ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುದೀಪ್‌ ಜೊತೆ ನಟಿಸುವಾಸೆ’

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ಮನಸೇ ಓ ಮನಸೇ’ ಧಾರಾವಾಹಿಯ ಮೂಲಕ ಬಾಲನಟಿಯಾಗಿ ನಟನೆಯ ಅಂಗಳಕ್ಕೆ ಇಳಿದವರು ಚೈತ್ರಾರಾವ್‌. ಮುದ್ದು ಮುಖದ ಈ ಹುಡುಗಿ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೋಡಿಹಕ್ಕಿ’ ಧಾರಾವಾಹಿಗೆ ಬಣ್ಣ ಹಚ್ಚಿದ್ದಾರೆ. ಹದಿನೈದು ವರ್ಷಗಳಿಂದ ರಂಗಭೂಮಿಯ ಒಡನಾಟದಲ್ಲಿರುವ ಇವರು, ತಮ್ಮ ವೃತ್ತಿ ಪಯಣ ಸಾಗುತ್ತಿರುವ ಬಗೆಯನ್ನು ವಿವರಿಸುವುದು ಹೀಗೆ...

*ನಿಮ್ಮ ಊರು, ಶಿಕ್ಷಣ?
ನಾನು ಮೂಲತಃ ಉಡುಪಿ ಜಿಲ್ಲೆಯ ಕೋಟದವಳು. ಆದರೆ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ, ಎಎಸ್‌ಸಿ ಕಾಲೇಜಿನಲ್ಲಿ ಪದವಿ ಮುಗಿಸಿದ್ದೇನೆ. 

* ನಟನೆಯ ಪ್ರೀತಿ ಬೆಳೆದಿದ್ದು ಹೇಗೆ?
ನಟ ಸುದೀಪ್‌ ಎಂದರೆ ಬಹಳ ಇಷ್ಟ. ‘ಚಂದು’ ಸಿನಿಮಾ ನೋಡಿದ ಬಳಿಕ ಆ ಪ್ರೀತಿ ಮತ್ತಷ್ಟು ಹೆಚ್ಚಾಯಿತು. ವ್ಯಕ್ತಿಯಾಗಿ ಮತ್ತು ನಟನಾಗಿ ನಾನು ಅವರನ್ನು ಗೌರವಿಸುತ್ತೇನೆ. ಅವರ ಜೊತೆಗೆ ನಟಿಸಬೇಕು ಎಂಬ ಆಸೆಯಿಂದಲೇ ನಟಿಯಾದೆ.

*ಬಾಲ್ಯದಲ್ಲಿ ನೀವು ಮಾತನಾಡುತ್ತಲೇ ಇರಲಿಲ್ಲವಂತೆ?
ಹೌದು. ತುಂಬಾ ಕಡಿಮೆ ಮಾತನಾಡುತ್ತಿದ್ದೆ. ಆ ಕಾರಣಕ್ಕೆ ಅಮ್ಮ ನನಗೆ ಏಳು ವರ್ಷವಿದ್ದಾಗಲೇ ‘ವಿಜಯನಗರ ಬಿಂಬ’ ನಾಟಕ ತಂಡಕ್ಕೆ ಸೇರಿಸಿದರು. ಕ್ರಿಯಾಶೀಲಳಾಗಿರುವುದರಿಂದ ಮಾತು ಕಲಿಯುತ್ತೇನೆ ಎಂಬುದು ಅವರ ನಿರೀಕ್ಷೆಯಾಗಿತ್ತು.

*ಆಮೇಲೆ ಮಾತನಾಡುವುದು ಕಲಿತು ಕೊಂಡ್ರಾ?
ಅಯ್ಯೋ, ಈಗಂತೂ ಸಿಕ್ಕಾಪಟ್ಟೆ ಮಾತನಾಡುತ್ತೇನೆ. ರಂಗಭೂಮಿಗೆ ಸೇರಿದ ಮೇಲೆ ಮಾತಿನ ಜೊತೆಗೆ ನಟನೆ, ನಿರ್ದೇಶನ, ಸಂಭಾಷಣೆ ಬರೆಯುವುದು... ಹೀಗೆ ಹಲವು ವಿಷಯಗಳನ್ನು ಕಲಿತುಕೊಂಡೆ. ಜೊತೆಗೆ ವೇದಿಕೆ ಭಯವೂ ಹೋಯಿತು. ಪ್ರತಿಭೆಯ ಜೊತೆಗೆ ಕೆಲಸದ ಬದ್ಧತೆಯನ್ನು ರಂಗಭೂಮಿ ಕಲಿಸಿತು.

* ಬಾಲ್ಯ ನಟಿಯಾಗಿದ್ದವರು ನಟನೆಗೆ ಅಲ್ಪವಿರಾಮ ನೀಡಿದ್ದು ಏಕೆ?
‘ಕೇರ್‌ ಆಫ್‌ ಫುಟ್‌ಪಾತ್‌’ ಸಿನಿಮಾದ ಬಳಿಕ  ಟೆಲಿಫಿಲ್ಮ್‌ನಲ್ಲಿ ನಟಿಸಿದೆ. ನಂತರ ಶಿಕ್ಷಣವೂ ಮುಖ್ಯ ಎಂದು ಅದರ ಕಡೆ ಗಮನ ನೀಡುವಂತೆ ಅಮ್ಮ ಹೇಳಿದರು. ಹಾಗಾಗಿ ಸ್ವಲ್ಪ ದಿನ ನಟನೆಯಿಂದ ದೂರವೇ ಇದ್ದೆ. ಪದವಿ ಗಳಿಸಿದ ನಂತರ ಮತ್ತೆ ಮರಳಿದೆ.

*ನಟಿಯಾಗದಿದ್ದರೆ ಯಾವ ವೃತ್ತಿಯಲ್ಲಿರುತ್ತಿದ್ರಿ?
ನಟನೆ ಆತ್ಮತೃಪ್ತಿ ನೀಡಿದೆ. ಅದರ ಹೊರತಾಗಿ ನಾನು ಬೇರೆ ವೃತ್ತಿಯನ್ನು ಊಹಿಸಿಕೊಳ್ಳುವುದೂ ಅಸಾಧ್ಯ. 

*ಯಾವ ರೀತಿಯ ಪಾತ್ರಗಳಲ್ಲಿ ನಟಿಸುವ ಆಸೆಯಿದೆ?
ಸವಾಲು ಎನಿಸುವಂತಹ ಪಾತ್ರಗಳು ಇರಬೇಕು. ಪುರುಷಪ್ರಧಾನ ಸಿನಿಮಾಗಳೇ ಹೆಚ್ಚು ಬರುತ್ತಿವೆ. ಆದರೆ ನನಗೆ ಪುರುಷ ಮತ್ತು ಮಹಿಳೆ ಇಬ್ಬರಿಗೂ ಸಮಾನತೆ ಇರುವ ಚಿತ್ರಗಳಲ್ಲಿ ನಟಿಸುವ ಬಯಕೆಯಿದೆ.

*ನಟನೆಯ ಹೊರತಾಗಿ ಬೇರೆ ಹವ್ಯಾಸಗಳೇನು?
ನೃತ್ಯ ಇಷ್ಟ. ಭರತನಾಟ್ಯ ಕಲಿತಿದ್ದೇನೆ. ಹಾಡು ಹೇಳುತ್ತೇನೆ. ಆಗಾಗ್ಗೆ ಕಾದಂಬರಿಗಳನ್ನು ಓದುತ್ತೇನೆ.

* ನಟನೆಗೆ ಮನೆಯವರ ಬೆಂಬಲ ಹೇಗಿದೆ?
ಅಮ್ಮ ಬಿಡುವು ಸಿಕ್ಕಾಗಲೆಲ್ಲ ನನ್ನೊಂದಿಗೆ ಚಿತ್ರೀಕರಣದ ಸ್ಥಳಕ್ಕೆ ಬರುತ್ತಾರೆ.  ನಮ್ಮನೆಯಲ್ಲಿ ಯಾವ ನಿರ್ಬಂಧವನ್ನೂ ಹಾಕಿಲ್ಲ. ಆಸಕ್ತಿಯ ಕ್ಷೇತ್ರದ ಪ್ರವೇಶಕ್ಕೆ ಮುಕ್ತವಾಗಿ ಒಪ್ಪಿಗೆ ಸೂಚಿಸಿದ್ದಾರೆ. 

*‘ಜೋಡಿಹಕ್ಕಿ’ಗೆ ಅವಕಾಶ ದೊರಕಿದ್ದು ಹೇಗೆ?
ನನ್ನ ಸ್ನೇಹಿತೆ ಹೊಸ ಧಾರಾವಾಹಿಗೆ ನಟಿಯ ಹುಡುಕಾಟ ನಡೆಯುತ್ತಿದೆ. ಪ್ರಯತ್ನಿಸು ಎಂದು ಸಲಹೆ ನೀಡಿದಳು. ಆಡಿಷನ್‌ಗೆ ಹೋದೆ. ಆಯ್ಕೆಯಾದೆ.

*ಈ ಧಾರಾವಾಹಿ ಒಪ್ಪಲು ಕಾರಣ?
ಆರೂರು ಜಗದೀಶ್‌ ಅವರ ನಿರ್ದೇಶನ ಎನ್ನುವುದು ಮೊದಲನೇ ಕಾರಣ. ಅವರು ಈಗಾಗಲೇ ‘ಶುಭವಿವಾಹ’, ‘ಅಶ್ವಿನಿ ನಕ್ಷತ್ರ’ದಂತಹ ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶಿಸಿದವರು. ಎರಡನೆಯದು ಪಾತ್ರದ ಮಹತ್ವ. ತುಂಬಾ ಮೃದು ವ್ಯಕ್ತಿತ್ವದ ಹುಡುಗಿ ಆದರೆ ತೂಕದ ಪಾತ್ರವಿರುವ ಕಾರಣ ಒಪ್ಪಿಕೊಂಡೆ.

*ಫಿಟ್‌ನೆಸ್‌ ಮತ್ತು ಚರ್ಮದ ರಕ್ಷಣೆಗೆ ಏನು ಮಾಡುತ್ತೀರಾ?
ಡಯೆಟ್‌ ಹೆಸರಿನಲ್ಲಿ ಬಾಯಿಗೆ ಕಡಿವಾಣ ಹಾಕುವುದು  ನನ್ನಿಂದ ಸಾಧ್ಯವಿಲ್ಲ. ಸಿಕ್ಕಾಪಟ್ಟೆ ತಿನ್ನುತ್ತೇನೆ. ನೃತ್ಯ ಮಾಡುವುದರಿಂದ ಜಿಮ್‌ಗೆ ಹೋಗುವ ಅನಿವಾರ್ಯತೆ ಎದುರಾಗಿಲ್ಲ. ‘ಬೇಬಿ ಆಯಿಲ್‌’ ಹಚ್ಚಿಕೊಂಡು ಮೇಕಪ್‌ ತೆಗೆಯುತ್ತೇನೆ. ರಾತ್ರಿ ಅದನ್ನೇ ಹಚ್ಚಿ ಮಲಗುತ್ತೇನೆ. ಇದರಿಂದ ಚರ್ಮ ಮೃದುವಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT