ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ಆಕ್ಷೇಪದ ಮಧ್ಯೆ 4 ಮಸೂದೆ ಮಂಡನೆ

Last Updated 27 ಮಾರ್ಚ್ 2017, 19:52 IST
ಅಕ್ಷರ ಗಾತ್ರ

ನವದೆಹಲಿ: ವ್ಯವಸ್ಥಿತ ಸ್ವರೂಪದಲ್ಲಿ ಇಲ್ಲದ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುವ ಉದ್ದೇಶದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಪೂರಕವಾದ ನಾಲ್ಕು ಮಸೂದೆಗಳನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.

ದೇಶದಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಈಗ ಇನ್ನೊಂದು ಹೆಜ್ಜೆ ಇರಿಸಿದಂತಾಗಿದೆ. ಸ್ವಾತಂತ್ರ್ಯಾನಂತರದ ಅತಿದೊಡ್ಡ ತೆರಿಗೆ ಸುಧಾರಣಾ ಕ್ರಮ ಈಗ ಕೊನೆಯ ಹಂತ ತಲುಪಿದೆ.

ಸಂಸತ್ತು ಈ ಮಸೂದೆಗಳನ್ನು ಅಂಗೀಕರಿಸುತ್ತಿದ್ದಂತೆ, ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ತೆರಿಗೆಗಳು ರದ್ದಾಗಲಿವೆ.   ದೇಶದಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ.

ಗರಿಷ್ಠ ಶೇ 40ರಷ್ಟು ತೆರಿಗೆ ವಿಧಿಸಲು ಅವಕಾಶ ಇರುವ,   ಕಡಿಮೆ ಮಟ್ಟದ ತೆರಿಗೆ ಪ್ರಯೋಜನ ಗ್ರಾಹಕರಿಗೆ ವರ್ಗಾವಣೆಯಾಗುವ ಕುರಿತು ನಿಗಾ ಇಡುವ ಲಾಭ ವಿರೋಧಿ ಪ್ರಾಧಿಕಾರ ರಚನೆ,  ಗ್ರಾಹಕರ ಕಲ್ಯಾಣ ನಿಧಿ ಸ್ಥಾಪನೆ, ತೆರಿಗೆ ತಪ್ಪಿಸುವವರನ್ನು ಬಂಧಿಸಲು ಈ ಮಸೂದೆಗಳು ಅವಕಾಶ ಮಾಡಿಕೊಡಲಿವೆ.

ನಾಲ್ಕು ಹಂತದ ತೆರಿಗೆ ಸ್ವರೂಪಕ್ಕೆ  (ಶೇ  5, 12, 18 ಮತ್ತು ಶೇ 28) ಜಿಎಸ್‌ಟಿ ಮಂಡಳಿಯು ಅನುಮೋದನೆ ನೀಡಿದೆ. ಹಣಕಾಸು ತುರ್ತು ಸಂದರ್ಭದಲ್ಲಿ ಗರಿಷ್ಠ ಶೇ 40ರಷ್ಟು ತೆರಿಗೆ  ವಿಧಿಸಲು  ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಪ್ರತಿಪಕ್ಷಗಳ ಆಕ್ಷೇಪ:  ವಿರೋಧ ಪಕ್ಷಗಳ ತೀವ್ರ ಆಕ್ಷೇಪದ ನಡುವೆಯೂ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು  ಮಸೂದೆಗಳನ್ನು ಮಂಡಿಸಿದರು.
ಪ್ರಶ್ನೋತ್ತರ ವೇಳೆ ಪೂರ್ಣಗೊಂಡ ಬಳಿಕೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಸಚಿವ ಜೇಟ್ಲಿ ಅವರಿಗೆ ಮಸೂದೆ ಮಂಡಿಸಲು ಅವಕಾಶ ನೀಡುತ್ತಿದ್ದಂತೆಯೇ ಕಾಂಗ್ರೆಸ್‌ ಸದಸ್ಯ ಕೆ.ಸಿ. ವೇಣುಗೋಪಾಲ್‌ ಆಕ್ಷೇಪ ವ್ಯಕ್ತಪಡಿಸಿದರು.

ಸೋಮವಾರದ ಕಲಾಪಗಳ ಕಾರ್ಯಸೂಚಿ ಪಟ್ಟಿಯಲ್ಲಿ ಸೇರ್ಪಡೆಯಾಗದ ಈ ಮಸೂದೆಗಳನ್ನು ಮಂಡಿಸಲು ಸರ್ಕಾರ ತರಾತುರಿ ತೋರುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಕಳೆದ ವಾರ ನಡೆದ ಸಂಸತ್ತಿನ ಕಲಾಪ ಸಲಹಾ ಸಮಿತಿಯ ಸಭೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿಲ್ಲ ಎಂದು ದೂರಿದರು,
‘ಈ ಮಸೂದೆಗಳನ್ನು ಶುಕ್ರವಾರ ಮಧ್ಯರಾತ್ರಿ ಆನ್‌ಲೈನ್‌ನಲ್ಲಿ ಅಳವಡಿಸುವ ಮೂಲಕ ಎಲ್ಲ ಸಂಸದರ ಗಮನಕ್ಕೂ ತರಲಾಗಿದೆ’ ಎಂದು ಸಂಸದೀಯ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಎಸ್‌.ಎಸ್‌. ಅಹ್ಲುವಾಲಿಯಾ ತಿಳಿಸುತ್ತಿದ್ದಂತೆಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್‌ನ ಸೌಗತ ರಾಯ್‌ ಹಾಗೂ ಎಐಎಂಎಲ್‌ಎಂನ ಅಸಾದುದ್ದಿನ್‌ ಓವೈಸಿ, ‘ಮಧ್ಯರಾತ್ರಿ ತಿಳಿಸುವಂತಹ ಅನಿವಾರ್ಯತೆ ಏನಿತ್ತು’ ಎಂದು ಪ್ರಶ್ನಿಸಿದರು.

‘ಸರಕು ಮತ್ತು ಸೇವಾ ತೆರಿಗೆ ಮಸೂದೆಯು ಅತ್ಯಂತ ಪ್ರಮುಖವಾಗಿದ್ದು, ಈ ಬಗ್ಗೆ ಸಂಸತ್‌ನಲ್ಲಿ ವಿಸ್ತೃತ ಚರ್ಚೆ ನಡೆಸುವುದು ಅಗತ್ಯ. ಆದರೆ, ಪ್ರತಿಪಕ್ಷಗಳ ಸದಸ್ಯರ ಗಮನಕ್ಕೇ ತಾರದೆ ಈ ರೀತಿ ತರಾತುರಿಯಲ್ಲಿ ಮಂಡಿಸುವುದಾದರೂ ಏಕೆ’ ಎಂದು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
‘ಸಂಸತ್‌ನ ಆಗುಹೋಗುಗಳನ್ನು ಆನ್‌ಲೈನ್‌ ಮೂಲಕ ತಿಳಿಸುವಂತಾದರೆ ನಾವು ಇಲ್ಲಿ ಕುಳಿತು ಚರ್ಚಿಸುವುದಾದರೂ ಏಕೆ.   ಸೋಮವಾರದ ಕಾರ್ಯಸೂಚಿಯಲ್ಲಿ ಸೇರಿರದ ಈ ಮಸೂದೆಗಳನ್ನು ಮಂಡಿಸಲು ತರಾತುರಿ  ತೋರುತ್ತಿರುವುದು ಏಕೆ’ ಎಂದು ಹರಿಹಾಯ್ದ ಕಾಂಗ್ರೆಸ್‌ ಸದಸ್ಯೆ ಸುಷ್ಮಿತಾ ದೇವ್‌, ಸಂಸತ್ತಿನ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ಮಂಗಳವಾರ ಮಂಡಿಸಬಹುದು ಎಂದರು.

ಸೋಮವಾರದ ಕಲಾಪ ಪಟ್ಟಿಯಲ್ಲಿ ಈ ಮಸೂದೆ ಮಂಡನೆ ವಿಷಯಯನ್ನು ಸೇರಿಸಿದ್ದರ ಬಗ್ಗೆ ಶುಕ್ರವಾರ ಮಧ್ಯರಾತ್ರಿ ಆನ್‌ಲೈನ್‌ಗೆ ಅಳವಡಿಸಿ ತಿಳಿಸಿರುವುದಲ್ಲದೆ, ಶನಿವಾರ ಎಲ್ಲ ಸದಸ್ಯರ ಗಮನಕ್ಕೂ ತರಲಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಅಂಗೀಕರಿಸುವ ಅಗತ್ಯ ಇರುವುದರಿಂದ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಸ್ಪೀಕರ್‌ ಸಮರ್ಥಿಸಿಕೊಂಡರು.

ಈ ಮಸೂದೆಗಳ ಕುರಿತು ತಕ್ಷಣಕ್ಕೇ ಚರ್ಚೆ ನಡೆಸಲು ವಿರೋಧ ಪಕ್ಷಗಳ ಸದಸ್ಯರು ಒಪ್ಪಿಕೊಳ್ಳದ್ದರಿಂದ ಬುಧವಾರ 7 ಗಂಟೆ ಕಾಲ ಚರ್ಚೆ ನಡೆಸಲು ನಿರ್ಧರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT