ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತತ್ವಪದದಿಂದ ಜಾತ್ಯತೀತ ವಾತಾವರಣ

ವಿಚಾರಸಂಕಿರಣದಲ್ಲಿ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಲೋಕೇಶ್ ಅಗಸನಕಟ್ಟೆ
Last Updated 28 ಮಾರ್ಚ್ 2017, 5:12 IST
ಅಕ್ಷರ ಗಾತ್ರ
ಚಿತ್ರದುರ್ಗ: ‘ಪ್ರಸ್ತುತ ಕಾಲೇಜುಗಳ ಅಂಗಳದಲ್ಲಿ ಜಾತ್ಯತೀತ ವಾತಾವರಣ ನಿರ್ಮಾಣ ಮಾಡುವುದಕ್ಕಾಗಿ  ತತ್ವಪದಗಳ ಅವಶ್ಯಕತೆ ಇದೆ’ ಎಂದು ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಲೋಕೇಶ ಅಗಸನಕಟ್ಟೆ ಅಭಿಪ್ರಾಯಪಟ್ಟರು.

ಕನ್ನಡ ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ), ಸ್ನಾತಕೋತ್ತರ ಕನ್ನಡ ವಿಭಾಗದ ಸಹ ಯೋಗದಲ್ಲಿ ಸೋಮವಾರ  ಆಯೋಜಿಸಿದ್ದ ‘ಕನ್ನಡ ತತ್ವಪದಗಳ ಅನನ್ಯತೆ’ ಕುರಿತ  ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 
‘ಜಾತ್ಯತೀತೆಯೇ ನಮ್ಮನ್ನು ಉಳಿಸುವುದು. ಅಂಥ ಪರಿಕಲ್ಪನೆಯನ್ನು ತತ್ವಪದಕಾರರು ಜನಮಾನಸದವರೆಗೆ ತೆಗೆದುಕೊಂಡು ಹೋಗಬೇಕು. ಜನರಿಂದ, ಜನರಿಗಾಗಿ ತತ್ವ ಪದಗಳು ಹುಟ್ಟಿವೆ’ ಎಂದರು.
 
‘ಭಾರತದಾದ್ಯಂತ ಏಕರೂಪ ಸಂಸ್ಕೃತಿ ಹೇರುವ ಹುನ್ನಾರ ನಡೆಯುತ್ತಿರುವ ಈ ಹೊತ್ತಿನಲ್ಲಿ ಜಾತ್ಯತೀತತೆ ಸಾರುವ ತತ್ವಪದಕಾರರ ಅಗತ್ಯವಿದೆ. ಅದೇ ಆಶಯ ಇಟ್ಟುಕೊಂಡು ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಕೆಲಸ ಮಾಡುತ್ತಿದೆ’ ಎಂದು ಶ್ಲಾಘಿಸಿದರು.
 
‘ಜಾತಿ, ಧರ್ಮಗಳಿಗೆ ಅಂಟಿಕೊಳ್ಳದ ತತ್ವಪದಕಾರರು 16ನೇ ಶತಮಾನದಿಂದ 19ನೇ ಶತಮಾನದವರೆಗೆ  ಕಾಣಬಹುದು. ಇದಕ್ಕೆ ಶಿಶುನಾಳ ಷರೀಫ, ಕಡಕೋಳ ಮಲ್ಲಪ್ಪನವರಂಥ ನೂರಾರು ಮಂದಿ ತತ್ವಪದಕಾರರಿದ್ದಾರೆ. ಉತ್ತರ ಕರ್ನಾಟಕದಲ್ಲಿರುವ ತತ್ವ ಪದ ಹೇಳುವ ಮುಸ್ಲಿಂ ಸಂತರೆಲ್ಲ ನಮ್ಮವರೇ ಆಗಿ ಹೋಗಿದ್ದಾರೆ.  ಜಾತಿ ಮತಗಳನ್ನು ಮೀರಿದ್ದಾರೆ’  ಎಂದು  ಹೇಳಿದರು. 
 
ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.ಸಜ್ಜಾತ್ ಮಾತನಾಡಿ, ‘ತತ್ವಪದಗಳ ಮೂಲಕ ಜನಸಾಮಾನ್ಯರ ಜತೆ ಅರ್ಥಪೂರ್ಣ ಸಂಬಂಧ ಇಟ್ಟು ಕೊಳ್ಳಲು ಸಾಧ್ಯವಾಗಿದೆ’ ಎಂದರು. ‘ವೇದೋಪನಿಷತ್ತಿನಲ್ಲಿರುವ ತಿರು ಳನ್ನು ಆಡುಮಾತಿನಲ್ಲಿ ತತ್ವಪದಗಳು ಸರಳವಾಗಿ ತಿಳಿಸಿಕೊಟ್ಟಿವೆ’ ಎಂದು ತಿಳಿಸಿದರು.
 
ಪ್ರಾಸ್ತಾವಿಕವಾಗಿ ಮಾತನಾಡಿದ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ, ‘ಕನಕದಾಸರ ಸಾಹಿತ್ಯ(ಕೀರ್ತನೆ)ವನ್ನು 15 ಭಾಷೆಗಳಿಗೆ ಅನುವಾದಿ ಸಲಾಗುತ್ತಿದೆ. ಈಗಾಗಲೇ ಶೇ 90  ರಷ್ಟು ಕಾರ್ಯ ಪೂರ್ಣಗೊಂಡಿದೆ.

ಇದಲ್ಲದೆ ಐದು ಭಾಷೆಗೆ ಕೆಲವನ್ನು ಅನುವಾದವನ್ನು ಮಾಡಲಾಗಿದ್ದು ಪುಸ್ತಕ ರೂಪದಲ್ಲಿ ದೊರೆಯುತ್ತಿವೆ. ಸಮಗ್ರ ತತ್ವಪದಗಳ ಅಧ್ಯಯನ ಮಾಡಿ 50 ಸಂಪುಟದಲ್ಲಿ ಕನಕದಾಸರ ಕೀರ್ತನೆ ಅಥವಾ ತತ್ವಪದಗಳನ್ನು ಹೊರ ತರಲಾಗುತ್ತದೆ. ಇದಕ್ಕಾಗಿ 125 ತಜ್ಞರು ಕೆಲಸ ಮಾಡುತ್ತಿದ್ದಾರೆ’ ಎಂದರು. 
 
ಮಧ್ಯಾಹ್ನದ ಗೋಷ್ಠಿಗಳಲ್ಲಿ ಡಾ. ಮಹೇಶ್ ಹರವೆ ಅವರು ‘ತತ್ಪಪದಗಳಲ್ಲಿ ಬಹುತ್ವದ ನೆಲೆಗಳು’ ಕುರಿತು ವಿಷಯ ಮಂಡಿಸಿದರು. ನಂತರ ರಹಮತ್ ತರೀಕೆರೆ ಗೈರಾಗಿದ್ದ   ಕಾರಣ ‘ಅಜ್ಞಾತ ತತ್ಪದಕಾರ’ರನ್ನು ಕುರಿತು ನಟರಾಜ್ ಬೂದಾಳ್  ಮಾತನಾಡಿದರು.

ಜನಪದ ತಜ್ಞ ಡಾ.ಕರಿಯಪ್ಪ ಮಾಳಿಗೆ  ಹಾಗೂ ಸ್ನಾತಕೋತ್ತರ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೆ.ಶಿವಾನಂದಯ್ಯ  ಚಾಲನೆ ನೀಡಿದರು. ಗಾಯಕರಾದ ಹಿರಿಯೂರಿನ ಕರಿಬಸವೇಶ್ವರ ಆಶ್ರಮದ ಕಾಂತರಾಜು, ಗೊಲ್ಲಹಳ್ಳಿಯ ಲಲಿತಮ್ಮ ಮತ್ತು ತಂಡ, ಹುಲಿತೊಟ್ಲು ಮಲ್ಲಣ್ಣ, ಮಡಿವಾಳರ ಮಂಜಣ್ಣ, ಸಿ.ಎನ್. ಮಾಳಿಗೆ ಅವರು ತತ್ವಪದ ಗಾಯನ ಪ್ರಸ್ತುತಪಡಿಸಿದರು.
 
‘ಕನಕದಾಸರು ಮಹಾನ್ ತತ್ವಪದಕಾರ’
‘ಅಕಾಡೆಮಿಕ್ ವಲಯಗಳು ಈವರೆಗೂ ಕನಕದಾಸರನ್ನು ತತ್ವಪದಕಾರನೆಂದು ಪರಿಗಣಿಸಿಲ್ಲ. ಕನಕದಾಸರನ್ನು ಕೇವಲ ಕೀರ್ತನಕಾರ ಎನ್ನುವುದೇ ದೊಡ್ಡ ತಪ್ಪು. ಅವರಲೊಬ್ಬ ತತ್ವಕಾರನಿದ್ದು ಏಕ ಸಂಸ್ಕೃತಿಯ ನಾಡನ್ನು ಜ್ಯಾತ್ಯಾತೀತ ನೆಲೆಗಟ್ಟಿನಲ್ಲಿ ಕಟ್ಟಲು ಶ್ರಮಿಸಿದರು. ಈ ಎಲ್ಲದರ ಅನುಸಂಧಾನದಿಂದ ಅವರನ್ನು ಮಹಾನ್ ಕವಿ ಎಂದರೆ ತಪ್ಪಿಲ್ಲ’ ಎಂದು ಡಾ. ಎಸ್. ನಟರಾಜ್ ಬೂದಾಳು ಅಭಿಪ್ರಾಯಪಟ್ಟರು.

‘ಕನಕದಾಸರ ತತ್ವಪದಗಳು : ಒಂದು ಭಿನ್ನ ಅನುಸಂಧಾನ’  ವಿಷಯ ಕುರಿತು ಮಾತನಾಡಿದ ಅವರು ‘ಕನಕದಾಸರು ಭಿನ್ನ ಮಾರ್ಗದವರು ಮಾತ್ರವಲ್ಲ, ನಮಗೆ ಎಚ್ಚರಿಕೆಯ ಪ್ರತೀಕವೂ ಹೌದು. ಕನಕದಾಸರು ನಳಚರಿತ್ರೆಯಂತಹ ಕಾವ್ಯ ಬರೆದಿದ್ದಾರೆ. ಹಾಗೆಯೇ ಅವರು ರಚಿಸಿರುವ 67 ತತ್ವಪದಗಳು ಜನರ ಬಾಯಲ್ಲಿವೆ’  ಎಂದರು.

‘ಕಾವ್ಯ, ತತ್ವಪದಗಳನ್ನು ಕೇಳುವಾಗ ಅರ್ಥದ ಬಗ್ಗೆ ಚಿಂತಿಸದೆ ಸಂಭ್ರಮಿಸಬೇಕು. ಅದು ನಿಧಾನಕ್ಕೆ ಮನಸ್ಸಿನ ಅಂತರಂಗಕ್ಕಿಳಿದು ನಮಗೆ ತಿಳಿದು ತಿಳಿಯದ ಸಮಯದಲ್ಲಿ ಅದರ ಸಾರ ತಿಳಿಯುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT