ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆ, ಪರೀಕ್ಷೆ ನಡುವೆ ಉಪಚುನಾವಣೆ

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಬಿರುಸಿನ ಪ್ರಚಾರದ ಮೂಲಕ ರಂಗೇರಿರುವ ನಂಜನಗೂಡು ಕ್ಷೇತ್ರದ ಉಪಚುನಾವಣೆಯ ಜತೆಗೆ ಶ್ರೀಕಂಠೇಶ್ವರ ಜಾತ್ರಾ ಮಹೋತ್ಸವ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಇರುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.

ಕಾಂಗ್ರೆಸ್‌ ಹಾಗೂ ಬಿಜೆಪಿ ಘಟಾನುಘಟಿ ನಾಯಕರು ಅಖಾಡಕ್ಕಿಳಿದು ಕ್ಷೇತ್ರದಲ್ಲಿ ಅಬ್ಬರ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಚಾರ ಸಭೆ, ಸಮಾವೇಶ, ಪಾದಯಾತ್ರೆ ಮೂಲಕ ಮತದಾರರನ್ನು ಸೆಳೆಯುವಲ್ಲಿ ನಿರತರಾಗಿದ್ದಾರೆ. ಹೀಗಾಗಿ, ಉಪಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವುದರ ಜತೆಗೆ ಜಾತ್ರೆ ಹಾಗೂ ಪರೀಕ್ಷೆಗೂ ಭದ್ರತೆ ಒದಗಿಸಬೇಕಾದ ಜವಾಬ್ದಾರಿ ಪೊಲೀಸರ ಹೆಗಲೇರಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾರ್ಚ್ 30ರಿಂದ ಏ. 12ರ ವರೆಗೆ ನಡೆಯಲಿದ್ದು, 8 ಮತಕೇಂದ್ರಗಳನ್ನು ಪರೀಕ್ಷೆ ಕೇಂದ್ರಗಳನ್ನಾಗಿಯೂ ಗುರುತಿಸಲಾಗಿದೆ. ಜಾತ್ರೆ 31ರಿಂದ 11ರ ವರೆಗೆ ನಡೆಯಲಿದೆ. 7ರಂದು ರಥೋತ್ಸವ ಜರುಗಲಿದ್ದು, ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ.

‘ಮತದಾನ ದಿನದಂದು ಪರೀಕ್ಷೆ ಇರುವುದಿಲ್ಲ. ಹೀಗಾಗಿ, ಕೇಂದ್ರಗಳನ್ನು ಏಪ್ರಿಲ್‌ 9ರಂದು ಮತದಾನಕ್ಕೆ ಬಳಸಿಕೊಂಡು ಮಾರನೇ ದಿನ ನಡೆಯಲಿರುವ ಪರೀಕ್ಷೆಗೆ ಸಿದ್ಧಪಡಿಸಿ ಕೊಡಲಾಗುವುದು. ಪರೀಕ್ಷೆ ಹಾಗೂ ಜಾತ್ರೆಯನ್ನು ಸುಗಮವಾಗಿ ನಡೆಸಲು ಪ್ರತ್ಯೇಕ ಸಿಬ್ಬಂದಿ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಜಾತ್ರಾ ಮಹೋತ್ಸವದಲ್ಲಿ ಅನ್ನದಾನ ಅಥವಾ ಪ್ರಸಾದ ವಿತರಣೆ ಮಾಡಲು ಬಯಸುವವರು ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಅಲ್ಲದೆ, ದೇಗುಲದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿ ಆವರಣದಲ್ಲಿ ಪ್ರಚಾರದಲ್ಲಿ ತೊಡಗುವವರ ಮೇಲೆ ಕಣ್ಣಿಡಲಾಗಿದೆ.
ಮತದಾನದ ದಿನ ಅರೆ ಸೇನಾಪಡೆಯ ಆರು ತುಕಡಿಗಳನ್ನು ಕ್ಷೇತ್ರಕ್ಕೆ ನಿಯೋಜಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ರಾಜ್ಯ ಮೀಸಲು ಪೊಲೀಸ್‌ ಪಡೆಯ 10 ತುಕಡಿ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ 14 ತುಕಡಿ ಹಾಗೂ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ 6 ತುಕಡಿಗಳು ಇರಲಿವೆ.
‘ಉಪಚುನಾವಣೆಗೆ ಹಿಂದೆಂದೂ ಇಷ್ಟೊಂದು ಭದ್ರತೆ ಒದಗಿಸಿದ ಉದಾಹರಣೆ ಇಲ್ಲ. ಹಳ್ಳಿಹಳ್ಳಿಗೆ ಭೇಟಿ ನೀಡಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಕ್ರಮವಹಿಸಲಾಗಿದೆ’ ಎಂದು ಎಸ್ಪಿ ರವಿ ಡಿ.ಚನ್ನಣ್ಣನವರ ಮಾಹಿತಿ ನೀಡಿದರು.

ಉಪಚುನಾವಣೆಗೆ ವಿಶೇಷ ವೀಕ್ಷಕರಾಗಿ ಕೇಂದ್ರ ಚುನಾವಣಾ ಆಯೋಗದಿಂದ ನೇಮಕವಾಗಿರುವ ಐಎಎಸ್‌ ಅಧಿಕಾರಿ ಕರುಣ ರಾಜು ಅವರು ಸೋಮವಾರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

‘ದಲಿತರನ್ನು ಓಲೈಸಲು ಕಾಂಗ್ರೆಸ್‌ ಗಿಮಿಕ್‌’

ಮೈಸೂರು: ರಾಜ್ಯದಲ್ಲಿ ಅಧಿಕಾರ ಹಿಡಿದ ಸಂದರ್ಭದಲ್ಲಿ ನೆನಪಾಗದ ದಲಿತರು, ಚುನಾವಣೆ ಸಮೀಪಿಸುತ್ತಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷ ಪ್ರೀತಿ ಉಕ್ಕುತ್ತಿದೆ. ಇದೆಲ್ಲಾ ಚುನಾವಣೆ ಗಿಮಿಕ್‌ ಎಂದು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ ರಾವ್‌ ಇಲ್ಲಿ ಸೋಮವಾರ ಟೀಕಾ ಪ್ರಹಾರ ನಡೆಸಿದರು.

ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ. ಹಗರಣ, ದುರಾಡಳಿತ ಮತ್ತು ಅದಕ್ಷ ಆಡಳಿತದ ಮೂಲಕ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ 2016–17ರ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನದಲ್ಲಿ ಶೇ 50ರಷ್ಟೂ ಖರ್ಚು ಮಾಡಿಲ್ಲ. ಮೀಸಲಿಟ್ಟ ಸಾವಿರಾರು ಕೋಟಿ ಅನುದಾನ ಕೇವಲ ಕಾಗದದ ಮೇಲಷ್ಟೇ ಉಳಿದುಕೊಂಡಿದೆ. ಅದರ ಸಮರ್ಪಕ ಅನುಷ್ಠಾನವಾಗಿಲ್ಲ. ಇದು ದಲಿತ ಸಮುದಾಯದ ಬಗ್ಗೆ ಕಾಂಗ್ರೆಸ್‌ಗಿರುವ ನಿರ್ಲಕ್ಷ್ಯ ಧೋರಣೆಯನ್ನು ಬಿಚ್ಚುಡುತ್ತದೆ ಎಂದು ಕುಟುಕಿದರು.

ಮೀಸಲಾತಿ ಎಂಬುದು ಈಗ ಅಪ್ರಸ್ತುತವಾಗಿದೆ. ಆದರೆ, ಮೀಸಲಾತಿ ಪ್ರಮಾಣವನ್ನು ಶೇ 72ಕ್ಕೇರಿಸುವ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಅಧಿಕಾರದ ಕೊನೆಯ ದಿನಗಳಲ್ಲಿ ಈ ರೀತಿ ಹೇಳುತ್ತಿರುವ ಅವರು ಇಷ್ಟು ದಿನ ಏನು ಮಾಡಿದರು ಎಂದು ಪ್ರಶ್ನಿಸಿದರು.
‘ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್‌ಗೆ ಪಾಠ ಕಲಿಸಲಿದ್ದೇವೆ. ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡುವ ಪ್ರಕ್ರಿಯೆಗೆ ಈ ಮೂಲಕ ಮುನ್ನುಡಿ ಬರೆಯಲಿದ್ದೇವೆ’ ಎಂದರು.

‘ಇಡೀ ದೇಶ ಪ್ರಧಾನಿ ನರೇಂದ್ರ ಮೋದಿ ಆಡಳಿತದ ಮೇಲೆ ನಂಬಿಕೆ ಹಾಗೂ ಭರವಸೆ ಇಟ್ಟಿದೆ. ನೋಟು ಅಮಾನ್ಯೀಕರಣದ ಬಳಿಕ ಸ್ಥಳೀಯಮಟ್ಟದ ಚುನಾವಣೆಗಳಲ್ಲೂ ಬಿಜೆಪಿ ಗೆಲ್ಲುತ್ತಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ, ಬಹುಜನ ಸಮಾಜವಾದಿ ಪಕ್ಷ ಬೆಂಬಲಿಸುತ್ತಿದ್ದವರೂ ಬಿಜೆಪಿಯತ್ತ ವಾಲಿದ್ದಾರೆ. ಕರ್ನಾಟಕದಲ್ಲೂ ಅಂಥ ವಾತಾವರಣ ಸೃಷ್ಟಿಯಾಗುತ್ತಿದೆ’ ಎಂದು ವಿಶ್ಲೇಷಿಸಿದರು.

ಕಾಂಗ್ರೆಸ್‌ನ ದುರಾಡಳಿತ ಕೊನೆಗೊಳ್ಳಲು ದಿನಗಣನೆ ಶುರುವಾಗಿದೆ. ಸಿದ್ದರಾಮಯ್ಯ ಅವರಿಗಿದು ಕೊನೆಯ ಅವಕಾಶ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯ ನೆರವು ಲಭಿಸುವುದು ಬಿಜೆಪಿಗೆ ಮಾತ್ರ. ಉಪಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಳ್ಳಲಿದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್‌ ಸದಸ್ಯ ವಿ.ಸೋಮಣ್ಣ ಇದ್ದರು.

ಕಾಂಗ್ರೆಸ್‌ನ ಅದಕ್ಷ ಆಡಳಿತವನ್ನು ಸಹಿಸಲಾಗದೆ ಪಕ್ಷದಲ್ಲಿನ ಮೌಲ್ಯಯುತ ರಾಜಕಾರಣಿಗಳು ಬಿಜೆಪಿ ಸೇರುತ್ತಿದ್ದಾರೆ. ಶ್ರೀನಿವಾಸಪ್ರಸಾದ್‌, ಎಸ್‌.ಎಂ.ಕೃಷ್ಣ ಅದಕ್ಕೆ ಮುನ್ನುಡಿ ಬರೆದಿದ್ದಾರೆ
ಮುರಳೀಧರ್‌ ರಾವ್‌
ರಾಜ್ಯ ಬಿಜೆಪಿ ಉಸ್ತುವಾರಿ

ಶ್ರೀನಿವಾಸ ಪ್ರಸಾದ್‌ಗೆ ನೋಟಿಸ್‌

ಪ್ರಚಾರದ ವೇಳೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್‌ ಅವರಿಗೆ ಎರಡು ನೋಟಿಸ್‌ ನೀಡಲಾಗಿದೆ.
ವೃದ್ಧೆಯೊಬ್ಬರಿಗೆ ₹ 100 ನೀಡಿದ ಆರೋಪ ಹಾಗೂ ಶಾಲಾ ಆವರಣದಲ್ಲಿ ಪ್ರಚಾರ ನಡೆಸಿದ್ದಕ್ಕೆ ಚುನಾವಣಾಧಿಕಾರಿ ಜಿ.ಜಗದೀಶ್‌ ಈ ನೋಟಿಸ್‌ ನೀಡಿದ್ದಾರೆ.

ನಂಜನಗೂಡು ಕ್ಷೇತ್ರದ 154 ಹಳ್ಳಿಗಳಲ್ಲಿ ಸುಮಾರು 2 ಸಾವಿರ ಪೊಲೀಸರು ಕಾವಲು ಇರುತ್ತಾರೆ. ಉಪಚುನಾವಣೆ, ಜಾತ್ರೆ, ಪರೀಕ್ಷೆಗೆ ಸಮರ್ಪಕ ಭದ್ರತೆ ಒದಗಿಸಲಾಗುವುದು
ರವಿ ಡಿ.ಚನ್ನಣ್ಣನವರ, ಎಸ್ಪಿ, ಮೈಸೂರು

ಮುಖ್ಯಮಂತ್ರಿ ವಿರುದ್ಧ ದೂರು

ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ 72ಕ್ಕೆ ಹೆಚ್ಚಿಸುವ ಭರವಸೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಚುನಾವಣಾಧಿಕಾರಿಗೆ ಬಿಜೆಪಿ ದೂರು ನೀಡಿದೆ. ಉಪಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಉಮೇಶ್‌ ಕುಮಾರ್‌ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT