ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರ್ಯಾಕ್ಟರ್, ಎತ್ತಿನ ಗಾಡಿ ರ್‍ಯಾಲಿ

ಮುಳಬಾಗಿಲು: ವಿವಿಧ ಬೇಡಿಕೆ ಈಡೇರಿಸುವಂತೆ ರೈತ ಸಂಘ, ಹಸಿರು ಸೇನೆ ಒತ್ತಾಯ
Last Updated 28 ಮಾರ್ಚ್ 2017, 8:25 IST
ಅಕ್ಷರ ಗಾತ್ರ
ಮುಳಬಾಗಿಲು: ‘ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಟ್ರ್ಯಾಕ್ಟರ್ ಮತ್ತು ಎತ್ತಿನ ಗಾಡಿ ರ್‍ಯಾಲಿ ನಡೆಸಿ ಪ್ರತಿಭಟಿಸಿದರು.
 
‘ಜಿಲ್ಲೆ ಬರಪೀಡಿತ ಎಂದು ಘೋಷಣೆಯಾಗಿದ್ದರೂ ಇಲ್ಲಿನ ಜನ ಪ್ರತಿನಿಧಿಗಳು ಶಾಶ್ವತ ನೀರಾವರಿ ಜಾರಿಗೊಳಿಸಲು ಮೀನ ಮೇಷ ತೋರಿಸುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮಾತ್ರ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಚಾಲನೆ ನೀಡಿ ಜನರನ್ನು  ವಂಚಿಸುತ್ತಿದ್ದಾರೆ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಎಸ್.ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದರು.

‘ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಕೃಷಿ, ವ್ಯವಸಾಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವೈಜ್ಞಾನಿಕವಾಗಿದೆ. ಇದರಿಂದ ರೈತರು ಮತ್ತಷ್ಟು ಸಂಕಷ್ಟ ಎದುರಿಸಬೇಕಾಗಿದೆ’ ಎಂದರು.
 
‘ರೈತರ ಬೆಳೆಗಳು ಅತಿವೃಷ್ಟಿ, ಅನಾವೃಷ್ಟಿಯಿಂದ ನಾಶಗೊಂಡಿವೆ. ಕೊಳವೆ ಬಾವಿ ಆಶ್ರಯದಲ್ಲಿ ಬೆಳೆದ ಅಲ್ಪಸ್ವಲ್ಪ ಬೆಳೆ ವಿದ್ಯುತ್ ಸಮಸ್ಯೆಯಿಂದ ಒಣಗುತ್ತದೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ’ ಎಂದು ಪ್ರತಿಭಟನಾನಿರತ ರೈತರು ಅಸಮಾ ಧಾನ ವ್ಯಕ್ತಪಡಿಸಿದರು.  
 
ರಾಷ್ಟ್ರೀಕೃತ ಮತ್ತು ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ ಮಾಡಬೇಕು. ಹಾಲಿನ ಪ್ರೋತ್ಸಾಹ ಧನ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಿಲ್ಲಬೇಕು. ಕೊಳವೆ ಬಾವಿಗಳ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ಮೂರು ಫೇಸ್್ ವಿದ್ಯುತ್‌ಅನ್ನು 10 ಗಂಟೆಗೆ ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
 
ನಗರದ ಪ್ರವಾಸಿ ಮಂದಿರದಿಂದ ಆರಂಭವಾದ ಪ್ರತಿಭಟನಾ ರ್‍ಯಾಲಿ ಅಂಬೇಡ್ಕರ್ ವೃತ್ತ, ಕೆಇಬಿ ವೃತ್ತ, ಸಿವಿಲ್ ನ್ಯಾಯಾಲಯ ವೃತ್ತದಿಂದ ತಾಲ್ಲೂಕು ಕಚೇರಿ ಆವರಣಕ್ಕೆ ಬಂದು ಸೇರಿತು.  ಬೇಡಿಕೆ ಈಡೇರಿಸುವಂತೆ ತಹಶೀಲ್ದಾರ್ ಬಿ.ಎನ್.ಪ್ರವೀಣ್ ಅವರಿಗೆ ರೈತರು ಮನವಿ ಸಲ್ಲಿಸಿದರು.
 
ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೊತ್ತಮೀರಿ ಜಿ.ಮಂಜುನಾಥ್, ಹಾಸನ ಜಿಲ್ಲೆ ರೈತ ಮುಖಂಡ ಮಂಜೇಗೌಡ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಸ್.ಜಿ. ವೀರಭದ್ರಸ್ವಾಮಿ, ಕಾರ್ಯಾಧ್ಯಕ್ಷ ಅಬ್ಬಣಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.ರಾಮೇಗೌಡ, ಕಾರ್ಯದರ್ಶಿ ಕಾಡೇನಹಳ್ಳಿ ಎಂ.ಸುಬ್ರಮಣ್ಯಂ, ಸಂಘಟನಾ ಕಾರ್ಯದರ್ಶಿ ಜೆಸಿಬಿ ರಮೇಶ್, ಜಿಲ್ಲಾ ಮುಖಂಡ ಬಿ.ಆರ್.ನಾಗರಾಜಾಚಾರಿ, ಪಿ.ಎನ್.ಸಂತೋಷ್‌ ಕುಮಾರ್, ಪಿ.ವಿ.ವೆಂಕಟರಾಮೇಗೌಡ, ಅಬ್ದುಲ್ ರವೂಫ್, ಬಿ.ಎಂ.ಶ್ರೀನಿವಾಸ್, ಪಿ.ಎನ್.ಗೋಪಾಲ್‌ಗೌಡ, ಮೀಸೆ ಕೃಷ್ಣಪ್ಪ, ಹೊಸಗಳ್ಳಿ ಕೆ.ವಿ.ಗೋಪಾಲ ಕೃಷ್ಣ ಮೂರ್ತಿ, ಗ್ಲಾಸ್ ಎಂ.ನಾರಾಯಣ ಸ್ವಾಮಿ, ಕೆ.ವಿ.ಗಂಗಾಧರ, ಹೊಸಹಳ್ಳಿ ನಂಜುಂಡಪ್ಪ, ಸೂರಕುಂಟೆ ವಿಶ್ವನಾಥ, ಎಂ.ಆರ್.ಶ್ರೀನಿವಾಸ್, ಎ.ವಿಶ್ವನಾಥ ಗೌಡ, ಲಿಂಗಾಪುರ ಚೆನ್ನಪ್ಪ, ಕದರೀಪುರ ಸೋಮು, ಕೊಲದೇವಿ ಕೆ.ಎಂ.ಗಂಗಾ ಧರ್, ವಿರೂಪಾಕ್ಷಿ ಚೌಡಪ್ಪ ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.
 
ಗೊಬ್ಬರಕ್ಕೆ ದುಪ್ಪಟ್ಟು ಹಣ, ನಕಲಿ  ಕ್ರಿಮಿನಾಶಕ  ಮಾರಾಟಕ್ಕೆ  ತಡೆ ಹಾಕಿ
ಮುಳಬಾಗಿಲು: ಖಾಸಗಿ ರಸಗೊಬ್ಬರಗಳ ಅಂಗಡಿಗಳಲ್ಲಿ ನಕಲಿ ಕ್ರಿಮಿನಾಶಕ ಔಷಧಿಗಳನ್ನು ಮಾರಾಟ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು. ರಸಗೊಬ್ಬರಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶುಭ ಅವರಿಗೆ ಮನವಿ ಸಲ್ಲಿಸಿದರು.
 
ತಾಲ್ಲೂಕಿನಾದ್ಯಂತ ಕೀಟನಾಶಕ ಅಂಗಡಿಗಳು ಹೆಚ್ಚುತ್ತಿವೆ. ನಕಲಿ ಕೀಟನಾಶಕಗಳ ಹಾವಳಿ ಹಾಗೂ ರಸಗೊಬ್ಬರಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಈಗಾಗಲೆ ಸಂಕಷ್ಟದಲ್ಲಿರುವ ರೈತರು ನಕಲಿ ಔಷಧಿಗಳಿಂದ ಅಪಾರ ನಷ್ಟ ಅನುಭವಿಸುತ್ತಿದ್ದಾರೆ ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

‘ನಿರಂತರವಾಗಿ ಕಳಪೆ ಔಷಧಿ ಮತ್ತು ಬಿತ್ತನೆ ಬೀಜ ಮಾರಾಟವಾಗುತ್ತಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ. ಸರ್ಕಾರ ಕೆಲ ಕ್ರಿಮಿನಾಶಕಗಳನ್ನು ಮಾರಾಟ ಮಾಡಬಾರದೆಂದು ನಿಷೇಧ ಹೊರಡಿಸಿ ದ್ದರೂ ಖಾಸಗಿ ರಸಗೊಬ್ಬರ ಅಂಗಡಿ ಮಾಲೀಕರು  ಮಾರಾಟ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಅಕ್ರಮ ರಸಗೊಬ್ಬರ ಹಾಗೂ ಔಷಧಿಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಗಳ ಪರವಾನಗಿ ರದ್ದು ಮಾಡಬೇಕು. ರೈತರಿಗೆ ಯಾವುದೇ ರೀತಿಯ ತೊಂದರೆಯಾದರು ಅಂಗಡಿಗಳವರನ್ನೆ ನೇರ ಹೊಣೆ ಮಾಡಿ ಪರಿಹಾರ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. 

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಾರುಕ್‌ ಪಾಷಾ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಎ.ನಳಿನಿ, ಯಲುವಳ್ಳಿ ಪ್ರಭಾಕರ್, ಪ್ರಿಂಟಿಂಗ್ ಗಣೇಶ್, ವಿಜಯಪಾಲ್, ಸಾಗರ್, ರಂಜಿತ್‌ ಕುಮಾರ್, ನಂದ ಕುಮಾರ್, ಅಬ್ಬಿಣಿ ಆನಂದರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಮರಗಲ್ ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT