ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

45 ಉಗ್ರ ಸಂಘಟನೆಗಳಿಗೆ ನೆರವು!

Last Updated 27 ಮಾರ್ಚ್ 2017, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೇಲೆ ನಡೆದಿದ್ದ ಉಗ್ರರ ದಾಳಿ ಪ್ರಕರಣದ ಆರೋಪಿ ಹಬೀಬ್‌ ಮಿಯಾ, ಜಗತ್ತಿನ 45 ಉಗ್ರ ಸಂಘಟನೆಗಳ ಸದಸ್ಯರು ದೇಶದೊಳಗೆ ನುಸುಳಲು ಸಹಾಯ ಮಾಡಿದ್ದ’ ಎಂಬ ಆಘಾತಕಾರಿ ಮಾಹಿತಿ ಬಯಲಾಗಿದೆ.

ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹಬೀಬ್‌, ಸರಕು ಸಾಗಣೆ ಆಟೊ ಚಾಲಕನಾಗಿದ್ದ. ಬಾಂಗ್ಲಾದೇಶದ ಢಾಕಾದಿಂದ ಭಾರತದ ತ್ರಿಪುರದವರೆಗೆ ಆಟೊ ಓಡಿಸುತ್ತಿದ್ದರಿಂದ ಗಡಿಯಲ್ಲಿ ಅಕ್ರಮವಾಗಿ ನುಸುಳುವ ಬಗ್ಗೆಮಾಹಿತಿಯನ್ನೂ ಹೊಂದಿದ್ದ. ಇದನ್ನು ತನಿಖಾಧಿಕಾರಿ ಬಳಿಯೂ ಹೇಳಿಕೊಂಡಿದ್ದಾನೆ ಎಂದು ಗೊತ್ತಾಗಿದೆ.

ಅದೇ ಕಾರಣಕ್ಕೆ ಆತನನ್ನು ಸಂಪರ್ಕಿಸಿದ್ದ ನಿಷೇಧಿತ 45 ಉಗ್ರ ಸಂಘಟನೆಗಳ ಸದಸ್ಯರು, ಆಗಾಗ ಭಾರತಕ್ಕೆ ಬಂದು ಹೋಗಿರುವುದನ್ನು ಹಬೀಬ್‌ ಒಪ್ಪಿಕೊಂಡಿದ್ದಾನೆ ಎಂದು  ಕರ್ನಾಟಕ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್‌) ಅಧಿಕಾರಿಯೊಬ್ಬರು ತಿಳಿಸಿದರು.

‘ಗುಜರಾತ್‌ ಪೊಲೀಸರಿಂದ ವಶಕ್ಕೆ ಪಡೆದಿರುವ ಹಬೀಬ್‌ನ ವಿಚಾರಣೆ ಮುಂದುವರಿದಿದೆ. ಆತನಿಂದ ಈಗಾಗಲೇ ಸಾಕಷ್ಟು ಮಾಹಿತಿ ಕಲೆಹಾಕಿದ್ದೇವೆ. ಅದರ ಪರಿಶೀಲನೆ ನಡೆದಿದೆ’ ಎಂದು ವಿವರಿಸಿದರು.

ಬಾಂಗ್ಲಾದೇಶದಿಂದ ತ್ರಿಪುರ: ‘ಭಾರತ ಹಾಗೂ ಬಾಂಗ್ಲಾದೇಶ ಗಡಿಭಾಗದ ಕೆಲ ಪ್ರದೇಶಗಳಲ್ಲಿ  ಸೂಕ್ತ ಭದ್ರತೆ ಹಾಗೂ ಕಾಂಪೌಂಡ್‌ ಇಲ್ಲ.  ಸ್ಥಳೀಯ ಕೆಲ ನಿವಾಸಿಗಳ ಜತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ ಹಬೀಬ್‌, ಅವರ ಸಹಾಯದಿಂದಲೇ ಉಗ್ರರನ್ನು ಅಕ್ರಮವಾಗಿ ದೇಶದೊಳಗೆ ಕಳುಹಿಸುತ್ತಿದ್ದ’ ಎಂದು ಅಧಿಕಾರಿ ತಿಳಿಸಿದರು.

‘ಬಾಂಗ್ಲಾದೇಶದ ಢಾಕಾ ಸೇರಿ ಆಯ್ದ ಪ್ರದೇಶಗಳಿಂದ ಉಗ್ರರನ್ನು ಕರೆದುಕೊಂಡು ಬರುತ್ತಿದ್ದ ಹಬೀಬ್, ಅವರನ್ನು ಸರಾಗವಾಗಿ ಭಾರತದ ತ್ರಿಪುರ ತಲುಪಿಸುತ್ತಿದ್ದ. ಈ ಬಗ್ಗೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಅದೇ ಕಾರಣಕ್ಕೆ ಉಗ್ರ ಸಂಘಟನೆಯ ಸದಸ್ಯರು ಹಬೀಬ್‌ಗೆ ‘ಸಾರಿಗೆ ಏಜೆಂಟ್‌’ ಎಂದೇ ಅಡ್ಡ ಹೆಸರು ಇಟ್ಟಿದ್ದರು’ ಎಂದು ವಿವರಿಸಿದರು.

ದುಡ್ಡಿಗಾಗಿ ಕೃತ್ಯ: ‘ಅಗರ್ತಲ ಸಮೀಪದ ಜಯ್‌ ನಗರದಲ್ಲಿ ಕುಟುಂಬವಿದೆ. ಬಡತನದಿಂದ ಒಂದು ಹೊತ್ತಿನ ಊಟಕ್ಕೂ ತೊಂದರೆ ಇತ್ತು. ದುಡ್ಡಿನ ಆಸೆಗಾಗಿ ಉಗ್ರರಿಗೆ ಸಹಾಯ ಮಾಡಿದೆ’ ಎಂದು ಹಬೀಬ್‌ ಹೇಳಿಕೊಂಡಿದ್ದಾನೆ.

‘ಹೊಟೇಲ್‌ ಹಾಗೂ ರಸ್ತೆಗಳಲ್ಲಿ ಭೇಟಿಯಾಗುತ್ತಿದ್ದ ಅಪರಿಚಿತ ವ್ಯಕ್ತಿಗಳು, ತಾವು ವ್ಯಾಪಾರಿಗಳೆಂದು ಪರಿಚಯ ಮಾಡಿಕೊಳ್ಳುತ್ತಿದ್ದರು. ಕ್ರಮೇಣ ಸ್ನೇಹ ಬೆಳೆಸಿ ಹಣದ ಆಸೆ ತೋರಿಸಿ ನಾವು ಭಾರತಕ್ಕೆ ಹೋಗಬೇಕು. ಸಹಾಯ ಮಾಡು ಎಂದು ಕೇಳುತ್ತಿದ್ದರು’ ಎಂದು ಆತ ಹೇಳಿದ್ದಾನೆ.

‘2003ರಲ್ಲಿ ಢಾಕಾ ಬಳಿಯ ರಸ್ತೆಯಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ಸಲುಗೆಯಿಂದ ಮಾತನಾಡಿದ್ದ. ಕೆಲ ದಿನ ನನ್ನ ಆಟೊದಲ್ಲೇ ಕ್ಲೀನರ್‌ ಆಗಿದ್ದ. ಬಳಿಕ  ಆತ್ಮೀಯ ಸ್ನೇಹಿತನಾದ. ಕೆಲವರನ್ನು ಪರಿಚಯ ಮಾಡಿಸಿದ್ದ ಆತ, ಕೈ ತುಂಬ ಹಣ ಕೊಡುತ್ತಾರೆ ಎಂದು ಹೇಳಿ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಗೆ ಸೇರಿಸಿದ್ದ. 

ಅಂದಿನಿಂದ ಎರಡು ವರ್ಷ ಮನೆಗೂ ಹೋಗಿರಲಿಲ್ಲ. ಈ ಬಗ್ಗೆ ಮನೆಯವರು ಸ್ಥಳೀಯ ಠಾಣೆಗೆ ದೂರು ಸಹ ಕೊಟ್ಟಿದ್ದರು’ ಎಂದು ತಿಳಿಸಿದ್ದಾರೆ.

₹500ರಿಂದ ₹1 ಸಾವಿರ ನಿಗದಿ: ‘ನಾನು ಬೆಳೆದದ್ದೆಲ್ಲ ಬಾಂಗ್ಲಾ ಗಡಿಯಲ್ಲಿ. ಅಲ್ಲಿನ ಸ್ಥಳಗಳ ಪರಿಚಯ ನನಗಿದೆ. ಹೀಗಾಗಿಯೇ ಯಾರೇ ನನ್ನನ್ನು ಸಂಪರ್ಕಿಸಿದರೂ ಒಬ್ಬರಿಗೆ ₹500ರಿಂದ ₹1 ಸಾವಿರ ಪಡೆದು ಅವರನ್ನು ಗಡಿ ದಾಟಿಸುತ್ತಿದ್ದೆ. ಐಐಎಎಸ್‌ಸಿ ಮೇಲೆ ದಾಳಿ ಮಾಡಿದ್ದ ಉಗ್ರ ಶಬಾವುದ್ದೀನ್‌ನಿಂದ ₹800 ಪಡೆದುಕೊಂಡಿದ್ದೆ. ಎಲ್‌ಇಟಿಯಲ್ಲಿ ಇದ್ದರೂ ಅದರ ಸದಸ್ಯರನ್ನು ಉಚಿತವಾಗಿ ದೇಶ ದೊಳಗೆ ಕಳುಹಿಸುತ್ತಿರಲಿಲ್ಲ’ ಎಂದು ಶಂಕಿತ ಹೇಳಿಕೊಂಡಿದ್ದಾನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT