ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಸ್ತುಕ್ರಮಕ್ಕೆ ಬಿಇಒ, ಡಿಡಿಪಿಐ ಮೀನಮೇಷ

ನಿಯಮ ಉಲ್ಲಂಘಿಸಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಶಿಕ್ಷಕರು, ನಕಲಿ ಸಹಿ ಮಾಡಿ ವಂಚನೆ
Last Updated 27 ಮಾರ್ಚ್ 2017, 7:17 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ತಾಲ್ಲೂಕಿನ ಬನ್ನಿಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಾನೂನುಬಾಹಿರವಾಗಿ ಏಳು ಶಿಕ್ಷಕರು ಭಾಗವಹಿಸಿದ್ದು ಮತ್ತು ಶಿಕ್ಷಕರೊಬ್ಬರ ನಕಲಿ ಸಹಿ ಮಾಡಿ ಸಂಭಾವನೆ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. 
 
ತಪ್ಪಿತಸ್ಥ ಶಿಕ್ಷಕರ ವಿರುದ್ಧ ಯಾರು ಕ್ರಮ ಜರುಗಿಸಬೇಕು ಎನ್ನುವ ವಿಚಾರದಲ್ಲಿಯೇ ಅಧಿಕಾರಿಗಳಲ್ಲಿ ಗೊಂದಲ ಮನೆ ಮಾಡಿದೆ. ವಂಚನೆ ನಡೆದು ವರ್ಷ ಸಮೀಪಿಸುತ್ತ ಬಂದಿದೆ.

ಪ್ರಕರಣ ಅಧಿಕಾರಿಗಳ ಗಮನಕ್ಕೆ ಬಂದು ಕೆಲ ತಿಂಗಳುಗಳೇ ಕಳೆದಿವೆ. ಇಷ್ಟಾದರೂ ಈವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ), ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಡಿಡಿಪಿಐ) ಕ್ರಮ ಜರುಗಿಸಿಲ್ಲ. ಇದು ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತಿದೆ.
 
‘ಶಿಕ್ಷಕರು ಹಾಲಿನ ಸಂಘದಿಂದ ಹಣ ಪಡೆದಿದ್ದಾರೆ. ನಮ್ಮ ಇಲಾಖೆಯಲ್ಲಿ ದುರುಪಯೋಗದ ಕೆಲಸ ಮಾಡಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಯಾರು ಕ್ರಮಕೈಗೊಳ್ಳಬೇಕು ಎನ್ನುವ ಬಗ್ಗೆ ಗೊಂದಲವಿದೆ’ ಎನ್ನುತ್ತಾರೆ ಬಿಇಒ ಎನ್.ಶ್ರೀಕಂಠ.  
 
ಯಾರದು ಸತ್ಯ? ಯಾರದು ಸುಳ್ಳು?: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು  ಕಚೇರಿಗೆ ಬಂದು ಕೆಲವು ಶಿಕ್ಷಕರು ಗಲಾಟೆ ಮಾಡಿರುವ ಬಗ್ಗೆ ಡಿಡಿಪಿಐ ಕಚೇರಿಗೆ ಮಾಹಿತಿ ಕಳುಹಿಸಲಾಗಿದೆ ಎಂದು ಬಿಇಒ ಹೇಳುತ್ತಾರೆ.  ಆದರೆ ಈ ಕುರಿತು ಡಿಡಿಪಿಐ ಅಶ್ವತ್ಥರೆಡ್ಡಿ ಅವರನ್ನು ಪ್ರಶ್ನಿಸಿದರೆ, ‘ನೀವು ಹೇಳುವ ಪ್ರಕರಣ ನನಗೆ ಗೊತ್ತಿಲ್ಲ. ಗೊತ್ತಿದ್ದರೆ ನಾನು ಸುಮ್ಮನಿರುತ್ತಿರಲಿಲ್ಲ’ ಎಂದು ಹೇಳಿದರು. 
 
‘ ಶಿಕ್ಷಕರು ಗಲಾಟೆ ಮಾಡಿದ್ದು ನನಗೆ ಗೊತ್ತಿಲ್ಲ. ನನಗೆ ಅಲ್ಲಿಂದ ಯಾವುದೇ ಪತ್ರವೂ ಬಂದಿಲ್ಲ. ಬಿಇಒ ಕಚೇರಿಯಿಂದ  ವರದಿ ತರಿಸಿಕೊಂಡು ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ತಿಳಿಸಿದರು. 
 
‘ಇಲಾಖೆಯ ಅನುಮತಿ ಪಡೆಯದೆ ಶಿಕ್ಷಕರು ಚುನಾವಣೆಗೆ ಹೋಗಿರುವ ಬಗ್ಗೆ ಬಿಇಒ ಕ್ರಮಕೈಗೊಳ್ಳಬೇಕು. ಪ್ರಾಥಮಿಕ ಶಾಲೆ ಶಿಕ್ಷಕರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಅಧಿಕಾರ ಅವರಿಗೆ ಇದೆ’ ಎಂದರು.
 
ಈ ಕುರಿತು ಬಿಇಒ ಅವರನ್ನು ಪ್ರಶ್ನಿಸಿದಾಗ ‘ನನಗೆ 2001ರ ನಂತರ ನೇಮಕಗೊಂಡ ಶಿಕ್ಷಕರ ವಿರುದ್ಧ ಮಾತ್ರ ಕ್ರಮ ಜರುಗಿಸುವ ಅಧಿಕಾರವಿದೆ’ ಎಂದು ಹೇಳಿದರು. ‘ದಿನೇ ದಿನೇ ಸರ್ಕಾರಿ ಶಾಲೆಗಳ ಶಿಕ್ಷಣ ಗುಣಮಟ್ಟ ಕುಸಿಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಖಾಸಗಿ ಶಾಲೆಗಳ ಪೈಪೋಟಿ ನಡುವೆ ಸರ್ಕಾರಿ ಶಾಲೆಗಳು ಕದ ಮುಚ್ಚುತ್ತಿವೆ. 
 
ಇಂತಹ ಪೈಪೋಟಿ ಸಂದರ್ಭದಲ್ಲಿಯೇ ಪ್ರಾಥಮಿಕ ಶಾಲೆಯ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವುದು ಬಿಟ್ಟು, ಚುನಾವಣೆಗಳ ಹೆಸರಿನಲ್ಲಿ ಊರೂರು ಸುತ್ತಿ ದುಡ್ಡು ವಸೂಲಿ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ. ಸಂಬಂಧಪಟ್ಟವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಪ್ರಶಾಂತ್ ನಗರ ನಿವಾಸಿ ವಿಜಯ್‌ ಆಗ್ರಹಿಸಿದರು.
 
ಪೊಲೀಸ್ ಠಾಣೆಯಲ್ಲೇ ದೂರಿನ ಪ್ರತಿ ಕಾಣೆ!
ಬಿಇಒ ಕಚೇರಿಯಲ್ಲಿ ಶಿಕ್ಷಕರು  ಗಲಾಟೆ ಮಾಡಿದ ಬಗ್ಗೆ ಫೆಬ್ರುವರಿ 1ರಂದು ಗ್ರಾಮಾಂತರ ಠಾಣೆಗೆ ಬಿಇಒ ದೂರು ಸಲ್ಲಿಸಿದ್ದಾರೆ. ಆದರೆ ಪೊಲೀಸರು ಈವರೆಗೆ ಪ್ರಕರಣ ದಾಖಲಿಸಿಕೊಂಡಿಲ್ಲ!. ‘ಪ್ರಜಾವಾಣಿ’ಯಲ್ಲಿ ಈ ಪ್ರಕರಣ ಕುರಿತು ಇತ್ತೀಚೆಗೆ ವಿಶೇಷ ವರದಿ ಪ್ರಕಟಿಸಿತ್ತು.

ಸೋಜಿಗದ ವಿಷಯವೆಂದರೆ ಆ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣ ದಾಖಲಿಸಲು ದೂರಿನ ಪತ್ರಿಗಾಗಿ ಠಾಣೆಯಲ್ಲಿ ಹುಡುಕಾಡಿದಾಗ ಆ ಪ್ರತಿಯೇ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ! ಹೀಗಾಗಿ ಠಾಣೆಯ ಸಿಬ್ಬಂದಿ ಬಿಇಒ ಕಚೇರಿಗೆ ಹೋಗಿ, ನೀವು ಕೊಟ್ಟ ದೂರಿನ ಪ್ರತಿ ಕಳೆದುಹೋಗಿದೆ ಎಂದು ಮತ್ತೊಮ್ಮೆ ದೂರು ಬರೆಸಿಕೊಂಡು, ದಾಖಲೆಗಳನ್ನು ಪಡೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT