ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕು ಪ್ರಶ್ನಿಸುವಂತಿದೆ

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ರಾಜಕಾರಣಿಗಳನ್ನೂ ಒಳಗೊಂಡಂತೆ ವ್ಯಕ್ತಿಗಳ ಕುರಿತು ಉತ್ಪ್ರೇಕ್ಷೆಯಿಂದ ಕೂಡಿದ ವರದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ, ಪ್ರಕಟಿಸುತ್ತಿವೆ ಎಂದು ಶಾಸನಸಭೆಯಲ್ಲಿ ಇತ್ತೀಚೆಗೆ ಬಿರುಸಿನ ಚರ್ಚೆ ನಡೆದಿದ್ದು ವರದಿಯಾಗಿದೆ. ರಾಜಕಾರಣಿಗಳ ಖಾಸಗಿ ಸಂಬಂಧಗಳಿಂದ ಅವರ ಅಧಿಕೃತ ಸಾರ್ವಜನಿಕ ಜವಾಬ್ದಾರಿಯ ಮೇಲೆ ಯಾವುದೇ ಪರಿಣಾಮ ಉಂಟಾಗದಿದ್ದಾಗಲೂ ಅಂತಹ ವಿಷಯಗಳನ್ನು ಪ್ರಸಾರ ಮಾಡುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಲೇ ಇದೆ.   Trial by Media ಕೂಡದು ಎಂದು ಸುಪ್ರೀಂ ಕೋರ್ಟ್‌ ಹಲವು ಬಾರಿ ಹೇಳಿದೆ.

ಇದನ್ನು ಹೊರತುಪಡಿಸಿ, ರಾಜಕೀಯ ಕ್ಷೇತ್ರವೂ ಒಳಗೊಂಡಂತೆ ಸಮಾಜದ ವಿವಿಧ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುವ ವ್ಯಕ್ತಿಗಳ ಕುರಿತು ಕ್ರಮಬದ್ಧವಾದ ಅಭಿಪ್ರಾಯ ವ್ಯಕ್ತಪಡಿಸುವ ಮತ್ತು ಮೌಲ್ಯಮಾಪನ ಮಾಡುವ ಸ್ವಾತಂತ್ರ್ಯ ಮಾಧ್ಯಮಗಳ ಸಂವಿಧಾನಬದ್ಧ ಹಕ್ಕು. ಉದ್ವೇಗಕ್ಕೆ ಒಳಗಾಗಿ ಈ ಹಕ್ಕನ್ನು ಮೊಟಕುಗೊಳಿಸುವಂತಹ ಪ್ರಯತ್ನಗಳಿಂದ ದೂರವಿರುವುದು ಒಳಿತು. ಬಹುಶಃ ಈ ಅಂಶವನ್ನೇ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿಯವರು ಹೇಳುವ ಪ್ರಯತ್ನ ಮಾಡಿದ್ದರು. ಅವರ ಅಭಿವ್ಯಕ್ತಿಗೂ ಅವಕಾಶ ಕೊಡದಿದ್ದುದು ಸಂವಿಧಾನ ಹಾಗೂ ಶಾಸಕಾಂಗ ಗುರುತಿಸುವ ಹಕ್ಕುಗಳನ್ನೇ ಪ್ರಶ್ನಿಸುವಂತಿದೆ.

ದೇಶದ ಸದ್ಯದ ವಿದ್ಯಮಾನಗಳನ್ನು ಗಮನಿಸಿದರೆ, ಮುಂದೊಂದು ದಿನ ಶಾಸಕರೂ ಒಳಗೊಂಡಂತೆ ಎಲ್ಲರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪೆಟ್ಟು ಬೀಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ನಾನು ವಿನಮ್ರ ಭಾವದಿಂದ ರಾಯರಡ್ಡಿಯವರ ಅಭಿವ್ಯಕ್ತಿ ಹಕ್ಕನ್ನು ಸಮರ್ಥಿಸುತ್ತೇನೆ. ಅಂತೆಯೇ ಕೆಲವು ಟಿ.ವಿ. ಚಾನೆಲ್‌ ಹಾಗೂ ಪತ್ರಿಕೆಗಳ ಎಲ್ಲೆ ಮೀರಿದ ವೈಭವೀಕರಣ ನಾಗರಿಕ ಮೌಲ್ಯಗಳಿಗೆ ಮಾರಕವೆಂದು ಹೇಳಲು ಇಚ್ಛಿಸುತ್ತೇನೆ.

-ಪ್ರೊ. ಬಿ.ಕೆ.ಚಂದ್ರಶೇಖರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT