ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಯೊಬ್ಬರ ತಲೆಗೆ ₹37 ಸಾವಿರ ಸಾಲದ ಹೊರೆ

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಬೇಕಾಬಿಟ್ಟಿ ಸಾಲ ಮಾಡುತ್ತಿದ್ದು, ರಾಜ್ಯದ ಪ್ರತಿಯೊಬ್ಬರ ತಲೆಯ ಮೇಲೆ ₹37,290 ಸಾಲದ ಹೊರೆ ಬಿದ್ದಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ವಿಧಾನಸಭೆಯಲ್ಲಿ ಸೋಮವಾರ   ಬಜೆಟ್‌ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ‘2017– 18ನೇ ಸಾಲಿನ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ ₹2.42 ಲಕ್ಷ ಕೋಟಿಯಾಗಲಿದೆ. ರಾಜ್ಯದ ಒಟ್ಟು ಅಂತರಿಕ ಉತ್ಪನ್ನದ ತಪ್ಪು ಲೆಕ್ಕ ನೀಡಿದ ಸಿದ್ದರಾಮಯ್ಯ, ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಮಿತಿಯಲ್ಲಿಯೇ ಸಾಲ ಮಾಡಿರುವುದಾಗಿ ಪ್ರತಿಪಾದಿಸುತ್ತಿದ್ದಾರೆ’ ಎಂದು ದೂರಿದರು.

‘ರಾಜ್ಯ ಸರ್ಕಾರದ ಸಾಲದ ಮೊತ್ತ ಹಾಗೂ ಬಜೆಟ್‌ ಗಾತ್ರ ಹೆಚ್ಚುತ್ತಲೇ ಇದೆ.  ಆದರೆ, ಕಳೆದ ನಾಲ್ಕು ವರ್ಷಗಳಿಂದ ವಿವಿಧ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುಮೋದನೆ ನೀಡಿದ್ದ ₹80 ಸಾವಿರ ಕೋಟಿ ಖರ್ಚಾಗಿಲ್ಲ. ಇದೊಂದು ಅರ್ಥಹೀನ ಬಜೆಟ್‌’ ಎಂದು ಟೀಕಿಸಿದರು.
‘ನಾಲ್ಕು ವರ್ಷಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ₹26,473 ಕೋಟಿ ನೀಡಿದ್ದು, ₹18,784 ಕೋಟಿ ಬಿಡುಗಡೆ ಮಾಡಲಾಗಿದೆ. ₹7,689 ಕೋಟಿ ಖರ್ಚಾಗದೆ ಉಳಿದಿದೆ.  ಬೆಳೆಹಾನಿ, ಕೃಷಿ ಉತ್ಪನ್ನದ ಬೆಲೆ ಕುಸಿತ ಹಾಗೂ ಸಾಲದ ಹೊರೆಯಿಂದ ಕಂಗೆಟ್ಟ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಬಳಸದೆ ಇರುವ ಅನುದಾನವನ್ನು ರೈತರಿಗೆ ನೀಡಿದ್ದರೆ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗುತ್ತಿತ್ತು’ ಎಂದು ಕುಮಾರಸ್ವಾಮಿ ಹೇಳಿದರು.

‘ಜಲಸಂಪನ್ಮೂಲ ಇಲಾಖೆಯಲ್ಲಿ ₹12,800 ಕೋಟಿ, ಪಶುಸಂಗೋಪನೆ ಇಲಾಖೆಯಲ್ಲಿ ₹1,200 ಕೋಟಿ, ಶಿಕ್ಷಣ ಇಲಾಖೆಯಲ್ಲಿ ₹10 ಸಾವಿರ ಕೋಟಿ, ಮಹಿಳಾ  ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ₹1,955 ಕೋಟಿ, ವಸತಿ ಇಲಾಖೆಯಲ್ಲಿ ₹2,282 ಕೋಟಿ ಖರ್ಚಾಗಿಲ್ಲ’ ಎಂದೂ ಅವರು ವಿವರಿಸಿದರು.
‘ಸಮಾಜ ಕಲ್ಯಾಣ ಇಲಾಖೆಯಲ್ಲಿ  ಪರಿಶಿಷ್ಟ ಜಾತಿ ವಿಶೇಷ ಯೋಜನೆ ಮತ್ತು ಗಿರಿಜನ ಉಪ ಘಟಕ ಯೋಜನೆಯಡಿ ₹60 ಸಾವಿರ ಕೋಟಿ ತೆಗೆದಿರಿಸಲಾಗಿತ್ತು. ಆದರೆ, ₹47,186 ಕೋಟಿ ಮಾತ್ರ ಖರ್ಚು ಮಾಡಲಾಗಿದೆ. ₹13 ಸಾವಿರ ಕೋಟಿ ಖರ್ಚು ಮಾಡಿಲ್ಲ. ಇಷ್ಟು ಬೃಹತ್‌ ಮೊತ್ತದ ಹಣ ಖರ್ಚು ಮಾಡಿದ್ದರೂ ದಲಿತರ ಜೀವನಮಟ್ಟ ಎಷ್ಟರ ಮಟ್ಟಿಗೆ ಸುಧಾರಣೆಯಾಗಿದೆ, ಎಷ್ಟು ಕುಟುಂಬಗಳು  ಆರ್ಥಿಕವಾಗಿ  ಸ್ವಾವಲಂಬಿಯಾಗಿವೆ ಎಂಬ ಬಗ್ಗೆ ಸಾಮಾಜಿಕ ಪರಿಣಾಮದ ಸಮೀಕ್ಷೆ ನಡೆಸಿ ಜೂನ್‌–ಜುಲೈನಲ್ಲಿ ಸದನದ ಮುಂದಿಡಿ’ ಎಂದು ಆಗ್ರಹಿಸಿದರು.

‘ರೈತರ ಸಾಲದ ಮರುಪಾವತಿ ಅವಧಿಯನ್ನು ಇದೇ 31ರವರೆಗೆ ವಿಸ್ತರಿಸಲಾಗಿದೆ. ಈ ವರ್ಷವೂ ಬೆಳೆ ರೈತರಿಗೆ ಸಿಕ್ಕಿಲ್ಲ. ಸಾಲ ಮರುಪಾವತಿ ಅವಧಿಯನ್ನು ಡಿಸೆಂಬರ್‌ವರೆಗೆ ವಿಸ್ತರಿಸಬೇಕು’ ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಮೆಟ್ರೊ ಬಗ್ಗೆ ಇರುವ ಕಾಳಜಿ ಯುಕೆಪಿಗೆ ಇಲ್ಲವೇಕೆ: ಬಸವರಾಜ ಬೊಮ್ಮಾಯಿ ಪ್ರಶ್ನೆ

‘ವಿಧಾನಸೌಧದಲ್ಲಿ ನಿಂತರೆ ಕಣ್ಣೆದುರು ಕಾಣುವ ಮೆಟ್ರೊಗೆ ಸಂಪನ್ಮೂಲ ಸಂಗ್ರಹಿಸಲು ತೋರುವ ಕಳಕಳಿ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಕಾಮಗಾರಿಗಳ ವಿಷಯದಲ್ಲಿ ಸರ್ಕಾರ ತೋರಿಸುತ್ತಿಲ್ಲ ಏಕೆ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಬಜೆಟ್‌ ಕುರಿತು ಮಾತನಾಡಿದ ಅವರು, ‘ಹೆಚ್ಚುವರಿ ಸೆಸ್‌ ಹಾಕಿ ನಮ್ಮ ಮೆಟ್ರೊ ಯೋಜನೆಗೆ ₹50 ಸಾವಿರ ಕೋಟಿ ಸಂಗ್ರಹಿಸಲಾಗಿದೆ. ಕಳೆದ 4 ವರ್ಷಗಳಲ್ಲಿ ಯುಕೆಪಿ ಯೋಜನೆಗಾಗಿ ವಿಶೇಷ ಸೆಸ್‌ ಹಾಕಿದ್ದರೆ ₹15 ಸಾವಿರ ಕೋಟಿಯಿಂದ ₹20 ಸಾವಿರ ಕೋಟಿ ಸಂಗ್ರಹಿಸಲು ಸಾಧ್ಯವಿತ್ತು. ಮೆಟ್ರೊ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತ. ಆದರೆ, ಯುಕೆಪಿ 3ನೇ ಹಂತದ ಯೋಜನೆ ಅನುಷ್ಠಾನವಾದರೆ 16 ಲಕ್ಷ ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಟ್ಟು, ಇಡೀ ರಾಜ್ಯದ ಆರ್ಥಿಕ ಚಿತ್ರಣವೇ ಬದಲಾಗುತ್ತಿತ್ತು’ ಎಂದು ವಿವರಿಸಿದರು.

‘ಯುಕೆಪಿ ಯೋಜನೆಯಡಿ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿ ಪದೇ ಪದೇ ನಿಲುವು ಬದಲಾಯಿಸಿದ್ದರಿಂದಾಗಿ ಪರಿಹಾರ ಮೊತ್ತದ ಪ್ರಮಾಣದ ನಾಲ್ಕು ಪಟ್ಟು ಹೆಚ್ಚಳವಾದಂತಾಗಿದೆ. ಭೂಮಿ ಕಳೆದುಕೊಳ್ಳುವ 21 ಹಳ್ಳಿಗಳ ರೈತರನ್ನು ಸರ್ಕಾರ ಗೊಂದಲಕ್ಕೆ ದೂಡಿದೆ’ ಎಂದು ಬೊಮ್ಮಾಯಿ ಟೀಕಿಸಿದರು.

‘ಯಲಬುರ್ಗಾದಲ್ಲಿ ವೇಶ್ಯಾವಾಟಿಕೆಗೆ ತಳ್ಳುವ ಜಾಲ’
‘ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನಲ್ಲಿ ತೀವ್ರ ಬಡತನ ಇದೆ. ಅಲ್ಲಿನ ಅಪ್ರಾಪ್ತ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡಲಾಗುತ್ತಿದೆ. ಅಲ್ಲದೆ, ಅವರನ್ನು ಬ್ಲೂಫಿಲಂ ತೆಗೆಯಲು ಕೆಲವು ದುಷ್ಕರ್ಮಿಗಳು ಬಳಸಿಕೊಳ್ಳುತ್ತಿದ್ದಾರೆ ಎಂದು ಸರ್ಕಾರದ ಅಧಿಕಾರಿಗಳೇ ವರದಿ ನೀಡಿದ್ದಾರೆ. ಹಾಗಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲವೇಕೆ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನದ ಸಂಬಂಧ ಸರ್ಕಾರ ನೇಮಿಸಿದ್ದ ನೋಡಲ್‌ ಅಧಿಕಾರಿ ವರ್ಷದ ಹಿಂದೆಯೇ ಯಲಬುರ್ಗಾ ಕುರಿತು ವರದಿ ನೀಡಿದ್ದರು. ಅಲ್ಲಿನ ಬಡತನ ದುರ್ಬಳಕೆ ಮಾಡಿಕೊಂಡು ಹೆಣ್ಣುಮಕ್ಕಳನ್ನು ನಗರಕ್ಕೆ ಕರೆತರಲಾಗುತ್ತಿದೆ. ಅಂತಹ ಹೆಣ್ಣುಮಕ್ಕಳನ್ನು ನೃತ್ಯ, ಲೈಂಗಿಕ ಚಟುವಟಿಕೆ ಹಾಗೂ  ಕೀಳು ದುಡಿಮೆಗೆ ಬಳಸಿಕೊಳ್ಳಲಾಗುತ್ತಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT