ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡ್ಡಾಯವಾಗಿ ಹಾಜರಾಗಬೇಕಾದ ಸಚಿವರೇ ಗೈರು!

Last Updated 27 ಮಾರ್ಚ್ 2017, 19:39 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿ ಕಡ್ಡಾಯವಾಗಿ ಇರಬೇಕಾದ ಪಟ್ಟಿಯಲ್ಲಿದ್ದ ಸಚಿವರ ಗೈರು ಹಾಜರಿ ಬಿಜೆಪಿ ಶಾಸಕರ ಆಕ್ರೋಶಕ್ಕೆ ಕಾರಣವಾಯಿತು.

ಸೋಮವಾರ ಬೆಳಿಗ್ಗೆ 10.30ಕ್ಕೆ ಕಲಾಪ ಆರಂಭವಾಗಬೇಕಿತ್ತು. ಅರ್ಧಗಂಟೆ ವಿಳಂಬವಾಗಿ ಕಲಾಪ ಆರಂಭವಾದರೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರನ್ನು ಬಿಟ್ಟರೆ ಯಾವ ಸಚಿವರೂ ಸದನದಲ್ಲಿ ಇರಲಿಲ್ಲ.

ಸಚಿವರ ಗೈರು ಹಾಜರಿಗೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ‘ಬಜೆಟ್‌ ಕುರಿತು ಚರ್ಚೆ ನಡೆಯುವಾಗ ಸಚಿವರೇ ಇರುವುದಿಲ್ಲ ಎಂದ ಮೇಲೆ ಸದನ ನಡೆಸಿ ಪ್ರಯೋಜನವೇನು’ ಎಂದು ಪ್ರಶ್ನಿಸಿದರು.

ಅಷ್ಟರಲ್ಲಿ ಸದನಕ್ಕೆ ಹಾಜರಾದ ಕೃಷಿ ಸಚಿವ ಕೃಷ್ಣ ಬೈರೇಗೌಡ, ‘ಎಲ್ಲರೂ ಬರುತ್ತಿದ್ದಾರೆ’ ಎಂದು ಸಮಜಾಯಿಷಿ ನೀಡಿದರು.

ಸಚಿವರು ಯಾರೂ ಬರದೇ ಇದ್ದಾಗ ಸಿಟ್ಟಿಗೆದ್ದ ಬಿಜೆಪಿಯ ಸಿ.ಟಿ.ರವಿ, ‘ಸಚಿವರೆಲ್ಲಾ ಉಪ ಚುನಾವಣೆ ಪ್ರಚಾರಕ್ಕಾಗಿ ಗುಳೆ ಹೋಗಿದ್ದು, ಕಲಾಪ ನಡಾವಳಿಯನ್ನು ಸಚಿವ ಜಯಚಂದ್ರ ಅವರಿಗೆ ಗುತ್ತಿಗೆ ನೀಡಲಾಗಿದೆ’ ಎಂದು ವ್ಯಂಗ್ಯವಾಡಿದರು.

ಇದಕ್ಕೆ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ,  ಸುನೀಲ್‌ ಕುಮಾರ್‌, ಡಿ.ಎನ್‌. ಜೀವರಾಜ್‌ ಧ್ವನಿಗೂಡಿಸಿದರು.
ಜೆಡಿಎಸ್‌ನ ವೈ.ಎಸ್‌.ವಿ. ದತ್ತ, ‘ಚರ್ಚೆ ಕೇಳಿಸಿಕೊಳ್ಳಲು ಸರ್ಕಾರ ತಯಾರಿಲ್ಲ ಎಂದ ಮೇಲೆ ಮೊನ್ನೆಯೇ ಕಲಾಪ ಮುಗಿಸಿಬಿಡಬಹುದಿತ್ತು’ ಎಂದು ಕುಟುಕಿದರು.
ಆ ಹೊತ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕಾಗೋಡು ತಿಮ್ಮಪ್ಪ ಸದನಕ್ಕೆ ಬಂದರು.

ಗೈರು ಹಾಜರಾದವರು
ಆರ್‌.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ, ಎಚ್.ಸಿ. ಮಹದೇವಪ್ಪ, ಬಸವರಾಜ ರಾಯರಡ್ಡಿ, ಎಸ್‌.ಎಸ್‌. ಮಲ್ಲಿಕಾರ್ಜುನ.
ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದ್ದವರು ಎಂ.ಬಿ. ಪಾಟೀಲ, ಸಂತೋಷ ಲಾಡ್‌, ರುದ್ರಪ್ಪ ಲಮಾಣಿ, ಪ್ರಮೋದ್‌ ಮಧ್ವರಾಜ್‌.

ಸಚಿವರ ಪಟ್ಟಿ ಪ್ರಕಟಿಸಲು ಒತ್ತಾಯ

ಕಲಾಪದ ವೇಳೆ ಯಾವ ಸದನದಲ್ಲಿ ಯಾವ ಸಚಿವರು  ಹಾಜರಿರಬೇಕು ಎಂದು ಮೊದಲೇ ನಿಗದಿ ಮಾಡಲಾಗಿರುತ್ತದೆ. ಹೀಗಾಗಿ  ಸದನದಲ್ಲಿ ಹಾಜರಿರಬೇಕಾದ ಸಚಿವರ ಪಟ್ಟಿ ಪ್ರಕಟಸಿ ಎಂದು ಜಗದೀಶ ಶಟ್ಟರ್‌ ಸಭಾಧ್ಯಕ್ಷರನ್ನು ಒತ್ತಾಯಿಸಿದರು.

ಸೋಮವಾರ ಹಾಜರಿರಬೇಕಾದ ಸಚಿವರ ಪಟ್ಟಿಯನ್ನು ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಪ್ರಕಟಿಸಿದರು. ಸಚಿವರಾದ ಟಿ.ಬಿ. ಜಯಚಂದ್ರ, ಕೃಷ್ಣ ಬೈರೇಗೌಡ, ಕಾಗೋಡು ತಿಮ್ಮಪ್ಪ ಅವರು ಮಾತ್ರ ಸದನದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT