ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ‘ಕ್ರಿಸ್‌ ಕ್ರಾಸ್’

Last Updated 27 ಮಾರ್ಚ್ 2017, 20:14 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಿಸುವ ಉದ್ದೇಶದಿಂದ ಪೊಲೀಸರು ಆಯ್ದ ರಸ್ತೆಗಳಲ್ಲಿ ಹೊಸ ಸಂಚಾರ ಗುರುತುಗಳನ್ನು ಮಾಡಿದ್ದಾರೆ.

ಎಂ.ಜಿ.ರಸ್ತೆ, ಕಾರ್ಲ್‌ಟನ್‌ ಭವನ, ಹೈಗ್ರೌಂಡ್ಸ್‌ ರಸ್ತೆ, ಶಿವಾನಂದ ವೃತ್ತದಲ್ಲಿ ‘ಕ್ರಿಸ್‌ ಕ್ರಾಸ್‌’ ಹಾಗೂ ‘ಜಿಗ್‌–ಜಾಗ್‌’ ಎಂಬ ಎರಡು ಬಗೆಯ ಗುರುತುಗಳನ್ನು ಹಾಕಲಾಗಿದೆ.

ವೃತ್ತದ ಮಧ್ಯಭಾಗದಿಂದ ಜೀಬ್ರಾ ಕ್ರಾಸ್‌ ಗುರುತಿನವರೆಗೆ ಬಾಕ್ಸ್‌ ಮಾದರಿಯಲ್ಲಿ  ಹಳದಿ ಬಣ್ಣದ  ಗೆರೆಗಳನ್ನು ಎಳೆಯಲಾಗಿದ್ದು, ಇದಕ್ಕೆ  ‘ಕ್ರಿಸ್‌ ಕ್ರಾಸ್‌’ ಎಂದು ಹೆಸರಿಡಲಾಗಿದೆ. ವೃತ್ತಕ್ಕೆ ಬರುವ ವಾಹನಗಳು ಹಸಿರು ಸಿಗ್ನಲ್‌ ಇದ್ದಾಗ ಮಾತ್ರ ಈ ಗುರುತು ದಾಟಬಹುದು.

ಹಸಿರು ದೀಪ ಬಂದ್‌ ಆಗುವ ಕೊನೆಯ ಕ್ಷಣ ಅಥವಾ ಕೆಂಪು ದೀಪ ಹೊತ್ತಿಕೊಳ್ಳುವ ಕೆಲ ಕ್ಷಣಕ್ಕೂ ಮುನ್ನ ಈ ಗುರುತನ್ನು ಸಂಪೂರ್ಣವಾಗಿ ದಾಟುವ ಸಾಧ್ಯತೆ ಇದ್ದರೆ ಮಾತ್ರ ಮುಂದೆ ಹೋಗಬೇಕು. ಆಕಸ್ಮಾತ್‌ ಕೆಂಪು ದೀಪ ಹೊತ್ತಿಕೊಂಡ ವೇಳೆ  ವಾಹನಗಳು, ಹಳದಿ ಬಾಕ್ಸ್‌ನಲ್ಲೇ ನಿಂತಿದ್ದರೆ ಅಂಥ ಸವಾರರಿಗೆ ಸಂಚಾರ ಪೊಲೀಸರು ದಂಡ ಹಾಕಲಿದ್ದಾರೆ. 

ಪಾದಚಾರಿ ಮಾರ್ಗ ಗುರುತಿಗೆ ‘ಜಿಗ್‌–ಜಾಗ್‌’: ‘ಎಂ.ಜಿ.ರಸ್ತೆ, ಕಾರ್ಲ್‌ಟನ್‌ ಭವನ, ಹೈಗ್ರೌಂಡ್ಸ್‌ ರಸ್ತೆ ಹಾಗೂ ಚಾಲುಕ್ಯ ವೃತ್ತದಲ್ಲಿ  ಕೆಲ ವಾಹನ ಸವಾರರಿಗೆ ಪಾದಚಾರಿ ಮಾರ್ಗವಿದೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಅವರೆಲ್ಲ ಸಿಗ್ನಲ್‌ ವೇಳೆಯೇ ಜೀಬ್ರಾ ಕ್ರಾಸ್ ದಾಟುತ್ತಿದ್ದರು. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿತ್ತು. ಇದೇ ಕಾರಣಕ್ಕೆ ‘ಜಿಗ್‌–ಜಾಗ್‌’ ಗುರುತು ಪರಿಚಯಿಸಲಾಗಿದೆ’ ಎಂದು ಸಂಚಾರ ಪೊಲೀಸರು ತಿಳಿಸಿದರು.

‘ಪಾದಚಾರಿ ಮಾರ್ಗಗಳು ಇರುವ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಕ್ಕ–ಪಕ್ಕದಲ್ಲಿ 50 ಮೀ.ವರೆಗೆ ‘ಜಿಗ್‌–ಜಾಗ್‌’ ಗುರುತು ಹಾಕಲಾಗಿದೆ. ಹಾವಿನಂತೆ ಬಿಳಿ ಬಣ್ಣದಿಂದ ಎಳೆದಿರುವ ಈ ಗುರುತು ಯಾವ ರಸ್ತೆಯಲ್ಲಿ ಇರುತ್ತದೆಯೋ ಅಲ್ಲಿ ಪಾದಚಾರಿ ಮಾರ್ಗವಿದೆ  ಎಂಬುದು ವೃತ್ತಕ್ಕೆ ಬರುವ ಮುಂಚೆಯೇ ವಾಹನ ಸವಾರರಿಗೆ ಗೊತ್ತಾಗಲಿದೆ’ ಎಂದು ವಿವರಿಸಿದರು.

‘ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ  ಇಂಥ ಗುರುತುಗಳನ್ನು ಹಾಕಿದ್ದೇವೆ. ಈ ಗುರುತುಗಳನ್ನು ಪಾಲಿಸದ ಚಾಲಕರಿಗೆ ತಲಾ ₹100 ದಂಡವನ್ನೂ ವಿಧಿಸುತ್ತಿದ್ದೇವೆ’ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಆರ್‌.ಹಿತೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT