ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ವಿಮಾನ ಪ್ರಯಾಣಕ್ಕೆ ನಿರ್ಬಂಧ: ಶಿವಸೇನಾ ನೆರವಿಗೆ ಬಾರದ ಕೇಂದ್ರ

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಏರ್‌ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ವಿಮಾನ ಪ್ರಯಾಣ ನಿರ್ಬಂಧದ ಶಿಕ್ಷೆಗೆ ಗುರಿಯಾಗಿರುವ ಶಿವಸೇನಾ ಸಂಸದ ರವಿಂದ್ರ ಗಾಯಕ್‌ವಾಡ್‌ ಅವರ ನೆರವಿಗೆ ಬರಲು ಕೇಂದ್ರ ಸರ್ಕಾರ ನಿರಾಕರಿಸಿದೆ.

ಅನುಚಿತ ವರ್ತನೆ ತೋರುವ ಪ್ರಯಾಣಿಕರ ಬೋರ್ಡಿಂಗ್‌ ಪಾಸ್‌ಗಳನ್ನು ವಾಪಸ್‌ ಪಡೆಯುವ ಅಧಿಕಾರ ವಿಮಾನಯಾನ ಸಂಸ್ಥೆಗಳಿಗೆ ಇದೆ. 2014ರ ನವೆಂಬರ್‌ನಿಂದ ಇದು ಜಾರಿಯಲ್ಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪಿ. ಅಶೋಕ್‌ ಗಜಪತಿರಾಜು ಲೋಕಸಭೆಗೆ ಸೋಮವಾರ ತಿಳಿಸಿದರು.

‘ವಿಮಾನಗಳಲ್ಲಿ ಯಾವುದೇ ರೀತಿಯ ಹಿಂಸಾಚಾರ ನಡೆದರೆ ಅದು ದುರ್ಘಟನೆಗೆ ಕಾರಣವಾಗುತ್ತದೆ.  ಸಂಸದರೊಬ್ಬರು ಇಂತಹ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಾರೆ ಎಂದು ನಾನು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ.  ಸಂಸದರಿಗೆ ಪ್ರತ್ಯೇಕ ನಿಯಮ ಇಲ್ಲ. ಈ ವಿಷಯದಲ್ಲಿ ರಾಜಿಯಾಗಲು ಸಾಧ್ಯವಿಲ್ಲ’ ಎಂದು ರಾಜು ಹೇಳಿದರು.

ಕೋಲಾಹಲ: ಪಕ್ಷದ ಸಂಸದನ ಮೇಲೆ ನಿರ್ಬಂಧ ಹೇರಿರುವುದನ್ನು ಖಂಡಿಸಿ ಶಿವಸೇನಾ ಸದಸ್ಯರು ಲೋಕಸಭೆಯಲ್ಲಿ ಕೋಲಾಹಲ ಎಬ್ಬಿಸಿದರು. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್‌ ಅವರನ್ನು ಒತ್ತಾಯಿಸಿದರು.

‘ಈ ವಿಷಯದಲ್ಲಿ ಕೇಂದ್ರ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ. ಈ ಹಿಂದೆ ಹಾಸ್ಯ ಕಲಾವಿದ ಕಪಿಲ್‌ ಶರ್ಮಾ ಅವರ ಪ್ರಕರಣದಲ್ಲಿ ಕೇವಲ ತನಿಖೆ ಮಾಡಲಾಗಿತ್ತು. ಆದರೆ, ಈ ಪ್ರಕರಣದಲ್ಲಿ ಅಧಿವೇಶನ ನಡೆಯುತ್ತಿರುವಾಗಲೇ ಗಾಯಕ್‌ವಾಡ್‌ ಅವರು ವಿಮಾನಗಳಲ್ಲಿ ಪ್ರಯಾಣಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ’ ಎಂದು ಶಿವಸೇನಾ ಮುಖಂಡ ಆನಂದರಾವ್‌ ಅದ್ಸುಲ್‌ ಹೇಳಿದರು.

‘ಎಲ್ಲ ವಿಮಾನಯಾನ ಸಂಸ್ಥೆಗಳು ಗಾಯಕ್‌ವಾಡ್‌ ಅವರನ್ನು ಕಪ್ಪುಪಟ್ಟಿಗೆ ಸೇರಿಸಿವೆ. ಇದು ಸರಿಯಲ್ಲ. ಅವರಿಗೆ ನಿಷೇಧ ಹೇರಿರುವುದನ್ನು ಖಂಡಿಸುತ್ತೇನೆ. ಸಭಾಧ್ಯಕ್ಷರೇ, ಅವರ ಮೇಲಿನ ನಿರ್ಬಂಧವನ್ನು ವಾಪಸ್‌ ಪಡೆಯಲು ನೀವು ನಿರ್ದೇಶನ ನೀಡುತ್ತೀರಿ ಎಂಬ ವಿಶ್ವಾಸದಲ್ಲಿದ್ದೇನೆ’ ಎಂದರು.

ಕೇಂದ್ರ ವಿಮಾನಯಾನ ಸಚಿವರಿಂದ ತಮ್ಮ ಪರವಾಗಿ ಹೇಳಿಕೆ ಬಾರದೇ ಇದ್ದಾಗ ಶಿವಸೇನಾ ಸದಸ್ಯರು ಸಭ್ಯಾಧ್ಯಕ್ಷರ ಪೀಠದ ಮುಂದೆ  ಬಂದು ಧರಣಿ ನಡೆಸಿದರು.

ನಂತರ ಶಿವಸೇನಾದ ಆರು ಸಂಸದರು, ಗಜಪತಿ ರಾಜು ಸಮ್ಮುಖದಲ್ಲಿ ಸುಮಿತ್ರಾ ಮಹಾಜನ್‌ ಅವರನ್ನು ಭೇಟಿ ಮಾಡಿ ಕಪ್ಪುಪಟ್ಟಿಯಿಂದ ಗಾಯಕ್‌ವಾಡ್‌ ಹೆಸರು ತೆಗೆಸುವಂತೆ ಮನವಿ ಮಾಡಿದರು.

**

‘ಗಾಯಕ್‌ವಾಡ್‌ ಉಗ್ರರೇ?’
ಮುಂಬೈ:
ಸಂಸದ ರವೀಂದ್ರ ಗಾಯಕ್‌ವಾಡ್‌ ಅವರಿಗೆ ವಿಮಾನದಲ್ಲಿ ಪ್ರಯಾಣಕ್ಕೆ ಅವಕಾಶ ನೀಡದಿರುವುದನ್ನು ಖಂಡಿಸಿ ಅವರ ಬೆಂಬಲಿಗರು  ಸೋಮವಾರ ಉಸ್ಮಾನಾಬಾದ್‌ ಜಿಲ್ಲೆ ಬಂದ್‌ ನಡೆಸಿದರು.

ವಿಮಾನದಲ್ಲಿ ಹಾರಾಟ ಹಕ್ಕು ನಿರಾಕರಿಸಿ ನಮ್ಮ ನಾಯಕನಿಗೆ ಅವಮಾನ ಮಾಡುತ್ತಿರುವುದನ್ನು ಖಂಡಿಸಲು ಈ ಬಂದ್‌ಗೆ ಕರೆ ನೀಡಲಾಗಿದೆ ಎಂದು ಸೇನೆ ಯ ಉಸ್ಮಾನಾಬಾದ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ಕಮಲಾಕರ್‌ ಚೌವಾಣ್‌ ಹೇಳಿದ್ದಾರೆ.

ಎಲ್ಲಿದ್ದೇನೆಂದು ಹೇಳಲಾರೆ: ಗಾಯಕ್‌ವಾಡ್‌ ಅಜ್ಞಾತ ಸ್ಥಳಕ್ಕೆ ತೆರಳಿದ್ದು, ತಾವಿರುವ ಸ್ಥಳದ ಬಗ್ಗೆ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.

‘ನಾನು ಎಲ್ಲಿದ್ದೇನೆಂದು ನಿಮಗೆ ಹೇಳಲಾರೆ. ನಾನು ನನ್ನ ಕುಟುಂಬದೊಂದಿಗೆ ಇದ್ದೇನೆ. ಕುಟುಂಬದ ಸದಸ್ಯರೊಂದಿಗೆ ಹಬ್ಬವನ್ನಾಚರಿಸಿ ಸಂಸತ್ತಿಗೆ ಮರಳುತ್ತೇನೆ’ ಎಂದು ಗಾಯಕ್‌ವಾಡ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT