ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾದಲ್ಲಿ ದಾಳಿಗೆ ಒಳಗಾದ ಕೇರಳದ ವ್ಯಕ್ತಿ ಆತಂಕ: ಟ್ರಂಪ್ ಪ್ರಭಾವದ ಅನುಭವ

Last Updated 27 ಮಾರ್ಚ್ 2017, 19:42 IST
ಅಕ್ಷರ ಗಾತ್ರ

ಮೆಲ್ಬರ್ನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಭಾವ ಆಸ್ಟ್ರೇಲಿಯಾದ ಮೇಲೂ ಆದಂತಿದೆ ಎಂದು ಹೋಬರ್ಟ್‌ನಲ್ಲಿ ಹಲ್ಲೆಗೊಳಗಾಗಿದ್ದ ಕೇರಳದ ಲಿ ಮ್ಯಾಕ್ಸ್‌ ಜೋಯ್‌ ಆತಂಕ ವ್ಯಕ್ತಪಡಿಸಿದ್ದಾರೆ.

‘ಆಸ್ಟ್ರೇಲಿಯಾದಲ್ಲಿ ಜನಾಂಗೀಯ ಮನಸ್ಥಿತಿ ಬದಲಾಗುತ್ತಿದೆ.  ಹಲ್ಲೆಗಳು, ಜನಾಂಗೀಯ ನಿಂದನೆಗಳು ಮತ್ತು ಹಗೆತನ ಸಾಮಾನ್ಯ ಎನಿಸುತ್ತಿವೆ. ಹಲವು ಚಾಲಕರು ನಿಂದನೆಗೆ ಗುರಿಯಾಗಿದ್ದಾರೆ. ಆದರೆ ಎಲ್ಲರೂ ಪೊಲೀಸರಿಗೆ ದೂರು ನೀಡಿಲ್ಲ’ ಎಂದು ಜೋಯ್ ಹೇಳಿದ್ದಾರೆ.

ಹಲ್ಲೆ ನಡೆಸಿದ ಯುವಕರ ಗುಂಪು ಮೆಕ್‌ಡೊನಾಲ್ಡ್‌ನ ವ್ಯವಸ್ಥಾಪಕರ ಬಳಿಕ ಜಗಳ ಮಾಡುತ್ತಿತ್ತು. ಆದರೆ ಕಾಫಿ ಕುಡಿಯಲೆಂದು ತಾವು ಅಲ್ಲಿಗೆ ಹೋದಾಗ, ಅವರ ಗಮನ ತಮ್ಮತ್ತ ಸೆಳೆಯಿತು ಎಂದು ಅವರು ಹೇಳಿದ್ದಾರೆ.

‘‘ಅವರಲ್ಲಿ ಮೂವರು ತರುಣರು ನನ್ನ ಮುಖಕ್ಕೆ ಗುದ್ದಿ, ‘ದರಿದ್ರ ಭಾರತೀಯ, ನೀನೇಕೆ ಇಲ್ಲಿಗೆ ಬಂದೆ?’ ಎಂದು ನಿಂದಿಸಿದರು’’ ಎಂಬುದಾಗಿ ಜೋಯ್‌, ಎಸ್‌ಬಿಎಸ್‌ ವಾಹಿನಿಗೆ ತಿಳಿಸಿದ್ದಾರೆ.

ಹಿಂದೆಯೂ ಅನುಭವ: ಒಂದು ವಾರ ಹಿಂದೆಯೂ ತಮಗೆ ಜನಾಂಗೀಯ ನಿಂದನೆಯ ಅನುಭವ ಆಗಿದ್ದಾಗಿ ಅವರು ಹೇಳಿದ್ದಾರೆ.

‘ಕಳೆದ ವಾರ ಗ್ಲೆನಾರ್ಕಿಯಲ್ಲಿ ಪ್ರಯಾಣಿಕರಿಗೆ ಕಾಯುತ್ತಿದ್ದಾಗ ಪ್ರಾಥಮಿಕ ಶಾಲಾ ಬಾಲಕನೊಬ್ಬ, ಬಾಯಲ್ಲಿ ನೀರು ತುಂಬಿಕೊಂಡು ಕಾರಿನ ಕಿಟಕಿ ಮೂಲಕ ನನ್ನ ಮೈಮೇಲೆ ಉಗುಳಿದ್ದ’ ಎಂದು ತಿಳಿಸಿದ್ದಾರೆ.

ಕೇರಳದ ಕೊಟ್ಟಾಯಂನವರಾದ ಜೋಯ್ ಮೇಲೆ ಹೋಬರ್ಟ್‌ ನಗರದಲ್ಲಿ ಗುಂಪೊಂದು ಶನಿವಾರ ‘ಕಪ್ಪುವರ್ಣೀಯ ಭಾರತೀಯ’ ಎಂದು ನಿಂದಿಸಿ ಹಲ್ಲೆ ನಡೆಸಿತ್ತು. ಹೋಬರ್ಟ್‌ನಲ್ಲಿ ನರ್ಸಿಂಗ್‌ ವಿದ್ಯಾರ್ಥಿಯಾಗಿರುವ ಜೋಯ್‌, ಟ್ಯಾಕ್ಸಿ ಚಾಲಕರಾಗಿ ಅರೆಕಾಲಿಕ ಉದ್ಯೋಗ ಮಾಡುತ್ತಿದ್ದಾರೆ.

ಸುಷ್ಮಾ ಸ್ವರಾಜ್‌ಗೆ ಇ–ಮೇಲ್: ಹಲ್ಲೆ  ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ಜೋಯ್ ಇ–ಮೇಲ್ ಮೂಲಕ ವಿಸ್ತೃತ ಮಾಹಿತಿ ಕಳುಹಿಸಿದ್ದಾರೆ.

**

ತನಿಖೆ ಆರಂಭಿಸಿದ ಪೊಲೀಸರು
ಕೇರಳದ ವ್ಯಕ್ತಿ ಮೇಲೆ ನಡೆದಿರುವುದು ಜನಾಂಗೀಯ ಹಲ್ಲೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿರುವುದಾಗಿ ಆಸ್ಟ್ರೇಲಿಯಾದ ಟಸ್‌ಮೇನಿಯಾ ರಾಜ್ಯದ ಪೊಲೀಸರು ತಿಳಿಸಿದ್ದಾರೆ.

‘ಎಲ್ಲ ಹಲ್ಲೆಗಳನ್ನು ಟಸ್‌ಮೇನಿಯಾ ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಾರೆ. ಹಲ್ಲೆ  ಜನಾಂಗೀಯವೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಸಾಕ್ಷಿಗಳನ್ನು ವಿಚಾರಣೆಗೆ ಒಳಪಸಲಾಗಿದ್ದು ಮಾಹಿತಿ ಕಲೆಹಾಕಲಾಗಿದೆ’ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT