, ಪ್ರೊ.ಸಿ.ಎಚ್‌.ಮುರುಗೇಂದ್ರಪ್ಪ, ತುಮಕೂರು ವಿಶ್ವವಿದ್ಯಾನಿಲಯ ಕಾಲೇಜುಗಳ ಎಸ್‌ಸಿ–ಎಸ್‌ಟಿ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಒ.ನಾಗರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT