ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಭಾರತದ ಗೆಲುವಿನ ಆರಂಭ

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಚಿತ್ತಗಾಂಗ್‌: ನಾಯಕ ಬಾಬಾ ಅಪರಾಜಿತ್‌ (100; 91ಎ, 6ಬೌಂ, 3ಸಿ) ಅವರ  ಶತಕದ ಬಲದಿಂದ 23 ವರ್ಷ ದೊಳಗಿನವರ ಭಾರತ ತಂಡ ದವರು ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಎಮರ್ಜಿಂಗ್‌ ಟೀಮ್ಸ್‌ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಜಯದ ಆರಂಭ ಕಂಡಿದ್ದಾರೆ.

ಜಹುರ್‌ ಅಹ್ಮದ್‌ ಚೌಧರಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಎ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ 35ರನ್‌ಗಳಿಂದ ಶ್ರೀಲಂಕಾವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಅಪರಾಜಿತ್‌ ಪಡೆ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 288ರನ್‌ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಶ್ರೀಲಂಕಾ ತಂಡ 48.2 ಓವರ್‌ಗಳಲ್ಲಿ 253ರನ್‌ಗಳಿಗೆ ಆಲೌಟ್‌ ಆಯಿತು. ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ  ಮೂರನೇ ಓವರ್‌ನಲ್ಲಿ ಆಘಾತ ಎದುರಾಯಿತು. ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್‌ (1) ಬೇಗನೆ ವಿಕೆಟ್‌ ಒಪ್ಪಿಸಿದರು.

ಬಳಿಕ ಶಿವಂ ಚೌಧರಿ (56; 68ಎ, 7ಬೌಂ) ಮತ್ತು ಶುಭಮನ್‌ ಗಿಲ್‌ (27; 33ಎ, 2ಬೌಂ) ತಾಳ್ಮೆಯ ಇನಿಂಗ್ಸ್‌ ಕಟ್ಟಿ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ 57ರನ್‌ ಗಳಿಸಿತು.

ಶುಭಮನ್‌ 15ನೇ ಓವರ್‌ನಲ್ಲಿ ಔಟಾದ ಬಳಿಕ ಬಂದ ಅಪರಾಜಿತ್‌ ಸೊಗಸಾದ ಆಟ ಆಡಿದರು.

ಲಂಕಾ ಬೌಲರ್‌ಗಳನ್ನು ಕೆಚ್ಚೆದೆ ಯಿಂದ ಎದುರಿಸಿದ ಅವರು  ಮೂರನೇ ವಿಕೆಟ್‌ಗೆ ಶಿವಂ ಜೊತೆ 52 ಮತ್ತು ನಾಲ್ಕನೇ ವಿಕೆಟ್‌ಗೆ ಹನುಮ ವಿಹಾರಿ  (56; 58ಎ, 6ಬೌಂ) ಅವರೊಂದಿಗೆ   119ರನ್‌ ಪೇರಿಸಿ ತಂಡದ ಮೊತ್ತವನ್ನು 230ರ ಗಡಿ ದಾಟಿಸಿದರು. ಈ ಮೂವರ ವಿಕೆಟ್‌ ಪತನದ ಬಳಿಕ ತಂಡ ಕುಸಿತದ ಹಾದಿ ಹಿಡಿಯಿತು.

ಗುರಿ ಬೆನ್ನಟ್ಟಿದ ಸಿಂಹಳೀಯ ನಾಡಿನ ತಂಡಕ್ಕೆ ಮೊದಲ ಓವರ್‌ನಲ್ಲೇ ಆಘಾತ ಎದುರಾಯಿತು. ನಾಲ್ಕನೇ ಎಸೆತದಲ್ಲಿ ಅಶ್ವಿನ್‌ ಕ್ರಿಸ್ಟ್‌, ಆರಂಭಿಕ ಬ್ಯಾಟ್ಸ್‌ಮನ್‌ ಚಂದ್ರಗುಪ್ತಾ ಅವರನ್ನು ಔಟ್‌ ಮಾಡಿದರು. ಸಧೀರ ಸಮರವಿಕ್ರಮ (13) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಶೆಹಾನ್‌ ಜಯಸೂರ್ಯ (64; 60ಎ, 6ಬೌಂ, 2ಸಿ) ಮತ್ತು ಚರಿತ ಅಸಲಾಂಕ (68; 94ಎ, 6ಬೌಂ) ಮೂರನೇ ವಿಕೆಟ್‌ಗೆ 89ರನ್‌ಗಳ ಜೊತೆಯಾಟ ಆಡಿದ್ದರಿಂದ ತಂಡದ ಗೆಲುವಿನ ಆಸೆ ಚಿಗುರೊಡೆದಿತ್ತು.

ಇವರು ಔಟಾದ ನಂತರ ಬಂದ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಕಟ್ಟಿಹಾಕಿದ ಭಾರತದ ಬೌಲರ್‌ಗಳು ಎದುರಾಳಿಗಳ ಕನಸಿಗೆ ಅಡ್ಡಿಯಾದರು.

ಸಂಕ್ಷಿಪ್ತ ಸ್ಕೋರ್‌: ಭಾರತ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 288 (ಶಿವಂ ಚೌಧರಿ 56, ಬಾಬಾ ಅಪರಾಜಿತ್‌ 100, ಹನುಮ ವಿಹಾರಿ 56, ಅಶ್ವಿನ್‌ ಕ್ರಿಸ್ಟ್‌ ಔಟಾಗದೆ 18; ಅಸಿತಾ ಫರ್ನಾಂಡೊ 39ಕ್ಕೆ1, ಚಾಮಿಕ ಕರುಣಾರತ್ನೆ 57ಕ್ಕೆ2, ಅಮಿಲಾ ಅಪೊನ್ಸೊ 42ಕ್ಕೆ2).

ಶ್ರೀಲಂಕಾ: 48.2 ಓವರ್‌ಗಳಲ್ಲಿ 253 (ಶೆಹಾನ್ ಜಯಸೂರ್ಯ 64, ಚರಿತ ಅಸಲಂಕಾ 68, ವಾನಿಡು ಹಸರಂಗ 38, ಚಾಮಿಕ ಕರುಣಾರತ್ನೆ 18; ಅಶ್ವಿನ್‌ ಕ್ರಿಸ್ಟ್‌ 55ಕ್ಕೆ3, ಕಾನಿಷ್ಕ್‌ ಸೇಠ್‌ 53ಕ್ಕೆ3, ರಾಹುಲ್‌ ಚಾಹರ್ 51ಕ್ಕೆ2).  ಫಲಿತಾಂಶ: ಭಾರತಕ್ಕೆ 35ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT