ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಂತನಿಗೆ ಜಾತಿ ಇಲ್ಲ

ಜಿಲ್ಲಾ ವೈಷ್ಣವ ಸಮಾವೇಶದಲ್ಲಿ ವಿದ್ವಾಂಸ ಡಾ.ಹ.ರಾ.ನಾಗರಾಜಾಚಾರ್ಯ ಅಭಿಪ್ರಾಯ
Last Updated 27 ಮಾರ್ಚ್ 2017, 7:12 IST
ಅಕ್ಷರ ಗಾತ್ರ
ತುಮಕೂರು: ‘ಭಗವಂತ ಜಾತಿ ನೋಡಲ್ಲ. ನೀತಿಯನ್ನು ಮಾತ್ರ ನೋಡುತ್ತಾನೆ. ಯಾವ್ಯಾವುದೋ ವಿಷಯಗಳ ಬಗ್ಗೆ ತರ್ಕ ಮಾಡಿಕೊಂಡು ಭಗವಂತನಿಂದ ದೂರವಾಗಬಾರದು’ ಎಂದು ವಿದ್ವಾಂಸ ಡಾ.ಹ.ರಾ. ನಾಗರಾಜಾಚಾರ್ಯ ಹೇಳಿದರು.
 
ಭಾನುವಾರ ಮಾರುತಿನಗರದಲ್ಲಿ ಭಗವದ್ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಪ್ರಯುಕ್ತ ಏರ್ಪಡಿಸಿದ್ದ ವೈಷ್ಣವ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
 
‘ರಾಮಾನುಜಾಚಾರ್ಯರು ಸಮಾಜದ ಉದ್ಧಾರಕ್ಕೋಸ್ಕರ 120 ವರ್ಷ ದೇಶದ ಉದ್ದಗಲಕ್ಕೂ ಸಂಚರಿಸಿ ಧರ್ಮಜಾಗೃತಿ ಮೂಡಿಸಿದರು. ಪಾದಯಾತ್ರೆ ಪರ್ಯಟನೆಯಲ್ಲಿ ತುಮಕೂರು ನಗರ ಇರುವ ಪ್ರದೇಶಕ್ಕೂ ಅವರು ಬಂದು ಹೋಗಿದ್ದರು’ ಎಂದು ನುಡಿದರು.
 
ರಾಮಾನುಜಾಚಾರ್ಯರು ಎಂದರೆ ಸ್ಫೂರ್ತಿಯ ತೇಜ. ಜ್ಞಾನ, ವಿಜ್ಞಾನ ಮತ್ತು ಮೋಕ್ಷಜ್ಞಾನದ ಸಾಕಾರ ಮೂರ್ತಿಗಳಾಗಿದ್ದರು. ಭಗವಂತನಿಗಾಗಿ ಬದುಕಿದರೆ ನಿನಗೆ ಆನಂದ ಸಿಗುತ್ತದೆ ಎಂದು ಭಕ್ತರಿಗೆ ತೋರಿಸಿಕೊಟ್ಟವರು. ಅವರು ಜನಿಸಿದ್ದೇ ಭಕ್ತರ ಶ್ರೇಯಸ್ಸಿಗೋಸ್ಕರ ಎಂದು ನುಡಿದರು.
 
ಮಾಜಿ ಸಂಸದ ಜಿ.ಎಸ್.ಬಸವರಾಜ್ ಮಾತನಾಡಿ, ‘ಬಸವಣ್ಣನವರಿಗಿಂತ ಪೂರ್ವದಲ್ಲಿಯೇ 11ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆಗೆ ರಾಮಾನುಜಾಚಾರ್ಯರು ಶ್ರಮಿಸಿದ್ದರು ಎಂದು ವಿದ್ವಾಂಸರು ತಿಳಿಸಿದ್ದಾರೆ.  ಜಾತಿ ರಹಿತ ಸಮಾಜ ಕಟ್ಟಲು ಆಗಿನ ಕಾಲದಲ್ಲಿಯೇ ದಲಿತರಿಗೆ ದೀಕ್ಷೆ ಕೊಟ್ಟು ಹಿಂದು ಧರ್ಮ ರಕ್ಷಣೆ ಮಾಡುವ ಕೆಲಸ ಮಾಡಿದ್ದರು’ ಎಂದು ವಿವರಿಸಿದರು.
 
‘ಯುವಕರಿಗೆ ಧರ್ಮ, ಸಂಸ್ಕಾರದ ಬಗ್ಗೆ ಹೇಳಿಕೊಡುವ ಪರಿಪಾಠ ಕಡಿಮೆಯಾಗುತ್ತಿದೆ. ಇದರಿಂದ ದಾರಿ ತಪ್ಪಿ ಹೋಗುವ ಆತಂಕ ಎದುರಾಗಿದೆ. ಇದನ್ನು ಪಾಲಕರು ಎಚ್ಚರಿಕೆಯಿಂದ ನಿಭಾಯಿಸಬೇಕು’ ಎಂದು ಹೇಳಿದರು.
 
ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ‘ವೈಷ್ಣವ ಸಮಾಜ ಚಿಕ್ಕ ಸಮಾಜ ಎಂದು ಭಾವಿಸಬೇಕಿಲ್ಲ. ಚಿಕ್ಕ ಸಮಾಜವಾದರೂ  ಸರ್ವ ಸಮುದಾಯಗಳನ್ನು ದೊಡ್ಡದಾಗಿಸುವ ಶಕ್ತಿ ಈ ಸಮಾಜಕ್ಕೆ ಇದೆ. ಈ ಸಮಾಜದ ಅಭಿವೃದ್ಧಿಗೆ ಸದಾ ಸಹಾಯ, ಸಹಕಾರ ಇರುತ್ತದೆ’ ಎಂದು ತಿಳಿಸಿದರು.
 
ರಾಜ್ಯ ವೈಷ್ಣವ ಸಂಘದ ಅಧ್ಯಕ್ಷ ಎನ್.ಎಲ್.ನಾರಾಯಣಸ್ವಾಮಿ ಮಾತನಾಡಿ,  ‘ಗುರು, ಗುರಿ ಇಲ್ಲದೇ ಇದ್ದ ವೈಷ್ಣವ ಸಮಾಜಕ್ಕೆ ರಾಮಾನುಜಾಚಾರ್ಯರು 11ನೇ ಶತಮಾನದಲ್ಲಿ ಗುರುವಾಗಿ ಬಂದರು. ವಿಶೇಷವಾಗಿ ನಮ್ಮ ರಾಜ್ಯದಲ್ಲಿಯೇ ಹೆಚ್ಚು ಪಾದಯಾತ್ರೆ ಮಾಡಿ ಈ ವೈಷ್ಣವ ಸಮುದಾಯದ ಶ್ರೇಷ್ಠತೆಯನ್ನು ತಿಳಿಸಿಕೊಟ್ಟರು ’ಎಂದರು.
 
‘ಸಮುದಾಯದ ಏಳ್ಗೆಗೆ ಸಂಘಟಿತರಾಗಬೇಕಿದೆ. ಮೇಲುಕೋಟೆ ತಿರುನಾರಾಯಣಪುರ ಯದುಗಿರಿಮಠದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕಿದೆ. ಪೀಠಾಧೀಶರಾದ ಯತಿರಾಜ ನಾರಾಯಣ ರಾಮಾನುಜ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಿದೆ’ ಎಂದು ತಿಳಿಸಿದರು.
 
ಮೇಲುಕೋಟೆ ತಿರುನಾರಾಯಣಪುರ ಯದುಗಿರಿಮಠದ ಯತಿರಾಜ ನಾರಾಯಣ ರಾಮಾನುಜ ಸ್ವಾಮೀಜಿ, ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಅಭಿವೃದ್ಧಿ ರೆವಲ್ಯೂಷನ್ ಫೋರಂನ ಸಂಚಾಲಕ ರಮೇಶ್ ಕುಂದರನಹಳ್ಳಿ ಮಾತನಾಡಿದರು.  ಲಕ್ಷ್ಮೀನಾರಾಯಣ ಅವರು ಬರೆದ ರಾಮಾನುಜರ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಮಾಡಲಾಯಿತು. 
 
 ಜಿಲ್ಲಾ ಘಟಕದ ಅಧ್ಯಕ್ಷರಾದ ಚಿನ್ನ ಗೋಪಾಲಕೃಷ್ಣ,  ಗೌರವಾಧ್ಯಕ್ಷ ಟಿ.ಎಸ್.ರಾಮಚಂದ್ರ, ಕಾರ್ಯದರ್ಶಿ ಕೆ.ವೆಂಕಟೇಶ್, ಎಚ್.ಎಸ್. ದೇವರಾಜ್, ಸಾಲಕಟ್ಟಿ ಶ್ರೀನಿವಾಸ್, ದಯಾನಂದಮೂರ್ತಿ, ಶ್ರೀನಾಥ್ ಇದ್ದರು. ಡಾ.ನರಸಿಂಹನ್ ಸ್ವಾಗತಿಸಿದರು. ಸುರೇಂದ್ರನಾಥ್ ನಿರೂಪಿಸಿದರು.
 
ಧರ್ಮದ ಬಗ್ಗೆ ತಪ್ಪು ಕಲ್ಪನೆ ಮೂಡಿಸದಿರಿ
‘ಕೆಲ ಸಾಹಿತಿಗಳು ತಿಳಿಗೇಡಿಗಳಂತೆ ವರ್ತಿಸುತ್ತಿದ್ದು, ಧರ್ಮದ ಬಗ್ಗೆ ತಪ್ಪು ಕಲ್ಪನೆ ಮೂಡಿಸಿ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಮನೆಯಲ್ಲಿ ಮಾತ್ರ ತಿರುಪತಿ ವೆಂಕಟರಮಣನ ಪೂಜೆ ಮಾಡುತ್ತಾರೆ. ಇದೆಂತಹ ನಿಲುವು? ಧರ್ಮ ಸಹಿಷ್ಣುತೆ ಇರಬೇಕು’ ಎಂದು ಮಾಜಿ ಸಂಸದ ಜಿ.ಎಸ್. ಬಸವರಾಜ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT