ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘6,178 ಕೊಳವೆ ಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲ’

Last Updated 27 ಮಾರ್ಚ್ 2017, 20:02 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಜಲಮಂಡಳಿ ಉಸ್ತುವಾರಿಯಲ್ಲಿರುವ 6,178 ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ವಿಧಾನಮಂಡಲದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ(ಪಿಎಸಿ) ವರದಿ ಹೇಳಿದೆ.

ಬೆಂಗಳೂರು ಜಲಮಂಡಳಿಯ ಕಾರ್ಯನಿರ್ವಹಣೆ ಕುರಿತಂತೆ 2011–12ನೇ ಸಾಲಿನ ಭಾರತೀಯ ಮಹಾಲೇಖಪಾಲರ ವರದಿ ಆಧರಿಸಿ  ನಡೆಸಿದ ಅಧ್ಯಯನ ವರದಿಯನ್ನು ಸಮಿತಿ ಅಧ್ಯಕ್ಷ ಆರ್‌. ಅಶೋಕ್‌ ವಿಧಾನಸಭೆಯಲ್ಲಿ ಸೋಮವಾರ ಮಂಡಿಸಿದರು.

‘ಭಾರತೀಯ ವಿಜ್ಞಾನ ಸಂಸ್ಥೆಯ ಗುಣ ಭರವಸೆ ಶಾಖೆ ಸಹಕಾರದಲ್ಲಿ ಜಲ ಮಂಡಳಿ 12,986 ಕೊಳವೆ ಬಾವಿಗಳನ್ನು ಪರಿಶೀಲಿಸಿದೆ. ರಾಸಾಯನಿಕ ಮತ್ತು ರೋಗಾಣುಗಳಿರುವ ಕೊಳವೆ ಬಾವಿಗಳಿಂದ ನೀರು ಸರಬರಾಜು ನಿಲ್ಲಿಸುವ ಬಗ್ಗೆ ಜಲಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೆ, ರೋಗ ಹರಡಲು ಕಾರಣವಾಗಿದೆ’ ಎಂದು ವರದಿ ಉಲ್ಲೇಖಿಸಿದೆ.

ಸರಿ ಇರುವ ಬಾವಿ ದುರಸ್ತಿ: ಬಿಬಿಎಂಪಿಗೆ ಸೇರ್ಪಡೆಯಾದ ಏಳು ನಗರಸಭೆ ಹಾಗೂ 1 ಪುರಸಭೆ ಉಸ್ತುವಾರಿಯಲ್ಲಿದ್ದ 3,454 ಕೊಳವೆಬಾವಿಗಳನ್ನು 2008ರಲ್ಲಿ ಬೆಂಗಳೂರು ಜಲಮಂಡಳಿಗೆ ಹಸ್ತಾಂತರಿಸಲಾಯಿತು. ಆಯಾ ಭಾಗದ ಜನರಿಗೆ ಈ ಕೊಳವೆಬಾವಿಗಳೇ ನೀರು ಒದಗಿಸುತ್ತಿದ್ದವು. ಯಾವುದೇ ಸಮೀಕ್ಷೆ ನಡೆಸದೇ 2008ರಿಂದ 2010ರ ಅವಧಿಯಲ್ಲಿ 3,454 ಕೊಳವೆಬಾವಿಗಳ ಪೈಕಿ 2,100 ಕೊಳವೆಬಾವಿಗಳ ದುರಸ್ತಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಯಿತು ಎಂದು ಪಿಎಸಿ ವರದಿ ಆಕ್ಷೇಪಿಸಿದೆ.

ಕೊಳವೆಬಾವಿಗಳ ಕಾರ್ಯಕ್ಷಮತೆ, ಉಪಕರಣಗಳ ಸ್ಥಿತಿ, ಯಾವ ವರ್ಷದಲ್ಲಿ ಅವುಗಳನ್ನು ಕೊರೆಯಲಾಯಿತು ಎಂಬ ಮಾಹಿತಿ ಜಲಮಂಡಳಿಗೆ ಇರಲಿಲ್ಲ. ಆದಾಗ್ಯೂ 26 ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆಯಲಾಯಿತು. ಪ್ರತಿ ಪ್ಯಾಕೇಜ್‌ನಲ್ಲಿ 75 ಕೊಳವೆಬಾವಿಗಳ ದುರಸ್ತಿ ಮಾಡಲು ಟೆಂಡರ್‌ನಲ್ಲಿ ಪ್ರಸ್ತಾಪಿಸಲಾಗಿತ್ತು.

ಪ್ರತಿ ಪ್ಯಾಕೇಜ್‌ಗೆ ₹99 ಲಕ್ಷ ಮೊತ್ತ ಉಲ್ಲೇಖಿಸಲಾಗಿತ್ತು. ಆದರೆ, ₹1.08 ಕೋಟಿ ಮೊತ್ತದಲ್ಲಿ ಟೆಂಡರ್ ಪ್ಯಾಕೇಜ್‌ಗೆ ಒಪ್ಪಿಗೆ ಸೂಚಿಸಲಾಯಿತು. ಅನವಶ್ಯಕವಾಗಿ ಟೆಂಡರ್‌ ಮೊತ್ತ ಹೆಚ್ಚಿಸಿರುವುದು ಸರಿಯಲ್ಲ ಎಂದೂ  ವರದಿ ಹೇಳಿದೆ.

ಟೆಂಡರ್‌ ಅನ್ವಯ ಮಂಡಳಿಯು ಸಬ್‌ ಮರ್ಸಿಬಲ್‌ ಪಂಪ್‌ ಹಾಗೂ ಜಿ.ಐ ಪೈಪುಗಳನ್ನು ಮಾತ್ರ ಪೂರೈಸಬೇಕಿತ್ತು. ಆದರೆ, ಗೇಟ್‌ವಾಲ್ವ್‌ಗಳು, ನಾನ್‌–ರಿಟರ್ನ್‌ ವಾಲ್ವ್‌ ಒಳಗೊಂಡಂತೆ ಸುಮಾರು ₹1.81 ಕೋಟಿ ಮೌಲ್ಯದ ಸಾಮಗ್ರಿಗಳನ್ನು ಗುತ್ತಿಗೆದಾರರಿಗೆ ಉಚಿತವಾಗಿ ಒದಗಿಸಿದೆ.

ಇದಲ್ಲದೆ, ಅಗತ್ಯಕ್ಕಿಂತ ಹೆಚ್ಚು ಜಿ.ಐ ಪೈಪ್‌ಗಳನ್ನು ಪೂರೈಸಿರುವುದು ಅಕ್ಷಮ್ಯ. ಈ ಎಲ್ಲಾ ಸಾಮಗ್ರಿಗಳಿಗೆ ಜಲಮಂಡಳಿ ಮಾಡಿದ ಒಟ್ಟು ₹4.36 ಕೋಟಿ ಅನಗತ್ಯ ಹೊರೆಯಾಗಿ ಪರಿಣಮಿಸಿದೆ. ಇದಕ್ಕೆ ಕಾರಣರಾಗಿರುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT