ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ, ಜಾತಿವಾದದಿಂದ ದೇಶ ರಕ್ಷಿಸಿ

‘ಜಾನಪದ ಸಿರಿ ಸಡಗರ’ಕ್ಕೆ ಸಮಾರೋಪ; ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅಭಿಪ್ರಾಯ
Last Updated 27 ಮಾರ್ಚ್ 2017, 8:43 IST
ಅಕ್ಷರ ಗಾತ್ರ
ಬೆಳಗಾವಿ: ಭ್ರಷ್ಟಾಚಾರ, ಜಾತಿವಾದ, ಅಪ್ರಾಮಾಣಿಕತೆ, ಸ್ವಜನ ಪಕ್ಷಪಾತ­ಗಳಿಂದ ದೇಶವನ್ನು ಉಳಿಸಲು ಯುವ­ಜನರು ಮುಂದಾಗಬೇಕು ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು. 
 
ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ 11ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಕುಮಾರಗಂಧರ್ವ ರಂಗ­ಮಂದಿ­ರ­ದಲ್ಲಿ ಭಾನುವಾರ ನಡೆದ ‘ಜಾನಪದ ಸಿರಿ ಸಡಗರ’ ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಹಾಗೂ ಪ್ರಶಸ್ತಿ ಪ್ರದಾನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 
 
‘ರಾಜಕೀಯವೊಂದನ್ನು ಬಿಟ್ಟು ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಒಂದಿಷ್ಟು ಪ್ರಾಮಾಣಿಕರು ಸಿಗುತ್ತಾರೆ. ಅವರೇ ಈ ದೇಶದ ಆಸ್ತಿ, ಅಂಥವರು ದೇಶದ ಭವಿ­ಷ್ಯ­ಕ್ಕಾಗಿ ಶ್ರಮಿಸಬೇಕಾಗಿದೆ’ ಎಂದರು.
 
‘ರೈತರು, ಪೊಲೀಸರು ಸೇರಿ ಎಲ್ಲಾ ಕ್ಷೇತ್ರದಲ್ಲಿ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಆದರೆ, ರಾಜ­ಕಾರ­ಣ­ದಲ್ಲಿ ಏಕೆ ನಡೆಯುವುದಿಲ್ಲ? ನಿರ್ಲಜ್ಜತನ, ಅಪ್ರಾಮಾಣಿಕತೆ, ಭ್ರಷ್ಟಾಚಾರ­ಗಳಿಂದ ರಾಜಕಾರಣಿಗಳು ದೇಶವನ್ನು ಹಾಳು ಮಾಡುತ್ತಿದ್ದಾರೆ.

ಇದನ್ನು ತಡೆ­ಯಲು ಯುವಜನರು ಪ್ರಾಮಾಣಿಕತೆ­ಯಿಂದ ಮುಂದೆ ಬರಬೇಕು’ ಎಂದು ಹೇಳಿ­ದರು. ‘ಕರ್ನಾಟಕದಲ್ಲಿ ಕನ್ನಡ ಉಳಿ­­ಸುವ ಕಾರ್ಯ ಸತತವಾಗಿ ನಡೆಯಬೇಕು’ ಎಂದರು. 
 
ಅಲ್ಲಿನ ಜ್ಞಾನವನ್ನೂ ನೀಡಬೇಕು 
‘ತ್ರಿಪುರಾ ಮುಖ್ಯಮಂತ್ರಿ ಮಾಣಿಕ ಸರ್ಕಾರ ಅವರಂತೆ ಕರ್ನಾಟಕದಲ್ಲಿ ಆಡಳಿತ ನಡೆಸಲು ಏಕೆ ಸಾಧ್ಯವಾಗಿಲ್ಲ’ ಎಂದು ಪ್ರಶ್ನಿಸಿದ ಅವರು, ‘ಮಾಣಿಕ ಸರ್ಕಾರ ಅವರು ಎಲ್ಲರಿಗೂ ಸ್ಫೂರ್ತಿಯಾಗಬೇಕು’ ಎಂದರು. 
 
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಆರ್‌. ರವಿಕಾಂತೇಗೌಡ ಮಾತನಾಡಿ, ‘ಕರ್ನಾಟ­ಕದಲ್ಲಿ ಕನ್ನಡ ಬೆಳೆಸಲು ಬೇರೆ ಭಾಷೆಗಳಲ್ಲಿಯ ವಿಷಯ, ಜ್ಞಾನವನ್ನು ನಮ್ಮ ಮಕ್ಕಳಿಗೆ ಕನ್ನಡದಲ್ಲಿಯೇ ನೀಡ­ಬೇ­ಕಾಗಿದೆ. ಅನಗತ್ಯ ಡಬ್ಬಿಂಗ್‌ ವಿವಾ­ದದಿಂದ ಕನ್ನಡಿಗರು ಕನ್ನಡದಲ್ಲಿ ಜ್ಞಾನ ಪಡೆಯುವ ಕೊರತೆ ಅನುಭವಿ­ಸುತ್ತಿದ್ದಾರೆ’ ಎಂದು ವಿಷಾದಿಸಿದರು.
 
‘ರಾಜ್ಯದಲ್ಲಿ ಡಬ್ಬಿಂಗ್‌ ನಿಷೇಧ ಮಾಡುವುದು ಸರಿಯಲ್ಲ. ಬೇರೆ ಬೇರೆ ಭಾಷೆಗಳ ಜ್ಞಾನವನ್ನು ಕನ್ನಡಿಗರಿಗೆ ಒದಗಿಸಬೇಕಾದರೆ ಡಬ್ಬಿಂಗ್‌ ಅನಿ­ವಾರ್ಯ. ಹಿಂದೆ ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಬಂಗಾಳದಿಂದ ಕನ್ನಡಕ್ಕೆ ಬಂದ ಜ್ಞಾನ ಕನ್ನಡಿಗರಿಗೆ ಶಕ್ತಿ ನೀಡಿತ್ತು. ಕನ್ನಡ ಸಂಸ್ಕೃತಿಗೆ ಅನೇಕ ಸವಾಲುಗಳ ನಡುವೆಯೂ ಒಳ್ಳೆಯ ಭವಿಷ್ಯವಿದೆ. ಆದರೆ ಅದನ್ನು ಜನಕ್ಕೆ ತಿಳಿಸುವ ಕಾರ್ಯ  ನಿರಂತರವಾಗಿ ನಡೆಯ­ಬೇಕು’ ಎಂದರು.
 
ಡಬ್ಬಿಂಗ್‌ ಅನಿವಾರ್ಯ
‘ಮಕ್ಕಳಿಗೆ ಕನ್ನಡದಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ವಿಷಯಗಳನ್ನು ಮನವರಿಕೆ ಮಾಡಿಕೊಡಬೇಕಾಗಿದೆ, ಅದಕ್ಕೆ ಡಬ್ಬಿಂಗ್‌ ಅನಿವಾರ್ಯ. ರಾಜ್ಯ, ಕನ್ನಡದ ಹಿತದೃಷ್ಟಿಯಿಂದ ಡಬ್ಬಿಂಗ್‌ಗೆ ಅವಕಾಶ ಕೊಡಬೇಕು’ ಎಂದರು.
 
ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಧೀಕ್ಷಕ ಎಂಜಿನಿಯರ್‌ ಎಸ್‌. ಸುರೇಶ, ಬೆಂಗಳೂರು ಸಾರಿಗೆ ಸಂಸ್ಥೆಯ ಅಧ್ಯಕ್ಷ ನಾಗರಾಜ ಯಾದವ, ಕೆಎಲ್‌ಇ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ಸಮಾಜ ಸೇವಕ ವೀರೇಶ ಕಿವಡಸಣ್ಣವರ ಇದ್ದರು. 
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ರಾಷ್ಟ್ರ ಭೂಷಣ, ಕರ್ನಾಟಕ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
 
ಧಾರವಾಡದ ಉಸ್ತಾದ ಹಫೀಜ್‌ ಬಾಲೇಖಾನ್‌ ಅವರಿಂದ ಸಿತಾರ್‌ ವಾದನ, ವಚನ ಗಾಯನ ಮತ್ತು ರವೀಂದ್ರ ಸೊರಗಾಂವಿ ಅವರಿಂದ ತತ್ವ ರಸಾನುಭವ ಕಾರ್ಯಕ್ರಮ ನಡೆಯಿತು. ಸಿರಿಗನ್ನಡ ರಾಷ್ರೀಯ ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ ಸ್ವಾಗತಿಸಿದರು. ಬಸವರಾಜ ಕುಪ್ಪಸಗೌಡರ, ಮೈತ್ರೇಯಿಣಿ ಗದಿಗೆಪ್ಪಗೌಡರ ಕಾರ್ಯಕ್ರಮ ನಿರೂಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT