ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರಿಗೆ ಮೇಳ, ದೊಡ್ಡವರಿಗೆ ನಾಟಕ!

ನಗರಸಭೆ: ಬೇಸಿಗೆ ರಜೆಯಲ್ಲಿ ವೇದಿಕೆ ನಮ್ಮದು, ಪ್ರತಿಭೆ ನಿಮ್ಮದು ವೇದಿಕೆಯಿಂದ ಆಯೋಜನೆ
Last Updated 27 ಮಾರ್ಚ್ 2017, 9:02 IST
ಅಕ್ಷರ ಗಾತ್ರ
ಬಾಗಲಕೋಟೆ: ಇಲ್ಲಿನ ನಗರಸಭೆ ಆಡಳಿತ ತನ್ನ ‘ವೇದಿಕೆ ನಮ್ಮದು, ಪ್ರತಿಭೆ ನಿಮ್ಮದು’ ವೇದಿಕೆಯಡಿ ಬೇಸಿಗೆ ಶಿಬಿರ ಆಯೋಜನೆಗೆ ಮುಂದಾಗಿದೆ. 
‘ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಚಿಣ್ಣರ ಮೇಳ ಹಾಗೂ ದೊಡ್ಡವರಿಗೆ ನಾಟಕ ತರಬೇತಿ ನೀಡಲು ನಿರ್ಧರಿಸಲಾಗಿದೆ.

ಅದಕ್ಕಾಗಿಯೇ ಧಾರವಾಡದ ರಂಗಾಯಣದ ಸಾಜಿದ್ ನೇತೃತ್ವದ ಕಲಾವಿದರ ತಂಡವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ನಗರಸಭೆ ಆಯುಕ್ತ ಎಸ್.ಎನ್.ರುದ್ರೇಶ ‘ಪ್ರಜಾವಾಣಿ’ಗೆ ತಿಳಿಸಿದರು.
 
ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಹಾಗೂ ನಗರದ ವ್ಯಾಪ್ತಿಯಲ್ಲಿನ ಕಲಾವಿದರಿಗೆ ಅವರಲ್ಲಿನ ಪ್ರತಿಭೆ ಪ್ರದರ್ಶನಕ್ಕಾಗಿ  ವರ್ಷದ ಹಿಂದೆ ‘ವೇದಿಕೆ ನಮ್ಮದು, ಪ್ರತಿಭೆ ನಿಮ್ಮದು’ ವೇದಿಕೆ ನಿರ್ಮಿಸಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಕಾರ್ಯಕ್ರಮ ಅಲ್ಲಿ ನಡೆಸಿಲ್ಲ.

ಬೇಸಿಗೆ ರಜೆಯಲ್ಲಿ ನಗರದ ಮಕ್ಕಳನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಲು ಚಿಣ್ಣರ ಮೇಳ ನೆರವಾಗಲಿದೆ. ಜೊತೆಗೆ ದೊಡ್ಡವರಿಗೂ ನಾಟಕ ತರಬೇತಿ ಆಯೋಜಿಸಲಾಗುತ್ತಿದೆ.

ಈ ಎರಡೂ ಕಾರ್ಯಕ್ರಮಗಳ ಮೂಲಕ ವೇದಿಕೆಯಡಿ ವರ್ಷವಿಡೀ ಸಾಂಸ್ಕೃತಿಕ ಚಟುವಟಿಕೆಗಳಿಗೆ ಜೀವ ನೀಡಲಾಗುವುದು. ಅಲ್ಲಿ ಧ್ವನಿ, ಬೆಳಕಿನ ವ್ಯವಸ್ಥೆ, 600 ಮಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇರುವುದರಿಂದ ಖರ್ಚು ಇಲ್ಲದೇ ಸಾಂಸ್ಕೃತಿಕ ಚಟುವಟಿಕೆಗಳನ್ನು  ಆಯೋಜಿಸಬಹುದಾಗಿದೆ ಎಂದು ರುದ್ರೇಶ ಹೇಳಿದರು. 
 
ಚಿಣ್ಣರ ಮೇಳ: ‘ಹವೇಲಿಯ ತೋಟಗಾರಿಕೆ ವಿಶ್ವವಿದ್ಯಾಲಯದ ಹಳೆಯ ಕ್ಯಾಂಪಸ್‌ನಲ್ಲಿ ಏಪ್ರಿಲ್ 1ರಿಂದ 28ರವರೆಗೆ ಮೇಳ ಆಯೋಜಿಸಲಾಗುತ್ತಿದೆ. 7ರಿಂದ 14 ವರ್ಷದೊಳಗಿನ ಮಕ್ಕಳಿಗೆ ಚಿಣ್ಣರ ಮೇಳದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಕನಿಷ್ಠ 150 ಮಕ್ಕಳು ಪಾಲ್ಗೊಳ್ಳಬಹುದು’ ಎಂದು ಕಲಾವಿದ ಸಾಜಿದ್ ತಿಳಿಸಿದರು.
 
ಚಿಣ್ಣರ ಮೇಳದಲ್ಲಿ ಮಕ್ಕಳಿಗೆ ಜಾನಪದ ಕಲಾಪ್ರಕಾರಗಳನ್ನು ಹೇಳಿಕೊಡಲಾಗುವುದು. ಅಜ್ಜಿ ಕಥೆ, ಕೆಸರುಗದ್ದೆ ಓಟ, ಚಿಣ್ಣರ ಸಂತೆ, ಚಿಣ್ಣರ ಬಣ್ಣ, ಶ್ವಾನದಳ ಹಾಗೂ ಅಗ್ನಿ ಶಮನದ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಇಲ್ಲಿ ಕಲಿಸುವ ನಾಟಕಗಳನ್ನು ಏಪ್ರಿಲ್ 29 ಹಾಗೂ 30ರಂದು ನಗರಸಭೆಯ ವೇದಿಕೆಯಲ್ಲಿ ಪ್ರದರ್ಶಿಸಲಾಗುವುದು. ಪ್ರತಿ ದಿನ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಮೇಳ ನಡೆಯಲಿದೆ. ಒಟ್ಟಾರೆ ಆಟಗಳ ಮೂಲಕ ಜೀವನ ಪಾಠ ಹೇಳಿಕೊಡುವ ಕೆಲಸ ಮಾಡಲಾಗುವುದು ಎಂದರು.
 
ನಾಟಕ ತರಬೇತಿ: ರಜೆಯಲ್ಲಿ ದೊಡ್ಡವರಿಗೂ ನಾಟಕ ತರಬೇತಿ ನಡೆಸಲಾಗುವುದು. ಇದರಲ್ಲಿ ವಯೋಮಿತಿಯ ಅಡ್ಡಿ ಇಲ್ಲದೇ ಪುರುಷರು, ಮಹಿಳೆಯರು, ಕಾಲೇಜು ಯುವಕ–ಯುವತಿಯರು ಪಾಲ್ಗೊಳ್ಳಬಹುದು ಎಂದು ತಿಳಿಸಿದರು.
 
***
ನಾಟಕ ಪ್ರದರ್ಶನ ಇಂದು..
ನಗರಸಭೆಯ ‘ವೇದಿಕೆ ನಮ್ಮದು ಪ್ರತಿಭೆ ನಿಮ್ಮದು’ ವೇದಿಕೆಯಡಿ ಸೋಮವಾರ ವಿಶ್ವರಂಗಭೂಮಿ ದಿನದ ಅಂಗವಾಗಿ ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ತೌಫಿಕ್‌ ಅಲ್‌ ಹಕೀರ್‌ ಅವರ ರಚನೆಯ ನಾಟಕವನ್ನು ಎಂ.ಎಸ್.ಕೆ.ಪ್ರಭು ಕನ್ನಡಕ್ಕೆ ತಂದಿದ್ದಾರೆ.

ಮೊದಲಿಗೆ ದಿ.ಜಯತೀರ್ಥ ಜೋಶಿ ನಿರ್ದೇಶನ ಮಾಡಿದ್ದಾರೆ. ಸವದತ್ತಿಯ ರಂಗ ಆರಾಧನಾ ತಂಡದವರು ನಾಟಕ ಪ್ರದರ್ಶಿಸುತ್ತಿದೆ. ಸಾಜಿದ್ ನಿರ್ದೇಶಿಸಿದ್ದಾರೆ. ಸಂಜೆ 6.30ಕ್ಕೆ ನಾಟಕ ಆರಂಭವಾಗಲಿದ್ದು, ಪ್ರವೇಶ ಉಚಿತವಾಗಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT