ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರೆದ ಕಾಮಗಾರಿ ಪ್ರಸ್ತಾವ ಏಕಿಲ್ಲ?

Last Updated 27 ಮಾರ್ಚ್ 2017, 20:29 IST
ಅಕ್ಷರ ಗಾತ್ರ

ಬೆಂಗಳೂರು: ಮುಂದುವರೆದ ಕಾಮ ಗಾರಿ ಹಾಗೂ ಪೂರ್ಣಗೊಂಡ ಕಾಮ ಗಾರಿಗಳ ಬಿಲ್‌ ಸೇರಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ₹ 10 ಸಾವಿರ ಕೋಟಿಗೂ ಹೆಚ್ಚು ಪಾವತಿ ಬಾಕಿ ಇರಿಸಿಕೊಂಡಿರುವುದನ್ನು ಬಜೆಟ್‌ನಲ್ಲಿ ಸೇರಿಸದ ಬಗ್ಗೆ  ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ  ಆಕ್ಷೇಪ ವ್ಯಕ್ತಪಡಿಸಿದರು.

2017–18ನೇ ಸಾಲಿನ ಬಜೆಟ್‌ ಕುರಿತು ಸೋಮವಾರ ನಡೆದ ಚರ್ಚೆ ಯಲ್ಲಿ ಮಾತನಾಡಿದ ಅವರು, ‘ ಬಜೆಟ್‌ ವಾಸ್ತವಕ್ಕೆ ಹತ್ತಿರವಾಗಿದೆ ಎಂದು  ಮೇಯರ್‌ ಜಿ.ಪದ್ಮಾವತಿ ಅವರು ಹೇಳಿಕೊಂಡಿದ್ದಾರೆ. ಆದರೆ, ಇದೊಂದು ಸುಳ್ಳಿನ ಕಂತೆ. ಮುಂದುವರೆದ ಕಾಮ ಗಾರಿಗಳ ಹಾಗೂ ಬಾಕಿ ಬಿಲ್‌ಗಳ ಮೊತ್ತ ₹ 1ಸಾವಿರ ಕೋಟಿ ಎಂದು ಮಾತ್ರ ತೋರಿಸಲಾಗಿದೆ.  ಮೂರು– ನಾಲ್ಕು ವರ್ಷಗಳ ಬಾಕಿ ವಿವರಗಳನ್ನು ಉಲ್ಲೇಖಿಸಿಲ್ಲ’ ಎಂದರು.
‘ಅವನ್ನೆಲ್ಲ ಸೇರಿಸುತ್ತಿದ್ದರೆ ಬಜೆಟ್‌ ಗಾತ್ರ ₹ 26 ಸಾವಿರ ಕೋಟಿ ಆಗುತ್ತಿತ್ತು.   ಬಜೆಟ್‌ನಲ್ಲಿ ಉಲ್ಲೇಖವಿಲ್ಲದ ಬಾಕಿ ಬಿಲ್‌ಗಳನ್ನು ಮುಖ್ಯ ಲೆಕ್ಕಾಧಿಕಾರಿ ಕಚೇರಿಯವರು  ಹೇಗೆ ಪಾವತಿಸುತ್ತಾರೆ? ಮುಂದುವರೆದ ಕಾಮಗಾರಿಗಳನ್ನು ಕೈಬಿಡಲಾಗುತ್ತದೆಯೇ’ ಎಂದು ಅವರು ಪ್ರಶ್ನಿಸಿದರು.

ರಾಜ್ಯ ಬಜೆಟ್‌ನಲ್ಲಿ ಉಲ್ಲೇಖವಿಲ್ಲ: ‘ನಗರದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಿಬಿಎಂಪಿಗೆ ರಾಜ್ಯ ಸರ್ಕಾರ ₹7,300 ಕೋಟಿ ಮಂಜೂರು ಮಾಡಿದೆ. ಆದರೆ, ಬಿಡುಗಡೆ ಆಗಿರುವುದು 1 ಸಾವಿರ ಕೋಟಿ ಮಾತ್ರ.  ಈ ಅನುದಾನದ ಬಗ್ಗೆ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು  ಭಾಷಣದಲ್ಲಿ ಉಲ್ಲೇಖಿಸಿದ್ದರೂ ಬಜೆಟ್‌ ಅಂದಾಜಿನಲ್ಲಿ  ಈ ಬಗ್ಗೆ ಉಲ್ಲೇಖವೇ  ಇಲ್ಲ. ಕನಿಷ್ಠಪಕ್ಷ 2017–18ನೇ ಸಾಲಿನ ₹ 4,022 ಕೋಟಿ ಮೊತ್ತವನ್ನಾದರೂ  ಬಜೆಟ್‌ ಅಂದಾಜಿನಲ್ಲಿ ಸೇರಿಸಬೇಕಿತ್ತು. ಪಾಲಿಕೆ ಬಜೆಟ್‌ ಅಂದಾಜಿನಲ್ಲೂ ಇದರ ಉಲ್ಲೇಖವಿಲ್ಲ’ ಎಂದು ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಮುನಿರತ್ನ, ‘2016–17ನೇ ಸಾಲಿನ ಬಜೆಟ್‌ ಅಂದಾಜಿನಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಅದನ್ನು ಮತ್ತೊಮ್ಮೆ ಉಲ್ಲೇಖಿಸುವ ಔಚಿತ್ಯವೇನು’ ಎಂದರು.

‘198 ಮಂದಿ ಸದಸ್ಯರನ್ನು ಕತ್ತಲಿನಲ್ಲಿಟ್ಟು ರಾಜ್ಯ ಸರ್ಕಾರದ ವಿಶೇಷ ಅನುದಾನದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಪಾರದರ್ಶಕತೆಯನ್ನು ಗಾಳಿಗೆ ತೂರಲಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಆರೋಪಿಸಿದರು.  

‘ಸಾಮಾಜಿಕ ಲೆಕ್ಕಪರಿಶೋಧನೆ ಮಾಡಲು ಮುಂದಾಗಿರುವುದು ಒಳ್ಳೆಯದು.  ಘನತ್ಯಾಜ್ಯ ವಿಲೇವಾರಿಗೆ ಎರಡು ವರ್ಷಗಳಲ್ಲಿ ಟೆಂಡರ್‌ ಕರೆದಿಲ್ಲ. ವರ್ಷಕ್ಕೆ ₹ 800 ಕೋಟಿಯಷ್ಟು ಬಿಲ್‌  ಈ ಉದ್ದೇಶಕ್ಕೆ ಪಾವತಿಯಾಗುತ್ತಿದೆ. ಇದರ  ತನಿಖೆಯಾದರೆ ಯಾರು ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ. ಇದನ್ನೂ ಸಾಮಾಜಿಕ ಲೆಕ್ಕಪರಿಶೋಧನೆಗೆ ಒಳಪ ಡಿಸಬೇಕು’ ಎಂದು ಒತ್ತಾಯಿಸಿದರು.

‘ಭೂಸ್ವಾಧೀನ ನಡೆಸದೆಯೇ ಕಾಮಗಾರಿಗಳ ಕಾರ್ಯಾದೇಶ ನೀಡುವ ಪರಿಪಾಠ ಬಿಡಬೇಕು. ಭೂಸ್ವಾಧೀನ ಆಗದ ನೆಪವೊಡ್ಡಿ ಗುತ್ತಿಗೆದಾರರು ಕಾಮಗಾರಿ ವಿಳಂಬ ಮಾಡುತ್ತಾರೆ.  ಬಳಿಕ ಬಿಲ್‌ ಮೊತ್ತ ಹೆಚ್ಚಿಸುವಂತೆ ಕೇಳು ತ್ತಾರೆ. ಕೊಡದಿದ್ದರೆ ನ್ಯಾಯಾ ಲಯದ ಮೆಟ್ಟಿಲೇರುತ್ತಾರೆ. ಅಧಿಕಾರಿಗಳ ತಪ್ಪಿ ನಿಂದಾಗಿ ಬಿಬಿಎಂಪಿಗೆ ನಷ್ಟ ಉಂಟಾಗುತ್ತಿದೆ’ ಎಂದರು.

ಅಧಿಕಾರಿಗಳ ಗೈರು: ಅಧಿಕಾರಿಗಳು ಗೈರಾಗಿರುವ ಬಗ್ಗೆ ಸದಸ್ಯರು ಅಸಮಾ ಧಾನ ವ್ಯಕ್ತಪಡಿಸಿದರು.
‘ಬಜೆಟ್‌ ಅನುಷ್ಠಾನ ಗೊಳಿಸ ಬೇಕಾದ ಅಧಿಕಾರಿಗಳೇ ಇಲ್ಲದ ಮೇಲೆ ಈ ಚರ್ಚೆಗೆ ಏನು ಅರ್ಥವಿದೆ. ಸಭೆಯನ್ನು  ಅರ್ಧಗಂಟೆ ಮುಂದೂಡಿ, ಯಾವೆಲ್ಲ ಅಧಿಕಾರಿಗಳು ಬಂದಿಲ್ಲ ಎಂಬ ಬಗ್ಗೆ ಮೇಯರ್‌ ವಿವರಣೆ ಪಡೆಯ ಬೇಕು’ ಎಂದು ಕಾಂಗ್ರೆಸ್‌ ಸದಸ್ಯ ಮಂಜುನಾಥ್ ರೆಡ್ಡಿ ಸಲಹೆ ನೀಡಿದರು.
‘ಎಲ್ಲ ವಿಭಾಗಗಳ ಮುಖ್ಯಸ್ಥರು  ಇದ್ದಾರೆ’ ಎಂದು ಮೇಯರ್‌  ಸಭೆಯನ್ನು ಮುಂದುವರಿಸಿದರು.

ಮೇಯರ್‌ ನಿಧಿ– ಕಡತ ವಿಲೇ ವಿಳಂಬ: ‘ಮೇಯರ್ ನಿಧಿಯಡಿ ಬಡ ರೋಗಿಗಳ ವೈದ್ಯಕೀಯ ವೆಚ್ಚ ಮರುಪಾವತಿ ಕಡತಗಳ ವಿಲೇವಾರಿ ವಿಳಂಬ ವಾಗುತ್ತಿದೆ’ ಎಂದು ಬಿಜೆಪಿಯ ಶಾಂತಾ ಕುಮಾರಿ ದೂರಿದರು.
‘ನನ್ನ ಅವಧಿಯಲ್ಲಿ 1,350 ಕಡತಗಳಿಗೆ ಸಹಿ ಹಾಕಿದ್ದೇನೆ. ಸುಮ್ಮನೆ ಆರೋಪ ಮಾಡಬಾರದು’ ಎಂದು ಮೇಯರ್‌ ತಿರುಗೇಟು ನೀಡಿದರು.
‘ನಮ್ಮ ಕ್ಯಾಂಟೀನ್‌’ಗಳನ್ನು  ಮಳೆ ಗಾಲಕ್ಕೆ ಮುನ್ನವೇ ಆರಂಭಿಸಬೇಕು.  ಪ್ರತಿ ವಾರ್ಡ್‌ನಲ್ಲಿ 50 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸುವುದು ಒಳ್ಳೆಯ ಕ್ರಮ. ಇನ್ನೂ ಹೆಚ್ಚಿನ ಸಂಖ್ಯೆ ಯಲ್ಲಿ ಹೊಲಿಗೆ ಯಂತ್ರ ವಿತರಿಸಬೇಕು ಎಂದು ಆಡಳಿತ ಪಕ್ಷದ ನಾಯಕ ಮೊಹಮ್ಮದ್‌ ರಿಜ್ವಾನ್‌ ನವಾಬ್‌ ಸಲಹೆ ನೀಡಿದರು.

ಪಾಲಿಕೆ ಆಯುಕ್ತರು ಧೃತರಾಷ್ಟ್ರನಂತೆ, ವಿಶೇಷ ಆಯುಕ್ತರಿಬ್ಬರು ಚಾಣಾಕ್ಯ ಹಾಗೂ ಚಂದ್ರಗುಪ್ತರಂತೆ.
ಪದ್ಮನಾಭ ರೆಡ್ಡಿ
ವಿರೋಧ ಪಕ್ಷದ ನಾಯಕ

‘ಕೆಂಪೇಗೌಡ ಪೀಠಕ್ಕೆ  ಅನುದಾನ ಹೆಚ್ಚಿಸದಿದ್ದರೆ ಹೋರಾಟ’

ಬೆಂಗಳೂರು ವಿಶ್ವವಿದ್ಯಾಲಯದ  ಜ್ಞಾನಭಾರತಿ ಪ್ರಾಂಗಣದಲ್ಲಿ ಕೆಂಪೇಗೌಡ ಅಧ್ಯಯನ ಪೀಠಕ್ಕೆ ಕೇವಲ ₹ 7 ಕೋಟಿ ಮೀಸಲಿಟ್ಟಿದ್ದಕ್ಕೆ ಶಾಸಕ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದರು. ಅನುದಾನ ಹೆಚ್ಚಿಸ ದಿದ್ದರೆ ಬಿಬಿಎಂಪಿ ವಿರುದ್ಧವೇ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಸುದ್ದಿಯನ್ನು ಉಲ್ಲೇಖಿಸಿದ ಪದ್ಮನಾಭ ರೆಡ್ಡಿ, ‘ಬಜೆಟ್‌ನಲ್ಲಿ ಕೆಂಪೇಗೌಡರನ್ನು ಕಡೆಗಣಿಸಲಾಗಿದೆ’ ಎಂದರು.
ಇದಕ್ಕೆ ಧ್ವನಿಗೂಡಿಸಿದ ಮುನಿರತ್ನ, ‘ಹಳೆ ಬೆಂಗಳೂರಿನ ಹೆಗ್ಗುರುತುಗಳಾದ ಚಿಕ್ಕಪೇಟೆ, ಗಾಣಿಗರಪೇಟೆ, ಬಳೆ ಪೇಟೆಗಳ ಮಾದರಿಯನ್ನು ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ನಿರ್ಮಿಸಲು ಉದ್ದೇಶಿಸಿದ್ದೇವೆ. ಇದಕ್ಕಾಗಿ 17 ಎಕರೆ ಜಾಗ ನೀಡುವಂತೆ ವಿಶ್ವವಿದ್ಯಾಲಯವನ್ನು ಕೋರಿದ್ದೇವೆ. ಈ ಯೋಜನೆಗೆ ₹ 100 ಕೋಟಿ ಒದಗಿಸುವಂತೆ ಕೇಳಿದ್ದೆವು. ಕನಿಷ್ಠ ಪಕ್ಷ ₹ 70 ಕೋಟಿಯಾದರೂ ಮೀಸಲಿಡಬೇಕು ’ ಎಂದು ಒತ್ತಾಯಿಸಿದರು.

ವಿರೋಧ ಪಕ್ಷದ ಸಲಹೆಗಳು
* 5 ಲಕ್ಷ ಎಲ್‌ಇಡಿ ಬಲ್ಬ್‌ ಖರೀದಿಗೆ ಜಾಗತಿಕ ಟೆಂಡರ್‌ ಕರೆಯಿರಿ
 * ಇ–ಖಾತಾ ಮಾಡಿದ ತಕ್ಷಣವೇ ಈ ಕುರಿತ ಕಡತವನ್ನು ಮೇಲಧಿಕಾರಿಗೆ  ತಲುಪಿಸುವುದನ್ನು ಕಡ್ಡಾಯಗೊಳಿಸಿ
*  ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ತರುವುದು ಒಳ್ಳೆಯ ವಿಚಾರ. ಆದರೆ, ಯಾವುದೇ ಕಾರಣಕ್ಕೂ ಜನಪತಿನಿಧಿ ಗಳ ಅಧಿಕಾರ ಮೊಟಕುಗೊಳಿಸಬೇಡಿ

ಪೌರ ಕಾರ್ಮಿಕರಿಗೆ ಹಳಸಿದ ಬಿಸಿಯೂಟ
ಪೌರ ಕಾರ್ಮಿಕರಿಗೆ ಹಳಸಿದ ಬಿಸಿಯೂಟ ನೀಡಲಾಗುತ್ತಿದೆ ಎಂದು ವಿರೋಧ ಪಕ್ಷದ ಸದಸ್ಯರು ದೂರಿದರು.
‘ಧರ್ಮರಾಯಸ್ವಾಮಿ ದೇವಾಲಯ ವಾರ್ಡ್‌ನಲ್ಲಿ ಇಂದು ಬೆಳಿಗ್ಗೆ ನೀಡಿರುವ ಊಟ ಬಿಸಿಯಾಗಿಯೇ ಇತ್ತು. ಆದರೆ, ಹಳಸಿತ್ತು’ ಎಂದು ಪೊಟ್ಟಣದಲ್ಲಿ ತಂದಿದ್ದ ತಿನಿಸನ್ನು ಪದ್ಮನಾಭ ರೆಡ್ಡಿ ಪ್ರದರ್ಶಿಸಿದರು.
ಈ ಬಗ್ಗೆ ನನಗೂ ದೂರುಗಳು ಬರುತ್ತಿವೆ.  ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಮೇಯರ್‌ ಭರವಸೆ ನೀಡಿದರು.

ಅರೆಕೆರೆ : ‘ಪ್ರಜಾವಾಣಿ’ ವರದಿ ಪ್ರತಿಧ್ವನಿ

ಅರೆಕೆರೆಯ ದುಃಸ್ಥಿತಿ ಬಗ್ಗೆ ‘ಪ್ರಜಾವಾಣಿ’  ಮಾರ್ಚ್‌ 25ರ ಸಂಚಿಕೆಯಲ್ಲಿ ಪ್ರಕಟಿಸಿದ್ದ ‘ಉಸಿರುಗಟ್ಟುತ್ತಿದೆ... ಬೇಗ ಸ್ವಚ್ಛಗೊಳಿಸಿ’ ವರದಿಯನ್ನು ಪ್ರದರ್ಶಿಸಿದ ಈ ವಾರ್ಡ್‌ನ ಸದಸ್ಯೆ ಭಾಗ್ಯಲಕ್ಷ್ಮಿ ಮುರಳಿ, ಇಲ್ಲಿನ ಸ್ಥಳೀಯರು  ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.
‘ಕಳೆದ ವರ್ಷ, ಮೊದಲು ನೆರೆ ಬಂದಿದ್ದು ಅರೆಕೆರೆ ಹಾಗೂ ಹುಳಿಮಾವು ಕೆರೆಯಲ್ಲಿ. ಈ ಕಾರಣಕ್ಕೆ ಇಲ್ಲಿನ 10 ಮನೆಗಳನ್ನು ಅಧಿಕಾರಿಗಳು ಒಡೆದು ಹಾಕಿದ್ದಾರೆ. ಆದರೆ ಸಮಸ್ಯೆ ಬಗೆಹರಿಸಲು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಈಗ ಜೋರಾಗಿ ಮಳೆ ಬಂದರೂ ಅಲ್ಲಿ ಹಿಂದಿನಂತೆಯೇ ಸಮಸ್ಯೆ ಎದುರಾಗುತ್ತದೆ’ ಎಂದರು.

‘ಬಜೆಟ್‌ ಮೇಲಿನ ಚರ್ಚೆ ವೇಳೆ ನೀವು ವಿಷಯಾಂತರ ಮಾಡುವುದು ಬೇಡ. ಕುಳಿತುಕೊಳ್ಳಿ’ ಎಂದು ಮೇಯರ್‌ ಸೂಚಿಸಿದರು.
‘ಈ ಸಮಸ್ಯೆಯ ಬಗ್ಗೆ ಆಯುಕ್ತರಿಗೆ 20 ಬಾರಿ ಪತ್ರ ಬರೆದಿದ್ದೇನೆ. ನಿಮ್ಮ ಗಮನಕ್ಕೂ ತಂದಿದ್ದೇನೆ. ಆದರೂ ಈ ಕೆರೆ ಅಭಿವೃದ್ಧಿಗೆ, ಮಳೆ ನೀರಿನ ಚರಂಡಿ ಹಾಗೂ ಮೋರಿಗಳ ದುರಸ್ತಿಗೆ ಬಜೆಟ್‌ನಲ್ಲಿ ಬಿಡಿಗಾಸನ್ನೂ ನೀಡಿಲ್ಲ. ಈ ಸಮಸ್ಯೆಗೆ ಪರಿಹಾರದ ಭರವಸೆ ಸಿಗುವವರೆಗೂ ನಾನು ಕುಳಿತುಕೊಳ್ಳುವುದಿಲ್ಲ’ ಎಂದು ಭಾಗ್ಯಲಕ್ಷ್ಮಿ ಪಟ್ಟು ಹಿಡಿದರು.
‘ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಮೇಯರ್‌ ಭರವಸೆ ನೀಡಿದ ಬಳಿಕ ಅವರು ಕುಳಿತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT