ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಯ ಬಾಯಿಗೆ ಬಚ್ಚಲ ನೀರುಣಿಸಿ

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಇನ್ನು ಮೂರು ತಿಂಗಳು ನಗರದ ಜನರು ಇರುವ ನೀರನ್ನು ಉಳಿಸುವ, ಮರು ಬಳಕೆ ಮಾಡುವ  ಬಗ್ಗೆ ಗಂಭೀರವಾಗಿ ಚಿಂತಿಸುವ  ಅಗತ್ಯವಿದೆ. ನೀರಿನ ಉಳಿತಾಯಕ್ಕೆ ಸಂಬಂಧಿಸಿದಂತೆ ಚಿಕ್ಕಪುಟ್ಟ ಎಚ್ಚರಿಕೆ ವಹಿಸುವುದು ಈ ಕ್ಷಣದ ಅಗತ್ಯ.

ಬಚ್ಚಲಿನಲ್ಲಿ ಎರಡು ಲೀಟರ್‌ ನೀರು ತುಂಬುವ ಮಗ್‌ ಇಟ್ಟುಕೊಂಡವರು ಅರ್ಧ ಲೀಟರ್‌ನ ಮಗ್‌ ಬಳಸುವುದನ್ನು ರೂಢಿಸಿಕೊಳ್ಳಿ. ಆಗ ಉಳಿತಾಯವಾಗುವ ನೀರಿನ ಪ್ರಮಾಣ ಸಣ್ಣದಲ್ಲ. ಸ್ನಾನ ಮಾಡಲು ಬಳಸುವ ಷವರ್‌ನಲ್ಲಿ 10 ನಿಮಿಷಕ್ಕೆ 90 ಲೀಟರ್‌ ನೀರು ಬರುತ್ತದೆ.

ನೀರಿನ ಸಮಸ್ಯೆ ಇರುವಾಗ ಷವರ್‌ ಬಳಸದಿರುವುದು ಉತ್ತಮ. ಬೇರೆ ದಿನಗಳಲ್ಲೂ ಹೆಚ್ಚು ಹೊತ್ತು ಷವರ್‌ ಬಳಸುವ ಬದಲು ಮಿತವಾಗಿ ಬಳಸಬಹುದು.

ನಗರದ ಪೈಪ್‌ಲೈನ್‌, ನಲ್ಲಿಗಳಲ್ಲಿ ಬರುವ ಶೇ 43ರಷ್ಟು ನೀರು ಸೋರಿಕೆಯಾಗುತ್ತಿದೆ. ಈ ನೀರನ್ನು  ಸೋರದಂತೆ ಮಾಡಿದರೆ ನೀರಿನ ಸಮಸ್ಯೆಗೆ ಉತ್ತರ ಸಿಗುತ್ತದೆ. 

ಬಚ್ಚಲ ನೀರು ವ್ಯರ್ಥ ಮಾಡಬೇಡಿ: ನಗರದ ಪ್ರತಿಯೊಬ್ಬರೂ ಬಚ್ಚಲು ನೀರಿನ ಮರು ಬಳಕೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಕುಡಿಯಲೂ ನೀರು ಸಿಗುವುದಿಲ್ಲ. ಈ ಎಚ್ಚರ ಅಗತ್ಯ.  ನಗರಕ್ಕೆ ಪೂರೈಕೆಯಾಗುವ ಶೇ 90ರಷ್ಟು ನೀರು ಮನೆ ಬಳಕೆಯ ಮೂಲಕ ಚರಂಡಿ ಸೇರುತ್ತಿದೆ. ಶೇ10ರಷ್ಟು ನೀರು ಮಾತ್ರ ಕುಡಿಯಲು ಬಳಕೆಯಾಗುತ್ತಿದೆ.

ಬಚ್ಚಲು ನೀರು ತ್ಯಾಜ್ಯ ಎಂದು ಭಾವಿಸುವುದೇ ತಪ್ಪು. ಸ್ನಾನ ಮತ್ತು ಬಟ್ಟೆ ಒಗೆದ ನೀರಿನಲ್ಲಿ ಸೋಪಿನ ಅಂಶವಷ್ಟೇ ಇರುತ್ತದೆ. ಅದನ್ನು ಬೇರ್ಪಡಿಸುವ ತಂತ್ರಜ್ಞಾನ ಬಂದಿದೆ. ಬಚ್ಚಲ ನೀರನ್ನು ಸಂಗ್ರಹಿಸಿ ಶುದ್ಧ ಮಾಡಿ ಮನೆ ಬಳಕೆಗೆ ಉಪಯೋಗಿಸುವುದೇ ನೀರಿನ ಸಮಸ್ಯೆಗೆ ಪರಿಹಾರವಾಗಬಲ್ಲುದು.

ಬಚ್ಚಲಿನ  ಸೋಪು ಮಿಶ್ರಿತ ನೀರನ್ನು ಸಂಸ್ಕರಿಸಿ,  ರಂಜಕದ ಅಂಶ ಮಾತ್ರ ಉಳಿಯುವಂತೆ ಮಾಡಿ ಗಿಡಗಳಿಗೆ ಬಳಸಿದರೆ ಉತ್ತಮ ಪೌಷ್ಟಿಕಾಂಶ ಸಿಗುತ್ತದೆ. ‘ಗ್ರೇವಾಟರ್‌ ಹಾರ್ವೆಸ್ಟಿಂಗ್‌’ ನಗರದ ನೀರಿನ ಸಮಸ್ಯೆಗೆ ಉತ್ತಮ ಪರಿಹಾರ.

ಮಳೆಗಾಲದಲ್ಲಿ ರಸ್ತೆಗಳಲ್ಲಿ ಹರಿದು ಚರಂಡಿ ಸೇರುವ ನೀರನ್ನು ಸಂಗ್ರಹಿಸಿದರೆ  ಮೂರು ವರ್ಷಕ್ಕೆ ಬೇಕಾಗುವಷ್ಟು ನೀರು ಸಿಗುತ್ತದೆ. 30X40 ನಿವೇಶನದಲ್ಲಿ 1 ಲಕ್ಷ ಲೀಟರ್‌ ಮಳೆ ನೀರು ಸಂಗ್ರಹಿಸಬಹುದು. ಇಂತಹ ನಿವೇಶನಗಳಲ್ಲಿ ಇಂಗುಗುಂಡಿ ನಿರ್ಮಾಣಕ್ಕೆ ₹15ಸಾವಿರ ಖರ್ಚಾಗಬಹುದು. ಪ್ರತಿಯೊಬ್ಬರೂ ಹೀಗೆ ಮಾಡಿದರೆ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಭೂಮಿಯ ಹೊಟ್ಟೆಗೆ ನೀರು ಸೇರಿಸಿ:  ಕೆರೆ, ಬಾವಿ, ಕೊಳವೆಬಾವಿ, ಹೊಂಡಗಳೆಲ್ಲ ಭೂಮಿಯ ಬಾಯಿ (ಮೌತ್ ಆಫ್‌ ದಿ ಅರ್ಥ್‌)ಗಳಿದ್ದಂತೆ.  ಇವುಗಳ ಮೂಲಕವೇ ಭೂಮಿಯ ಹೊಟ್ಟೆ ತುಂಬಬೇಕು.  ಬಾವಿ, ಕೆರೆ, ಉದ್ಯಾನಗಳ ಸುತ್ತ ಮಳೆ ನೀರಿನ ಇಂಗು ಗುಂಡಿಗಳನ್ನು ನಿರ್ಮಿಸಬೇಕು.

ಒಂದು ಕಿ.ಮೀ ರಸ್ತೆಯಲ್ಲಿ ಒಂದು ವರ್ಷದಲ್ಲಿ ಮೂರು ಕೋಟಿ ಲೀಟರ್‌ ನೀರು ಹರಿದು ಹೋಗುತ್ತದೆ. ಇದನ್ನು ಇಂಗುಗುಂಡಿಗಳಿಗೆ ಹರಿಸಿದರೆ  ಸಾಕು. ಅಂತರ್ಜಲ ಸಂರಕ್ಷಣೆಗೆ ಇದಕ್ಕಿಂತ ಉತ್ತಮ ಉಪಾಯವಿಲ್ಲ. ಒಂದು ವರ್ಷದ ಮಳೆ ನೀರು, 3 ವರ್ಷದ ಅವಧಿಗೆ ಜನರ ಬಳಕೆಗೆ ಒದಗಬಲ್ಲದು. ಈ ಪ್ರಯೋಗವನ್ನು ಅನೇಕ ಕಡೆ ಮಾಡಿದ್ದೇನೆ.

ಪ್ರತಿ ಹನಿಯನ್ನೂ ಸಂಗ್ರಹಿಸಿ ಜೋಪಾನ ಮಾಡಿದರೆ ನಗರದ ಜನರು ಕಾವೇರಿ ನೀರನ್ನು ಅವಲಂಭಿಸುವ ಅಗತ್ಯವೇ ಇರುವುದಿಲ್ಲ.
ಮನಸು ಮಾಡಿದರೆ ಜೋಪಡಿಯಲ್ಲೂ ಮಳೆಕೊಯ್ಲು ಮಾಡಬಹುದು. ಸರಿಯಾದ ಕ್ರಮದಲ್ಲಿ ಮಳೆನೀರನ್ನು ಶುದ್ಧೀಕರಣ ಮಾಡಿದರೆ ಕುಡಿಯಲೂ ಬಳಸಬಹುದು. ನಗರದ ನೂರಾರು ಮನೆಗಳಲ್ಲಿ ಮಳೆಕೊಯ್ಲು ಘಟಕಗಳನ್ನು ಸ್ಥಾಪಿಸಿದ್ದೇನೆ.

ಚಿಕ್ಕಚಿಕ್ಕ ಗುಂಡಿಗಳನ್ನು ನಿರ್ಮಾಣ ಮಾಡಿ, ಭಾಷ್ಪೀಕರಣ(ನೀರು ಆವಿಯಾಗುವುದು)ಕ್ಕೆ ಕಡಿವಾಣ ಹಾಕಿದರೆ, ಅಂತರ್ಜಲ ವೃದ್ಧಿಗೆ ಆಹ್ವಾನ ನೀಡಿದಂತಾಗುತ್ತದೆ. ಕಡೇ ಪಕ್ಷ ವ್ಯರ್ಥವಾಗುವ ನೀರಿನ ಅರ್ಧದಷ್ಟನ್ನಾದರೂ ಭೂಮಿಗೆ ಇಳಿಸದಿದ್ದರೆ ಮುಂದೆ ಬದುಕುವುದೇ ಕಷ್ಟವಾಗಲಿದೆ.
ಅಯ್ಯಪ್ಪ ಮಸಗಿ ಅವರ ಸಂಪರ್ಕ ಸಂಖ್ಯೆ: 94483 79497.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT