ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿಲು ಮುಚ್ಚಿರುವ ಯಾತ್ರಿ ಸಮುಚ್ಚಯ

2003ರಲ್ಲಿ ನಿರ್ಮಾಣ: ಸದ್ಬಳಕೆಯಾಗದ ಪ್ರವಾಸೋದ್ಯಮ ಇಲಾಖೆಯ ನಾಲ್ಕು ಕಟ್ಟಡಗಳು
Last Updated 27 ಮಾರ್ಚ್ 2017, 8:52 IST
ಅಕ್ಷರ ಗಾತ್ರ
ಕಾರವಾರ: ಇಲ್ಲಿನ ಐತಿಹಾಸಿಕ ಸದಾಶಿವಗಡ ಗುಡ್ಡದ ತುದಿಯಲ್ಲಿರುವ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಯಾತ್ರಿ ಸಮುಚ್ಚಯ ಸದ್ಬಳಕೆಯಾಗದೇ ಬಾಗಿಲು ಮುಚ್ಚಿದ್ದು, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಇಲ್ಲಿನ ಕಟ್ಟಡಗಳು ಪಾಳುಬಿದ್ದಿವೆ. 
 
ಇಲ್ಲಿ ಒಟ್ಟು ನಾಲ್ಕು ಕಟ್ಟಡಗಳಿವೆ. ಒಂದು ಕಟ್ಟಡವು ಹೋಟೆಲ್‌ ರೀತಿಯಲ್ಲಿದ್ದರೆ, ಉಳಿದವು ವಸತಿ ನಿಲಯದ ಮಾದರಿಯಲ್ಲಿವೆ. 2003ರಲ್ಲಿ ಸುಮಾರು ₹ 55.60 ಲಕ್ಷ ವೆಚ್ಚದಲ್ಲಿ ಈ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಇದನ್ನು ಉದ್ಘಾಟಿಸಿದ್ದರು.

ಇದರ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡ ಜಂಗಲ್‌ ಲಾಡ್ಜ್‌ನವರು, ಕೆಲ ವರ್ಷಗಳ ಬಳಿಕ ಕೇರಳದ ಕೈರಾಲಿ ಪ್ರೈವೇಟ್‌ ಲಿಮಿಟೆಡ್‌ನವರಿಗೆ ರೆಸಾರ್ಟ್‌ ನಡೆಸಲು ಭೋಗ್ಯಕ್ಕೆ ನೀಡಿದ್ದರು. ಆದರೆ ವಿವಿಧ ಕಾರಣಗಳಿಂದಾಗಿ ಕ್ರಮೇಣ ಇಲ್ಲಿನ ರೆಸಾರ್ಟ್‌ ಹಾಗೂ ಮಸಾಜ್‌ ಕೇಂದ್ರ ಮುಚ್ಚಿ ಹೋಯಿತು. ಕಳೆದ ಮೂರು ವರ್ಷಗಳಿಂದ ಈ ಕಟ್ಟಡಗಳು ಮೂಲೆಗುಂಪಾಗಿವೆ. 
 
ಕಟ್ಟಡದ ಬಾಗಿಲು ಹಾಗೂ ಕಿಟಕಿಗಳ ಗಾಜು ಒಡೆದಿವೆ. ವಿದ್ಯುತ್‌ ಉಪಕರಣಗಳು ಉಪಯೋಗಕ್ಕೆ ಬಾರದಾಗಿವೆ. ಕಟ್ಟಡದೊಳಗೆ ಕಸ ಕಡ್ಡಿಗಳು ರಾಶಿಯಾಗಿ ಬಿದ್ದಿದ್ದು, ಕಟ್ಟಡ ಸುತ್ತ ಆಳೆತ್ತರದ ಗಿಡಗಂಟಿಗಳು ಬೆಳೆದುಕೊಂಡಿವೆ. ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. 
 
ದೂರವಾಣಿ ಸಂಪರ್ಕ ತಂತಿಗಳು, ಇಂಟರ್‌ಕಾಮ್‌ ಪೆಟ್ಟಿಗೆ ಇತ್ಯಾದಿ ಹಾಳು ಬಿದ್ದಿದೆ. ಅಲ್ಲಲ್ಲಿ ಬಿದ್ದ ವಿದ್ಯುತ್ ಉಪಕರಣಗಳು ದೂಳು ತಿನ್ನುತ್ತಿವೆ. ಹವಾನಿಯಂತ್ರಕ, ಗೀಸರ್ ಇತ್ಯಾದಿ ವಸ್ತುಗಳನ್ನು ಕೂಡ ಹಾಳಾಗಿವೆ. ಇಲ್ಲಿನ ಪರಿಸರದಲ್ಲಿ ಕುರುಕಲು ತಿಂಡಿಗಳ ಪೊಟ್ಟಣ, ಮದ್ಯ, ತಂಪು ಪಾನೀಯ ಬಾಟಲಿಗಳು ಎಗ್ಗಿಲ್ಲದೇ ಬಿದ್ದಿವೆ. 
 
ಕಾವಲುಗಾರರೂ ಇಲ್ಲ:  ಈ ಕಟ್ಟಡಗಳು ಬಾಗಿಲು ಮುಚ್ಚಿದ ಮೇಲೆ ಜಂಗಲ್‌ ರೆಸಾರ್ಟ್‌ನವರು ಇಲ್ಲಿ ಕಾವಲುಗಾರ ರನ್ನು ನೇಮಕ ಮಾಡಿದ್ದರು. ಅವರು ಆಗಾಗ ಬಂದು ನೋಡಿಕೊಳ್ಳುತ್ತಿದ್ದರು. ಆನಂತರ ಅವರೂ ಬರದ ಕಾರಣ, ಈ ಜಾಗ ಪುಂಡ ಪೋಕರಿಗಳ ತಾಣವಾಗಿದೆ. 
 
ನೀರಿನ ಸಂಪರ್ಕ ಕಡಿತ: ಗುಡ್ಡದ ಮೇಲಿನ ರೆಸಾರ್ಟ್‌ಗೆ ಸ್ವಲ್ಪ ಕೆಲಭಾಗದ ಪ್ರದೇಶದಿಂದ ಪೈಪ್‌ಲೈನ್‌ ಮೂಲಕ ನೀರು ಪೂರೈಕೆಯಾಗುತ್ತಿತ್ತು. ಈ ಪೈಪ್‌ ದೇವಸ್ಥಾನ ಹಾಗೂ ಮನೆಯೊಂದಕ್ಕೆ ಸೇರಿದ ಜಾಗದಲ್ಲಿ ಹಾದುಹೋಗಿತ್ತು. ಅವರ ನಡುವಿನ ತಕರಾರಿನಿಂದಾಗಿ ರೆಸಾರ್ಟ್‌ಗೆ ನೀರು ಪೂರೈಕೆ ಆಗುವುದು ನಿಂತಿತು. ಇದರಿಂದ ರೆಸಾರ್ಟ್‌ ನಡೆಸುತ್ತಿದ್ದವರು ಈ ಉದ್ಯಮದಿಂದ ಹಿಂದೆ ಸರಿದರು.
 
‘ಆರಂಭದಲ್ಲಿ ಈ ರೆಸಾರ್ಟ್ ಉತ್ತಮವಾಗಿ ನಡೆಯುತ್ತಿತ್ತು. ಆದರೆ ನೀರು ಹಾಗೂ ರಸ್ತೆ ಸಮಸ್ಯೆಯಿಂದಾಗಿ ಟೆಂಡರ್ ಪಡೆದವರಿಗೆ ರೆಸಾರ್ಟ್ ನಿರ್ವಹಣೆ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಈ ಕಟ್ಟಡಗಳ ಜವಾಬ್ದಾರಿಯನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿ ಸಿದ್ದೇವೆ’ ಎನ್ನುತ್ತಾರೆ ಜಂಗಲ್‌ ಲಾಡ್ಜ್‌ ವ್ಯವಸ್ಥಾಪಕ ಪಿ.ಆರ್‌.ನಾಯ್ಕ. 
 
‘ಖಾಲಿ ಬಿದ್ದಿರುವ ಕಟ್ಟಡಗಳನ್ನು 20 ವರ್ಷದ ಅವಧಿಗೆ ಭೋಗ್ಯ ನೀಡಲು ಇಲಾಖೆ ವತಿಯಿಂದ ₹ 30 ಕೋಟಿ ಮೊತ್ತದ ಟೆಂಡರ್‌ ಕರೆಯಲಾಗಿದೆ. ಆದರೆ ಇಷ್ಟೊಂದು ದೊಡ್ಡ ಮೊತ್ತದ ಟೆಂಡರ್ ಪಡೆಯಲು ಯಾರು ಮುಂದೆ ಬರುತ್ತಿಲ್ಲ. ಹೀಗಾಗಿ ಇನ್ನೊಮ್ಮೆ ಟೆಂಡರ್‌ ಕರೆಯಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಗೋಪಾಲಕೃಷ್ಣ ಬೇಕಲ್‌. 
 
**
ಸದಾಶಿವಗಡ ಗುಡ್ಡದ ಮೇಲೆ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಕಟ್ಟಡಗಳನ್ನು ಭೋಗ್ಯಕ್ಕೆ ನೀಡಲು ಮರು ಟೆಂಡರ್‌ ಕರೆಯಲಾಗಿದೆ
ಗೋಪಾಲಕೃಷ್ಣ ಬೇಕಲ್‌, ಪ್ರಭಾರ ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT