ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಕಾಮಣ್ಣರ ಕಾಟಕ್ಕೆ ತಡೆ ಅನೈತಿಕ ಪೊಲೀಸ್‌ಗಿರಿಯಾಗದಿರಲಿ

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ರೋಮಿಯೊನಿಗ್ರಹ ದಳಗಳು ಉತ್ತರಪ್ರದೇಶದಲ್ಲಿ ಸಕ್ರಿಯವಾಗಿರುವ ಕುರಿತಂತೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮಹಿಳೆಯರು ಸುರಕ್ಷತೆ, ಭದ್ರತೆ ಅನುಭವಿಸಲು ಅಗತ್ಯವಾಗಿದ್ದ ಕ್ರಮವಾಗಿತ್ತು  ಇದು ಎಂಬಂಥ ಅಭಿಪ್ರಾಯ ಉತ್ತರಪ್ರದೇಶದ ಸಣ್ಣ  ಪಟ್ಟಣಗಳಲ್ಲಿ ದೊಡ್ಡ ಮಟ್ಟದಲ್ಲೇ ವ್ಯಕ್ತವಾಗುತ್ತಿದೆ. ಪೊಲೀಸರ ಇರುವಿಕೆಯಿಂದಾಗಿ  ಬೀದಿ ಕಾಮಣ್ಣರ ಕಾಟ ತಪ್ಪಿ  ಸುಭದ್ರತೆಯ ಭಾವನೆ ಸಿಗುತ್ತಿದೆ ಎಂಬುದು ಇಂತಹ ಪಟ್ಟಣಗಳಲ್ಲಿನ  ಹೆಣ್ಣುಮಕ್ಕಳ ಅಭಿಪ್ರಾಯ.

ಚುಡಾಯಿಸುವಿಕೆ ಹಾಗೂ ಹಿಂಬಾಲಿಸುವಿಕೆ ಕಡಿಮೆಯಾಗಿರುವುದರಿಂದ ನೆಮ್ಮದಿಯ ಉಸಿರು ಬಿಡುವ ಹಾಗಿದೆ ಎಂದು ಅನೇಕ ವಿದ್ಯಾರ್ಥಿನಿಯರು ಹೇಳಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಚುಡಾಯಿಸುವಿಕೆ ಅಥವಾ ಲೈಂಗಿಕ ಕಿರುಕುಳಗಳ ಕಾಟ ಈ ಹೆಣ್ಣುಮಕ್ಕಳಿಗೆ ದಿನನಿತ್ಯದ ಸಮಸ್ಯೆಯಾಗಿತ್ತು. ಈ ಕಾಟಗಳನ್ನು ದಾಟಿಕೊಂಡು ವಿದ್ಯಾಭ್ಯಾಸ ಮುಂದುವರಿಸುವುದು ಅನೇಕ ಹೆಣ್ಣುಮಕ್ಕಳಿಗೆ ದೊಡ್ಡ ಸವಾಲು ಆಗಿದ್ದುದೂ ನಿಜ. ಅನೇಕ ಹೆಣ್ಣುಮಕ್ಕಳಿಗೆ ತಮ್ಮ ಓದನ್ನು ಪೂರ್ಣಗೊಳಿಸುವುದೂ ಸಾಧ್ಯವಾಗದೆ ಅರ್ಧಕ್ಕೇ ಶಾಲೆ, ಕಾಲೇಜು ತೊರೆದ ಉದಾಹರಣೆಗಳೂ ಇವೆ.  ಅನೇಕ ಸಂದರ್ಭಗಳಲ್ಲಿ ಇಂತಹ ಕಾಟಗಳು ಕೋಮು ಸಂಘರ್ಷಗಳಿಗೆ ಎಡೆಮಾಡಿ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿದ್ದುದೂ ಉಂಟು.  ಅಂಕಿಅಂಶಗಳ ಪ್ರಕಾರ, ಪ್ರತಿದಿನ ಉತ್ತರಪ್ರದೇಶದಲ್ಲಿ ಆರು ಅತ್ಯಾಚಾರ ಪ್ರಕರಣಗಳು ಹಾಗೂ 15 ಲೈಂಗಿಕ ದುರ್ವರ್ತನೆ ಪ್ರಕರಣಗಳು ವರದಿಯಾಗುತ್ತಿವೆ.  ಆದರೆ, ಮಹಿಳೆ ಮೇಲಿನ ಅಪರಾಧ ಪ್ರಕರಣಗಳ ಬಗ್ಗೆ    ಪೊಲೀಸ್ ಠಾಣೆಗಳಿಗೆ ದೂರು ಕೊಡುವುದು  ಉತ್ತರಪ್ರದೇಶದಲ್ಲಿ ಕಡಿಮೆ. ಹೀಗಾಗಿ ಮಹಿಳೆ ಮೇಲಿನ ಅಪರಾಧ ಪ್ರಕರಣಗಳು ವರದಿಯಾಗದೆ ಹಾಗೇ ಮುಚ್ಚಿಹೋಗುತ್ತಿವೆ ಎಂಬ ಅಭಿಪ್ರಾಯಗಳೂ ಇವೆ. ಇಂತಹ ಸಂದರ್ಭದಲ್ಲಿ, ಕಿರುಕುಳಕ್ಕೊಳಗಾದ ಮಹಿಳೆಯರು ಅನುಭವಿಸುವ ಸಂಕಷ್ಟ, ಪ್ರಯಾಣ ಮಾಡುವ ಮಹಿಳೆಯರು ಎದುರಿಸುವ ಅಸುರಕ್ಷತೆ ಎಲ್ಲವೂ ಹೆಚ್ಚಿನ ಮಟ್ಟದಲ್ಲೇ ಈ ರಾಜ್ಯದಲ್ಲಿದೆ. ಹೀಗಾಗಿ ಮಹಿಳೆಯರಿಗೆ ಸುರಕ್ಷಿತವಲ್ಲದ ರಾಜ್ಯ ಎಂಬಂಥ ಕಳಂಕವನ್ನು ಕಿತ್ತುಹಾಕುವುದಲ್ಲದೆ,  ಉತ್ತರ ಪ್ರದೇಶದ ರಸ್ತೆ, ವಿದ್ಯುತ್ ಸೌಲಭ್ಯವನ್ನೂ ಸುಧಾರಿಸುವ ಮಾತನ್ನಾಡಿದ್ದಾರೆ ಉತ್ತರಪ್ರದೇಶದ ಹೊಸ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ.

ರೋಮಿಯೊ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ವಿಧಾನಸಭೆ ಚುನಾವಣಾ ಪ್ರಣಾಳಿಕೆಯಲ್ಲೇ  ಬಿಜೆಪಿ ಭರವಸೆ ನೀಡಿತ್ತು. ಈಗ ಆ ಭರವಸೆಯನ್ನು ಅದು ಜಾರಿ ಮಾಡಿದೆ. ಆದರೆ ನಮ್ಮ ಕಾನೂನು ಜಾರಿ ವ್ಯವಸ್ಥೆಯ ಇತಿಹಾಸವನ್ನು ಅವಲೋಕಿಸಿದಲ್ಲಿ ಇಂತಹದೊಂದು ಕ್ರಮ ಅನೈತಿಕ ಪೊಲೀಸ್‌ಗಿರಿಗೂ ಕಾರಣವಾಗಬಹುದು ಎಂಬ ಆತಂಕ ಸಹಜವಾದದ್ದೇ. ಏಕೆಂದರೆ ಇಂತಹ ಹಾವಳಿ ನಿಯಂತ್ರಣದಲ್ಲಿ  ನಮ್ಮ ಪೊಲೀಸ್ ಪಡೆಗೆ ಅಗತ್ಯ ತರಬೇತಿ ಇಲ್ಲ. ಹೀಗಾಗಿ ಇದು ವಿಶೇಷವಾಗಿ ಉತ್ತರಪ್ರದೇಶದ ದೊಡ್ಡ ನಗರಗಳಲ್ಲಿ ಅನೈತಿಕ ಪೊಲೀಸ್‌ಗಿರಿಯಾಗಿ ಪರಿವರ್ತಿತವಾಗುವ ಲಕ್ಷಣಗಳೂ ಗೋಚರವಾಗಿ ವಿವಾದವೂ ಆಗಿದೆ.

ಆ ನಂತರ, ‘ದಂಪತಿಗೆ ಕಿರುಕುಳ ತಪ್ಪಿಸಿ’ ಎಂದು  ರೋಮಿಯೊನಿಗ್ರಹ ದಳಗಳಿಗೆ ಸ್ವತಃ ಮುಖ್ಯಮಂತ್ರಿಯವರೇ ಹೇಳಬೇಕಾಗಿ ಬಂದದ್ದು ವಿಪರ್ಯಾಸ. ರೋಮಿಯೊನಿಗ್ರಹ ದಳ ರಚನೆಗೆ ಸ್ಪಷ್ಟ ಮಾರ್ಗಸೂಚಿಗಳನ್ನು ರಚಿಸಬೇಕೆಂದು ಮುಖ್ಯಮಂತ್ರಿ ಆದಿತ್ಯನಾಥ ಯೋಗಿ, ಹಿರಿಯ ಅಧಿಕಾರಿಗಳಿಗೆ ಈಗ ಸೂಚನೆ ನೀಡಿದ್ದಾರೆ. ಪರಸ್ಪರ ಒಪ್ಪಿಗೆಯೊಂದಿಗೆ ಒಟ್ಟಿಗೆ ಓಡಾಡುವ ಹುಡುಗ, ಹುಡುಗಿ ವಿರುದ್ಧ  ಕ್ರಮ ಕೈಗೊಳ್ಳಬಾರದೆಂದೂ ಅವರು ಹೇಳಿದ್ದಾರೆ. ‘ಆ್ಯಸಿಡ್ ದಾಳಿ ನಡೆಸುವವರ ವಿರುದ್ಧ ತೀವ್ರ ಕ್ರಮ ಕೈಗೊಳ್ಳಬೇಕು. ಜೊತೆಗೆ ಪ್ರತಿದಿನ ಜಿಲ್ಲಾ ಪೊಲೀಸ್ ಅಧಿಕಾರಿಗಳ ಜೊತೆ ಜಿಲ್ಲಾ ಮ್ಯಾಜಿಸ್ಟ್ರೇಟರು ಇಂತಹ ಪ್ರಕರಣಗಳ ಅವಲೋಕನ ಮಾಡಬೇಕು’  ಎಂದು ಮುಖ್ಯಮಂತ್ರಿ  ಹೇಳಿರುವುದು ಸಕಾರಾತ್ಮಕವಾದದ್ದು. ಆದರೆ  ಲವ್ ಜಿಹಾದ್‌ ಮತ್ತು ರೋಮಿಯೊನಿಗ್ರಹ ದಳಗಳು ಒಂದೇ ನಾಣ್ಯದ ಎರಡು ಮುಖಗಳಂತಾಗಬಾರದು ಎಂಬಂತಹ ಕಳಕಳಿಯ ಬಗ್ಗೆಯೂ ಎಚ್ಚರಿಕೆ ವಹಿಸುವುದು ಅಗತ್ಯ. ಏಕೆಂದರೆ ಲವ್‌ ಜಿಹಾದ್‌ ಈ ಹಿಂದೆ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ಬಳಕೆಯಾಗಿರುವುದನ್ನು ಜನ ಮರೆತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT