ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಮ್ಮಣ್ಣುಗುಂಡಿ ಗಿರಿಧಾಮ ಅರಣ್ಯ ಇಲಾಖೆಗೆ ಒಪ್ಪಿಸಿ

ಚಿಕ್ಕಮಗಳೂರಿನಲ್ಲಿ ಪರಿಸರಾಸಕ್ತ ಸಂಘಟನೆಗಳ ಆಗ್ರಹ; ತೋಟಗಾರಿಕೆ ಇಲಾಖೆಗೆ ಗುತ್ತಿಗೆ
Last Updated 28 ಮಾರ್ಚ್ 2017, 6:43 IST
ಅಕ್ಷರ ಗಾತ್ರ
ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸಿತಾಣ ಕೆಮ್ಮಣ್ಣುಗುಂಡಿ ಗಿರಿಧಾಮದಲ್ಲಿ ತೋಟ ಗಾರಿಕೆ ಹಾಗೂ ಲೋಕೋಪಯೋಗಿ ಇಲಾಖೆಗೆ ನೀಡಿರುವ 17 ಎಕರೆ ಪ್ರದೇಶ ವನ್ನು ಅರಣ್ಯ ಇಲಾಖೆಗೆ ಹಿಂತಿರುಗಿ ಸಬೇಕೆಂದು ಪರಿಸರಾಸಕ್ತ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
 
ಹಲವು ವರ್ಷಗಳ ಹಿಂದೆಯೇ ಅರಣ್ಯ ಇಲಾಖೆಯ ಈ ಜಾಗವನ್ನು ತೋಟಗಾರಿಕೆ ಇಲಾಖೆಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿತ್ತು. ಈ ಪ್ರದೇಶ ಪೂರ್ಣ ಭದ್ರಾ ಅಭಯಾರ ಣ್ಯದೊಳಗೆ ಇದೆ. ಇಲ್ಲಿ ಯಾವುದೇ ರೀತಿ ಅರಣ್ಯೇತರ ಚಟುವಟಿಕೆಗೆ ಅವಕಾಶವಿಲ್ಲ.

1991–92ರಲ್ಲಿ ಈ ಪ್ರದೇಶವನ್ನು ಎರಡು ಇಲಾಖೆಗಳಿಗೆ ನೀಡಿದ್ದು, ಈಗಲೂ ಅವುಗಳ ಅಧೀನದಲ್ಲೆ ಇದೆ. ಇದು ಕಾನೂನಿಗೆ ವಿರುದ್ಧವಾದುದು. ಈಗಾಗಲೇ ತೋಟಗಾರಿಕೆ ಇಲಾಖೆ ತನ್ನ ಸ್ವಂತ ಜಾಗವೆಂಬಂತೆ ಅನೇಕ ಕಟ್ಟಡಗಳನ್ನು ಪ್ರವಾಸೋದ್ಯಮದ ಹೆಸರಿನಲ್ಲಿ ನಿರ್ಮಿಸಿದೆ ಎಂದು ಭದ್ರಾ ವೈಲ್ಡ್‌ ಲೈಫ್ ಕನ್ಸರ್‌ವೇಷನ್ ಟ್ರಸ್ಟ್ ಮುಖ್ಯಸ್ಥ ಡಿ.ವಿ.ಗಿರೀಶ್, ವೈಲ್ಡ್‌ಕ್ಯಾಟ್-ಸಿ ಮುಖ್ಯಸ್ಥ ಶ್ರೀದೇವ್‌ ಹುಲಿಕೆರೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 
ಕೆಮ್ಮಣ್ಣುಗುಂಡಿ ಪ್ರದೇಶವು ಭದ್ರಾ ಅಭಯಾರಣ್ಯ ವ್ಯಾಪ್ತಿಯ ತಣಿಗೆಬೈಲು ವಲಯದ ಅರಣ್ಯ ಪ್ರದೇಶವಾಗಿದ್ದು, ಈಗಾಗಲೇ ಇದನ್ನು ‘ಕ್ರಿಟಿಕಲ್ ಕೋರ್ ಟೈಗರ್ ಹ್ಯಾಬಿಟೇಟ್’ ಪ್ರದೇಶವಾಗಿ ಘೋಷಿಸಿದ್ದು, ಹುಲಿ ಮೀಸಲು ಅಭಯಾ ರಣ್ಯದ ಪ್ರದೇಶದಲ್ಲಿ ಯಾವುದೇ ಪರಿಸರ ಪ್ರವಾಸೋದ್ಯಮ ಚಟುವಟಿಕೆ ಮಾಡುವಂತಿಲ್ಲ. ಈ ಪ್ರದೇಶವನ್ನು ‘ಮೈಸೂರು ಎಲಿಫೆಂಟ್ ರಿಸರ್ವ್‌ ಎಕ್ಸ್‌ಟೆನ್ಷನ್ ಬಫರ್ ಏರಿಯಾ’ವೆಂದು 2015ರಲ್ಲಿ ಗುರುತಿಸಲಾಗಿದೆ. ಇದು ಅಪರೂಪದ ವನ್ಯಜೀವಿಗಳ ಆವಾಸ ಸ್ಥಾನ.

ತೋಟಗಾರಿಕೆ ಇಲಾಖೆ ಈ ಪ್ರದೇಶದಲ್ಲಿ ವ್ಯಾಪಕ ಕಾಂಕ್ರಿಟ್ ಕಟ್ಟಡ ಗಳನ್ನು ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ನಿರ್ಮಿಸಿದೆ.  ತನ್ನದಲ್ಲದ ಜಾಗದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿ ಅವುಗಳ ನಿರ್ವಹಿಸು ತ್ತಿರುವುದು ಕಾನೂನಿನ ಅನ್ವಯ ತಪ್ಪು. ಇಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ ಸಂಪೂರ್ಣ ಉಲಂಘನೆಯಾಗಿದೆ.
 
ಅಭಯಾರಣ್ಯ ಪ್ರದೇಶದಲ್ಲಿ ಕಾಂಕ್ರಿಟ್ ಕಟ್ಟಡಗಳ ನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಅರಣ್ಯ ಪ್ರದೇಶದಲ್ಲಿ ಯಾವುದೇ ಅನುಮತಿ ಇಲ್ಲದೇ ಕೈಗೊಳ್ಳಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಅಥವಾ ರಾಜ್ಯ ಮತ್ತು ಭದ್ರಾ ಹುಲಿ ಮೀಸಲು ಇಲಾ ಖೆಯಿಂದ ಪೂರ್ವಾನುಮತಿ ಪಡೆದು ಕೊಂಡಿಲ್ಲ. ಅರಣ್ಯೇತರ ಚಟುವಟಿಕೆ ಗಳನ್ನು ಮನಸೋಇಚ್ಛೆ ಕೈಗೊಳ್ಳಲಾಗಿದೆ ಎಂದು ದೂರಿದ್ದಾರೆ.
 
ವನ್ಯಜೀವಿಗಳ ಆವಾಸ ಸ್ಥಾನವನ್ನು ಮರಳಿ ಅವುಗಳಿಗೆ ಸಂಬಂಧಪಟ್ಟ ಇಲಾ ಖೆಗಳು ಬಿಟ್ಟುಕೊಡಬೇಕು. ಈ ನಿಟ್ಟಿನಲ್ಲಿ ಅರಣ್ಯಾಧಿಕಾರಿಗಳು ಸರಿ ಯಾದ ಕಾನೂನು ಕ್ರಮ ತೆಗೆದುಕೊಳ್ಳಬೇಕು. ತಕ್ಷಣ ಜಿಲ್ಲಾಧಿಕಾರಿಗಳು ಈ ಪ್ರದೇಶವನ್ನು ಪೂರ್ಣವಾಗಿ ಅರಣ್ಯ ಇಲಾಖೆಗೆ ಹಿಂದಿರುಗಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT