ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

137ರನ್‌ಗಳಿಗೆ ಕುಸಿದ ಆಸ್ಟ್ರೇಲಿಯಾ: ಭಾರತದ ಸರಣಿ ಜಯಕ್ಕೆ ವೇದಿಕೆ ಸಜ್ಜು

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಧರ್ಮಶಾಲಾ: ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆಯ ಮೈದಾನದಲ್ಲಿ ಸೋಮವಾರ ಭಾರತದ ಬೌಲರ್‌ಗಳು ಪರಾಕ್ರಮ ಮೆರೆದರು.

ತಮ್ಮ ಪರಿಣಾಮಕಾರಿ ದಾಳಿಯ ಮೂಲಕ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಗಳನ್ನು ಕಂಗೆಡಿಸಿದ ರವೀಂದ್ರ ಜಡೇಜ (24ಕ್ಕೆ3), ಆರ್‌. ಅಶ್ವಿನ್‌ (29ಕ್ಕೆ3), ಮತ್ತು ವೇಗಿ ಉಮೇಶ್‌ ಯಾದವ್‌ (29ಕ್ಕೆ3) ಅವರು ಮೂರನೇ ದಿನವೇ ಆತಿಥೇಯರ ಸರಣಿ ಗೆಲುವಿಗೆ ವೇದಿಕೆ ಸಿದ್ಧಗೊಳಿಸಿದರು.

ಇವರ ಅಮೋಘ ಆಟದಿಂದ ಭಾರತ ತಂಡ ಬಾರ್ಡರ್‌–ಗಾವಸ್ಕರ್‌ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯದ ಮೇಲೆ ಪೂರ್ಣ ಹಿಡಿತ ಸಾಧಿಸಿದೆ.

6 ವಿಕೆಟ್‌ಗೆ 248ರನ್‌ಗಳಿಂದ ಸೋಮವಾರ ಆಟ ಮುಂದುವರಿಸಿದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 118.1 ಓವರ್‌ಗಳಲ್ಲಿ 332ರನ್‌ ಗಳಿಸಿ 32ರನ್‌ಗಳ  ಮುನ್ನಡೆ ಪಡೆಯಿತು.

ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಕಾಂಗರೂಗಳ ನಾಡಿನ ತಂಡ 53.5 ಓವರ್‌ಗಳಲ್ಲಿ 137ರನ್‌ಗಳಿಗೆ ಆಲೌಟ್‌ ಆಯಿತು. ಹೀಗಾಗಿ ಭಾರತದ ಜಯಕ್ಕೆ 106ರನ್‌ಗಳ ಸುಲಭ ಗುರಿ ಸಿಕ್ಕಿತು.

ದ್ವಿತೀಯ ಇನಿಂಗ್ಸ್‌ ಶುರು ಮಾಡಿ  ತಂಡ 6 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 19ರನ್‌ ಗಳಿಸಿದೆ. ಇನ್ನೂ ಎರಡು ದಿನಗಳ ಆಟ ಬಾಕಿ ಇದ್ದು ಅಜಿಂಕ್ಯ ರಹಾನೆ ಪಡೆ ಮಂಗಳವಾರವೇ ಯುಗಾದಿಯ ಸಂಭ್ರಮ ಆಚರಿಸಲು ಸಿದ್ಧವಾಗಿದೆ. ಅದಕ್ಕಾಗಿ ಇನ್ನು  87ರನ್‌ ಗಳಿಸಬೇಕಿದೆ.

ಉಮೇಶ್‌–ಭುವಿ ಮೋಡಿ: ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಅವಧಿ ಯಲ್ಲಿ ಭಾರತದ ವೇಗಿಗಳಾದ ಉಮೇಶ್‌ ಯಾದವ್‌ ಮತ್ತು ಭುವನೇಶ್ವರ್‌ ಕುಮಾರ್‌   ಕಾಡಿದರು.

ಹೊಸ ಚೆಂಡಿನ ಪೂರ್ಣ ಲಾಭ ಎತ್ತಿಕೊಂಡ ಇವರು ‘ಇನ್‌ ಸ್ವಿಂಗ್‌’, ‘ಔಟ್‌ ಸ್ವಿಂಗ್‌’ ಮತ್ತು ‘ಬೌನ್ಸ್‌’ ಎಸೆತಗಳ ಮೂಲಕ ಡೇವಿಡ್‌ ವಾರ್ನರ್‌ ಮತ್ತು ಮ್ಯಾಟ್‌ ರೆನ್‌ಷಾ ಅವರನ್ನು ಪೇಚಿಗೆ ಸಿಲುಕಿಸಿದರು.

ಭುವನೇಶ್ವರ್‌ ಬೌಲ್‌ ಮಾಡಿದ ಇನಿಂಗ್ಸ್‌ನ ಮೂರನೇ ಓವರ್‌ನ ಎರ ಡನೇ ಎಸೆತದಲ್ಲಿ ವಾರ್ನರ್‌, ಕ್ಯಾಚ್‌ ನೀಡಿದ್ದರು. ಅದನ್ನು ಸ್ಲಿಪ್‌ನಲ್ಲಿದ್ದ ಕರುಣ್‌ ನಾಯರ್‌ ಕೈಚೆಲ್ಲಿದರು.

ಮರು ಓವರ್‌ನಲ್ಲಿ ಉಮೇಶ್‌ ಯಾದವ್‌ ತಂಡದ ಸಂಭ್ರಮಕ್ಕೆ ಕಾರಣರಾದರು. ಅವರು ವಾರ್ನರ್‌ಗೆ (6) ಪೆವಿಲಿಯನ್‌ ದಾರಿ ತೋರಿಸಿದರು.

ನಡೆಯದ ಸ್ಮಿತ್‌ ಆಟ: ವಾರ್ನರ್‌ ಔಟಾದ ಬಳಿಕ ಬಂದ ನಾಯಕ ಸ್ಟೀವನ್‌ ಸ್ಮಿತ್‌ ತಾವೆದುರಿಸಿದ ಮೊದಲ ಎಸೆತವನ್ನು ಬೌಂಡರಿಗಟ್ಟಿ ಖಾತೆ ತೆರೆದರು.

ವನೇಶ್ವರ್‌ ಹಾಕಿದ 9ನೇ ಓವರ್‌ನ ಮೊದಲ ಎರಡು ಎಸೆತಗಳನ್ನೂ ಅವರು ಬೌಂಡರಿ ಗೆರೆ ದಾಟಿಸಿ  ಅಪಾಯ ಕಾರಿಯಾಗುವ ಲಕ್ಷಣ ತೋರಿದ್ದರು.

ಆದರೆ ಮರು ಎಸೆತದಲ್ಲಿ ಭುವಿ ಮೋಡಿ ಮಾಡಿದರು. ಅವರು ಹಾಕಿದ ‘ಶಾರ್ಟ್‌’ ಎಸೆತವನ್ನು ಸ್ಮಿತ್‌ ಬಲವಾಗಿ ಬಾರಿಸಲು ಮುಂದಾದರು. ಬ್ಯಾಟಿನ ಕೆಳ ಅಂಚಿಗೆ ತಾಗಿದ ಚೆಂಡು ವಿಕೆಟ್‌ಗೆ ಹೋಗಿ ಬಡಿಯಿತು.

15 ಎಸೆತಗಳಲ್ಲಿ 17ರನ್‌ ಗಳಿಸಿದ್ದ ಸ್ಮಿತ್‌ ನಿರಾಸೆಯಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.  ಸರಣಿಯಲ್ಲಿ 500ರನ್‌ ಪೂರೈಸುವ ಅವರ ಕನಸೂ ಕಮರಿತು.

ಇದರ ಬೆನ್ನಲ್ಲೇ ಉಮೇಶ್‌, ಮ್ಯಾಟ್‌ ರೆನ್‌ಷಾ (8; 33ಎ, 2ಬೌಂ) ವಿಕೆಟ್‌ ಉರುಳಿಸಿ ಪ್ರವಾಸಿ ಬಳಗದ  ಸಂಕಷ್ಟ ವನ್ನು ಇನ್ನಷ್ಟು ಹೆಚ್ಚಿಸಿದರು.

ಮ್ಯಾಟ್‌ ಔಟಾದಾಗ ಆಸ್ಟ್ರೇಲಿಯಾ ತಂಡ ಭಾರತದ ಮೊದಲ ಇನಿಂಗ್ಸ್‌  ಮುನ್ನಡೆಯ ಬಾಕಿ ಚುಕ್ತಾ ಮಾಡಲು ಒಂದು ರನ್‌ ಗಳಿಸಬೇಕಿತ್ತು.

ಮ್ಯಾಕ್ಸ್‌ವೆಲ್‌ ಅಬ್ಬರ: ಈ ಹಂತದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅಬ್ಬರ ಶುರುವಾಯಿತು. ಅವರನ್ನು ಆರಂಭದಲ್ಲೇ ನಿಯಂತ್ರಿಸುವ ಉದ್ದೇಶ ದಿಂದ ರಹಾನೆ, ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌  ಕೈಗೆ ಚೆಂಡು ನೀಡಿದರು.

ಮೊದಲ ಇನಿಂಗ್ಸ್‌ನಲ್ಲಿ ಮ್ಯಾಕ್ಸ್‌ವೆಲ್‌  ವಿಕೆಟ್‌ ಪಡೆದಿದ್ದ ಕುಲದೀಪ್‌ ಆಟ ಈ ಬಾರಿ ನಡೆಯಲಿಲ್ಲ. ಅವರು ಹಾಕಿದ ಮೊದಲ  ಓವರ್‌ನ ಎರಡನೇ ಎಸೆತದಲ್ಲಿ ಬೌಂಡರಿ ಗಳಿಸಿದ ಗ್ಲೆನ್‌ 16ನೇ ಓವರ್‌ನ ಮೂರು ಮತ್ತು ನಾಲ್ಕನೇ ಎಸೆತಗಳನ್ನು ಕ್ರಮವಾಗಿ ಬೌಂಡರಿ ಮತ್ತು ಸಿಕ್ಸರ್‌ಗೆ ಅಟ್ಟಿದರು. ಇನ್ನೊಂದೆಡೆ ಪೀಟರ್‌ ಹ್ಯಾಂಡ್ಸ್‌ಕಂಬ್‌ ಕೂಡ ಭಾರತದ ಬೌಲರ್‌ ಗಳನ್ನು ವಿಶ್ವಾಸದಿಂದ ಎದುರಿಸಿದರು.

ನಾಲ್ಕನೇ ವಿಕೆಟ್‌ಗೆ 56ರನ್‌ ಗಳಿಸಿದ್ದ ಈ ಜೋಡಿಯನ್ನು ಮುರಿಯುವಲ್ಲಿ  ಅಶ್ವಿನ್‌ ಯಶಸ್ವಿಯಾದರು.

25ನೇ ಓವರ್‌ನಲ್ಲಿ ಹ್ಯಾಂಡ್ಸ್‌ಕಂಬ್‌ (18; 46ಎ) ನೀಡಿದ ಕ್ಯಾಚ್‌ ಅನ್ನು  ಸ್ಲಿಪ್‌ನಲ್ಲಿದ್ದ ರಹಾನೆ ಹಿಂದಕ್ಕೆ ಬಾಗಿ ಹಿಡಿತಕ್ಕೆ ಪಡೆದ ರೀತಿ ಮನ ಸೆಳೆಯುವಂತಿತ್ತು.
ಇದರ ಬೆನ್ನಲ್ಲೇ ಸೌರಾಷ್ಟ್ರದ ಜಡೇಜ, ಜಾದು ಮಾಡಿದರು. ಅವರು 26ನೇ ಓವರ್‌ನ ಮೂರನೇ ಎಸೆತದಲ್ಲಿ ಶಾನ್‌ ಮಾರ್ಷ್‌ (1) ವಿಕೆಟ್‌ ಉರುಳಿಸಿ  ತಂಡ ಪಂದ್ಯದ ಮೇಲಿನ ಹಿಡಿತ ಬಿಗಿ ಮಾಡಿ ಕೊಳ್ಳುವಂತೆ ಮಾಡಿದರು.

ಚಹಾ ವಿರಾಮದ ಬಳಿಕ ಅಶ್ವಿನ್‌, ಮ್ಯಾಕ್ಸ್‌ವೆಲ್‌ ಅಬ್ಬರಕ್ಕೆ ತಡೆಯೊಡ್ಡಿದರು.  60 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 45ರನ್‌ ಗಳಿಸಿದ್ದ ಗ್ಲೆನ್‌  33ನೇ ಓವರ್‌ನ ಮೂರನೇ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಯಲ್ಲಿ ಬಂದಿ ಯಾದರು.

ಆ ನಂತರ ಜಡೇಜ ಮತ್ತೆ ಮಿಂಚಿದರು. ಅವರು  ಪ್ಯಾಟ್‌ ಕಮಿನ್ಸ್‌ (12; 49ಎ, 1ಬೌಂ) ಮತ್ತು ಸ್ಟೀವ್ ಓ ಕೀಫ್‌ (0) ಅವರಿಗೆ ರಟ್ಟೆ ಅರಳಿಸಲು ಅವಕಾಶ ನೀಡಲಿಲ್ಲ. ನೇಥನ್‌ ಲಾಯನ್‌  (0) ಅವರನ್ನು ಉಮೇಶ್‌ ಯಾದವ್‌ ಔಟ್‌ ಮಾಡಿದರೆ, 54ನೇ ಓವರ್‌ನಲ್ಲಿ ಹ್ಯಾಜಲ್‌ವುಡ್‌ ವಿಕೆಟ್‌ ಉರುಳಿಸಿದ ಅಶ್ವಿನ್‌, ಆಸ್ಟ್ರೇಲಿಯಾದ ಇನಿಂಗ್ಸ್‌ಗೆ ತೆರೆ ಎಳೆದರು.

(ಧರ್ಮಶಾಲಾದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ನಾಲ್ಕನೇ ಪಂದ್ಯದಲ್ಲಿ ಸೋಮವಾರ ಅರ್ಧಶತಕ ಗಳಿಸಿದಾಗ ಭಾರತದ ರವೀಂದ್ರ ಜಡೇಜ ಸಂಭ್ರಮಿಸಿದ ವಿವಿಧ ರೀತಿಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ –ಎಎಫ್‌ಪಿ ಚಿತ್ರ)

ಮುನ್ನಡೆ ತಂದುಕೊಟ್ಟ ‘ಜಡ್ಡು’: ಇದಕ್ಕೂ ಮುನ್ನ ರವೀಂದ್ರ ಜಡೇಜ ಮತ್ತು ವೃದ್ಧಿಮಾನ್‌ ಸಹಾ ಬ್ಯಾಟಿಂಗ್‌ನಲ್ಲಿ ಮೋಡಿ ಮಾಡಿದರು.

ಆಸ್ಟ್ರೇಲಿಯಾದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಇವರು  ಏಳನೇ ವಿಕೆಟ್‌ ಪಾಲುದಾರಿಕೆಯಲ್ಲಿ 96 ರನ್‌ ಕಲೆಹಾಕಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ನೇಥನ್‌ ಲಾಯನ್‌ ಬೌಲ್‌ ಮಾಡಿದ 109ನೇ ಓವರ್‌ನ ಕೊನೆಯ ಎಸೆತದಲ್ಲಿ ಒಂದು ರನ್‌ ಗಳಿಸಿ ಅರ್ಧಶತಕ ಪೂರೈ ಸಿದ ಜಡೇಜ ಆ ನಂತರವೂ ಅಂಗಳದಲ್ಲಿ ಬೌಂಡರಿ,ಸಿಕ್ಸರ್‌ಗಳ ಚಿತ್ತಾರ ಬಿಡಿಸಿದರು.

95ಎಸೆತಗಳಲ್ಲಿ ತಲಾ 4 ಬೌಂಡರಿ ಮತ್ತು ಸಿಕ್ಸರ್‌  ಸಹಿತ 63ರನ್‌ ಗಳಿಸಿದ್ದ ವೇಳೆ ಅವರು ಪ್ಯಾಟ್‌ ಕಮಿನ್ಸ್‌ಗೆ ವಿಕೆಟ್‌ ಒಪ್ಪಿಸಿದರು. ಸಹಾ  31ರನ್‌ ಗಳಿಸಿ ಔಟಾದರು. ಇದಕ್ಕಾಗಿ ಅವರು 102 ಎಸೆತಗಳನ್ನು ತೆಗೆದುಕೊಂಡರು.

**

***

ಮೂರನೇ ದಿನ 14 ವಿಕೆಟ್‌ ಪತನ
ನಾಲ್ಕನೇ ಟೆಸ್ಟ್‌ ಪಂದ್ಯದ ಮೂರನೇ ದಿನವಾದ ಸೋಮವಾರ ಒಟ್ಟು 14 ವಿಕೆಟ್‌ಗಳು ಪತನವಾದವು. ಭಾರತದ ನಾಲ್ಕು ಮತ್ತು ಆಸ್ಟ್ರೇಲಿಯಾದ 10 ಮಂದಿ ಬ್ಯಾಟ್ಸ್‌ಮನ್‌ಗಳು ಔಟಾದರು.

ಈ ಪೈಕಿ ವೇಗಿಗಳು ಆರು ವಿಕೆಟ್‌ ಪಡೆದರೆ, ಸ್ಪಿನ್ನರ್‌ಗಳು 8 ವಿಕೆಟ್‌ ಉರುಳಿಸಿದರು.

**

ಜಡೇಜ ಮೂರನೇ ಆಲ್‌ರೌಂಡರ್‌
ಭಾರತದ ರವೀಂದ್ರ ಜಡೇಜ ಅವರು ಒಂದೇ ಋತುವಿನಲ್ಲಿ 500ಕ್ಕೂ ಹೆಚ್ಚು ರನ್‌ ಗಳಿಸಿ, 50ಕ್ಕೂ ಹೆಚ್ಚು ವಿಕೆಟ್‌ ಪಡೆದ  ವಿಶ್ವದ ಮೂರನೇ ಆಲ್‌ರೌಂಡರ್‌ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು.

ಈ ಮೊದಲು ಭಾರತದ ಕಪಿಲ್‌ ದೇವ್ ಮತ್ತು ಆಸ್ಟ್ರೇಲಿಯಾದ ಮಿಷೆಲ್‌ ಜಾನ್ಸನ್‌ ಅವರಿಂದ ಈ ಸಾಧನೆ ಮೂಡಿಬಂದಿತ್ತು. ಕಪಿಲ್‌ 1979–80ರಲ್ಲಿ ಮತ್ತು ಜಾನ್ಸನ್‌  2008–09ರ ಋತುವಿನಲ್ಲಿ ಈ ಸಾಧನೆ ಮಾಡಿದ್ದರು.

**

ಜಡೇಜ–ವೇಡ್‌ ಮಾತಿನ ‘ಸಮರ’

ಮೂರನೇ ದಿನದಾಟದಲ್ಲಿ ರವೀಂದ್ರ ಜಡೇಜ ಮತ್ತು ಆಸ್ಟ್ರೇಲಿಯಾ ವಿಕೆಟ್‌ ಕೀಪರ್‌ ಮ್ಯಾಥ್ಯೂ ವೇಡ್‌ ನಡುವೆ ಮಾತಿನ ಚಕಮಕಿ ನಡೆಯಿತು.

ಅಶ್ವಿನ್‌ ಹಾಕಿದ 33ನೇ ಓವರ್‌ನಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಎಲ್‌ಬಿಡಬ್ಲ್ಯು ಔಟ್‌ ಆಗಿದ್ದರು. ಆಗ ಮ್ಯಾಕ್ಸ್‌ವೆಲ್‌ ಡಿಆರ್‌ಎಸ್‌ ನಿಯಮದ ಮೊರೆ ಹೋದರು. ಟಿ.ವಿ. ರೀಪ್ಲೆಯಲ್ಲೂ ಔಟಾಗಿದ್ದು ಸ್ಪಷ್ಟವಾಗಿದ್ದ ರಿಂದ ಅವರು ಅಂಗಳ ತೊರೆದರು. ಆ ಕ್ಷಣ ವೇಡ್‌ ಹತಾಶೆಯಿಂದ ಭಾರತದ ಆಟಗಾರರನ್ನು ಹೀಯಾಳಿಸಲು ಮುಂದಾ ದರು. ಆಗ ಅಶ್ವಿನ್‌ ಮಧ್ಯಪ್ರವೇಶಿಸಿ  ಅವರನ್ನು ಸಮಾಧಾನಪಡಿಸಿದರು.

ಅಷ್ಟಕ್ಕೆ ಸುಮ್ಮನಾಗದ ವೇಡ್‌ ಬಳಿಕ ಜಡೇಜ ಅವರೊಂದಿಗೆ ವಾಗ್ವಾದ ನಡೆಸಿದರು. ಈ ಬಗ್ಗೆ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಡೇಜ ‘ನಿಮ್ಮ ತಂಡ ನಾಲ್ಕನೇ ಪಂದ್ಯದಲ್ಲಿ ಸೋತ ಬಳಿಕ ಬಿಡುವಾದರೆ ನನ್ನ ಜೊತೆ  ಬಾ. ಇಬ್ಬರೂ ಒಟ್ಟಿಗೆ ಊಟ ಮಾಡೋಣ ಅಂತ ಮ್ಯಾಥ್ಯೂ ವೇಡ್‌ಗೆ ಕೇಳಿದ್ದೆ ಅಷ್ಟೆ. ಇದಕ್ಕೆ ವಿವಾದದ ರೂಪ ನೀಡುವುದು ಬೇಡ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT