ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧ ಶತಮಾನದಿಂದ ಬತ್ತದ ಬಾವಿ

ಬಂಡೆಪಾಳ್ಯದಲ್ಲಿ ನೀರಿನ ಒರತೆ, ಮೊಗೆದಷ್ಟು ನೀರು
Last Updated 27 ಮಾರ್ಚ್ 2017, 7:14 IST
ಅಕ್ಷರ ಗಾತ್ರ
ತುಮಕೂರು: ಬಿರು ಬಿಸಿಲು, ಸತತ ಬರದಿಂದ ಅಂತರ್ಜಲ ಪಾತಾಳ ಸೇರಿದೆ. ಕೊಳವೆ ಬಾವಿಗಳು ಬತ್ತುತ್ತಿದ್ದು, ಕೆರೆ ಕುಂಟೆಗಳು ಒಣಗಿವೆ. ಎಲ್ಲೆಡೆ ನೀರಿಗೆ ಹಾಹಾಕಾರ ಎದುರಾಗಿದೆ. ಇಂತಹ ಭೀಕರ ಜಲಕ್ಷಾಮದ ನಡುವೆಯೂ ನಗರದ 34ನೇ ವಾರ್ಡ್‌ ಬಂಡೆಪಾಳ್ಯದ ಬಾವಿಯಲ್ಲಿ ನೀರು ಬತ್ತಿಲ್ಲ.
 
ಸಿದ್ದಗಂಗಾ ಮಠದ ನೌಕರರ ವಸತಿ ಗೃಹದಲ್ಲಿರುವ ಈ ಬಾವಿಯಲ್ಲಿ ನೀರು ತುಂಬಿದೆ. ಅರ್ಧ ಶತಮಾನ ಕಳೆದರೂ ನೀರು ಬತ್ತದಿರುವುದು ಈ ತೆರೆದ ಬಾವಿಯ ವಿಶೇಷವಾಗಿದೆ. 
 
ಬಂಡೆಪಾಳ್ಯ, ಶ್ರೀನಗರ ಬಡಾವಣೆಯ ಜನರು ಹಗ್ಗದ ನೆರವಿನಿಂದ ಬಿಂದಿಗೆಯಲ್ಲಿ ನೀರು ಸೇದಿಕೊಂಡು ಹೋಗುತ್ತಾರೆ. 30–40 ಅಡಿ ಆಳದ ಈ ಬಾವಿಯಲ್ಲಿ ಸದಾ ಬಸಿ ನೀರು (ಜೋಪು) ಉಕ್ಕುತ್ತಿರುತ್ತದೆ.
 
ಸಿದ್ದಗಂಗಾಮಠದ ಸುತ್ತಮುತ್ತ ಮೈದಾಳ, ಬೆಳಗುಂಬ, ದೇವರಾಯನದುರ್ಗದ ನಾಯಕನ ಕೆರೆಗಳಿವೆ. ಬಹುತೇಕ ಕೆರೆಗಳು ಎತ್ತರ ಪ್ರದೇಶದಲ್ಲಿರುವುದರಿಂದ ತೆರೆದ ಬಾವಿಯಲ್ಲಿ ಬಸಿ ನೀರು ಸಂಗ್ರಹವಾಗುತ್ತಿದೆ. ಈ ನೀರನ್ನು ನಿತ್ಯ ಕರ್ಮಗಳಿಗೆ ಬಳಸಬಹುದಾಗಿದೆ. ಕುಡಿಯುವ ನೀರಿಗೆ ಪಾಲಿಕೆಯ ನೀರನ್ನೇ ಆಶ್ರಯಿಸಬೇಕಾಗಿದೆ ಎಂದು ವಸತಿ ಗೃಹದಲ್ಲಿರುವ ಮಠದ ನೌಕರ ಗುರುಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.
 
ಇದೇ ಬಡಾವಣೆಯ ಗಣೇಶ ದೇವಸ್ಥಾನ ಹಿಂಬದಿಯಲ್ಲಿ ಮತ್ತೊಂದು 50 ಅಡಿ ಆಳದ ತೆರೆದ ಬಾವಿ ಇದೆ. ಅಲ್ಲಿಯೂ ನೀರಿದೆ. ಆದರೆ, ಸೂಕ್ತ ನಿರ್ವಹಣೆ ಇಲ್ಲದ ಕಾರಣ ಅಲ್ಲಿನ ನೀರು ಬಳಕೆಗೆ ಯೋಗ್ಯವಾಗಿಲ್ಲ.
 
ಸಿದ್ದಗಂಗಾ ಮಠದ ಗೋಶಾಲೆ ಸಮೀಪ ದೊಡ್ಡ ತೆರೆದ ಬಾವಿ ಇದೆ. ಈ ಬಾವಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದ್ದು, ಮಲೀನ ಗೊಂಡಿದೆ. ಈ ನೀರನ್ನು ಗೋಶಾಲೆ ಸ್ವಚ್ಛತೆಗೆ, ಗಿಡಗಂಟಿಗಳಿಗೆ ಪಂಪ್‌ಸೆಟ್‌ ಮೂಲಕ ಹರಿಸಲಾಗುತ್ತಿದೆ.
 
ಸ್ವಚ್ಛತೆಗೆ ಆದ್ಯತೆ: ಬಂಡೆಪಾಳ್ಯದ ಬಾವಿಯನ್ನು ವಸತಿ ಗೃಹದ ನೌಕರರು ಹಾಗೂ ಸ್ಥಳೀಯರು  ಸಂರಕ್ಷಿಸಿದ್ದು, ತಿಳಿ ನೀರು ಸೊಂಪಾಗಿದೆ. ವಸತಿ ಗೃಹದ ಕಾಂಪೌಂಡ್‌ಗೆ ಹೊಂದಿಕೊಂತಿರುವ ಈ ಬಾವಿಯ ಸುತ್ತಮುತ್ತ ಶುಚಿತ್ವ ಕಾಪಾಡಲಾಗಿದೆ.

ವಾಹನ ತೊಳೆಯುವವರು ಇದೇ ಬಾವಿಯಿಂದ ನೀರು ಸೇದಿಕೊಂಡು ಹೋದರೂ ಗಲೀಜು ಆಗದಂತೆ ನೋಡಿಕೊಳ್ಳಲಾಗಿದೆ. 60 ವರ್ಷದಿಂದಲೂ ಒಮ್ಮೆಯೂ ಬಾವಿಯಲ್ಲಿ ನೀರು ಬತ್ತಿಲ್ಲ. ಮೊಗೆದಷ್ಟು ನೀರು ಸಿಗುತ್ತಿದೆ. ಇಲ್ಲಿನ ಜನರು ಬಳಸಲು ಬಹುತೇಕ ಇದೇ ನೀರನ್ನು ಅವಲಂಬಿಸಿದ್ದಾರೆ ಎಂದು ಗುರುಪ್ರಸಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT