ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮನ ನೆನಪಲ್ಲಿ ಪೂಜಾರ...

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ಮಗನೇ, ನೀನು ಭಾರತ ತಂಡದಲ್ಲಿ ಕ್ರಿಕೆಟ್‌ ಆಡಬೇಕೆನ್ನುವುದು ನನ್ನ ಆಸೆ’-ಚೇತೇಶ್ವರ ಪೂಜಾರ ಅವರ ತಾಯಿ ರೀನಾ, ಮಗನ ತಲೆ ನೇವರಿಸುತ್ತಾ ಹೀಗೆ ಹೇಳಿಕೊಂಡಿದ್ದರು. ಕ್ರಿಕೆಟ್ ಆಡುವ ಮಕ್ಕಳನ್ನು ಗದರಿ ಮನೆಯೊಳಗೆ ಕೂರಿಸಿ, ಓದಿನ ಕಡೆ ನಿಗಾ ಮಾಡುವಂತೆ ತಾಕೀತು ಮಾಡುವ ಅಮ್ಮಂದಿರಿಗೆ ರೀನಾ ಅಪವಾದ.

‘ನೀನು ಬ್ಯಾಟಿಂಗ್ ತಂತ್ರದಲ್ಲಿ ಇನ್ನಷ್ಟು ಪಳಗಬೇಕು’- ಅರವಿಂದ್ ಪೂಜಾರ ಹೇಗೆ ಮಗನಿಗೆ ಹೇಳಿದ್ದನ್ನು ನೆನೆದರೆ, ಅವರೂ ಅಪರೂಪದ ಅಪ್ಪ ಎನಿಸುವುದು ಸಹಜ.

ಗುಜರಾತ್‌ನ ರಾಜ್‌ಕೋಟ್‌ ನಿವಾಸಿಗಳಾಗಿದ್ದ ಅರವಿಂದ್‌-ರೀನಾ ದಂಪತಿಗೆ ಮಗನೇ ಸರ್ವಸ್ವ. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅರವಿಂದ್‌, ಬಾಲ್ಯದಲ್ಲಿಯೇ ಮಗನಿಗಿದ್ದ ಕ್ರಿಕೆಟ್ ಆಸಕ್ತಿಯನ್ನು ಗುರುತಿಸಿದರು. ಪ್ರಥಮ ದರ್ಜೆ ಕ್ರಿಕೆಟಿಗರಾಗಿ ಅನುಭವ ಪಡೆದಿದ್ದ ಅವರು ನಿತ್ಯವೂ ಬೆಳಿಗ್ಗೆ ಹಾಗೂ ಸಂಜೆ ಮಗನನ್ನು ಮೈದಾನಕ್ಕೆ ಕರೆದುಕೊಂಡು ಹೋಗಿ ಆಡಿಸತೊಡಗಿದರು.

ಇನ್ನಷ್ಟು ಮಕ್ಕಳು ಸೇರಿಕೊಂಡರು. ಅಭ್ಯಾಸಕ್ಕೆ ಅರ್ಥ ಬಂದಿತು. ಅಲ್ಲಿ ಆಡುವ ಪಂದ್ಯಗಳಿಂದ ಮಗ ಹೆಚ್ಚೇನೂ ಪಳಗಲು ಸಾಧ್ಯವಿಲ್ಲ ಎಂದು ಅವರಿಗೆ ಅನ್ನಿಸಿತು. ಅದಕ್ಕೇ ರಜೆ ಬಂತೆಂದರೆ ಸಂಸಾರ ಕಟ್ಟಿಕೊಂಡು ಮುಂಬೈಗೆ ಹೊರಟು ಬಿಡುತ್ತಿದ್ದರು.

ರೈಲಿನಲ್ಲಿ ಪ್ರಯಾಣ ಮಾಡಿ, ನಗರದಾಚಿನ ದೂರದ ಬಡಾವಣೆಯಲ್ಲಿ ನಿರ್ಮಾಣದ ಹಂತದಲ್ಲಿರುವ ಕಟ್ಟಡವನ್ನು ಬಾಡಿಗೆಗೆ ಪಡೆದು, ಅಲ್ಲಿ ಉಳಿದುಕೊಳ್ಳುತ್ತಿದ್ದರು. ಕಡಿಮೆ ಬಾಡಿಗೆಗೆ ಅಂಥ ಮನೆಗಳಷ್ಟೇ ಸಿಗುತ್ತಿದ್ದುದು.

ಮೊದಲೇ ಹಗುರವಾಗಿದ್ದ ಜೇಬಿಗೆ ಇನ್ನಷ್ಟು ಕೈಹಾಕುವ ಸ್ಥಿತಿಯಲ್ಲಿ ಅರವಿಂದ್ ಇರಲಿಲ್ಲ. ಆದರೆ, ಮಗನ ಕ್ರಿಕೆಟ್ ಪ್ರೀತಿಗೆ ನೀರೆರೆಯಬೇಕೆಂಬ ಮಹತ್ವಾಕಾಂಕ್ಷೆ ಮೊಟಕಾಗಕೂಡದು ಎಂಬ ಪ್ರಜ್ಞೆಯೂ ಸದಾ ಜಾಗೃತವಾಗಿತ್ತು.

ಮುಂಬೈನಲ್ಲಿ ಕ್ರಿಕೆಟ್ ಪ್ರತಿಭೆಗಳನ್ನು ಸಾಣೆಗೆ ಒಡ್ಡುತ್ತಿದ್ದ ಮಾಜಿ ಕ್ರಿಕೆಟಿಗ ಕರ್ಸನ್ ಘಾವ್ರಿ ಸ್ನೇಹ ಅರವಿಂದ್ ಪಾಲಿಗೆ ಆಶಾಕಿರಣ. ಬೇಸಿಗೆ ಹಾಗೂ ದಸರಾ ರಜೆಯಲ್ಲಿ ಚೇತೇಶ್ವರ ಪೂಜಾರ ಮುಂಬೈ ಪ್ರತಿಭೆಗಳ ಜೊತೆಗೆ ಕ್ರಿಕೆಟ್ ಆಡತೊಡಗಿದ್ದೇ ಕರ್ಸನ್ ಕೃಪಾಕಟಾಕ್ಷದಿಂದ.

ಹೀಗೆ ಕ್ರಿಕೆಟ್ ಅಭ್ಯಾಸ ಮಾಡಿ, ಸೌರಾಷ್ಟ್ರದ 14 ವರ್ಷದೊಳಗಿನವರ ತಂಡದ ಪರವಾಗಿ ಆಡಿ, ಒಮ್ಮೆ ತ್ರಿಶತಕ ಗಳಿಸಿದ್ದು ಚೇತೇಶ್ವರ ಬದುಕಿನ ಮಹತ್ವದ ತಿರುವು. ಅಲ್ಲಿಂದಾಚೆಗೆ ಪೂಜಾರ ಹೆಸರು ಸ್ಕೋರ್‌ಬೋರ್ಡ್‌ಗಳಲ್ಲಿ ಪದೇ ಪದೇ ಎದ್ದುಕಾಣತೊಡಗಿತು.

ಅಮ್ಮ ರೀನಾಗೆ ಮಗ ಹೀಗೆಯೇ ಆಡುತ್ತಾ ಮುಂದೊಂದು ದಿನ ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಹೆಬ್ಬಯಕೆ. ಅವರು ಹೊಟ್ಟೆ ಬಟ್ಟೆ ಕಟ್ಟಿ ಮಗನ ಆಟವನ್ನು ಪೋಷಿಸಿದ್ದು ಅನೇಕರಿಗೆ ಮಾದರಿಯಾಗಬಲ್ಲ ಕಥಾನಕವೇ ಹೌದು.

2005ರಲ್ಲಿ ರೀನಾ ಕ್ಯಾನ್ಸರ್‌ನಿಂದ ಮೃತಪಟ್ಟಾಗ, ಚೇತೇಶ್ವರ ಭಾವ್‌ನಗರಕ್ಕೆ ಆಟವಾಡಲು ಹೋಗಿದ್ದರು. ಖುಷಿಯಿಂದ ಮನೆಗೆ ಮರಳೋಣ ಎಂದುಕೊಂಡಿದ್ದ ಅವರಿಗೆ ಅಮ್ಮನ ಸಾವಿನ ಸುದ್ದಿ ಸಿಡಿಲಾಗಿ ಪರಿಣಮಿಸಿತು. ಒಂದು ವಾರ ಅವರು ಕಣ್ಣೀರು ಹಾಕಿದರು.

'ಆ ದಿನಗಳಲ್ಲಿ ನಿದ್ರೆ ಬರುತ್ತಿರಲಿಲ್ಲ. ಹೊತ್ತು ಹೊತ್ತಿಗೆ ನನಗೆ ಹಾಲು, ತಿಂಡಿ, ಊಟ ಕೊಡುತ್ತಾ, ದೈವಭಕ್ತಿಯನ್ನು ತೋರುತ್ತಾ ಅಮ್ಮ ಕಲಿಸಿದ ಪಾಠಗಳನ್ನು ಮರೆಯಲು ಸಾಧ್ಯವೇ ಇಲ್ಲ. ನಾನು ಅಂತರರಾಷ್ಟ್ರೀಯ ಕ್ರಿಕೆಟಿಗ ಆಗಬೇಕು ಎಂದು ನನಗೆ ಅನ್ನಿಸುವ ಮೊದಲು ಅಮ್ಮನಿಗೆ ಆ ಕನಸಿತ್ತು. ಅಂಥ ಅಮ್ಮ ಎಲ್ಲರಿಗೂ ಸಿಗಲು ಸಾಧ್ಯವಿಲ್ಲ' ಎಂದು ಪೂಜಾರ ಹೇಳಿಕೊಂಡಿದ್ದರು.

ಅಲ್ಲಿಂದಾಚೆಗೆ ಅವರು ಕ್ರಿಕೆಟ್ ವಿಷಯದಲ್ಲಿ ಇನ್ನಷ್ಟು ಗಂಭೀರರಾದರು. ಅಮ್ಮನ ಆಸೆ ಈಡೇರಿಸಲೇಬೇಕು ಎಂದು ಸಂಕಲ್ಪ ತೊಟ್ಟರು. 2010ರಲ್ಲಿ ಅವರಿಗೆ ಭಾರತ ಪರ ಟೆಸ್ಟ್‌ ಕ್ರಿಕೆಟ್ ಆಡುವ ಮೊದಲ ಅವಕಾಶ ಸಿಕ್ಕಿದ್ದು. ಮೊದಲ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲೇ ಅರ್ಧಶತಕ ಗಳಿಸಿ, ಛಾಪು ಮೂಡಿಸಿದರು.

ಶ್ರದ್ಧೆ, ಕಠಿಣ ಶ್ರಮ, ಸಂಯಮ ಎಲ್ಲವೂ ಅಮ್ಮನಿಂದ ಪೂಜಾರಾ ಕಲಿತ ಪಾಠಗಳು. ಮೊನ್ನೆ ಮೊನ್ನೆ ಆಸ್ಟ್ರೇಲಿಯಾ ಎದುರು ಮೂರನೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರು ದ್ವಿಶತಕ ಗಳಿಸಿದಾಗ, ಅವರದ್ದೇ ಬದುಕಿನ ಇಷ್ಟೆಲ್ಲ ಘಟನೆಗಳು ನೆನಪಾದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT